ಹೆಣ್ಣಿಗೆ ತಾಯಿಯ ಗರ್ಭ – ಸಮಾಧಿ ಬಿಟ್ಟರೆ ಬೇರೆ ಯಾವುದೇ ಸುರಕ್ಷಿತ ಸ್ಥಳವಿಲ್ಲ: ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಹೆಣ್ಣಿಗೆ ತಾಯಿಯ ಗರ್ಭ ಮತ್ತು ಸಮಾಧಿ ಎರಡೇ ಸುರಕ್ಷಿತ. ಬೇರೆ ಎಲ್ಲೂ ಆಕೆ ಸುರಕ್ಷಿತಳಲ್ಲ. ವಿದ್ಯೆ ಕಲಿಸುವ ಶಾಲೆಯೂ ಸುರಕ್ಷಿತವಲ್ಲ. ಶಿಕ್ಷಕರನ್ನೂ ನಂಬಲು ಸಾಧ್ಯವಿಲ್ಲ. ನನಗಾದ ಅನ್ಯಾಯ ಯಾರಿಗೂ ಆಗದಿರಲಿ, ಸಾಯುವುದು ಬಿಟ್ಟರೆ ಬೇರೇನೂ ನನಗೆ ಉಳಿದಿಲ್ಲ ಎಂದು ಡೆತ್‌ನೋಟ್‌ ಬರೆದಿಟ್ಟು ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ.

ಚೆನ್ನೈನ ಪೂನಮಲ್ಲಿ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ತನ್ನ ತರಗತಿ ಪ್ರಾಧ್ಯಾಪಕನೊಬ್ಬನಿಂದ ನಿರಂತರ ಲೈಂಗಿಕ ಕಿರುಕುಳ ಅನುಭವಿಸಿ, ಮನನೊಂದು ಆತ್ಮಹತ್ಯೆಗೆ ಬಲಿಯಾಗಿದ್ದಾರೆ. ತನಗೆ ಅನ್ಯಾಯವಾಗಿದೆ, ನನಗೆ ನ್ಯಾಯ ಕೊಡಿಸಿ ಎಂದು ಆಕೆ ಪತ್ರ ಬರೆದಿಟ್ಟಿದ್ದಾರೆ. ಆದರೆ, ತನ್ನ ಸಾವಿಗೆ ಯಾರು ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿಲ್ಲ.

ಶಾಲೆ ಸೇರಿದಂತೆ ಯಾವುದೇ ಸ್ಥಳವೂ ಹೆಣ್ಣಿಗೆ ಸುರಕ್ಷಿತವಲ್ಲ. ಶಿಕ್ಷಕರನ್ನೂ, ಸಂಬಂಧಿಗಳನ್ನೂ ನಂಬಬೇಡಿ. ಈ ಸಮಾಜವನ್ನೂ ನಂಬಬೇಡಿ. ನನಗೆ ಕೆಲವು ಘಟನೆಗಳು ದುಸ್ವಪ್ನದಂತೆ ಕಾಡುತ್ತಿವೆ. ನನಗೆ ನಿದ್ರೆ ಮಾಡುಲೂ ಆಗುತ್ತಿಲ್ಲ. ಓದಿನ ಮೇಲೆ ಗಮನವನ್ನು ಕೇಂದ್ರೀಕರಿಸಲೂ ಸಾಧ್ಯವಾಗುತ್ತಿಲ್ಲ. ತನ್ನ ಸಾವಿನ ನಂತರವಾದರೂ ಇಂಥಹ ಲೈಂಗಿಕ ಕಿರುಕುಳಗಳು ನಿಲ್ಲಲಿ ಎಂದು ವಿದ್ಯಾರ್ಥಿನಿ ಬರೆದಿದ್ದಾರೆ.

ಆಕೆಯ ಡೆತ್‌ನೋಟ್‌ ಪಡೆದುಕೊಂಡು ಮಂಗಾಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ, ಕಾಲೇಜಿನ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಆತನೇ ವಿದ್ಯಾರ್ಥಿನಿಯ ಸಾವಿಗೆ ಕಾರಣ ಎಂದು ಕಾಲೇಜಿನಲ್ಲಿ ಓದುತ್ತಿದ್ದ ಇತರ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿನಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಸಾವಿನ ನಂತರ, ಕಾಲೇಜಿನ ವಿದ್ಯಾರ್ಥಿಗಳು ಆರೋಪಿತ ಪ್ರಾಧ್ಯಾಪಕ ಅಬ್ರಹಾಂ ಅಲೆಕ್ಸ್ ಎಂಬುವವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಆತನ ಅಸಭ್ಯ ವರ್ತನಗಳ ಬಗ್ಗೆ ಈ ಹಿಂದೆಯೇ ದೂರು ನೀಡಿದ್ದರೂ ಕಾಲೇಜು ಆಡಳಿತ ಮಂಡಳಿ ಆತನ ವಿರುದ್ದ ಕ್ರಮ ಕೈಗೊಳ್ಳಲಿಲ್ಲ. ಆತನ್ನು ಬಂಧಿಸಬೇಕು. ಆತನಿಗೆ ಶಿಕ್ಷೆಯಾಗಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಾಧ್ಯಾಪಕನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ: ಮಹಿಳೆಯ ಖಾಸಗಿ ವಿಡಿಯೋ ಹರಿಬಿಟ್ಟ ಆರೋಪ; ಬಿಜೆಪಿ ಮುಖಂಡನ ವಿರುದ್ದ ಪ್ರಕರಣ ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights