ಮರ್ಯಾದಾಗೇಡು ಪ್ರಕರಣ: ದಲಿತನನ್ನು ಮದುವೆಯಾಗಿದ್ದಕ್ಕೆ ಯುವತಿಯನ್ನು ಬಲವಂತವಾಗಿ ಅರೆನಗ್ನಗೊಳಿಸಿ ಶುದ್ದೀಕರಣ
ದಲಿತನನ್ನು ಮದುವೆಯಾದ ಕಾರಣಕ್ಕೆ 24 ವರ್ಷದ ಯುವತಿಯನ್ನು ಆಕೆಯ ತಂದೆಯೇ ಅರೆನಗ್ನಗೊಳಿಸಿ, ಶುದ್ದೀಕರಣಕ್ಕಾಗಿ ನರ್ಮದಾ ನದಿಯಲ್ಲಿ ಸ್ನಾನ ಮಾಡುವಂತೆ ಒತ್ತಾಯಿಸಿ, ಕೂದಲು ಕತ್ತರಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ.
ಇಂದೊಂದು ಮರ್ಯಾದಾಗೇಡು ಪ್ರಕರಣವಾಗಿದ್ದು, ಘಟನೆಯು ಆಗಸ್ಟ್ನಲ್ಲಿ ನಡೆದಿದೆ. ದಂಪತಿಗಳು ಯುವತಿಯ ಕುಟುಂಬದಿಂದ ರಕ್ಷಣೆ ಕೋರಿ ಪೊಲೀಸರಿಗೆ ದೂರು ನೀಡಿದ ನಂತರ ಬೆಳಕಿಗೆ ಬಂದಿದೆ ಎಂದು ಬೆತುಲ್ನ ಪೊಲೀಸ್ ವರಿಷ್ಠಾಧಿಕಾರಿ ಸಿಮಲಾ ಪ್ರಸಾದ್ ಹೇಳಿದ್ದಾರೆ.
ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಪೊಲೀಸರು ಯುವತಿಯ ತಂದೆ ಸೇರಿದಂತೆ ಕುಟುಂಬದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈವರೆಗೆ ಯಾರನ್ನೂ ಬಂಧಿಸಿಲ್ಲ.
ಯುವತಿಯ ದೂರಿನ ಪ್ರಕಾರ, ಆಕೆ ಇತರೆ ಹಿಂದುಳಿದ ವರ್ಗಕ್ಕೆ (OBC) ಸೇರಿದ್ದು, ದಲಿತ ಯುವಕನನ್ನು ಕಳೆದ ವರ್ಷ ಮಾರ್ಚ್ 11 ರಂದು ವಿವಾಹವಾಗಿದ್ದರು. ಅವರಿಬ್ಬರು ಮದುವೆಯಾಗಿರುವುದು ಆಕೆಯ ಪೋಷಕರಿಗೆ ಡಿಸೆಂಬರ್ ತಿಂಗಳಿನಲ್ಲಿ ಗೊತ್ತಾಗಿದೆ. ನಂತರ, ಆಕೆಯನ್ನು ತನ್ನ ಗಂಡಗನ್ನು ಬಿಟ್ಟು ಮನೆಗೆ ವಾಪಸ್ ಬರುವಂತೆ ತನ್ನ ಪೋಷಕರು ಒತ್ತಾಯಿಸುತ್ತಿದ್ದರು ಎಂದು ವಿವರಿಸಿದ್ದಾರೆ.
ಈ ವರ್ಷ ಜನವರಿ 10 ರಂದು ಯುವತಿಯ ತಂದೆ, ತನ್ನ ಮಗಳು ಕಾಣಿಯಾಗಿರುವುದಾಗಿ ದೂರು ನೀಡಿದ್ದರು. ದೂರಿನ ಪ್ರಕಾರ ಪೊಲೀಸರು ಆಕೆಯನ್ನು ಪತ್ತೆ ಮಾಡಿ ಪೋಷಕರ ಬಳಿಗೆ ಕರೆದೊಯ್ದಿದ್ದಾರೆ. 2021 ಮಾರ್ಚ್ನಲ್ಲಿ ಬೆತುಲ್ನ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯನ್ನು ಹಾಸ್ಟೆಲ್ಗೆ ಸೇರಿಸಲಾಗಿತ್ತು. ನಂತರ, ಆಕೆ ಹಾಸ್ಟಲ್ನಿಂದ ತಪ್ಪಿಸಿಕೊಂಡು ತನ್ನ ಗಂಡನ ಮನೆಗೆ ತೆರಳಿದ್ದಳು.
ಇದನ್ನೂ ಓದಿ: ಮರ್ಯಾದಾ ಹತ್ಯೆ: ದಲಿತನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿಯನ್ನು ಹತ್ಯೆಗೈದ ತಂದೆ; ಪೊಲೀಸರ ನಿರ್ಲಕ್ಷ್ಯವೇ ಕಾರಣ?
ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಮತ್ತೆ ಆಕೆಯ ಪೋಷಕರು ಆಕೆಯನ್ನು ಹುಡುಕಿಕೊಂಡು ಬಂದಿದ್ದಾರೆ. ಆಕೆಯನ್ನು ಗಂಡನ ಮನೆಯಿಂದ ಎಳೆದೊಯ್ದು, ನರ್ಮದಾ ನದಿಯಲ್ಲಿ ಶುದ್ಧೀಕರಣ ಆಚರಣೆಗಾಗಿ ಸೇಥನಿ ಘಾಟ್ಗೆ ಕರೆದೊಯ್ದಿದ್ದಾರೆ ಎಂದು ಆಕೆ ಹೇಳಿಕೊಂಡಿದ್ದಾರೆ.
“ನನಗೆ ಈ ಆಚರಣೆಯ ಬಗ್ಗೆ ತಿಳಿದಿರಲಿಲ್ಲ. ಆದರೆ, ನನ್ನ ತಂದೆ ನನ್ನನ್ನು ಅರೆನಗ್ನಗೊಳಿಸಿದರು. ಅಲ್ಲಿ, ನಾಲ್ಕು ಜನರಿದ್ದರು. ನನಗೆ ಬಹಳ ಮುಜುಗರವಾಗುತ್ತಿತ್ತು. ಆದರೂ, ನನ್ನನ್ನು ಬಲವಂತವಾಗಿ, ಶುದ್ದೀಕರಣಕ್ಕಾಗಿ ನದಿಯಲ್ಲಿ ಸ್ನಾನ ಮಾಡಿಸಿದರು. ತನ್ನ ಕೂದಲನ್ನು ಕತ್ತರಿಸಿದರು. ನಂತರ, ತನ್ನ ಗಂಡನಿಗೆ ವಿಚ್ಚೇದನ ನೀಡಬೇಕು ಎಂದು ಒತ್ತಾಯಿಸಿದರು. ನಮ್ಮದೇ ಸಮುದಾಯ ಯುವಕನ ಜೊತೆ ಮದುವೆ ಮಾಡುತ್ತೇವೆ ಎಂದು ಒತ್ತಾಯಿಸುತ್ತಿದ್ದಾರೆ” ಎಂದು ಆಕೆ ವಿವರಿಸಿದ್ದಾರೆ.
ತನ್ನ ಕುಟುಂಬವು ತನ್ನ ಗಂಡನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ, ನಾವು ಅಪಾಯದಲ್ಲಿದ್ದೇವೆ. ನಮಗೆ ರಕ್ಷಣೆ ನೀಡಬೇಕು ಎಂದು ಅಕ್ಟೋಬರ್ 28 ರಂದು ಯುವತಿ ಬೆತುಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
“ನಾವು ಈ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಯುವತಿಯ ಹೇಳಿಕೆಗಳ ಬಗ್ಗೆ ಪರಿಶೀಲಿಸಲು ಪ್ರಯತ್ನಿಸುತ್ತಿದ್ದೇವೆ. ದಂಪತಿಗಳ ರಕ್ಷಣೆಗಾಗಿ ಗ್ರಾಮದ ಸ್ಥಳೀಯ ಔಟ್ಪೋಸ್ಟ್ನ ಉಸ್ತುವಾರಿಯನ್ನು ಕೇಳಲಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಸಾದ್ ಹೇಳಿದ್ದಾರೆ.
ಇದನ್ನೂ ಓದಿ: ಮರ್ಯಾದಾಗೇಡು ಹತ್ಯೆ: ಯುವತಿ ಎದುರೇ ಆಕೆಯ ಪ್ರೇಮಿಯ ಕೊಲೆ