11 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಶಿಕ್ಷಕನ ಬಂಧನ

ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ 11 ವರ್ಷದ ಬಾಲಕಿಯ ಆಕೆಯ ಶಿಕ್ಷಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಬಾಲಕಿಯು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ನಂತರ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 5 ರಂದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿ ಶಿಕ್ಷಕ ಬೆದರಿಕೆ ಹಾಕಿದ್ದನು ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಪೋಷಕರಿಎಗೆ ತಿಳಿಸಿದ್ದಾಳೆ. ಆದರೆ, ಮರ್ಯಾದೆಗೆ ಅಂಜಿದ ಕುಟುಂಬವು ದೌರ್ಜನ್ಯವನ್ನು ರಹಸ್ಯವಾಗಿರಿಸಿತ್ತು ಎಂದು ಸಿಂಗನಾ ಪೊಲೀಸ್ ಠಾಣೆ ಎಸ್‌ಎಚ್‌ಒ ಭಜನಾ ರಾಮ್ ತಿಳಿಸಿದ್ದಾರೆ.

7 ನೇ ತರಗತಿಯ ವಿದ್ಯಾರ್ಥಿಯು ತನ್ನ ಸರ್ಕಾರಿ ಶಾಲೆಯ ಪಠ್ಯಪುಸ್ತಕದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಗಳನ್ನು ಪಡೆದುಕೊಂಡು, ಗುರುವಾರ ಸಹಾಯವಾಣಿಗೆ ಕರೆ ಮಾಡಿ, ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಳು ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಆಕೆಯನ್ನು ಸಂಪರ್ಕಿಸಿ ವಿಚಾರಿಸಿದರು. ನಂತರ, ಪೊಲೀಸ್ ಸೂಪರಿಂಟೆಂಡೆಂಟ್ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ಅಲ್ವಾರ್ ಜಿಲ್ಲೆಯ ನಿವಾಸಿಯಾದ ಆರೋಪಿ ಶಿಕ್ಷಕ ಕೇಶವ್ ಯಾದವ್ ಅವರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ. ಆತನ ವಿರುದ್ದ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ)ಯಡಿ ಪ್ರಕರಣ ದಾಖಲಿಸಲಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರೋಪಿಯು ಶಿಕ್ಷಕಿಯೊಬ್ಬರನ್ನು ವಿವಾಹವಾಗಿದ್ದನು. ಆತನ ತಂದೆಯೂ ನಿವೃತ್ತ ಶಿಕ್ಷಕರಾಗಿದ್ದಾರೆ. ಆತನ ಸಹೋದರಿ ಮತ್ತು ಸಹೋದರಿಯ ಪತಿ ಉಪನ್ಯಾಸಕರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬಂಟ್ವಾಳ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರು ಆರೋಪಿಗಳ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights