MSP ಖಾತರಿಗೆ ಆಗ್ರಹಿಸಿ ನ.29ರಂದು ಸಂಸತ್‌ ಚಲೋ; ಸಂಸತ್‌ನತ್ತ ರೈತರ ಟ್ರಾಕ್ಟರ್‌ಗಳು!

ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಶಾಸನಬದ್ಧವಾಗಿ ಖಾತರಿಗೊಳಿಸಬೇಕು ಎಂದು ಒತ್ತಾಯಿಸಿ ನವೆಂಬರ್ 29ರಂದು ಸಂಸತ್ ಚಲೋ ನಡೆಸಲು ಭಾರತೀಯ ಕಿಸಾನ್‌ ಮೋರ್ಚಾ ನಿರ್ಧರಿಸಿದೆ.

ನ.29ರಿಂದ ಸಂಸತ್‌ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದ ಮೊದಲ ದಿನವೇ ಸಂಸತ್‌ ಚಲೋ ನಡೆಸಲು ಹೋರಾಟನಿರತ ರೈತರು ಮುಂದಾಗಿದ್ದಾರೆ. ಅಂದು, ಒಟ್ಟು 60 ಟ್ಯ್ರಾಕ್ಟರ್‌ಗಳು ಸಂಸತ್ತಿಗೆ ತೆರಳಲಿವೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಮಂಗಳವಾರ ಗಾಜಿಯಾಬಾದ್‌ನಲ್ಲಿ ಘೋಷಿಸಿದ್ದಾರೆ.

“ನವೆಂಬರ್‌ 29 ರಂದು 60 ಟ್ರ್ಯಾಕ್ಟರ್‌ಗಳು ಸಂಸತ್ತಿಗೆ ಮೆರವಣಿಗೆ ನಡೆಸಲಿವೆ. ಸರ್ಕಾರ ತೆರೆದಿರುವ ರಸ್ತೆಗಳಲ್ಲಿ ಟ್ರ್ಯಾಕ್ಟರ್‌ಗಳು ಹೋಗುತ್ತವೆ. ನಾವು ರಸ್ತೆಗಳನ್ನು ನಿರ್ಬಂಧಿಸಿದ್ದೇವೆ ಎಂದು ಅವರು ಆರೋಪಿಸಿದ್ದರು. ನಾವು ರಸ್ತೆಗಳನ್ನು ನಿರ್ಬಂಧಿಸಿಲ್ಲ. ರಸ್ತೆ ತಡೆ ನಮ್ಮ ಚಳವಳಿಯಲ್ಲ. ನಮ್ಮ ಆಂದೋಲನವು ಸರ್ಕಾರದೊಂದಿಗೆ ಮಾತನಾಡುವುದಾಗಿದೆ. ನಾವು ನೇರವಾಗಿ ಸಂಸತ್ತಿಗೆ ಹೋಗುತ್ತೇವೆ’ ಎಂದು ಅವರು ಎಎನ್ಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದು, ಈ ಮೂರು ಕೃಷಿ ಕಾನೂನುಗಳ ರದ್ದತಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡುವ ಸಾಧ್ಯತೆ ಇದೆ. ಆದರೆ ಅಷ್ಟಕ್ಕೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಕಾಯ್ದೆ ಸಂಸತ್ತಿನಲ್ಲಿ ರದ್ದಾಗುವುದರ ಜೊತೆಗೆ ಎಂಎಸ್‌ಪಿ ಖಾತ್ರಿ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಾವು ಮಳೆಗಾಲದ ಅಧಿವೇಶನದ ಸಂದರ್ಭದಲ್ಲಿ ಅದಕ್ಕೆ ಪ್ರತಿಯಾಗಿ ಜಂತರ್‌ ಮಂತರ್‌ನಲ್ಲಿ ಸೇರಿ ಕಿಸಾನ್ ಸಂಸತ್ತು ನಡೆಸಿದೆವು. ಆದರೆ ಕಳೆದ ಬಾರಿ ಹೋದಂತೆ ಈ ಬಾರಿ 200 ಜನರು ಇರುವುದಿಲ್ಲ. ಬದಲಿಗೆ, ಸಾವಿರ ಜನರು ಸಂಸತ್ತಿಗೆ ತೆರಳಲಿದ್ದಾರೆ ಎಂದು ಟಿಕಾಯತ್ ವಿವರಿಸಿದ್ದಾರೆ.

‘ಎಂಎಸ್‌ಪಿ ಕುರಿತು ಸರ್ಕಾರದ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ. ಅದರೊಂದಿಗೆ ಕಳೆದ ಒಂದು ವರ್ಷದಲ್ಲಿ ಸಂಭವಿಸಿದ ಘಟನೆಗಳು, 750 ರೈತರ ಸಾವು… ಇವೆಲ್ಲದರ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

2020 ನವೆಂಬರ್ ತಿಂಗಳಿನಲ್ಲಿ ಆರಂಭವಾದ ರೈತ ಹೋರಾಟ ಹಲವು ಏಳು ಬೀಳುಗಳ ನಡುವೆಯೂ ಯಶಸ್ವಿ ಕಂಡಿದೆ. ನವೆಂಬರ್ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಸಂಸತ್ತಿನಲ್ಲಿ ಕಾಯ್ದೆಗಳು ಅಧಿಕೃತವಾಗಿ ರದ್ಧಾಗುವವರೆಗೂ ಕಾಯುವುದಾಗಿ ತಿಳಿಸಿತ್ತು. ಅದರೊಂದಿಗೆ ಇನ್ನು ಮುಖ್ಯ ಬೇಡಿಕೆಗಳಾಗಿರುವ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವುದು, ವಿದ್ಯುತ್ ಕಾಯ್ದೆಯನ್ನು ಹಿಂಪಡೆಯುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಪೂರೈಸುವವರೆಗೂ ಹೋರಾಟವನ್ನು ನಡೆಸುವುದಾಗಿ ತಿಳಿಸಿತ್ತು.

ಸಂಸತ್ತಿನ ಚಳಿಗಾಲದ ಅಧಿವೇಶನವು ನವೆಂಬರ್ 29 ರಂದು ಪ್ರಾರಂಭವಾಗುತ್ತದೆ ಮತ್ತು ಡಿಸೆಂಬರ್ 23 ರವರೆಗೆ ಮುಂದುವರೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ಕೊರೊನಾದಿಂದ ಬಡತನ, ನಿರುದ್ಯೋಗ: ರಾಜ್ಯದಲ್ಲಿ ಒಂದೇ ವರ್ಷದಲ್ಲಿ 850 ಜನರು ಆತ್ಮಹತ್ಯೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights