ಬಾಕಿ ಪಾವತಿಗೆ ಆಗ್ರಹಿಸಿ ಉತ್ತರ ಪ್ರದೇಶದ ಕಬ್ಬು ಬೆಳೆಗಾರರಿಂದ ಪ್ರತಿಭಟನೆ..!
ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೇಶಾದ್ಯಂತ ರೈತರ ಪ್ರತಿಭಟನೆ ಮುಂದುವರೆದಿದ್ದು ಇದರ ಮಧ್ಯೆ ದೆಹಲಿಯ ಪೂರ್ವ ಭಾಗದಲ್ಲಿಯೂ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಹೌದು… ಉತ್ತರ ಪ್ರದೇಶದ ಕಬ್ಬು ಬೆಳೆಗಾರರು ಬಾಕಿ ಪಾವತಿಗೆ ಆಗ್ರಹಿಸಿ ಹೋರಾಟ ಪ್ರಾರಂಭಿಸಿದ್ದಾರೆ. ಕಳೆದ ಹಂಗಾಮಿನ ಕಬ್ಬಿನ ಬಾಕಿ ಪಾವತಿಯಾಗದೇ ಇರುವುದು, ಕಬ್ಬು ಅರೆದು ಎರಡು ತಿಂಗಳಾದರೂ 2020-21 ರ ಸಾಲಿನ ರಾಜ್ಯ ಸಲಹೆ ಮಾಡಿದ ಬೆಲೆ (state advised price-SAP) ಘೋಷಿಸದಿರುವುದು ಯುಪಿಯ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಕಾರಣವಾಗಿದೆ.
ಉತ್ತರಪ್ರದೇಶದ ಮುಖ್ಯ ಬೆಳೆಯಾಗಿರುವ ಕಬ್ಬನ್ನು ಎಪಿಎಂಸಿ ಮಂಡಿಗಳಲ್ಲಿ ಮಾರುವುದಿಲ್ಲ. ಅದಕ್ಕೆ ’ರಾಜ್ಯ ಸಲಹೆ ಮಾಡಿದ ಬೆಲೆ(ಎಸ್ಎಪಿ)’ ನಿಗದಿ ಮಾಡಲಾಗುತ್ತದೆ. ಈ ಬೆಲೆ ಶಾಸನ ಬದ್ಧವಾಗಿರುತ್ತದೆ. ಇಲ್ಲಿ ಎಂಎಸ್ಪಿ ಪ್ರಶ್ನೆ ಬರುವುದಿಲ್ಲ, ಸಕ್ಕರೆ ಕಾರ್ಖಾನೆಗಳು ಎಸ್ಎಪಿ ಆಧರಿಸಿ ರೈತರಿಗೆ ಪಾವತಿಸಲೇಬೇಕು.
ದೆಹಲಿ-ಉತ್ತರಪ್ರದೇಶ ಗಡಿಯ ಘಾಜಿಪುರದ ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರು ಭಾಗವಹಿಸುತ್ತಿದ್ದಾರೆ. ಕಬ್ಬನ್ನು ಕಾರ್ಖಾನೆಗೆ ತಲುಪಿಸಿದ 14 ದಿನದಲ್ಲಿ ಎಸ್ಎಪಿ ಪಾವತಿಸಬೇಕು ಎಂಬ ಕಾನೂನು ಇದ್ದರೂ, 2019-20 ರ ಹಂಗಾಮಿನ (ಸೆಪ್ಟೆಂಬರ್-ಅಕ್ಟೋಬರ್) ಕಬ್ಬಿಗೆ ಕಾರ್ಖಾನೆಗಳು ಇನ್ನೂ ಹಣ ಪಾವತಿ ಮಾಡಿಲ್ಲ. 2020 ರ ಅಕ್ಟೋಬರ್ ಅಂತ್ಯದಿಂದಲೇ ಕಾರ್ಖಾನೆಗಳು 2020-21 ರ ಹಂಗಾಮಿಯ ಕಬ್ಬು ಅರೆಯಲು ಶುರು ಮಾಡಿದ್ದರೂ, ಆದಿತ್ಯನಾಥ ಸರ್ಕಾರವು ಈವರೆಗೂ ಈ ಹಂಗಾಮಿ ಎಸ್ಎಪಿಯನ್ನು ಘೋಷಣೆ ಮಾಡಿಲ್ಲ.
ಪಶ್ಚಿಮ ಯುಪಿಯ ಭಾಗಪತ್ ಜಿಲ್ಲೆಯ ಖಾಸಿಮಪುರ್ ಖೇರಿಯಲ್ಲಿ ಒಂದು ಎಕರೆ ಜಮೀನು ಹೊಂದಿರುವ ರಾಕೇಶ್ ತೋಮರ್, 2019-20 ರ ಹಂಗಾಮಿಯ ಒಟ್ಟು 15 ’ಪಾರ್ಚಿ’ ಕಬ್ಬನ್ನು (ಪಾರ್ಚಿ ಎಂದರೆ ಒಂದು ಎತ್ತಿನ ಚಕ್ಕಡಿ ಭರ್ತಿ ಕಬ್ಬು, ತಲಾ 18 ಕ್ವಿಂಟಾಲ್ ತೂಗುತ್ತದೆ) ರಾಮಲಾ ಸಹಕಾರಿ ಮಿಲ್ಗೆ ನೀಡಿದ್ದಾರೆ. ಮಿಲ್ ಜೂನ್ 14 ರಂದೇ ಕಬ್ಬು ಅರೆಯುವಿಕೆ ಆರಂಭಿಸಿದೆ. ರಾಕೇಶ್ ಅವರಿಗೆ ಇನ್ನೂ 4 ಪಾರ್ಚಿ ಕಬ್ಬಿನ ಬಾಕಿ ಬರಬೇಕಿದ್ದು, ಇದು 23,400 ಆಗುತ್ತದೆ. ಹೊಸ ಹಂಗಾಮಿಯ 6 ಪಾರ್ಚಿ ಕಬ್ಬನ್ನೂ ಅವರು ಮಿಲ್ಗೆ ಪೂರೈಸಿದ್ದಾರೆ. ಅಕ್ಟೋಬರ್ ಅಂತ್ಯದಲ್ಲೇ ಅರಿಯುವಿಕೆ ಆರಂಭಗೊಂಡರೂ ಇನ್ನೂ ಬಾಕಿ ಬಂದಿಲ್ಲ.

