ರೈತ ವಿರೋಧಿ ಕಾಯ್ದೆಗಳು ಮತ್ತು ಕರ್ನಾಟಕಕ್ಕಾಗಿರುವ ಅನ್ಯಾಯಕ್ಕೇನು ಪ್ರತಿಕ್ರಿಯೆ?: ರೈತ ಪ್ರತಿನಿಧಿಗಳ ಸಮಾಲೋಚನಾ ಸಭೆ!

‘ರೈತ ವಿರೋಧಿ ಕಾಯ್ದೆಗಳು ಮತ್ತು ಕರ್ನಾಟಕಕ್ಕಾಗಿರುವ ಅನ್ಯಾಯಕ್ಕೇನು ಪ್ರತಿಕ್ರಿಯೆ?’ ಎಂಬ ವಿಷಯದ ಕುರಿತು ರಾಜ್ಯದ ಹಾಗೂ ದಕ್ಷಿಣ ಭಾರತದ ರೈತ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನು ‘ಜಾಗೃತ ಕರ್ನಾಟಕ’ ಸಂಘಟನೆ ಆಯೋಜಿಸಿದೆ. ಸಭೆಯು ಜನವರಿ 10 ರ ಭಾನುವಾರ ಬೆಳಿಗ್ಗೆ 10:30ಕ್ಕೆ ಬೆಂಗಳೂರಿನ ಗಾಂಧಿ ಭವನದ ಜೆ.ಸಿ. ಕುಮಾರಪ್ಪ ಸಭಾಂಗಣದಲ್ಲಿ ನಡೆಯಲಿದೆ.

ಸಮಾಲೋಚನಾ ಸಭೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರೈತ ಪ್ರತಿನಿಧಿಗಳು ತಮ್ಮ ತಮ್ಮ ರಾಜ್ಯಗಳ ಪರಿಸ್ಥಿತಿಯ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, ತಮಿಳುನಾಡಿನ ತಮಿಳಗ ವ್ಯವಸಾಯಿಗಳ್ ಸಂಘಂ ಮುಖಂಡ ಸೆಲ್ವಮುತ್ತು, ಆಂಧ್ರ ಪ್ರದೇಶದ ರೈತು ಸ್ವರಾಜ್ಯ ವೇದಿಕೆ ಮುಖಂಡ ಕಿರಣ್ ಕುಮಾರ್‌ ವಿಸ್ಸಾ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ರಜಾಕ್ ಉಸ್ತಾದ್ ಸೇರಿದಂತೆ ಹಲವರು ಮಾತನಾಡಲಿದ್ದಾರೆ.

ನಂತರ ಪ್ರಾಧ್ಯಾಪಕರು ಮತ್ತು ಅಂಕಣಕಾರರಾದ ಎ.ನಾರಾಯಣ, ವಕೀಲರಾದ ವೀಣಾ ಬಹದ್ದೂರ್ ದೇಸಾಯಿ, ನಾವು ದ್ರಾವಿಡ ಕನ್ನಡಿಗರು ಚಳವಳಿಯ ಅಭಿಗೌಡ, ಚಿಂತಕರಾದ ನಾಗೇಗೌಡ ಕೀಲಾರ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಅರುಣ್ ಜಾವಗಲ್ ಪ್ರತಿಕ್ರಿಯೆ ನೀಡಲಿದ್ದಾರೆ.

ಇದನ್ನೂ ಓದಿ: ಬಾಕಿ ಪಾವತಿಗೆ ಆಗ್ರಹಿಸಿ ಉತ್ತರ ಪ್ರದೇಶದ ಕಬ್ಬು ಬೆಳೆಗಾರರಿಂದ ಪ್ರತಿಭಟನೆ..!

ಕರ್ನಾಟಕವು ಕೃಷಿಗೆ ಸಂಬಂಧಿಸಿದ ಎರಡು ಪ್ರಮುಖ ವಿಚಾರಗಳಲ್ಲಿ ದೇಶದಲ್ಲೇ ಅತ್ಯಂತ ದುಸ್ಥಿತಿಯಲ್ಲಿದೆ ಎಂದಿರುವ ಜಾಗೃತ ಕರ್ನಾಟಕ ಸಂಘಟನೆ, ದೆಹಲಿಯ ಬಾಲಂಗೋಚಿಗಳೂ, ನಿಷ್ಕ್ರಿಯರೂ ಆದ ಪ್ರಮುಖ ರಾಜಕೀಯ ಪಕ್ಷಗಳಿಗೆ ಇವುಗಳು ಮುಖ್ಯವೇ ಅಲ್ಲ. ನಮಗಾದರೂ ಮುಖ್ಯವಾಗಬೇಕೆಂಬ ಕಾರಣಕ್ಕೆ ಈ ಚರ್ಚೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಗ್ರಾಮೀಣ ಕರ್ನಾಟಕವು ಕೇಂದ್ರ ಸರ್ಕಾರದಿಂದ ಏನನ್ನಾದರೂ ಪಡೆದುಕೊಂಡಿದೆಯೆ? ಕೊಟ್ಟಿದ್ದೆಷ್ಟು ಕಳೆದುಕೊಂಡಿದ್ದೆಷ್ಟು? ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಒಂದೇ ಪಕ್ಷದಡಿ ಇದ್ದುದರಿಂದ ಲಾಭವಾಗಿದೆಯೇ? ನಷ್ಟವಾಗಿದೆಯೆ? ಈ ಎರಡು ಪ್ರಮುಖ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಮತ್ತು ಒಕ್ಕೂಟ ಸರ್ಕಾರಗಳ ಬಳಿ ಉತ್ತರವಿದೆಯೇ? ಪ್ರತಿಪಕ್ಷಗಳೇಕೆ ಈ ಪ್ರಶ್ನೆಗಳನ್ನೆತ್ತುತ್ತಿಲ್ಲ? ಎಂದು ಜಾಗೃತ ಕರ್ನಾಟಕ ಪ್ರಶ್ನಿಸಿದ್ದು, ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಈ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದೆ.


ಇದನ್ನೂ ಓದಿ: ನಮ್ಮೆಲ್ಲರ ಶತ್ರು ಒಬ್ಬನೇ: ಹೋರಾಟನಿರತ ರೈತ ಹೇಳಿದ್ದು ಏನು ಗೊತ್ತಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights