ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಫೈನಲ್‌ನಲ್ಲಿ ಕರ್ನಾಟಕ – ತಮಿಳುನಾಡು ಹಣಾಹಣಿ!

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ವಿದರ್ಭ ವಿರುದ್ಧ ನಡೆದ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸುವ ಮೂಲಕ ಕರ್ನಾಟಕ ತಂಡ ಮೂರನೇ ಬಾರಿಗೆ ಫೈನಲ್ ತಲುಪುವ ಮೂಲಕ ಹೊಸ ದಾಖಲೆ ಬರೆದಿದೆ. ಅಲ್ಲದೆ, ಫೈನಲ್ನಲ್ಲಿ ಪ್ರಶಸ್ತಿ ಗೆಲ್ಲಲು ತಮಿಳುನಾಡಿನ ಜೊತೆಗೆ ಹೋರಾಟ ನಡೆಸಲಿದೆ. ಈ ಪಂದ್ಯದಲ್ಲೂ ಕರ್ನಾಟಕ ಗೆದ್ದರೆ ಮೂರನೇ ಬಾರಿ ಈ ಪ್ರಶಸ್ತಿಗೆ ಮುತ್ತಿಟ್ಟಂತಾಗುತ್ತದೆ.

ಗೆಲುವಿನ ಸನಿಹದಲ್ಲಿ ಮುಗ್ಗರಿಸಿದ ವಿದರ್ಭ:

ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಕರ್ನಾಟ ತಂಡಕ್ಕೆ ಉತ್ತಮ ಆರಂಭ ಲಭ್ಯವಾಗಿತ್ತು. ಆರಂಭಿಕ ಆಟಗಾರ ರೋಹನ್ ಖದಮ್ ಕೇವಲ 56 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ ಭರ್ಜರಿ 87 ರನ್ ಗಳಿಸಿದರೆ, ಮತ್ತೋರ್ವ ಓಪನರ್ ನಾಯಕ ಮನೀಷ್ ಪಾಂಡೆ 42 ಎಸೆತದಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 54 ರನ್ ಗಳಿಸಿದ್ದರು.

ಕರ್ನಾಟಕ ಮೊದಲ ವಿಕೆಟ್ಗೆ 132 ರನ್ ಜೊತೆಯಾಟ ನೀಡುವಲ್ಲಿ ಈ ಜೋಡಿ ಯಶಸ್ವಿಯಾಗಿತ್ತು. ಒಂದು ಹಂತದಲ್ಲಿ ಕರ್ನಾಟಕ ತಂಡ 200 ರನ್ಗಳ ಗಡಿ ದಾಟಲಿದೆ ಎಂದೇ ಊಹಿಸಲಾಗಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಅಭಿನವ್ ಮನೋಹರ್ (27) ಹೊರತು ಪಡಿಸಿ ಬೇರೆ ಯಾವ ಬ್ಯಾಟ್ಸ್ಮನ್ ಸಹ ಎರಡಂಕಿ ದಾಟಿಲ್ಲ. ಆದಾಗ್ಯೂ ಕರ್ನಾಟಕ ನಿಗದಿತ 20 ಓವರ್ಗಳಿಗೆ 176 ರನ್ಗಳ ಬೃಹತ್ ಮೊತ್ತವನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿತ್ತು.

ವಿದರ್ಭ ಎಡವಿದ್ದೆಲ್ಲಿ?

ಗುರಿ ಬೆನ್ನಟ್ಟಿದ ವಿದರ್ಭ ಸಹ ಉತ್ತಮ ಆರಂಭವನ್ನೇ ಪಡೆದಿತ್ತು. ಆರಂಭಿಕ ಬ್ಯಾಟ್ಸ್ಮನ್ಗಳಾದ ಅಥರ್ವ ಟೈಡೆ (32) ಮತ್ತು ಗಣೇಶ್ ಸತೀಶ್ (31) ಮೊದಲ ವಿಕೆಟ್ಗೆ 43 ರನ್ಗಳ ಜೊತೆಯಾಟ ನೀಡಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶುಭಮನ್ ದುಭೆ (24) ಅಕ್ಷಯ್ ಕರ್ನೇವರ್ (22) ಮತ್ತು ಅಪೂರ್ವಾ ವಾಂಖಡೆ (27) ಅವರ ಉಪಯುಕ್ಗ ಆಟದ ನೆರವಿನಿಂದ ವಿದರ್ಭ ಗೆಲುವಿನ ಸನಿಹಕ್ಕೆ ಬಂದಿತ್ತು.

ಗೆಲುವಿಗೆ ಕೊನೆಯ ಎರಡು ಓವರ್ಗಳಿಗೆ 27ರನ್ಗಳ ಅಗತ್ಯ ಇತ್ತು. ಈ ಹಂತದಲ್ಲಿ ವಿದರ್ಭ ತಂಡದ ಗೆಲುವು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಕೊನೆಯ ಓವರ್ನಲ್ಲಿ ಗೆಲುವಿಗೆ ಕೇವಲ 14 ರನ್ ಅಗತ್ಯವಿದ್ದಾಗ ಕರ್ನಾಟಕದ ವೇಗದ ಬೌಲರ್ ವಿದ್ಯಾರ್ಥಿ ಪಾಟೀಲ್ ತನ್ನ ಮೊದಲ ಎಸೆತದಲ್ಲೇ ಸ್ಪೋಟಕ ಬ್ಯಾಟ್ಸ್ಮನ್ ಅಕ್ಷಯ್ ಕರ್ನೇವರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಪರಿಣಾಮ ಕರ್ನಾಟಕ 4 ರನ್ಗಳ ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ.

ಫೈನಲ್ನಲ್ಲಿ ಸೋತೆ ಇಲ್ಲ ಕರ್ನಾಟಕ:

ಕರ್ನಾಟಕ ತಂಡ 2018-19 ಮತ್ತು 2019-20ರ ಸಾಲಿನಲ್ಲಿ ಸತತ ಎರಡು ಬಾರಿ ಫೈನಲ್ ಪ್ರವೇಶಿಸಿತ್ತು. ಈ ಎರಡೂ ಬಾರಿಯೂ ಕರ್ನಾಟಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಸಫಲವಾಗಿತ್ತು. ಅದ್ಭುತ ಫಾರ್ಮ್ನಲ್ಲಿರುವ ಕರ್ನಾಟಕ ಈ ವರ್ಷವೂ ಈವರೆಗೆ ಫೈನಲ್ನಲ್ಲಿ ತಮಿಳುನಾಡಿನ ವಿರುದ್ಧ ಗೆಲುವು ಸಾಧಿಸಲಿದೆ ಎನ್ನಲಾಗುತ್ತಿದೆ.

ಈ ವರ್ಷವೂ ಫೈನಲ್ ಪ್ರವೇಶಿಸುವ ಮೂಲಕ ರನ್ನಿಂಗ್ ಚಾಂಪಿಯನ್ ತಮಿಳುನಾಡು ತಂಡ 4 ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅತಿಹೆಚ್ಚು ಬಾರಿ ಫೈನಲ್ ಪ್ರವೇಶಿಸಿದ ತಂಡ ಎಂಬ ಹೆಗ್ಗಳಿಕೆ ತಮಿಳುನಾಡು ಪಾತ್ರವಾಗಿದೆ. ಮೂರು ಬಾರಿ ಫೈನಲ್ ಪ್ರವೇಶಿಸುವ ಮೂಲಕ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಇದಲ್ಲದೆ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತಮಿಳುನಾಡು ಮತ್ತು ಕರ್ನಾಟಕ ತಲಾ ಎರಡು ಬಾರಿ ಪ್ರಶಸ್ತಿ ಗೆದ್ದಿದೆ. ಈ ಮೂಲಕ ಇತ್ತಂಡಗಳೂ ಅತಿಹೆಚ್ಚು ಬಾರಿ ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿವೆ. ಸೋಮವಾರ ನಡೆಯುವ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಹೊಸ ದಾಖಲೆ ಬರೆಯಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights