ಬಿಜೆಪಿಯಲ್ಲಿ ಭಿನ್ನಮತ: ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ರಾಜೀನಾಮೆ?

ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಭಾಗದ ಶಾಸಕ ಅರವಿಂದ್ ಬೆಲ್ಲದ್ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಧಾರವಾಡದಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿದ್ದು, ಇದರಿಂದ ಬೇಸತ್ತು ಬೆಲ್ಲದ್‌ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಊಹಾಪೋಹಗಳು ಚರ್ಚೆಯಲ್ಲಿವೆ.

ಬೆಲ್ಲದ್ ಅವರು ಪಕ್ಷದ ಬಗ್ಗೆ ಹೊಂದಿದ್ದ ನಿಲುವನ್ನು ಬದಲಿಸಿಕೊಂಡಿದ್ದು ಸ್ಥಳೀಯ ನಾಯಕರಿಂದ ದೂರ ಸರಿದಿದ್ದಾರೆ. ಅಲ್ಲದೆ, ಇತ್ತೀಚೆಗೆ ನಡೆದ ರಾಜ್ಯ ಸಂಪುಟ ವಿಸ್ತರಣೆಯ ಬಳಿಕ ಅವರು ಪಕ್ಷದಲ್ಲಿ ನಿಷ್ಕ್ರಿಯರಾಗಿದ್ದಾರೆ ಎಂಬ ಮಾತುಗಳೂ ಕೂಡ ಕೇಳಿಬರುತ್ತಿವೆ. ಹೀಗಾಗಿ, ತಾಂತ್ರಿಕ ಕಾರಣಗಳನ್ನು ನೀಡಿ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಇದೂವರೆಗೂ ಯಾವುದೇ ಅಧಿಕೃತ ಪ್ರಕಟಣೆಗಳು ಹೊರಬಿದ್ದಿಲ್ಲ.

ಬಿಎಸ್‌ ಯಡಿಯೂರಪ್ಪ ಅವರ ಪದಚ್ಯುತಿಯ ನಂತರ, ಸಿಎಂ ಸ್ಥಾನಕ್ಕೆ ಬೆಲ್ಲದ್‌ ಅವರ ಹೆಸರು ಕೇಳಿಬಂದಿತ್ತು. ಆದರೂ, ಪಕ್ಷದ ಹೈಕಮಾಂಡ್‌ ಅವರಿಗೆ ಸಿಎಂ ಸ್ಥಾನ ನೀಡಲಿಲ್ಲ. ಇದರಿಂದಾಗಿ ಅವರು ಪಕ್ಷದಲ್ಲಿ ಅವರು ಬೇಸರಗೊಂಡಿದ್ದಾರೆ. ಅಲ್ಲದೆ, ಪಕ್ಷದೊಳಗೆಯೇ ಹಲವರು ಬೆಲ್ಲದ್‌ ಅವರನ್ನು ವಿರೋಧಿಸಿದ್ದರು. ಇದೆಲ್ಲವೂ ಅವರು ರಾಜೀನಾಮೆಯ ನಿರ್ಧಾರ ಕೈಗೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ.

ಆದರೆ, ಬೆಲ್ಲದ್ ಅವರು ರಾಜೀನಾಮೆ ನೀಡುವ ವಿಚಾರವನ್ನು ಅವರ ಆಪ್ತರು ನಿರಾಕರಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಬೆಲ್ಲದ್‌ ಅವರು ಪ್ರಬಲ ಲಿಂಗಾಯತ ಮುಖಂಡ. ಅವರನ್ನು ನಿರ್ಲಕ್ಷಿಸುವುದು ಪಕ್ಷಕ್ಕೆ ಸುಲಭವಿಲ್ಲ. ಇದು ಪಕ್ಷದ ನಾಯಕರಿಗೆ ತಿಳಿದಿದೆ ಎಂದು ಧಾರವಾಡದ ಬಿಜೆಪಿ ಮುಖಂಡರು ಹೇಳುತ್ತಾರೆ.

ಬೆಲ್ಲದ್ ಅವರು ಪಕ್ಷದಲ್ಲಿ ಸ್ಥಿರತೆಯನ್ನು ತರುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರ ಮಾನಹಾನಿ ಮಾಡುವ ಉದ್ದೇಶದಿಂದ ಕೆಲವರು ಇಂತಹ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಆದರೆ, ಈ ಯಾವ ಬೆಳವಣಿಗಗಳ ಬಗ್ಗೆ ಬೆಲ್ಲದ್‌ ಅವರು ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಮುಸ್ಲಿಮರ ವಿರುದ್ದ ಹಿಂದೂತ್ವ ನಾಯಕಿ ದ್ವೇಷ ಭಾಷಣ: ಭಾರತದ ಉನ್ನತ ರಾಜತಾಂತ್ರಿಕರಿಗೆ ಪಾಕಿಸ್ಥಾನದಿಂದ ಸಮನ್ಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.