ತಮಿಳುನಾಡಿನಲ್ಲಿ ಬಿಜೆಪಿ ಸೇರಿದ ರೌಡಿಶೀಟರ್; ಪೊಲೀಸರನ್ನು ಕಂಡು ಪರಾರಿ!

ತಮಿಳುನಾಡಿನ ಚೆನ್ನೈನಲ್ಲಿರುವ ವಂಡಲೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕುಖ್ಯಾತ ದರೋಡೆಕೋರನೊಬ್ಬ ಬಿಜೆಪಿಗೆ ಸೇರಲು ಪ್ರಯತ್ನಿಸಿದ್ದು, ಆದರೆ ಪೊಲೀಸರನ್ನು ನೋಡಿದ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ.

50 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸೂರ್ಯ ಎಂಬಾತ ಬಿಜೆಪಿಯ ರಾಜ್ಯಾಧ್ಯಕ್ಷ ಎಲ್ ಮುರುಗನ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರಲು ಹೊರಟಿದ್ದರು ಎನ್ನಲಾಗಿದೆ.

ಈ ಕಾರ್ಯಕ್ರಮದಲ್ಲಿ ಸೂರ್ಯ ಪಾಲ್ಗೊಳ್ಳಲಿದ್ದಾನೆ ಎಂದು ಚೆಂಗಲ್ಪಟ್ಟು ಜಿಲ್ಲಾ ಪೊಲೀಸರಿಗೆ ಸುಳಿವು ಸಿಕ್ಕಿದ ನಂತರ ಆ ಸ್ಥಳಕ್ಕೆ ತೆರಳಿದರು. ಆದರೆ, ಪೋಲೀಸರು ಬಂದುದ್ದನ್ನು ಗಮನಿಸಿದ ಆತ ನಂತರ ಕಾರಿನಲ್ಲಿ ಪರಾರಿಯಾಗಿದ್ದಾನೆ.

ಈ ಕುರಿತು ಟ್ವೀಟ್ ಮಾಡಿರುವ ಪತ್ರಕರ್ತ ಶರವಣನ್, “ವಂಡಲೂರು ಬಳಿ, ಭಾಜಾಪ ನಾಯಕ ಎಲ್.ಮುರುಗನ್ ಅವರ ಮುಂದಾಳತ್ವದಲ್ಲಿ, ಬಿಜೆಪಿ ಸೇರುವುದಕ್ಕೆ ಬಂದಿದ್ದ ಪ್ರಬಲ ರೌಡಿ ನೆರ್ಕುಂಡ್ರಂ ಸೂರ್ಯ(7 ಕೊಲೆ ಸೇರಿದಂತೆ 52 ಪ್ರಕರಣಗಳು) ಪೋಲೀಸರನ್ನು ಕಂಡೊಡನೆ ಪರಾರಿಯಾಗಿದ್ದಾನೆ. ಇತ್ತೀಚೆಗೆ ದಕ್ಷಿಣ ಚೆನ್ನೈನ ಕುಖ್ಯಾತ ದಾದಾ ಕಲ್ವೆಟ್ಟು ರವಿ ಭಾಜಾಪದೊಂದಿಗೆ ಸೇರಿಕೊಂಡಿದ್ದಾನೆ” ಎಂದು ಬರೆದಿದ್ದಾರೆ.

ಈ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ, ಚಾಕು ಇಟ್ಟುಕೊಂಡಿದ್ದ ಇತರೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಸೂರ್ಯನೊಂದಿಗೆ ಸಂಬಂಧವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ದಿ ಹಿಂದು ವರದಿ ಮಾಡಿದೆ.

ಆರು ಆರೋಪಿಗಳೊಂದಿಗೆ ಪಕ್ಷದ ಇಬ್ಬರು ಸದಸ್ಯರನ್ನು ಸಹ ಬಂಧಿಸಲಾಗಿರುವುದರಿಂದ, ಪೊಲೀಸ್ ಠಾಣೆಯ ಹೊರಗೆ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಬಿಜೆಪಿ ತಮಿಳುನಾಡು ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಘವನ್ ಪತ್ರಿಕೆಗೆ ತಿಳಿಸಿದ್ದಾರೆ. “ಆ ಇಬ್ಬರು ಮಾತ್ರ ನಮ್ಮ ಪಕ್ಷದ ಸದಸ್ಯರು. ಆ ಆರು ಜನರ ಬಿಡುಗಡೆಯನ್ನು ನಾವು ಬಯಸಲಿಲ್ಲ” ಎಂದು ಅವರು ಹೇಳಿದರು.

ದರೋಡೆಕೋರರು ತಮ್ಮ ಪಕ್ಷಕ್ಕೆ ಸೇರುತ್ತಿರುವುದರ ಬಗ್ಗೆ ರಾಘವನ್ ಅವರನ್ನು ಪ್ರಶ್ನಿಸಿದಾಗ, “ನೂರಾರು ಜನರು ಬಿಜೆಪಿಗೆ ಸೇರುತ್ತಿರುವುದರಿಂದ ಪ್ರತಿಯೊಬ್ಬರ ವಿವರಗಳನ್ನು ಪರಿಶೀಲಿಸುವುದು ಕಷ್ಟ. ಸದಸ್ಯರ ಒಳಹರಿವು ಹೆಚ್ಚಾಗಿದ್ದಾಗ ಈ ರೀತಿಯ ಒಂದೆರೆಡು ಪ್ರಕರಣಗಳು ಜರುಗಿವೆ. ಈ ಬಗ್ಗೆ ನಾವು ಜಾಗರೂಕರಾಗಿರುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆ!

“ದರೋಡೆಕೋರರು ತಮ್ಮ ಪಕ್ಷಕ್ಕೆ ಸೇರಲು ಯತ್ನಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ಬಿಜೆಪಿ ಕಾಳಜಿ ವಹಿಸುತ್ತದೆಯೇ” ಎಂದು ತಮಿಳುನಾಡಿನ ಶಿವಗಂಗ ಸಂಸದ ಕಾರ್ತಿ ಚಿದಂಬರಂ ಪ್ರಶ್ನಿಸಿದ್ದಾರೆ.

ಸೂರ್ಯ ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ಸ್ಫೋಟಕಗಳ ಬಳಕೆ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದು, ಆತನ ಪತ್ತೆಗೆ ಬಲೆ ಬೀಸಿದ್ದಾರೆ.

2021ರಲ್ಲಿ ತಮಿಳುನಾಡಿನಲ್ಲಿ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಹಳಷ್ಟು ರೌಡಿ ಹಿನ್ನೆಲೆಯ ಜನರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಬಿಜೆಪಿ ಸೇರಿದರೆ ತಮ್ಮ ಮೇಲಿನ ಪ್ರಕರಣಗಳನ್ನು ಕೈಬಿಡಲಾಗುತ್ತದೆ ಎಂಬ ಆಮಿಷ ಒಡ್ಡಲಾಗುತ್ತಿದೆ ಎಂಬ ವದಂತಿ ಸಹ ಚಾಲ್ತಿಯಲ್ಲಿದೆ ಎನ್ನಲಾಗಿದೆ.


ಇದನ್ನೂ ಓದಿ: ದೇಶದಲ್ಲಿ ಪ್ರತಿದಿನ 6 ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ; 16 ನಿಮಿಷಕ್ಕೊಂದು ದೌರ್ಜನ್ಯ!

Spread the love

Leave a Reply

Your email address will not be published. Required fields are marked *