ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನ ಇಳಿಕೆ; ಕೊರೆವ ಚಳಿಗೆ ಜನರು ತತ್ತರ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಚಳಿ ಇದ್ದು, ಜನರು ಕೊರೆವ ಚಳಿಗೆ ನಲುಗುತ್ತಿದ್ದಾರೆ. ದೆಹಲಿಯಲ್ಲಿ ಸೋಮವಾರ ಕನಿಷ್ಠ ತಾಪಮಾನ 13.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಅಕ್ಟೋಬರ್ 24ರಿಂದ ಕನಿಷ್ಟ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಇದ್ದು, ಭಾರೀ ಚಳಿಗಾಳಿ ಬೀಸುತ್ತಿದೆ. ಇದು ಸೋಮವಾರ 13.6 ಡಿಗ್ರಿಗೆ ಇಳಿದಿದ್ದು, ಮತ್ತಷ್ಟು ಚಳಿಯನ್ನು ಹೆಚ್ಚಿಸಿದೆ. ಮಂಗಳವಾರದಿಂದ ತಾಪಮಾನದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಅಲ್ಲದೆ, ಗರಿಷ್ಠ ಉಷ್ಣಾಂಶ 31.2 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದ್ದು, ಇದು ವಾಡಿಕೆಗಿಂತ ಒಂದು ಡಿಗ್ರಿ ಅಧಿಕವಾಗಿದೆ ಎಂದು ಇಲಾಖೆ ಮಾಹಿತಿ ಮಾಡಿದೆ.
“ಶುಭ್ರ ಆಕಾಶ ಮತ್ತು ಕಡಿಮೆ ಮಾಲಿನ್ಯ ಮತ್ತು ಸ್ಥಳೀಯ ವಿಕಿರಣಾತ್ಮಕ ಶೀತದಿಂದ ಸೋಮವಾರ ಸಫ್ದರ್‌ಜಂಗ್‌ನಲ್ಲಿ 13.6 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ. ಕನಿಷ್ಠ ತಾಪಮಾನ ಮಂಗಳವಾರ ಅಲ್ಪಮಟ್ಟಿಗೆ ಹೆಚ್ಚಲಿದೆ” ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಆರ್.ಕೆ.ಜೆನಮಣಿ ಹೇಳಿದ್ದಾರೆ.
ಮಂಗಳವಾರ ಹಾಗೂ ಬುಧವಾರ ಕನಿಷ್ಠ ತಾಪಮಾನ 15 ಡಿಗ್ರಿಗೆ ಏರಲಿದೆ. ಮತ್ತೆ ಗುರುವಾರ ಅಲ್ಪ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
“ದೆಹಲಿಯಲ್ಲಿ ಗಾಳಿಯ ದಿಕ್ಕು ಪೂರ್ವದಿಂದ ವಾಯವ್ಯಕ್ಕೆ ಬದಲಾಗಿದ್ದು, ನವೆಂಬರ್ 5 ಮತ್ತು 6ರಂದು ಮತ್ತೆ ತಾಪಮಾನ 13 ಡಿಗ್ರಿಗೆ ಕುಸಿಯುವ ಅಪಾಯವಿದೆ. ಬೆಟ್ಟ ಪ್ರದೇಶಗಳಲ್ಲಿ ಅಲ್ಪ ಮಳೆಯಾಗುವ ನಿರೀಕ್ಷೆ ಇದೆ” ಎಂದು ಜೆನಮಣಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಮುದ್ರದಲ್ಲಿ ವಾಯುಭಾರ ಕುಸಿತ; ದೀಪಾವಳಿವರೆಗೂ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ!