Fact Check: ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಅವರು ಕ್ರೈಸ್ತ ದೀಕ್ಷೆ ಪಡೆದಿಲ್ಲ!

ಪ್ರಸ್ತುತ ಪಂಜಾಬ್ ಮುಖ್ಯಮಂತ್ರಿಯಾಗಿರುವ ಚರಣ್ ಜಿತ್ ಸಿಂಗ್ ಅವರು ಕ್ರೈಸ್ತರ ದೀಕ್ಷಾಸ್ನಾನ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ಹರಿದಾಡುತ್ತಿದೆ. ವಿಡಿಯೊ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಪಾದಿಸುತ್ತಿರುವ ವಿಷಯಗಳ ಬಗ್ಗೆ ಈ ಲೇಖನದಲ್ಲಿ ಪರಿಶೀಲಿಸೋಣ.

ಪ್ರತಿಪಾದನೆ: ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಕ್ರೈಸ್ತರ ದೀಕ್ಷಾಸ್ನಾನ ಪಡೆಯುವ ವಿಡಿಯೋ.

ವಾಸ್ತವ: ವೈರಲ್ ಆಗಿರುವ ವೀಡಿಯೋದಲ್ಲಿರುವ ವ್ಯಕ್ತಿ ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಅವರೊಂದಿಗೆ ಯಾವುದೇ ಸಾಮ್ಯತೆಯನ್ನು ಹೊಂದಿಲ್ಲ. ವಿಡಿಯೋದಲ್ಲಿ ಇರುವ ಪಾದ್ರಿಯು, ದೀಕ್ಷಾಸ್ನಾನ ಪಡೆಯುತ್ತಿರುವ ವ್ಯಕ್ತಿಯ ಹೆಸರು ‘ಸಿಮ್ರಂಜೀತ್ ಸಿಂಗ್’ ಎಂದು ಹೇಳುವುದನ್ನು ಸ್ಪಷ್ಟವಾಗಿ ಕೇಳಬಹುದು. ಒಂದು ವೇಳೆ ಚರಣಜಿತ್ ಸಿಂಗ್ ಚನ್ನಿ ದೀಕ್ಷಾಸ್ನಾನ ಪಡೆದಿದ್ದರೆ, ಮಾಧ್ಯಮಗಳು ಇದನ್ನು ವ್ಯಾಪಕವಾಗಿ ವರದಿ ಮಾಡುತ್ತಿದ್ದವು. ಆದರೆ, ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ. ಆದುದರಿಂದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದಲ್ಲಿರುವ ವ್ಯಕ್ತಿಯು ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಅವರೊಂದಿಗೆ ಯಾವುದೇ ಹೋಲಿಕೆಯನ್ನು ಹೊಂದಿಲ್ಲ. ವೈರಲ್ ವೀಡಿಯೋದಲ್ಲಿರುವ ವ್ಯಕ್ತಿಯ ಚಿತ್ರದೊಂದಿಗೆ ಚರಣಜಿತ್ ಸಿಂಗ್ ಚನ್ನಿಯ ಚಿತ್ರವನ್ನು ಜೋಡಿಸಿ ನೋಡಿದಾಗ ಕೂಡಾ ನಮಗೆ ಯಾವುದೇ ಹೋಲಿಕೆಗಳನ್ನು ಕಂಡುಹಿಡಿಯಲಾಗಲಿಲ್ಲ.


ವೀಡಿಯೊದ 0:30 ಸಮಯದ ಸ್ಟಾಂಪ್ನಲ್ಲಿ, ಪಾದ್ರಿ ಅವರು ‘ಸಿಮ್ರಂಜೀತ್ ಸಿಂಗ್’ ಎಂದು ಉಚ್ಚರಿಸುವುದನ್ನು ನಾವು ಸ್ಪಷ್ಟವಾಗಿ ಕೇಳಬಹುದು. ಅವರ ಈ ಹೇಳಿಕೆ, ದೀಕ್ಷಾಸ್ನಾನ ಪಡೆಯುತ್ತಿರುವ ವ್ಯಕ್ತಿ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಯಲ್ಲ ಎಂದು ಸ್ಪಷ್ಟಪಡಿಸುತ್ತದೆ. ಆದಾಗ್ಯೂ, ವೀಡಿಯೊ ಯಾವ ಸಂದರ್ಭಲ್ಲಿ ಮಾಡಲಾಗಿದೆ ಎಂದು ನಮಗೆ ಕಂಡುಹಿಡಿಯಲಾಗಲಿಲ್ಲ.
ಚರಣ್ಜಿತ್ ಸಿಂಗ್ ಚನ್ನಿ ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ, ಅವರ ಧಾರ್ಮಿಕತೆಯನ್ನು ಪ್ರಶ್ನಿಸುವ ವೀಡಿಯೊಗಳು ಮತ್ತು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಹಿಂದೆ, “ಚನ್ನಿ ಅವರು ವಿಡಿಯೊವೊಂದರಲ್ಲಿ ಹಲ್ಲೆಲುಯಾ ಎಂದು ಹೇಳುತ್ತಿದ್ದಾರೆ, ಅವರು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಏಸುಗೆ ಧನ್ಯವಾದ ಹೇಳಿದರು” ಎಂದು ಪ್ರತಿಪಾದಿಸಿ ವಿಡಿಯೊ ಹಂಚಿಕೊಳ್ಳಲಾಗಿತ್ತು. ಆದರೆ, ಆ ವಿಡಿಯೊ ಚನ್ನಿ ಅವರು ಪಂಜಾಬ್ನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಚರ್ಚ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ್ದಾಗಿದೆ. ಆ ವೀಡಿಯೋ ಬಗ್ಗೆ ನಡೆಸಲಾಗಿರುವ ಫ್ಯಾಕ್ಟ್ಚೆಕ್ ಅನ್ನು ಇಲ್ಲಿ ಓದಬಹುದು.

ಲಭ್ಯವಿರುವ ಮಾಹಿತಿಯ ಪ್ರಕಾರ, ಚನ್ನಿ ಸಿಖ್ ಧರ್ಮಿಯರಾಗಿದ್ದಾರೆ. ಒಂದು ವೇಳೆ ಚರಣಜಿತ್ ಸಿಂಗ್ ಚನ್ನಿ ಅವರು ದೀಕ್ಷಾಸ್ನಾನ ಪಡೆದಿದ್ದರೆ, ಮಾಧ್ಯಮಗಳು ಇದನ್ನು ವ್ಯಾಪಕವಾಗಿ ವರದಿ ಮಾಡುತ್ತಿದ್ದವು. ಆದರೆ, ಅಂತಹ ಯಾವುದೇ ವರದಿಗಳಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವೀಡಿಯೋದಲ್ಲಿ ದೀಕ್ಷಾಸ್ನಾನ ಪಡೆಯುತ್ತಿರುವ ವ್ಯಕ್ತಿ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಯಲ್ಲ.

ಇದನ್ನೂ ಓದಿ: Fact Check: ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನ್ ಅವರನ್ನು ಜಿಹಾದಿ ಅಥವಾ ಅತ್ಯಾಚಾರಿ ಎಂದು ಹೇಳಿಲ್ಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights