ಗೋವಾ ಚುನಾವಣೆ 2022: ಕಾಂಗ್ರೆಸ್‌ನ ‘ಜಾತ್ಯತೀತ ಮತ’ಗಳನ್ನು ಕಸಿಯಲಿವೆ ಟಿಎಂಸಿ-ಎಎಪಿ; ಕೈ ಪಾಳಯಕ್ಕೆ ನಷ್ಟ!
ಗೋವಾ ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸುವ ಸಲುವಾಗಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಜಾತ್ಯತೀತ ಮತಗಳ ಮೇಲೆ ಟಿಎಂಸಿ ಮತ್ತು ಎಎಪಿ ಕಣ್ಣಿಟ್ಟಿವೆ. ಇದರಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ನಷ್ಟವಾಗುವ ಸಾಧ್ಯತೆ ಇದೆ. 2017ರ ಗೋವಾ ಚುನಾವಣೆಯಲ್ಲಿ ಗೆಲುವಿನ ಅಂತರ ಕಡಿಮೆ ಇರುವುದರಿಂದ – (10 ಕ್ಷೇತ್ರಗಳಲ್ಲಿ ಸುಮಾರು 5,000 ಮತಗಳು ಮತ್ತು ಐದರಲ್ಲಿ 500 ಕ್ಕಿಂತ ಕಡಿಮೆ ಮತಗಳು) ಈ ಬಾರಿಯ ಚುನಾವಣೆಯ ಬಹುಕೋನ ಸ್ಪರ್ಧೆಯಲ್ಲಿ ಕೆಲವು ನೂರು ಮತಗಳನ್ನು ಕಳೆದುಕೊಳ್ಳುವುದು ಕೂಡ ಕಾಂಗ್ರೆಸ್‌ಗೆ ಒಡೆದ ನೀಡಬಹುದು.
ಆಡಳಿತ ವಿರೋಧಿ ಮತಗಳನ್ನು ಸಹ ಟಿಎಂಸಿ ಮತ್ತು ಎಎಪಿ ವಿಭಜಿಸಲಿದ್ದು, ಇದೂ ಕೂಡ ಆಡಳಿತಾರೂಢ ಬಿಜೆಪಿಗೇ ಲಾಭವಾಗಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ರಾಜ್ಯ ರಾಜಕೀಯಕ್ಕೆ ಇತ್ತೀಚೆಗಷ್ಟೇ ಪ್ರವೇಶಿಸಿರುವ ಟಿಎಂಸಿ ಜೊತೆ 2017 ರಲ್ಲಿ ಮೂರು ಸ್ಥಾನಗಳನ್ನು ಗೆದ್ದ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿಯೂ ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿದೆ ಎಂದು ರಾಜಕೀಯ ವೀಕ್ಷಕರು ಹೇಳಿದ್ದಾರೆ.
ಗೋವಾ ಮೂಲದ ಪತ್ರಕರ್ತ ಸುಮಿತ್ ನಾಯಕ್ ಅವರ ಪ್ರಕಾರ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಾಥಮಿಕವಾಗಿ ಕಾಂಗ್ರೆಸ್ ಮೇಲೆ ದಾಳಿ ಮಾಡುತ್ತಿದ್ದಾರೆ ಮತ್ತು ಅವರು ಕಾಂಗ್ರೆಸ್‌ನ ಕ್ರಿಶ್ಚಿಯನ್ ಶಾಸಕರನ್ನು ಬೇಟೆಯಾಡುತ್ತಿದ್ದಾರೆ. ರಾಜ್ಯದಲ್ಲಿ ಶೇ.27 ರಷ್ಟು ಮತದಾರರನ್ನು ಒಳಗೊಂಡಿರುವ ಕ್ರಿಶ್ಚಿಯನ್ನರು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮತದಾರರು. ಈ ಮತದಾರರು ಟಿಎಂಸಿಗೆ ಹೋದರೆ, ಅದು ಕಾಂಗ್ರೆಸ್‌ಗೆ ದೊಡ್ಡ ನಷ್ಟವಾಗುತ್ತದೆ. ಮತ್ತೊಂದೆಡೆ, ಟಿಎಂಸಿ ಪಕ್ಷದ ಈ ನಡೆಯಿಂದ ಬಿಜೆಪಿಯ ಭವಿಷ್ಯಕ್ಕೆ ಯಾವುದೇ ತೊಡಕಾಗುವುದಿಲ್ಲ ಎಂದು ಹೇಳಿದ್ದಾರೆ.
Also Read:ಗೋವಾ ಚುನಾವಣೆ: ಹಾಲಿ ಶಾಸಕರಿಗೆ ಕೋಕ್ ಕೊಡುತ್ತಿರುವ ಬಿಜೆಪಿ; ಹೊಸ ಅಭ್ಯರ್ಥಿಗಳ ಹುಡುಕಾಟ!
“ಟಿಎಂಸಿ ಮತ್ತು ಎಎಪಿಗೆ ಯಾವುದೇ ಪ್ರಮುಖ ಅವಕಾಶವಿಲ್ಲ. ಆದರೆ, ಅವರು ಕಾಂಗ್ರೆಸ್‌ಗೆ ಒದಗಬಹುದಾದ ಮತಗಳನ್ನು ಕಡಿಮೆ ಮಾಡಬಹುದು” ಎಂದು ಕಾಂಗ್ರೆಸ್‌ನ ಮೂಲವೊಂದು ಹೇಳಿದೆ.
ಎಎಪಿಯ “ಸ್ವಚ್ಛ ಮತ್ತು ಭ್ರಷ್ಟರಹಿತ ಸರ್ಕಾರ” ಮತ್ತು ಟಿಎಂಸಿಯ ಪ್ರಯತ್ನಗಳ ಹೊರತಾಗಿಯೂ ಜನರು ತಮ್ಮ ಪಕ್ಷಕ್ಕೆ ಮತ ಹಾಕುತ್ತಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಏಕೆಂದರೆ ಕಾಂಗ್ರೆಸ್ ಪಕ್ಷವು ಎಎಪಿ ಮತ್ತು ಟಿಎಂಸಿಗಿಂತ ಭಿನ್ನವಾಗಿ “ತಳಮಟ್ಟದಲ್ಲಿ ಕೆಲಸ ಮಾಡುತ್ತಿದೆ” ಎಂದು ಅವರು ಹೇಳಿದ್ದಾರೆ.
ಎಎಪಿ ಮತ್ತು ಟಿಎಂಸಿ ಪಕ್ಷಗಳು ಕಾಂಗ್ರೆಸ್‌ನ ಕೆಲವು ಸಾಂಪ್ರದಾಯಿಕ ಮತಗಳನ್ನು ಕಸಿದುಕೊಳ್ಳಬಹುದು ಎಂದು ಒಪ್ಪಿಕೊಂಡಿರುವ ಮಾಜಿ ಸಿಎಂ ದಿಗಂಬರ್ ಕಾಮತ್, ಇದರ ಪರಿಣಾಮ ಅಲ್ಪವಾಗಿರುತ್ತದೆ ಎಂದು ಹೇಳಿದದ್ದಾರೆ. “ಜನರು ದೆಹಲಿ ಮತ್ತು ಕೋಲ್ಕತ್ತಾದ ಪಕ್ಷಗಳಿಗೆ ಮತ ಹಾಕುವುದಿಲ್ಲ” ಎಂದು ಅವರು ಹೇಳುತ್ತಾರೆ.
Also Read: ಗೋವಾ: ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಲೆಕ್ಸೊ ರೆಜಿನಾಲ್ಡೊ ಟಿಎಂಸಿಗೆ ಸೇರ್ಪಡೆ!