ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆಗೆ ಸೆಲ್ಯೂಟ್‌ ಎಂದಿದ್ದ ಕಾಳಿಚರಣ್‌ ಅರೆಸ್ಟ್‌; ದೇಶದ್ರೋಹ ಪ್ರಕರಣ ದಾಖಲು

ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಸ್ವಯಂ ಘೋಷಿತ ದೇವಮಾನವ ಕಾಳಿಚರಣ್ ಮಹಾರಾಜ್‌ ಅವರನ್ನು ಛತ್ತೀಸ್‌ಗಢ ಪೊಲೀಸರು ಬಂಧಿಸಿದ್ದಾರೆ.

ದ್ವೇಷದ ಭಾಷಣ ಮತ್ತು ದೇಶದ್ರೋಹ ಪ್ರಕರಣ ದಾಖಲಿಸಿರುವ ಪೊಲೀಸರು, ನೆರೆಯ ರಾಜ್ಯ ಮಧ್ಯಪ್ರದೇಶದ ಧಾರ್ಮಿಕ ಮುಖಂಡನಾಗಿರುವ ಕಾಳಿಚರಣ್‌ ಅವರನ್ನು ಬಂಧಿಸಿದ್ದಾರೆ. ಇದು ಎರಡೂ ರಾಜ್ಯಗಳ ನಾಯಕರ ನಡುವೆ ಮಾತಿನ ಸಮರವನ್ನು ಉಂಟುಮಾಡಿದೆ ಎಂದು ವರದಿಯಾಗಿದೆ.

ಡಿಸೆಂಬರ್ 25-26 ರಂದು ರಾಯ್‌ಪುರದಲ್ಲಿ ನಡೆದ ‘ಧರ್ಮ ಸಂಸದ್’ನಲ್ಲಿ ಕಾಳಿಚರಣ್ ಅವರು ಮಹಾತ್ಮಾ ಗಾಂಧಿಯನ್ನು ನಿಂದಿಸುವ ಮತ್ತು “ವಿವಿಧ ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಪ್ರಚೋದಿಸುವ” ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ಪ್ರಮೋದ್ ದುಬೆ ಅವರು ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಭಾನುವಾರ ಎಫ್‌ಐಆರ್ ದಾಖಲಿಸಿದ್ದ ಛತ್ತಿಸ್‌ಘಡ ಪೊಲೀಸರು, ಕಾಳಿಚರಣ್ ಅವರನ್ನು ಬಂಧಿಸಿದ್ದಾರೆ.

ಐಪಿಸಿಯ ಸೆಕ್ಷನ್ 505 (2) (ವರ್ಗಗಳ ನಡುವೆ ದ್ವೇಷವನ್ನು ಪ್ರಚೋದಿಸುವುದು) ಮತ್ತು 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ಅನ್ನು ಮೊದಲು ದಾಖಲಿಸಲಾಗಿತ್ತು. ನಂತರ, ರಾಯ್‌ಪುರ ಪೊಲೀಸರು ದೇಶದ್ರೋಹ (124 ಎ) ಮತ್ತು ಧಾರ್ಮಿಕ ಭಾವನೆಗಳನ್ನು ಅತಿರೇಕಗೊಳಿಸುವಿಕೆ (295 ಎ) ಗೆ ಸಂಬಂಧಿಸಿದ ಸೆಕ್ಷನ್‌ಗಳನ್ನು ತನಿಖೆಯ ಸಮಯದಲ್ಲಿ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಳಿಚರಣ್‌ನನ್ನು ಬಂಧಿಸಲು ಮಧ್ಯಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರಕ್ಕೆ ತಂಡಗಳನ್ನು ಕಳುಹಿಸಲಾಗಿತ್ತು. ಅಂತಿಮವಾಗಿ ಅವರನ್ನು ಖಜುರಾಹೊದ ಬಳಿ ಇರುವ ಬಾಗೇಶ್ವರ ಧಾಮದಲ್ಲಿ ಬಂಧಿಸಲಾಗಿದೆ ಎಂದು ರಾಯ್‌ಪುರ ಎಸ್‌ಪಿ ಪ್ರಶಾಂತ್ ಅಗರವಾಲ್ ತಿಳಿಸಿದ್ದಾರೆ.

ಗುರುವಾರ ತಡರಾತ್ರಿ ಕಾಳಿಚರಣ್‌ನನ್ನು ರಾಯ್‌ಪುರದ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ಅಲ್ಲಿ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

ಇದನ್ನೂ ಓದಿ: ಗೋವಾ ಚುನಾವಣೆ 2022: ಕಾಂಗ್ರೆಸ್‌ನ ‘ಜಾತ್ಯತೀತ ಮತ’ಗಳನ್ನು ಕಸಿಯಲಿವೆ ಟಿಎಂಸಿ-ಎಎಪಿ; ಕೈ ಪಾಳಯಕ್ಕೆ ನಷ್ಟ!

ಈ ಬಂಧನವು ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಛತ್ತೀಸ್‌ಗಢ ಪೊಲೀಸರು ಮಧ್ಯಪ್ರದೇಶ ಪೊಲೀಸರಿಗೆ ಮಾಹಿತಿ ನೀಡದೆ ಕಾಳಿಚರಣ್‌ನನ್ನು ಬಂಧಿಸುವ ಮೂಲಕ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಆರೋಪಿಸಿದ್ದಾರೆ.

“ನಾನು ಛತ್ತೀಸ್‌ಗಢ ಡಿಜಿಪಿಯೊಂದಿಗೆ ಮಾತನಾಡಿದ್ದೇನೆ ಮತ್ತು ಸಂಪೂರ್ಣ ಕಾರ್ಯಾಚರಣೆ ನಡೆಸಿದ ರೀತಿಯಲ್ಲಿ ನನ್ನ ಪ್ರತಿಭಟನೆಯನ್ನು ದಾಖಲಿಸಿದ್ದೇನೆ” ಎಂದು ಮಧ್ಯಪ್ರದೇಶದ ಡಿಜಿಪಿ ವಿವೇಕ್ ಜೋಹ್ರಿ ಹೇಳಿದ್ದಾರೆ.

ಮಿಶ್ರಾ ಅವರ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, “ರಾಷ್ಟ್ರಪಿತನನ್ನು ನಿಂದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು… ಬಂಧನದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಜನರನ್ನು ನಾನು ಕೇಳಲು ಬಯಸುತ್ತೇನೆ, ಅಂತಹ ವ್ಯಕ್ತಿಯನ್ನು ಬಂಧಿಸಿರುವುದಕ್ಕೆ ಅವರು ಅತೃಪ್ತರಾಗಿದ್ದಾರೆಯೇ??” ಎಂದು ಹೇಳಿದ್ದಾರೆ.

ಭಾನುವಾರ ನಡೆದ ಧರ್ಮ ಸಂಸದ್‌ನಲ್ಲಿ ಪಾಲ್ಗೊಂಡಿದ್ದ ಛತ್ತೀಸ್‌ಗಢದ ಬಿಜೆಪಿ ನಾಯಕ ಬ್ರಿಜ್‌ಮೋಹನ್ ಅಗರವಾಲ್ ಅವರು ಕಾಳಿಚರಣ್ ಅವರನ್ನು ಬೆಂಬಲಿಸಿ #ReleaseKalicharanMaharaj ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಏತನ್ಮಧ್ಯೆ, ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಛತ್ತೀಸ್‌ಗಢ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ ಸಂಜಯ್ ದುಬೆ ಅವರನ್ನು ರಾಯ್‌ಪುರದಲ್ಲಿ ಬಂಧಿಸಲಾಗಿದೆ. ದುಬೆ ಅವರನ್ನು ಡಿಸೆಂಬರ್ 27 ರಂದು ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಮತ್ತಷ್ಟು ಬ್ರೇಕ್‌: ಬೆಂಗಳೂರಿನಲ್ಲಿ ಇಂದು ಸಂಜೆ 6 ಗಂಟೆಯಿಂದಲೇ ನೈಟ್‌ ಕರ್ಫ್ಯೂ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights