ಪಂಜಾಬ್: ಮಾಜಿ ಸಿಎಂ ಹೊಸ ಪಕ್ಷ ಸ್ಥಾಪನೆ; ಬಿಜೆಪಿ ಜೊತೆ ಮೈತ್ರಿಗೆ ಸಿದ್ಧ!
ಪಂಜಾಬ್ ಮಾಜಿ ಸಿಎಂ ಕ್ಯಾ. ಅಮರೀಂದರ್ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿದ್ದಾರೆ. ಇದೀಗ, ಹೊಸ ಪಕ್ಷ ರಚನೆ ಮಾಡುವುದಾಗಿ ಘೋಷಸಿರುವ ಅವರು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೂ ಮುಕ್ತವಾಗಿದ್ದೇವೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದರೆ ಮುಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆಗೆ ಸಿದ್ಧವಿದ್ದೇವೆ ಎಂದು ಅವರು ಹೇಳಿದ್ದಾರೆ ಎಂದು ಅಮರೀಂದರ್ ಅವರ ಮಾಧ್ಯಮ ಸಲಹೆಗಾರನಾದ ರವೀನ್ ಠುಕ್ರಾಲ್ ತಿಳಿಸಿದ್ದಾರೆ.
‘ನಮ್ಮ ರೈತರು ಸೇರಿದಂತೆ ಪಂಜಾಬ್ ಜನತೆಯ ಹಿತಾಸಕ್ತಿಗಳ ರಕ್ಷಣೆಗಾಗಿ ಹೊಸ ಪಕ್ಷ ರಚಿಸುತ್ತೇನೆ. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದರೆ, ಬಿಜೆಪಿ ಜೊತೆ ಸೀಟು ಹಂಚಿಕೆಗೆ ಸಿದ್ಧವಿದ್ದೇವೆ. ಅಲ್ಲದೆ, ನಮ್ಮಂಥ ಸಮಾನ ಮನಸ್ಥಿತಿಯ ಪಕ್ಷಗಳ ಜೊತೆಗೂ ಸೀಟು ಹಂಚಿಕೆಗೆ ಮುಕ್ತ ಆಹ್ವಾನವಿದೆ ಎಂದು ಅಮರೀಂದರ್ ತಿಳಿಸಿದ್ದಾರೆ’ ಎಂದು ಠುಕ್ರಾಲ್ ಹೇಳಿದ್ದಾರೆ.
ಪಂಜಾಬ್ ವಿಕಾಸ್ ಪಕ್ಷ ಸ್ಥಾಪನೆ
ಕಾಂಗ್ರೆಸ್‌ಗೆ ತೊರೆಯುವುದಾಗಿ ಹೇಳಿರುವ ಕ್ಯಾ.ಅಮರೀಂದರ್‌ಸಿಂಗ್, ಬಿಜೆಪಿ ಸೇರುತ್ತಾರೆ ಎಂಬ ವದಂತಿ ಹರಡಿತ್ತು. ವದಂತಿಯನ್ನು ತಳ್ಳಿಹಾಕಿರುವ ಅವರು, ತಕ್ಷಣಕ್ಕೆ ಬಿಜೆಪಿ ಸೇರುವುದು ತಮ್ಮ ಮೂಲ ಉದ್ದೇಶವನ್ನು ಹಾಳು ಮಾಡುವ ಸಾಧ್ಯತೆ ಇರುವ ಕಾರಣ ಹೊಸ ಪಕ್ಷ ಸ್ಥಾಪಿಸುವುದಾಗಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ, ಹಾಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್‌ಸಿಂಗ್ ಸಿಧು ಸೇರಿದಂತೆ ಹಲವು ನಾಯಕರ ಮೇಲೆ ಅಮರೀಂದರ್ ಬಂಡಾಯ ಎದ್ದಿದ್ದಾರೆ. ಹೀಗಾಗಿ 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ‌್ಅನ್ನು ಸೋಲಿಸುವುದು ಅವರ ಪ್ರಮುಖ ಗುರಿಯಾಗಿದೆ ಎಂದು ತಿಳಿದು ಬಂದಿದೆ.

