ದಲಿತ ಯುವಕನಿಗೆ ಮೂತ್ರ ಕುಡಿಸಿ ದೌರ್ಜನ್ಯ ಎಸಗಿದ್ದ ಪಿಎಸ್‌ಐ ಅರ್ಜುನ್‌ ಬಂಧನ!

ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಪೊಲೀಸ್‌ ಠಾಣೆಯಲ್ಲಿ ದಲಿತ ಯುವಕನೊಬ್ಬನಿಗೆ ಮತ್ತೊಬ್ಬ ಆರೋಪಿಯ ಮೂತ್ರ ಕುಡಿಸಿ ದೌರ್ಜನ್ಯ ಎಸಗಿದ್ದ ಠಾಣೆಯ ಪಿಎಸ್​ಐ ಅರ್ಜುನ್​ ಅವರನ್ನು ಸಿಐಡಿ ಪೊಲೀಸರು ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ವಿವಾಹಿತ ಮಹಿಳೆಗೆ ಫೋನ್​ ಮಾಡಿದ್ದ ಆರೋಪದ ಮೇಲೆ ಮೇ 10ರಂದು ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ನಿವಾಸಿ  ಕೆ.ಎಲ್.ಪುನೀತ್​ನನ್ನು ವಿಚಾರಣೆಗಾಗಿ ಅರ್ಜುನ್​ ಠಾಣೆಗೆ ಕರೆದೊಯ್ದಿದ್ದರು.

ಈ ವೇಳೆ, ಪೊಲೀಸರು ಆತನಿಗೆ ಮನಸೋಯಿಚ್ಛೆ ಥಳಿಸಿದ್ದು, ಚಿತ್ರಹಿಂಸೆ ನೀಡಿ, ಬಾಯಾರಿಕೆ ಎಂದು ನೀರು ಕೇಳಿದಾಗ ಮತ್ತೊಬ್ಬ ಆರೋಪಿಯ ಮೂತ್ರ ಹೊಯ್ಯಿಸಿ, ಕಳೆಗೆ ಬಿದ್ದದ್ದ ಮೂತ್ರವನ್ನು ತನ್ನಿಂದ ಬಲವಂತವಾಗಿ ಕುಡಿಸಿ ದೌರ್ಜನ್ಯ ಎಸಗಿದ್ದರು ಎಂದು ಪುನೀತ್‌ ಆರೋಪಿಸಿದ್ದರು.

ಈ ಬಳಿಕ, ಪಿಎಸ್‌ಐ ಅರ್ಜುನ್ ಅವರನ್ನು 10 ದಿನಗಳ ಕಾಲ ಅಮಾನತಿನಲ್ಲಿಟ್ಟು, ನಂತರ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು.

ಪ್ರಕರಣ ಬೆಳಕಿಗೆ ಬಂದ ಬಳಿಕ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ, ಪಿಎಸ್‌ಐ ಅರ್ಜುನ್‌ ಅವರನ್ನು ವೃತ್ತಿಯಿಂದ ವಜಾಗೊಳಿಸಬೇಕು ಮತ್ತು ಬಂಧಿಸಬೇಕು ಎಂದು ಒತ್ತಾಯಿಸಿದ್ದವು. ಮತ್ತು ಪಿಎಸ್‌ಐ ಅರ್ಜುನ್‌ ವಿರುದ್ದ ಪ್ರಕರಣವೂ ದಾಖಲಾಗಿತ್ತು.

ತದ ನಂತರ, ಅರ್ಜುನ್‌ ಅವರನ್ನು ಅಮಾನತುಗೊಳಿಸಲಾಗಿತ್ತು. ಆತ ತಲೆ ಮರೆಸಿಕೊಂಡಿದ್ದ ಮತ್ತು ಚಿಕ್ಕಮಗಳೂರು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿತ್ತು. ಈ ಬಳಿಕ ಸಿಐಡಿ ಪೊಲೀಸರು ಅರ್ಜುನ್‌ ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ದಲಿತ ಯುವಕನಿಗೆ ಮೂತ್ರ ಕುಡಿಸಿ ಪೊಲೀಸರ ದೌರ್ಜನ್ಯ; ಪಿಎಸ್‌ಐ ಬಂಧನಕ್ಕೆ ಕಾಂಗ್ರೆಸ್‌ ಒತ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.