ಸುಗಂಧಿ ಬೇರುಗಳು: ಬಾದಲ್ ಸರ್ಕಾರ್ ಅವರ ‘ಏವಂ ಇಂದ್ರಜಿತ: ಮೂರನೇ ರಂಗಭೂಮಿಗೆ ಅಡಿಪಾಯ ಹಾಕಿದ ನಾಟಕ’

ನಾಟಕವು ಜೀವಂತ ಪ್ರದರ್ಶನ ಕಲೆಯಾಗಿದೆ. ಅದರೊಳಗೆ ಅಭಿನಯ, ವೇಷಭೂಷಣ, ಪ್ರಸಾದನ, ಹಾಡು, ಕುಣಿತ, ಸಂಗೀತ, ಕತೆ, ವಾದ್ಯಗಳ ಬಳಕೆ ಎಲ್ಲವೂ ಸೇರಿಕೊಂಡಿರುತ್ತದೆ. ಇವೆಲ್ಲವು ಪರಸ್ಪರ ಒಂದರೊಳಗೊಂದು ಹೆಣೆದುಕೊಂಡು ಆ ಕ್ಷಣದಲ್ಲಿಯೇ ಪ್ರೇಕ್ಷಕರ ಎದುರಿನಲ್ಲಿಯೇ ಜೀವವನ್ನು ಪಡೆದುಕೊಂಡು ಅರಳಬೇಕಾಗುತ್ತದೆ. ಆಗ ಅದೊಂದು ಪ್ರಭಾವಿ ನಾಟಕವೆನಿಸುತ್ತದೆ. ಸ್ವಾತಂತ್ರೋತ್ತರ ಭಾರತೀಯ ನಾಟಕರಂಗದಲ್ಲಿ ಹೊಸ ಆವಿಷ್ಕಾರಗಳು ಶುರುವಾದವು. ಅವು ನಗರದ ಮಧ್ಯಮ ವರ್ಗದ ಸಮುದಾಯವನ್ನು ನೇರವಾಗಿ ತಲುಪುವ ಹಲವು ಒತ್ತಡಗಳು ನಿರ್ಮಾಣವಾದವು. ಈ ಹಿನ್ನೆಲೆಯಲ್ಲಿ ಬಹುಮಟ್ಟಿಗೆ ನಗರವಾಸಿ ಬರಹಗಾರರಿಂದ ಪ್ರಯೋಗಶೀಲತೆಗಳು ನಡೆದವು. ಕೆಲವು ನಾಟಕಕಾರರು ಅಸ್ತಿತ್ವವಾದಿ ಒತ್ತಾಸೆಗಳನ್ನು ಹೊತ್ತುಕೊಂಡು 1960ರ ದಶಕದಲ್ಲಿ ನಾಟಕ ಲೋಕವನ್ನು ಪ್ರವೇಶಿಸಿದರು. ಅವರಲ್ಲಿ ಹಿಂದಿಯ ಮೋಹನ ರಾಕೇಶ್, ಮರಾಠಿಯ ವಿಜಯ ತೆಂಡೂಲ್ಕರ್, ಕನ್ನಡದ ಗಿರೀಶ ಕಾರ್ನಾಡ ಮತ್ತು ಬೆಂಗಾಲಿಯಲ್ಲಿ ಬಾದಲ್ ಸರ್ಕಾರ್ ಪ್ರಮುಖರಾಗಿದ್ದಾರೆ.

ಇವರಲ್ಲಿ ಕೊಲ್ಕೊತ್ತಾದ ಬಾದಲ್ ಸರ್ಕಾರ್ ಅವರು ಬರಿ ನಾಟಕಕಾರರಲ್ಲ; ಅವರು ನಾಟಕ ನಿರ್ದೇಶನಕ್ಕೆ ಹೊಸ ಆಯಾಮಗಳನ್ನು ನೀಡಿದರು; ಅವರು ರಂಗತಜ್ಞರಾಗಿ ನಿರಂತರ ಜನಪರವಾದ ಚಿಂತನೆಗಳನ್ನು ರೂಪಿಸಿದವರಾಗಿದ್ದಾರೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಬಾದಲ್ ಸರ್ಕಾರ್ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ‘ಏವಂ ಇಂದ್ರಜಿತ್’, ‘ಪಗ್ಲ ಘೋಡ’, ‘ತೀಸ್ವಿ ಶತಾಬ್ದಿ’, ‘ಬಾಕಿ ಇತಿಹಾಸ’, ‘ಸಾರಿ ರಾಥ್’, ‘ಬಸಿ ಖಬರ್’, ‘ಸಗಿನ ಮಹತೊ’, ‘ಶೇಷ್ ನಹಿ’ ನಾಟಕಗಳು ಮುಖ್ಯವಾಗಿವೆ. ಇವುಗಳಲ್ಲಿ ‘ಏವಂ ಇಂದ್ರಜಿತ್’ ಭಾರತೀಯ ರಂಗಭೂಮಿಯಲ್ಲಿಯೇ ಒಂದು ಮೈಲಿಗಲ್ಲಾಗಿದೆ. ಇದು ಬಾದಲ್ ಸರ್ಕಾರ್‍ರ ನಾಟಕಗಳಲ್ಲೇ ಅತ್ಯಂತ ಯಶಸ್ವಿ ನಾಟಕ ಎಂದು ಗುರುತಿಸಲಾಗಿದೆ. ಭಾರತೀಯ ರಂಗಭೂಮಿಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಈ ನಾಟಕವನ್ನು ಬಿ.ವಿ. ಕಾರಂತ ಅವರು ಕನ್ನಡದ್ದೇ ನಾಟಕ ಎನ್ನುವಂತೆ ಅನುವಾದಿಸಿದ್ದಾರೆ. ಈ ನಾಟಕವು 1973ರಲ್ಲಿ ಅಕ್ಷರ ಪ್ರಕಾಶನದಿಂದ ಹೊರ ಬಂದಿದೆ. ಇದೇ ನಾಟಕವನ್ನು ಗಿರೀಶ ಕಾರ್ನಾಡ ಅವರು 1974ರಲ್ಲಿ ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಭಾರತೀಯ ಅನೇಕ ಭಾಷೆಗಳಿಗೂ ತರ್ಜುಮೆಗೊಂಡು ಪ್ರದರ್ಶನಗಳನ್ನು ಕಂಡಿದೆ.

‘ಏವಂ ಇಂದ್ರಜಿತ್’ ನಾಟಕವು ಮೂಲತಃ ಬೆಂಗಾಲಿಯಲ್ಲಿ 1963ರಲ್ಲಿ ರಚನೆಯಾಗಿದೆ. ಬಾದಲ್ ಸರ್ಕಾರ್ ಅವರೇ ಸ್ಥಾಪಿಸಿದ ‘ಶತಾಬ್ದಿ’ ಎಂಬ ರಂಗ ತಂಡದ ಮೂಲಕವೇ ಈ ನಾಟಕವು ಪ್ರದರ್ಶಿತವಾಯಿತು. ಇದು ನಾಗರಿಕ ಜೀವನದ ಏಕತಾನತೆಯನ್ನು ಮತ್ತು ವೈಫಲ್ಯಗಳನ್ನೇ ವ್ಯಂಗ್ಯದ ಧಾಟಿಯಲ್ಲಿ ನಿರೂಪಿಸುವ ನಾಟಕವಾಗಿದೆ. ಈ ನಾಟಕವು ಸ್ಯಾಮ್ಯುಯಲ್ ಬೆಕೆಟ್‍ನ ‘ವೇಟಿಂಗ್ ಫಾರ್ ಗೋಡೊ’ ನಾಟಕದಂತೆ ಅಸಂಗತದ ವಿನ್ಯಾಸವನ್ನು ಒಳಗೊಂಡಿದೆ. ಇದಕ್ಕಿಂತ ಮುಖ್ಯವಾಗಿ ಈ ನಾಟಕವು ಅಸ್ತಿತ್ವವಾದಿ ನೆಲೆಗಟ್ಟನ್ನು ಹೊಂದಿದೆ. ನಾಟಕದ ಮೊದಲ ಅಂಕದಲ್ಲಿ ಲೇಖಕನೊಬ್ಬ ಬರೆಯುತ್ತ ಕುಳಿತಿರುತ್ತಾನೆ. ಆತ ಕತೆಯನ್ನು ಬರೆಯಲಾಗದೆ ಒದ್ದಾಡುತ್ತಿರುತ್ತಾನೆ. ಆಗ ಮಾನಸಿ ಎಂಬ ಹುಡುಗಿಯಿಂದ ಸ್ಪೂರ್ತಿಗೊಂಡು ಪ್ರೇಕ್ಷಕರಲ್ಲಿಯೇ ಇರುವ ನಾಲ್ವರ ಕತೆಯನ್ನು ಬರೆಯಲು ನಿರ್ಧರಿಸುತ್ತಾನೆ. ಅವರುಗಳೇ ಅಮಲ್ ಕುಮಾರ್ ಬೋಸ್, ವಿಮಲ್ ಕುಮಾರ್ ಘೋಷ್, ಕಮಲ್ ಕುಮಾರ್ ಸೇನ್ ಮತ್ತು ನಿರ್ಮಲ್ ಕುಮಾರ್ ರಾಯ್. ಆದರೆ ಲೇಖಕ ಕೊನೆಯವನ ಹೆಸರು ನಿರ್ಮಲ್ ಕುಮಾರ್ ರಾಯ್ ಅಲ್ಲವೆನ್ನುತ್ತಾನೆ. ನಿಜವಾದ ಹೆಸರನ್ನು ಹೇಳಲು ಒತ್ತಾಯಿಸಿದಾಗ ಅವನು ಇಂದ್ರಜಿತ್ ರಾಯ್ ಎನ್ನುತ್ತಾನೆ. ಆತ ಸಾಮಾಜಿಕ ನಿಯಮ ಕಟ್ಟಳೆಗಳಿಗೆ ವಿರುದ್ಧವಾಗಿ ನಡೆದರೆ ಹೆದರಿಕೆಯೆಂದು ಹೇಳುತ್ತಾನೆ. ಹೀಗೆ ‘ಏವಂ ಇಂದ್ರಜಿತ್’ ನಾಟಕದ ರಚನಾ ವಿನ್ಯಾಸದಲ್ಲಿಯೇ ಅದರ ನಾವೀಣ್ಯತೆಯಿದೆ. ಈ ನಾಟಕದಲ್ಲಿ ಬರುವ ಲೇಖಕ ನಿರೂಪಕನೂ ಹೌದು ಮತ್ತು ಇತರ ಪಾತ್ರಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ವ್ಯಕ್ತಿಯೂ ಹೌದು.

ನಾಟಕದ ಎರಡನೆಯ ಅಂಕವು ಏಳು ವರ್ಷಗಳ ನಂತರದಲ್ಲಿ ಶುರುವಾಗುತ್ತದೆ. ಅಮಲ್, ವಿಮಲ್ ಮತ್ತು ಕಮಲ್-ಇವರು ಉದ್ಯೋಗಸ್ಥರಾಗಿರುತ್ತಾರೆ; ಅವರಿಗೆಲ್ಲ ಮದುವೆಯಾಗಿರುತ್ತದೆ; ಅವರು ತಂತಮ್ಮ ಉದ್ಯೋಗಳಿಗೆ ಹೊಂದಿಕೊಂಡಿರುತ್ತಾರೆ; ಏಕತಾನತೆಯೇ ಅವರ ಬದುಕಿನ ಸೂತ್ರವಾಗಿರುತ್ತದೆ. ಹೀಗಾಗಿ ಅವರೆಲ್ಲರ ಬದುಕು ದೈನಂದಿನ ಜಂಜಾಟಗಳಲ್ಲಿಯೇ ಕಳೆದುಹೋಗುತ್ತದೆ; ಹಾಗಾಗಿ ಅವರು ಯಾವ ಮಹತ್ವಪೂರ್ಣ ಸಾಧನೆಯಿಲ್ಲದೇ ಸಾಂಸಾರಿಕ ಜೀವನದಲ್ಲಿ ಮುಳುಗಿ ಹೋಗಿರುತ್ತಾರೆ. ಆದರೆ ಇಂದ್ರಜಿತ್ ಈ ಕಟ್ಟುಪಾಡುಗಳ ಜೀವನದಿಂದ ರೋಸಿ ಹೋಗುತ್ತಾನೆ. ಎಲ್ಲದರಿಂದಲೂ ಬಿಡುಗಡೆ ಹೊಂದಲು ಹಂಬಲಿಸುತ್ತಾನೆ. ತಾನು ಇಷ್ಟಪಡುವ ಮಾನಸಿಯನ್ನು ಮದುವೆಯಾಗಲು ಬಯಸುತ್ತಾನೆ. ಆದರೆ ಅವಳು ಹೆಚ್ಚಿನ ಕಾಲಾವಕಾಶ ಕೇಳುತ್ತಾಳೆ. ಅಷ್ಟರಲ್ಲಿ ಇಂದ್ರಜಿತ್ ವಿದೇಶಕ್ಕೆ ಹಾರುತ್ತಾನೆ. ತನ್ನ ವಿಧಿಯನ್ನು ಹಳಿದುಕೊಳ್ಳುತ್ತಾನೆ.

ಮೂರನೆಯ ಅಂಕದಲ್ಲಿ ವಿದೇಶದಲ್ಲಿರುವ ಇಂದ್ರಜಿತ್‍ನ ಪತ್ರವು ಲೇಖಕನಿಗೆ ತಲುಪುತ್ತದೆ. ಅದರಲ್ಲಿ ಇಂದ್ರಜಿತ್ “ಕಲಕತ್ತೆ, ಭೂಪಾಲ್, ಬಾಂಬೆ, ಜಲಂಧರ್, ಉದಯಪುರ್, ಕಲಕತ್ತೆ-ಲಂಡನ್! ಅತೀತವೆಲ್ಲ ರಥಚಕ್ರದಂತೆ ಉರುಳುತ್ತಲೇ ಸಾಗಿತು. ಆದರೂ ಅದು ಚಕ್ರದ ಹಾಗೆ ಅಲ್ಲ-ಪ್ರತಿಯೊಂದು ಸುತ್ತು-ಮೊದಲಿನದನ್ನು ಬಿಟ್ಟು ಹೊಸ ಸುತ್ತು ಹಾಕುತ್ತದೆ-ಇದೇ ದಿನನಿತ್ಯದ ದುರಂತ. ಏನನ್ನೋ ಯಾವುದನ್ನೋ ಹಿಡಿಯುತ್ತೇನೆ. ಅಲ್ಲಿಗೇ ಎಲ್ಲಾ ಮುಗಿದಂತೆ ಅನ್ನಿಸುತ್ತದೆ-ತಟ್ಟನೆ-ಕೈಯಲ್ಲಿದ್ದುದನ್ನು ಬಿಸಾಕಿ ಬಿಡುತ್ತೇನೆ. ಮತ್ತೆ ಹೊಸತನ್ನ ಹಿಡಿಯಲು ಹವನಿಸುತ್ತೇನೆ. ಇನ್ನೂ ಆಸೆ ಬಿಟ್ಟಿಲ್ಲ-ಒಂದಲ್ಲ ಒಂದು ದಿನ ಏನಾದರೊಂದು, ಅಸಾಧ್ಯ, ಅನೀರೀಕ್ಷಿತ ಘಟನೆ ಘಟಿಸಿಯೇ ಘಟಿಸೀತು-ಎಂದು. ಇಲ್ಲಿಗೇ ಮುಗಿಯಲಿಲ್ಲ-ಇಷ್ಟೇ ಅಲ್ಲ-ಎಂಬ ಅರಿವು ನನ್ನನ್ನು ಕೆದುಕುತ್ತಲೇ ಇರುತ್ತದೆ. ಅದಕ್ಕೆ ಒಮ್ಮೊಮ್ಮೆ ಕಲ್ಪಿಸುತ್ತೇನೆ-ಎಂದಾದರೊಂದು ದಿನ, ಯಾವುದೋ ಕಲ್ಪನಾತೀತ ಘಟನೆಯೊಂದು ನಡೆದು, ಗತಕಾಲದ ಅನುಭವ-ನೆನಪುಗಳನ್ನೆಲ್ಲಾ ಅಳಿಸಿ ಹಾಕೀತು-ಎಂದು. ಎಂಥಾ ಬೋಳೇ ಕನಸು? ನಿದ್ದೆ ಓಡಿಹೋದರೂ ಕನಸಿನ ಗುಂಗು ಮತ್ತು ಅಮಲು ಹಾಗೆಯೇ ಆವರಿಸಿಕೊಂಡಿರುತ್ತದೆ..” ಎಂದು ಬರೆದಿರುತ್ತಾನೆ. ಈ ಪತ್ರವೇ ಇಂದ್ರಜಿತ್‍ನ ಅಸ್ತಿತ್ವವಾದಿ ಆಲೋಚನೆಗಳನ್ನು ಬಿಚ್ಚಿಡುತ್ತದೆ. ಕಥಾನಾಯಕ ಇಂದ್ರಜಿತ್‍ನಿಗೆ ಯಾವುದರಲ್ಲಿಯು ಗಾಢವಾದ ನಂಬಿಕೆಯಿಲ್ಲ; ಅವನು ತನ್ನನ್ನು ತಾನು ಈ ಸಮಾಜದ ಒಂದು ಭಾಗವಾಗಿಯೇ ನೋಡುತ್ತಾನೆ; ಬೀದಿ ಬದಿಯಲ್ಲಿ ಬೂಟ್ ಪಾಲಿಶ್ ಮಾಡುವ ಹುಡುಗನ ಬದುಕಿನ ಬಗ್ಗೆ ಪ್ರಶ್ನಿಸುತ್ತಾನೆ. ಎಲ್ಲ ನೀತಿ ನಿಯಮಗಳನ್ನು ಪ್ರಶ್ನಿಸುತ್ತಾನೆ. ತನ್ನೊಳಗಿನ ಸಿಟ್ಟು ಆಕ್ರೋಶವನ್ನು ಹೊರ ಹಾಕುತ್ತಾನೆ. ಸಾಮಾಜಿಕ ಅಸಮಾನತೆ, ಬಡತನ, ದಮನ, ಶೋಷಣೆಗಳನ್ನು ಕಂಡು ಉರಿಯುತ್ತಾನೆ.

ಲೇಖಕ ಮತ್ತು ಇಂದ್ರಜಿತ್‍ನ ಮುಖಾಮುಖಿಯಾಗುತ್ತದೆ. ಆಗ ಲೇಖಕ ಮದುವೆಯ ವಿಷಯವನ್ನು ಕೇಳಿದರೆ ಇಂದ್ರಜಿತ್ ತಾನು ಮಾನಸಿಯನ್ನು ಮದುವೆಯಾಗಿದ್ದೇನೆ ಎನ್ನುತ್ತಾನೆ. ಆದರೆ ಲೇಖಕ ಇದನ್ನು ಒಪ್ಪುವುದಿಲ್ಲ. ಅವನಿಗೆ ತಾನು ಅಂದುಕೊಂಡಂತೆ ಜೀವಿಸಲು ಆಗುವುದಿಲ್ಲ. ಆತನ ಕನಸುಗಳೆಲ್ಲ ಭಗ್ನಗೊಂಡವುಗಳೇ. ಅವನು ಆತ್ಮಹತ್ಯೆಯನ್ನು ಕುರಿತು ಮಾತಾಡುತ್ತಾನೆ. ಈ ಬದುಕು ನಿರರ್ಥಕವೆಂದು ವಾದಿಸುತ್ತಾನೆ. ಅದಕ್ಕೆ ಗ್ರೀಕ್ ಪುರಾಣದಲ್ಲಿ ಜೂಪಿಟರ್, ಸಿಸಿಫಸ್‍ಗೆ ಕೊಟ್ಟ ಶಾಪದಂತೆ ಹೆಬ್ಬಂಡೆಯನ್ನು ಬೆಟ್ಟದ ತುದಿಗೆ ತಳ್ಳಿಕೊಂಡು ಹೋಗುವುದನ್ನು ಪ್ರಸ್ತಾಪಿಸುತ್ತಾನೆ. ಇದರಂತೆಯೇ ತನ್ನ ಜೀವನದ ಶ್ರಮವೆಲ್ಲ ನಿರರ್ಥಕವೆಂದು ನುಡಿಯುತ್ತಾನೆ. ಈ ಲೋಕದಿಂದ ತಾನು ತುಂಬ ದೂರ ಓಡಿ ಹೋಗಬೇಕೆಂದು ಹೇಳುತ್ತಾನೆ. ಈ ನಾಟಕದಲ್ಲಿ ಇಂದ್ರಜಿತ್ ಮತ್ತು ಲೇಖಕ ಇಬ್ಬರು ಕೂಡ ಅಸ್ತಿತ್ವವಾದಿ ಮಾತುಗಳನ್ನಾಡುತ್ತಾರೆ. ನಾಟಕದಲ್ಲಿ ಅಂತಿಮವಾಗಿ ಇಂದ್ರಜಿತ್ ತಾನು ನಿರ್ಮಲ್ ಕುಮಾರ್ ರಾಯ್ ಎಂಬುದನ್ನು ಒಪ್ಪಿಕೊಳ್ಳುತ್ತಾನೆ. ತಾನು ಕೂಡ ಅಮಲ್, ವಿಮಲ್, ಕಮಲ್ ಮತ್ತು ಮಾನಸಿಯಂತೆಯೇ ಒಬ್ಬ ಸಾಮಾನ್ಯ ವ್ಯಕ್ತಿಯೆಂದು ಭಾವಿಸುತ್ತಾನೆ. ‘ಮಿಥ್ ಆಫ್ ಸಿಸಿಫಸ್’ನಂತೆ ಜೀವನದ ನಿರರ್ಥಕತೆಯನ್ನು ಒಪ್ಪಿಕೊಳ್ಳುವುದೇ ಸರಿಯಾದ ಮಾರ್ಗವೆನ್ನುತ್ತಾನೆ. ಒಟ್ಟಿನಲ್ಲಿ ಅವನು ಜೀವನದ ದುರಂತ ಮತ್ತು ಅಸಂಗತತೆಯನ್ನು ಒಪ್ಪಿಕೊಳ್ಳುವ ತೀರ್ಮಾನಕ್ಕೆ ಬರುತ್ತಾನೆ.

ಬಾದಲ್ ಸರ್ಕಾರ್ ಅವರು ವ್ಯಾಪಾರದ ಹಿತಾಸಕ್ತಿಯನ್ನು ಹೊಂದಿರುವ ರಂಗಭೂಮಿಯನ್ನು ನಿರಾಕರಿಸಿದರು. ಆಡಂಬರದ ರಂಗಸಜ್ಜಿಕೆ, ಎದ್ದು ಕಾಣುವ ವೇಷಭೂಷಣ, ಬೆಳಕಿನ ವಿನ್ಯಾಸ, ದೊಡ್ಡ ದೊಡ್ಡ ಪರಿಕರಗಳ ಅಗತ್ಯವೇ ಇಲ್ಲವೆಂದರು. ನಾಟಕದ ನಟ-ನಟಿಯರು ಮತ್ತು ಪ್ರೇಕ್ಷಕರನ್ನು ಬೇರ್ಪಡಿಸುವ ಚಿತ್ರಚೌಕಟ್ಟಿನ ಪ್ರೋಸಿನಿಯಂ ರಂಗಮಂದಿರದ ಅಸ್ತಿತ್ವವನ್ನು ಧಿಕ್ಕರಿಸಿದರು. ನಾಟಕವನ್ನು ಕಸುಬುದಾರ ಲೇಖಕನೇ ಅಲಂಕಾರಿಕ ಭಾಷೆಯಲ್ಲಿ ಬರೆಯುವುದನ್ನು ಬಿಟ್ಟುಕೊಟ್ಟರು. ಖಾಲಿ ಇರುವಂತಹ ಯಾವುದೇ ಜಾಗವು ಅವರಿಗೆ ನಾಟಕ ಪ್ರದರ್ಶಿಸುವ ರಂಗಭೂಮಿಯಾಗಿ ಕಂಡಿತು. ಇಂತಹ ಹೊಸ ಸಾಧ್ಯತೆಗಳನ್ನು ಶೋಧಿಸಿದ ಬಾದಲ್ ಸರ್ಕಾರ್ ಅವರ ಈ ಪ್ರಯೋಗಶೀಲತೆಯೇ ಭಾರತೀಯ ರಂಗಭೂಮಿಯಲ್ಲಿ ‘ಮೂರನೆಯ ರಂಗಭೂಮಿ’ ಎಂದು ಪ್ರಸಿದ್ಧವಾಗಿದೆ. ಅವರು ಗ್ರಾಮೀಣ ರಂಗಭೂಮಿ ಮತ್ತು ನಗರ ರಂಗಭೂಮಿಗಳ ನಡುವೆ ಸಾಮರಸ್ಯವನ್ನು ಸಾಧಿಸಿದರು. ಇದನ್ನು ಸಮನ್ವಯ ರಂಗಭೂಮಿ ಎಂದೇ ಕರೆಯಲಾಗಿದೆ. ರಂಗಭೂಮಿ ವಿಮರ್ಶಕರಾದ ರುಸ್ತುಂ ಭರೂಚ ಅವರು ತಮ್ಮ ‘ರಿಹರ್ಸಲ್ಸ್ ಆಫ್ ರೆವೊಲ್ಯೂಶನ್’ ಎಂಬ ಕೃತಿಯಲ್ಲಿ ಬಾದಲ್ ಸರ್ಕಾರ್ ಕುರಿತು “ಅವರ ರಂಗಭೂಮಿಯು ತಾನು ತೀವ್ರಗಾಮಿಯೆಂದು ಸೋಗು ಹಾಕುವುದಿಲ್ಲ. ಪ್ರೇಕ್ಷಕರ ಪ್ರಜ್ಞೆಯನ್ನು ಅದು ಅಲ್ಲಾಡಿಸುವ ಕಡೆಗೆ ಒತ್ತು ಕೊಡುತ್ತದೆ. ಪರಿಸ್ಥಿತಿಯ ಅರಿವಿದ್ದೂ ಆ ಕುರಿತು ಏನೂ ಮಾಡದೆ ಜನರ ಸಂಕಟವನ್ನು ತಣ್ಣಗೆ ಕುಳಿತು ನೋಡುವ ತಾಕತ್ತಿರುವ ಮಧ್ಯಮ ವರ್ಗದವರ ಜಡ್ಡುಗಟ್ಟಿದ ಮನಃಸ್ಥಿತಿಯ ಬಗೆಗೆ ಬಾದಲ್ ಸರ್ಕಾರ್ ಬೆಳಕು ಚೆಲ್ಲುತ್ತಾರೆ” ಎಂದಿದ್ದಾರೆ.

ಭಾರತೀಯ ರಂಗಭೂಮಿಯ ಮೇಲೆ ಬಾದಲ್ ಸರ್ಕಾರ್ ಅವರ ಪ್ರಭಾವ ಗಾಢವಾದದ್ದು. ಆದರೆ ಅವರ ಮೇಲೆ ಪೊಲಿಂಡಿನ ಪ್ರಖ್ಯಾತ ರಂಗಭೂಮಿ ನಿರ್ದೇಶಕ ಮತ್ತು ರಂಗತಜ್ಞನಾದ ಗ್ರೋಟಾವ್‍ಸ್ಕಿಯ ಪ್ರಭಾವವಿದೆ. ಅವರು ಗ್ರೋಟಾವ್‍ಸ್ಕಿಯ ‘ಬಡ ರಂಗಭೂಮಿ’ಯ ಆಶಯಗಳನ್ನು ಒಪ್ಪಿಕೊಂಡವರಾಗಿದ್ದರು. ಇದು ಕಲೆಯ ಬೇರೆ ಬೇರೆ ತಂತ್ರಗಳಿಂದ ನಡೆಯುವ ಹಿನ್ನೆಲೆ ಸಂಗೀತ, ಬೆಳಕು, ರಂಗಸಜ್ಜಿಕೆ, ವಸ್ತ್ರಾಲಂಕಾರಗಳಿಂದ ರಂಗಭೂಮಿಯನ್ನು ಅದ್ದೂರಿಗೊಳಿಸುವುದರ ವಿರೋಧಿಯಾಗಿದೆ. ಇದರಿಂದ ರಂಗಭೂಮಿ ಪ್ರದರ್ಶನವು ದುಬಾರಿಯಾಗುವುದನ್ನು ತಪ್ಪಿಸಿದಂತಾಗುತ್ತದೆ. ಯಾವುದೇ ಅಲಂಕಾರಗಳಿಲ್ಲದೇ ನಟ-ನಟಿಯರು ತಂತಮ್ಮ ದೇಹವನ್ನೇ ರಂಗಭೂಮಿಯ ಏಕೈಕ ಸೊತ್ತಾಗಿಸುವುದನ್ನು ಈ ತತ್ವವು ಒತ್ತಾಯಿಸುತ್ತದೆ. ಆಗ ನಟ-ನಟಿಯರ ಆಂಗಿಕ ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದಂತಾಗುತ್ತದೆ; ನೇರವಾಗಿ ಪ್ರೇಕ್ಷಕರೊಂದಿಗೆ ಸಂಬಂಧ ಬೆಳೆಯುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ‘ಏವಂ ಇಂದ್ರಜಿತ್’ ನಾಟಕವು ಅತ್ಯಂತ ಯಶಸ್ವಿಯಾಗಿದೆ. ಈ ನಾಟಕವು ಅದನ್ನು ವೀಕ್ಷಿಸುವ ಪ್ರೇಕ್ಷಕರ ಮಧ್ಯದಿಂದಲೇ ಎದ್ದು ಬಂದು ಪುನಃ ಅವರ ಎದುರಿನಲ್ಲಿಯೇ ಪ್ರದರ್ಶನಗೊಂಡಂತೆ ಗೋಚರವಾಗುತ್ತದೆ. ಆದ್ದರಿಂದಲೇ ಈ ನಾಟಕವು ನೋಡುಗರ ಮನದಾಳದಲ್ಲಿ ಇಳಿದು ಪ್ರಭಾವ ಬೀರುತ್ತದೆ. ಪ್ರಜ್ಞೆಯನ್ನು ಕದಡುತ್ತದೆ.

– ಸುಭಾಷ್ ರಾಜಮಾನೆ


Read Also: ಬಿಹಾರ ಚುನಾವಣೆ: JDUಗೆ ಶರದ್ ಯಾದವ್ ವಾಪಸ್‌? ಮುಂದುರೆಯುತ್ತಾ JDU-BJP ಮೈತ್ರಿ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights