ಫ್ಯಾಕ್ಟ್‌ಚೆಕ್: ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಹೆಚ್ಚು ಸಾಲ ಮಾಡಿದ್ದರು ಎಂಬುದು ಸುಳ್ಳು – ಇಲ್ಲಿದೆ ಡೀಟೈಲ್ಸ್

2004 ರಿಂದ 2018 ರವರೆಗೆ ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿ ಅಧಿಕಾರ ನಿರ್ವಹಿಸಿದವರ ಪಟ್ಟಿ ಮತ್ತು ಅವರ ಅಧಿಕಾರಾವಧಿಯಲ್ಲಿ ರಾಜ್ಯದ ಅಭಿವೃದ್ದಿಗಾಗಿ ಮಾಡಲಾದ ಸಾಲದ ಮೊತ್ತವನ್ನು ತಿಳಿಸುವ ಪಟ್ಟಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಪೋಸ್ಟ್‌ ಮತ್ತು ಮೆಸೇಜ್‌ಗಳನ್ನು ಹರಿಯಬಿಡಲಾಗಿದ್ದು ಮೇಲ್ನೋಟಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಈ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತಿದೆ.

ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಬಿಟ್ಟಿ ಭಾಗ್ಯಗಳನ್ನು ನೀಡುವ ಮೂಲಕ ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ್ದರು, ಇಷ್ಟು ಸಾಲ ಮಾಡಿ ಪುಕ್ಕಟ್ಟೆಯಾಗಿ ಯಾರು ಬೇಕಾದ್ರು ಕೊಡ್ತಾರೆ, ಜನರ ತಲೆ ಮೇಲೆ ಸಾಲ ಹೊರಿಸಿ ಭಾಗ್ಯಗಳನ್ನು ನೀಡಿದ್ದೇ ನೀಡಿದ್ದು, ಇದೇ ಇವರ ಸಾಧನೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

2004 ರಿಂದ 2018ರ ವರಗೆ ಕರ್ನಾಟಕದಲ್ಲಿ ಯಾವ ಮುಖ್ಯಮಂತ್ರಿ ಎಷ್ಟು ಸಾಲ ಮಾಡಿದ್ದರು ಎಂಬ ವಿವರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕೆಳಗಿನಂತೆ ಹಂಚಿಕೊಳ್ಳಲಾಗಿದೆ.

ಎಸ್ ಎಂ ಕೃಷ್ಣ  (1999-2004)   3,590 ಕೋಟಿ ರೂಪಾಯಿ
ಧರಂ ಸಿಂಗ್   (2004-2006)   15,635 ಕೋಟಿ ರೂಪಾಯಿ
ಎಚ್.ಡಿ. ಕುಮಾರಸ್ವಾಮಿ  (2006-2007)   3,545 ಕೋಟಿ ರೂಪಾಯಿ
ಬಿ.ಎಸ್.ಯಡಿಯೂರಪ್ಪ (2008-2011)   25,653 ಕೋಟಿ ರೂಪಾಯಿ
ಸದಾನಂದ ಗೌಡ (2011-2012)   9,464 ಕೋಟಿ ರೂಪಾಯಿ
ಜಗದೀಶ್ ಶೆಟ್ಟರ್ (2012-2013)   13,464 ಕೋಟಿ ರೂಪಾಯಿ
ಸಿದ್ದರಾಮಯ್ಯ (2013-2018)   2,42,000 ಕೋಟಿ ರೂಪಾಯಿ

ಎಸ್ ಎಂ ಕೃಷ್ಣ ಅವರಿಂದ ಜಗದೀಶ್ ಶೆಟ್ಟರ್ ವರೆಗೆ ಮಾಡಿದ ಒಟ್ಟು ಸಾಲ 71,331 ಕೋಟಿ ರೂಪಾಯಿ, ಆದರೆ ಸಿದ್ದರಾಮಯ್ಯ ಮಾಡಿದ ಸಾಲ 2,42,000 ಕೋಟಿ ರೂಪಾಯಿ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ ಇಷ್ಟು ದೊಡ್ಡ ಮೊತ್ತದ ಸಾಲವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಮಾಡಿದ್ದು ನಿಜವೇ, ಈ ಅಂಕಿ ಅಂಶಗಳು ವಾಸ್ತವವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಅನ್ನು ಪರಿಶೀಲಿಸಿದಾಗ, ಇಲ್ಲಿ ಹಂಚಿಕೊಳ್ಳಲಾದ ಅಂಕಿ ಅಂಶಗಳು ತಪ್ಪಾಗಿವೆ ಎಂದು ತಿಳಿದು ಬಂದಿದೆ. ಪೋಸ್ಟ್‌ನಲ್ಲಿ  ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಹೆಚ್ಚು ಸಾಲ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ನಾವಿಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ,  2013ರ ಮಾರ್ಚ್ ಕೊನೆಗೆ ಇದ್ದ ಸಾಲ, ಅಂದರೆ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಳ್ಳುವ ಮುಂಚಿನ ಸಾಲ ಹಾಗೂ ಅವರ ಅಧಿಕಾರಾವಧಿ ಪೂರ್ಣಗೊಂಡ 2018ರ ಮಾರ್ಚ್ ಕೊನೆಗೆ ಇದ್ದ ಸಾಲ ಎಂದು ವಿಭಾಗಿಸಿ ನೋಡಿದಾಗ ಸ್ಪಷ್ಟ ಚಿತ್ರಣ ಲಭ್ಯವಾಗಿದೆ.

ಕರ್ನಾಟಕ ಸರ್ಕಾರದ ಮೇಲಿನ ಸಾಲದ (ಬಜೆಟ್ ಅಂದಾಜಿನ) ಪ್ರಮಾಣವನ್ನು 2006ರ ಮಾರ್ಚ್ ನಿಂದ ಆಯಾ ವರ್ಷದ ಕೊನೆಗೆ 2023 ವರೆಗೆ ನೀಡಲಾಗಿದೆ.

2006- 49,586.7 ಕೋಟಿ ರೂಪಾಯಿ
2007- 58,078.5 ಕೋಟಿ ರೂಪಾಯಿ
2008- 60,555.1 ಕೋಟಿ ರೂಪಾಯಿ
2009- 65,218.9 ಕೋಟಿ ರೂಪಾಯಿ
2010- 84,534.5 ಕೋಟಿ ರೂಪಾಯಿ
2011- 93,446.6 ಕೋಟಿ ರೂಪಾಯಿ
2012- 1,06,089.05 ಕೋಟಿ ರೂಪಾಯಿ
2013- 1,12,666.6 ಕೋಟಿ ರೂಪಾಯಿ (ಜಗದೀಶ್ ಶೆಟ್ದರ್ ಮುಖ್ಯಮಂತ್ರಿ ಆಗಿದ್ದ ಅವಧಿಯ ಕೊನೆಗೆ ಕರ್ನಾಟಕ ರಾಜ್ಯದ ಮೇಲಿದ್ದ ಒಟ್ಟು ಸಾಲ)
2014- 1,38,976.5 ಕೋಟಿ ರೂಪಾಯಿ
2015- 1,58,370.2 ಕೋಟಿ ರೂಪಾಯಿ
2016- 1,85,698.4 ಕೋಟಿ ರೂಪಾಯಿ
2017- 2,11,169.1 ಕೋಟಿ ರೂಪಾಯಿ
2018- 2,45,950.6 ಕೋಟಿ ರೂಪಾಯಿ (ಸಿದ್ದರಾಮಯ್ಯ ಅವರ ಅಧಿಕಾರಾವಧಿ ಕೊನೆಯಲ್ಲಿ ಕರ್ನಾಟಕ ರಾಜ್ಯದ ಮೇಲಿದ್ದ ಒಟ್ಟು ಸಾಲ)
2019- 2,86,328.7 ಕೋಟಿ ರೂಪಾಯಿ
2020- 3,38,665..7 ಕೋಟಿ ರೂಪಾಯಿ
2021- 4,21,503.8 ಕೋಟಿ ರೂಪಾಯಿ
2022 (ಪರಿಷ್ಕೃತ ಅಂದಾಜು)- 4,73,437.9 ಕೋಟಿ ರೂಪಾಯಿ
2023 (ಬಜೆಟ್ ಅಂದಾಜು)- 5,35,156.7 ಕೋಟಿ ರೂಪಾಯಿ

ಒಟ್ಟಾರೆಯಾಗಿ ಹೇಳುವುದಾದರೆ, ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ 2013 ನೇ ಸಾಲಿನಲ್ಲಿ ರಾಜ್ಯದ ಒಟ್ಟು ಸಾಲ  1,12,666.6 ಕೋಟಿ ರೂಪಾಯಿ. ಹಾಗೆಯೇ  ಸಿದ್ದರಾಮಯ್ಯ ಅವರ ಅಧಿಕಾರಾವಧಿ ಪೂರ್ಣಗೊಂಡಾಗ, ಅಂದರೆ 2018ನೇ ಇಸವಿಯ ಮಾರ್ಚ್ ಕೊನೆ ವೇಳೆಗೆ 2,45,950.6 ಕೋಟಿ ರೂಪಾಯಿ. ಅಂದರೆ 2018 ರಲ್ಲಿ ಇದ್ದ ಸಾಲದ ಮೊತ್ತವನ್ನು 2013ರಲ್ಲಿ ಇದ್ದ ಒಟ್ಟು ಸಾಲದೊಂದಿದೆ ಕಳೆದಾಗ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ರಾಜ್ಯಕ್ಕಾಗಿ ಮಾಡಿದ ಸಾಲ 1,33,284 ಕೋಟಿ ರೂಪಾಯಿಯಷ್ಟು ಆಗುತ್ತದೆ.

ಆದರೆ ಈ ರೀತಿ ಅಂಕಿಅಂಶಗಳನ್ನು ನೀಡದೆ ಸುಳ್ಳು ಮತ್ತು ತಪ್ಪಾದ ಅಂಕಿಅಂಶಗಳನ್ನು ಹಂಚಿಕೊಳ್ಳಲಾಗಿದೆ. ಹಾಗೆ ನೋಡಿದರೆ ಸಿದ್ದರಾಮಯ್ಯನವರಿಗಿಂತ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸರ್ಕಾರ ಮಾಡಿದ ಸಾಲವೇ ಅಧಿಕವಾಗಿದೆ. 2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ಒಟ್ಟು ಸಾಲ 2,86,328.7 ಕೋಟಿ ರೂಪಾಯಿ ಇತ್ತು. ಈಗ 2023ರಲ್ಲಿ 5,35,156.7 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಲ್ಲಿಗೆ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಹೊಸದಾಗಿ 2,48, 828 ಕೋಟಿ ರೂಗಳ ಸಾಲ ಮಾಡಿದೆ. ಅದು ಸಿದ್ದರಾಮಯ್ಯನವರು 5 ವರ್ಷದ ಆಡಳಿತದಲ್ಲಿ ಮಾಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಿದ್ದರಾಮಯ್ಯ ಅವರ ಅಧಿಕಾರವಧಿಯ ಸಾಲ 1,33,284 ಕೋಟಿ ರೂಪಾಯಿ ಹೊರತು 2,45,950.6 ಕೋಟಿ ರೂ ಅಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪಾಕಿಸ್ತಾನದಲ್ಲೂ ಅರಳಿದ ಕಮಲ ಎಂದು ಸುಳ್ಳು ವಿಡಿಯೋ ಹಂಚಿಕೊಂಡ BJP ಬೆಂಬಲಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಹೆಚ್ಚು ಸಾಲ ಮಾಡಿದ್ದರು ಎಂಬುದು ಸುಳ್ಳು – ಇಲ್ಲಿದೆ ಡೀಟೈಲ್ಸ್

  • March 16, 2023 at 5:19 pm
    Permalink

    Very good.
    It’s expected.
    What more?

    Reply

Leave a Reply

Your email address will not be published.

Verified by MonsterInsights