ಫ್ಯಾಕ್ಟ್‌ಚೆಕ್: ಮೋದಿ ನೊಬೆಲ್ ಶಾಂತಿ ಪ್ರಶಸ್ತಿಯ ಪ್ರಮುಖ ಸ್ಪರ್ಧಿ ಎಂಬುದು ಫೇಕ್ ನ್ಯೂಸ್ – ಅಸ್ಲೆ ಟೋಜೆ

ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕ ಅಸ್ಲೆ ಟೋಜೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೊಬೆಲ್ ಶಾಂತಿ ಪ್ರಶಸ್ತಿಯ ಪ್ರಮುಖ ಸ್ಪರ್ಧಿ ಎಂದು ಹೇಳಿದ್ದಾರೆ ಎಂದು ಹಲವು ಮಾಧ್ಯಮ ವರದಿಗಳು ವರದಿಯನ್ನು ಬಿತ್ತರಿಸಿದ್ದವು.

ಪ್ರಧಾನಿ ಮೋದಿ ವಿಶ್ವದಲ್ಲಿ ಶಾಂತಿಯನ್ನು ಕಾಪಾಡಬಲ್ಲ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿ, ಒಂದು ಕಡೆ ರಷ್ಯಾ ಮತ್ತು ಅಮೆರಿಕ ಎರಡೂ ಪರಮಾಣು ಯುದ್ಧದ ಬಗ್ಗೆ ಮಾತನಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಈ ದೇಶಗಳು ಭಾರತವನ್ನು ನೋಡಿ ಕಲಿಯಬೇಕಿದೆ. ನಾನು ಭಾರತದ ಪ್ರಧಾನ ಮಂತ್ರಿಯ ದೊಡ್ಡ ಅಭಿಮಾನಿ ಎಂದು ನೊಬೆಲ್ ಪ್ರಶಸ್ತಿ ಸಮಿತಿಯ ಉಪ ನಾಯಕ ಆಸ್ಲೆ ಟೋಜೆ ಹೇಳಿದ್ದಾರೆ ಎಂಬ ವಿಶೇಷಣಗಳೆಲ್ಲವನ್ನು ನೀಡಿ ಬಹುತೇಕ ಮಾಧ್ಯಮಗಳು ಲೇಖನಗಳನ್ನು ಪ್ರಕಟಿಸಿದ್ದವು.

ಭಾರತವನ್ನು ಶಾಂತಿಯ ಪರಂಪರೆ ಎಂದು ಕರೆದಿರುವ ಆಸ್ಲೆ ಟೋಜೆ, ಆ ದೇಶವು ಜಗತ್ತಿನ ಸೂಪರ್ ಪವರ್ ಆಗುವತ್ತಾ ಮುನ್ನುಗ್ಗುತ್ತಿದೆ. ಇದಲ್ಲದೆ, ಪ್ರಧಾನಿ ಮೋದಿ ಅವರು ಯುದ್ಧವನ್ನು ನಿಲ್ಲಿಸಲು ಅತ್ಯಂತ ವಿಶ್ವಾಸಾರ್ಹ ನಾಯಕರಾಗಿದ್ದಾರೆ. ಅವರು ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಹೇಳಿದರು. ಪ್ರಧಾನಿ ಮೋದಿಯವರ ನೀತಿಗಳಿಂದಾಗಿ ಭಾರತ ಶ್ರೀಮಂತ – ಶಕ್ತಿಶಾಲಿ ರಾಷ್ಟ್ರವಾಗುತ್ತಿದೆ. ಪ್ರಧಾನಿ ಮೋದಿ ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದರೆ ಅದು ಐತಿಹಾಸಿಕವಾಗಲಿದೆ ಎಂದೂ ಆಸ್ಲೆ ಟೋಜೆ ಅವರು ಹೇಳಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಆದರೆ ಆಸ್ಲೆ ಟೋಜೆ ಹೇಳಿದ್ದೇನು?

ಭಾರತಕ್ಕೆ ಭೇಟಿ ನೀಡಿರುವ ಟೋಜೆ, ಪ್ರಧಾನಿ ನರೇಂದ್ರ ಮೋದಿ ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಮುಖ ಸ್ಪರ್ಧಿ ಎಂದು ಹೇಳಿರುವುದಾಗಿ ಮಾಧ್ಯಮಗಳ ವರದಿ ಮತ್ತು  ಟ್ವೀಟ್ ವೈರಲ್ ಆದ ಬೆನ್ನಲ್ಲೇ ಆವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ನೊಬೆಲ್ ಪ್ರಶಸ್ತಿಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕ ಅಸ್ಲೆ ಟೋಜೆ ಅವರು ‘ಇದು ಸಂಪೂರ್ಣವಾಗಿ ನಕಲಿ ಸುದ್ದಿ’ ಎಂದು ಹೇಳಿದ್ದಾರೆ.  ನಾವು ಇಂತಹ ವಿಚಾರಗಳನ್ನು ಚರ್ಚಿಸಬಾರದು ಅಥವಾ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬಾರದು . ನಾನು ಇಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ANI ಜೊತೆ ಮಾತನಾಡಿದ ಅವರು, ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ, ನಾವು ಅದರ ಬಗ್ಗೆ ಹೆಚ್ಚು ಚರ್ಚಿಸಬಾರದು, ಅದಕ್ಕೆ ಹೆಚ್ಚಿನ ಒತ್ತು ನೀಡಬಾರದು ಎಂದು ಹೇಳಿದ್ದಾರೆ.  ತಮ್ಮ ಭೇಟಿಯ ಉದ್ದೇಶದ ಕುರಿತು ಮಾತನಾಡಿದ ಅವರು, “ನಾನು ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕನಾಗಿ ಭಾರತಕ್ಕೆ ಬಂದಿಲ್ಲ, ನಾನು ಅಂತರರಾಷ್ಟ್ರೀಯ ಶಾಂತಿ ಮತ್ತು ತಿಳುವಳಿಕೆಯ ನಿರ್ದೇಶಕನಾಗಿ ಮತ್ತು ಭಾರತದ ಸ್ನೇಹಿತನಾಗಿ ಇಲ್ಲಿಗೆ ಬಂದಿದ್ದೇನೆ.” ಎಂದರು.

ಒಟ್ಟಾರೆಯಾಗಿ ಹೇಳುವುದಾದರೆ, ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕ ಅಸ್ಲೆ ಟೋಜೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೊಬೆಲ್ ಶಾಂತಿ ಪ್ರಶಸ್ತಿಯ ಪ್ರಮುಖ ಸ್ಪರ್ಧಿ ಎಂದು ಹೇಳಿಲ್ಲ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ತಮ್ಮ ಹೇಳಿಕೆಗಳು ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪ್ರಮುಖ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳು ಸುಳ್ಳು ಮತ್ತು ನಕಲಿ ಎಂಬುದು ದೃಢವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಹೆಚ್ಚು ಸಾಲ ಮಾಡಿದ್ದರು ಎಂಬುದು ಸುಳ್ಳು – ಇಲ್ಲಿದೆ ಡೀಟೈಲ್ಸ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights