ನಿಗದಿತ ಸ್ಥಳದಲ್ಲಿ ನಿಲ್ಲಿಸದ KSRTC ಬಸ್: ಕೋರ್ಟ್‌ ಮೆಟ್ಟಿಲೇರಿದ ಪ್ರಯಾಣಿಕರಿಗೆ ಜಯ; 1000 ರೂ. ಪರಿಹಾರ!

ನಿಗದಿತ ಸ್ಥಳದಲ್ಲಿ ಹತ್ತಿಸಿಕೊಳ್ಳದೇ, ಪ್ರಯಾಣಿಕರೊಬ್ಬರನ್ನು ಬಿಟ್ಟು ಹೋದ ಕಾರಣಕ್ಕೆ KSRTC ಬಸ್‌ಗೆ ದಂಡ ಹಾಕಿದ್ದು, ಅ ಹಣವನ್ನು ಪ್ರಯಾಣಿಕರಿಗೆ ಪರಿಹಾರವಾಗಿ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬನಶಂಕರಿ ನಿವಾಸಿ, 67 ವರ್ಷದ ಸಂಗಮೇಶ್ವರ್ ಎಂಬುವವರು 2019ರ ಅಕ್ಟೋಬರ್‌ 12 ರಂದು ತಮಿಳುನಾಡಿನ ತಿರುವಣ್ಣಮಲೈ ನಿಂದ ಬೆಂಗಳೂರಿಗೆ ಐರಾವತ ಕ್ಲಬ್ ಕ್ಲಾಸ್ ಬಸ್‍ನಲ್ಲಿ ಸೀಟ್‌ ಕಾಯ್ದಿರಿಸಿದ್ದರು. ಆದರೆ, ಅವರು ನಿಗದಿ ಪಡಿಸಿದ್ದ ಸ್ಥಳಕ್ಕೆ ಬಸ್‌ ಬಾರದ, ಮತ್ತೊಂದು ದಾರಿಯಲ್ಲಿ ಬೆಂಗಳೂರಿಗೆ ತೆರಳಿತ್ತು. ಹೀಗಾಗಿ, ಸಂಗಮೇಶ್ವರ್ ಅವರು ಬೆಂಗಳೂರು ನಗರ ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ದೂರಿನಲ್ಲಿ ಕೆಎಸ್‍ಆರ್‌ಟಿಸಿ ಮ್ಯಾನೆಜಿಂಗ್ ಡೈರೆಕ್ಟರ್ ಮತ್ತು ಜನರಲ್ ಮ್ಯಾನೇಜರ್ (ಟ್ರಾಫಿಕ್) ಅವರ ವಿರುದ್ಧ ದಾವೆ ಹೂಡಲಾಗಿತ್ತು. ವಿಚಾರಣೆ ನಡೆಸಿದ ಗ್ರಾಮಹ ನ್ಯಾಯಾಲಯ, ಸಂಗಮೇಶ್ವರ್‌ ಅವರಿಗೆ ಬಸ್ ಟಿಕೆಟ್ ದರದ ಹಣವನ್ನು ಮರುಪಾವತಿ ಮಾಡಬೇಕು ಮತ್ತು 1,000 ಪರಿಹಾರ ಧನವನ್ನು ನೀಡಬೇಕು ಎಂದು ಆದೇಶ ನೀಡಿದೆ.

ಪ್ರಕರಣದ ವಿವರ: 

ಸಂಗಮೇಶ್ವರ್ ಅವರು 2019 ಅಕ್ಟೋಬರ್ 12 ರಂದು ತಿರುವಣ್ಣಮಲೈನಿಂದ ಬೆಂಗಳೂರಿನ ಬಸ್‌ ಟಿಕೆಟ್ ಬುಕ್‌ ಮಾಡಿದ್ದರು. ಟಿಕೆಟ್‌ನಲ್ಲಿ ತಾವು ಬಸ್‌ ಹತ್ತುವ ಜಾಗ ಯಾವುದು ಎಂಬುದನ್ನೂ ಅವರು ನಿಗದಿ ಪಡಿಸಿದ್ದರು. ಅವರು ನಿಗದಿ ಪಡಿಸಿದ ಬಸ್ ನಿಲ್ದಾಣಕ್ಕೆ ನಿಗದಿತ ಸಮಯಕ್ಕಿಂತ ಮೊದಲೇ ಬಂದು ಕಾದು ಕುಳಿತಿದ್ದರು.

ಬಸ್‌ ಆ ಸ್ಥಳಕ್ಕೆ ಬರುವ ಸಮಯಕ್ಕಿಂತ ಹೆಚ್ಚುವರಿಯಾಗಿ ಒಂದು ಗಂಟೆಗಳ ಕಾಲ ಕಾದರೂ ಬಸ್‍ ಆ ಸ್ಥಳಕ್ಕೆ ಬಾರಲೇ ಇಲ್ಲ. ಹೀಗಾಗಿ, ಸಂಗಮೇಶ್ವರ್ ಅವರು ರಾಜ್ಯ ಸಾರಿಗೆಯಿಂದ ತಮಗೆ ಬಂದಿದ್ದ ಎಸ್‍ಎಂಎಸ್‌ನಲ್ಲಿದ್ದ ಕಂಡಕ್ಟರ್ ಸಂಪರ್ಕ ಸಂಖ್ಯೆಗೆ ಕರೆಮಾಡಿದ್ದಾರೆ. ಆ ವೇಳೆ, ಕಂಡಕ್ಟರ್‌ ಅವರು ನಿಗದಿತ ತಾತ್ಕಾಲಿಕ ನಿಲುಗಡೆಗೆ ಬರದೇ ಇದ್ದ ಕಾರಣ ಬಸ್ ಆಗಲೇ ತಿರುವಣ್ಣಮಲೈಯನ್ನು ಬಿಟ್ಟಿದೆ. ಈಗಗಲೇ ಬೆಂಗಳೂರು ತಲುಪಲು ಇನ್ನು 30 ಕಿ.ಮೀ ಮಾತ್ರ ಇದೆ ಎಂದು ಹೇಳಿದ್ದಾರೆ.

Read Also: ಬಿಟ್‌ ಕಾಯಿನ್ ಹಗರಣ: ದೊಡ್ಡ ದೊಡ್ಡವರೇ ಇದ್ದಾರೆ; ಮುಖ್ಯಪೇದೆ – ನಿವೃತ್ತಿ ಪಿಎಸ್‌ಐ ಆಡಿಯೋ ವೈರಲ್!

ಇದರಿಂದಾಗಿ, ಸಂಗಮೇಶ್ವರ್‌ ಅವರು ಬೇರೆ ಬಸ್‌ ಹಿಡಿದು ಬೆಂಗಳೂರು ತಲುಪಿದ್ದಾರೆ. ನಂತರ ಅವರು, ಮುಂಗಡ ಸ್ಲೀಪರ್ ಟಿಕೆಟ್ ಕಾಯ್ದೀರಿಸಿದ ತಮ್ಮಂತಹ ಹಿರಿಯ ನಾಗರಿಕರಿಗೆ, ನಿಲುಗಡೆ ಸ್ಥಳದ ಬದಲಾವಣೆ ಕುರಿತು ಮೊದಲೇ ಮಾಹಿತಿ ನೀಡದೇ ಇದ್ದ ಸಂಗತಿಯ ಕುರಿತು ಬೆಂಗಳೂರು 2 ನೇ, ನಗರ ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ ದೂರು ನೀಡಿದ್ದಾರೆ.

ದಾವೆಯನ್ನು ಸ್ವೀಕರಿಸಿದ್ದ ಗ್ರಾಹಕ ನ್ಯಾಯಾಲಯ 2019 ಅಕ್ಟೋಬರ್ 30ರಿಂದ ವಿಚಾರಣೆ ಆರಂಭಿಸಿತ್ತು. ಸಂಗಮೇಶ್ವರ್‌ ಅವರು ತಮ್ಮ ವಾದವನ್ನು ಮಂಡಿದ್ದರು. ಇದರ ವಿರುದ್ದ ವಾದ ಮಾಡಿದ್ದ ಕೆಎಸ್‌ಆರ್‌ಟಿಸಿ ವಕೀಲರು, ಆರೋಪಿಸಲಾಗಿರುವ ಪ್ರಕರಣವು ತಿರುಣ್ಣಮಲೈನಲ್ಲಿ ನಡೆದಿದೆ. ಹೀಗಾಗಿ, ಅದು ಆಯೋಗದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ, ಈ ಪ್ರಕರಣವನ್ನು ವಜಾಗೊಳಿಸಬೇಕು ಎಂದು ಹೇಳಿದ್ದರು.

ಅಲ್ಲದೆ, ಹುಣ್ಣಿಮೆಯ ದಿನದಂದು ಜನದಟ್ಟಣೆಯನ್ನು ನಿರ್ವಹಿಸುವ ಸಲುವಾಗಿ ಬಸ್ ನಿಲ್ದಾಣವನ್ನು ಸ್ಥಳೀಯ ತಮಿಳುನಾಡು ಪೊಲೀಸರು ತಾತ್ಕಾಲಿಕವಾಗಿ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ಆ ಬಗ್ಗೆ ಕಂಡಕ್ಟರ್ ದೂರುದಾರರಿಗೆ ಎಸ್‍ಎಮ್‍ಎಸ್ ಕಳುಹಿಸಿದ್ದರು. ಆದರೆ, ಆ ಸ್ಥಳಕ್ಕೆ ದೂರುದಾರರು ಬಾರದ ಕಾರಣ ಬಸ್‌ ಅವರನ್ನು ಬಿಟ್ಟು ಬೆಂಗಳೂರಿಗೆ ಪ್ರಯಾಣಿಸಿತ್ತು ಎಂದು ಸಾರಿಗೆ ಸಂಸ್ಥೆ ಪರ ವಕೀಲರು ವಾದಿಸಿದ್ದರು.

ಆದರೆ, ಈ ವಾದಕ್ಕೆ ಅವರು ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಲಿಲ್ಲ. ಅಲ್ಲದೆ, ಆಯೋಗದ ಮುಂದೆ ಬಸ್ ಕಂಡಕ್ಟರನ್ನು ಪ್ರಸ್ತುತಪಡಿಸುವಲ್ಲಿ ಕೂಡ ವಿಫಲವಾಯಿತು. ಹೀಗಾಗಿ, ಕೆಎಸ್‍ಆರ್‌ಟಿಸಿ ವಕೀಲರ ವಾದವನ್ನು ಅಲ್ಲಗಳೆದ ಆಯೋಗ, ದೂರುದಾರರ ಐರಾವತ ಟಿಕೆಟ್ ದರ 497 ರೂ., ಮತ್ತು ಆತ ಬೆಂಗಳೂರಿಗೆ ಪ್ರಯಾಣಿಸಿದ ಇತರ ಬಸ್ ಟಿಕೆಟ್ ದರಗಳಾದ 131 ರೂ. ಹಾಗೂ 69 ರೂ. ಗಳನ್ನು ಮರುಪಾವತಿ ಮಾಡಬೇಕು. ಅಲ್ಲದೆ, ಅವರಿಗೆ ಪರಿಹಾರವಾಗಿ 1,000 ರೂ. ನೀಡಬೇಕು ಎಂದು 2021 ಅಕ್ಟೋಬರ್ 26ರಂದು ಆದೇಶ ನೀಡಿದೆ.

Read Also: ಬೆಂಗಳೂರು, ಮಲೆನಾಡು, ಕರಾವಳಿಯಲ್ಲಿ ಇನ್ನೂ 4 ದಿನ ಭಾರೀ ಮಳೆ; ಚಳಿಯೂ ಅಧಿಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights