ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದ ನದಿ ನೀರು; ಸಾವಿರಾರು ಮೀನುಗಳು ಸಾವು
ಅರುಣಾಚಲ ಪ್ರದೇಶದ ಕಮೆಂಗ್ ನದಿಯ ನೀರು ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದ್ದು, ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಸತ್ತ ಹಲವು ಜಲಚರಗಳು ನೀರಿನಲ್ಲಿ ತೇಲುತ್ತಿರುವುದು ಶನಿವಾರ ಕಂಡುಬಂದಿದೆ. ನದಿಯ ಮೇಲ್ಮೈಯಲ್ಲಿ ತೇಲುತ್ತಿರುವ ಮೀನುಗಳನ್ನು ತಿನ್ನದಂತೆ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಪೂರ್ವ ಕಮೆಂಗ್ ಜಿಲ್ಲೆಯಲ್ಲಿ ಹರಿಯುವ ಕಮೆಂಗ್ ನದಿಯಲ್ಲಿ ಹೆಚ್ಚಿನ ಕರಗಿದ ವಸ್ತುಗಳ (ಟಿಡಿಎಸ್) ಅಂಶದಿಂದಾಗಿ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಜಿಲ್ಲಾ ಮೀನುಗಾರಿಕೆ ಅಧಿಕಾರಿ (ಡಿಎಫ್ಡಿಒ) ಹಾಲಿ ತಾಜೋ ತಿಳಿಸಿದ್ದಾರೆ.
ಕಮೆಂಗ್ ನದಿಯಲ್ಲಿನ ಟಿಡಿಎಸ್ ಪ್ರತಿ ಲೀಟರ್ಗೆ 6,800 ಮಿಗ್ರಾಂ ಆಗಿತ್ತು. ಇದು ಪ್ರತಿ ಲೀಟರ್ಗೆ ಸಾಮಾನ್ಯ ಶ್ರೇಣಿಯ 300-1,200 ಮಿಗ್ರಾಂ ಅಷ್ಟೇ ಇರಬೇಕು ಎಂದು ಅವರು ಹೇಳಿದ್ದಾರೆ.
ಜಿಲ್ಲಾ ಕೇಂದ್ರವಾದ ಸೆಪ್ಪಾದಲ್ಲಿ ಸಾವಿರಾರು ಮೀನುಗಳು ಸತ್ತು ತೇಲಿಬರುತ್ತಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟಿಡಿಎಸ್ ಕಂಡುಬಂದಿರುವುದೇ ನೀರಿನ ಬಣ್ಣ ಕಪ್ಪಾಗಲು ಕಾರಣ. ಇದು ನೀರಿನಲ್ಲಿ ಗೋಚರತೆಯನ್ನು ಕಡಿಮೆ ಮಾಡಿದೆ. ಹೀಗೆ ಆಗುವುದರಿಂದ ಮೀನುಗಳ ಉಸಿರಾಟಕ್ಕೆ ಸಮಸ್ಯೆಯಾಗುತ್ತದೆ. ಇದರಿಂದಾಗಿಯೇ ಮೀನುಗಳು ಉಸಿರುಗಟ್ಟಿ ಸಾವನ್ನಪ್ಪಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ತರಗತಿಯಲ್ಲಿ ಮೊಬೈಲ್ ಬಳಸಬೇಡಿ ಎಂದಿದ್ದಕ್ಕೆ ಶಿಕ್ಷಕನನ್ನೇ ಥಳಿಸಿದ ವಿದ್ಯಾರ್ಥಿಗಳು; ಒಬ್ಬನ ಬಂಧನ

