Fact check: ಕೋಳಿಯಿಂದ ಓಮಿಕ್ರಾನ್ ವೈರಸ್ ಹರಡುತ್ತದೆ ಎಂಬುದಾಗಿ ‘NDTV’ ವರದಿ ಮಾಡಿಲ್ಲ

ಕೋವಿಡ್-19 ವೈರಸ್‌ನ ಓಮಿಕ್ರಾನ್ ರೂಪಾಂತರವು ಕೋಳಿಯಿಂದ ಹರಡುತ್ತಿದೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ ಎಂಬ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ತೆಲಂಗಾಣ ಸರ್ಕಾರವು ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಹರಡಲು ಪ್ರಮುಖವಾಗಿ ಕೋಳಿ ಸಾಕಣೆ ಕೇಂದ್ರಗಳು ಕಾರಣ ಎಂದಿದೆ ಎಂದೂ ಸಹ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಈ ಮೂಲಕ ಜನರು ಕೆಲ ದಿನಗಳು ಕೋಳಿ ಮಾಂಸ ಸೇವಿಸುವುದನ್ನು ನಿಲ್ಲಿಸಬೇಕೆಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಹೇಳಿಕೆಗೆ ಯಾವುದಾದರೂ ವೈಜ್ಞಾನಿಕ ಆಧಾರಗಳು ಇವೆಯಾ? ಅದಕ್ಕೆ ಸಂಬಂಧಿಸಿದಂತೆ ವರದಿಗಳೇನಾದರೂ ಇದೆಯಾ ಎಂದು ಪರಿಶೀಲಿಸಲು ಫ್ಯಾಕ್ಟ್‌ಚೆಕ್ ಮಾಡಲಾಗಿದೆ.

ಫ್ಯಾಕ್ಟ್‌ಚೆಕ್

ವೈರಲ್  ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂಬುದು ಪ್ರಾಥಮಿಕ ಶೋಧನೆಯಿಮದ ತಿಳಿದು ಬಂದಿದೆ. ಕೋವಿಡ್-19 ವೈರಸ್ ಕೋಳಿಯಿಂದ ಹರಡುತ್ತದೆ ಎಂದು ಖಚಿತಪಡಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. 2020 ರಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ವದಂತಿಯು ವೈರಲ್ ಆದಾಗ, GHMC ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿ, ಯಾವುದೇ ಪಕ್ಷಿಯು ಕರೋನ ವೈರಸ್‌ಗೆ ಕಾರಣವಾಗಿರುವ ಒಂದು ಪ್ರಕರಣವೂ ಭಾರತದಲ್ಲಿ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿತು. ತೆಲಂಗಾಣ ಸರ್ಕಾರವು ರಾಜ್ಯದಲ್ಲಿ ಕೋಳಿ ಸಾಕಣೆ ಕೇಂದ್ರಗಳಿಮದ ಓಮಿಕ್ರಾನ್ ವೈರಸ್ ಹರಡುತ್ತಿದೆ ಎಂಬ ಕಾರಣ ನೀಡಿ ಯಾವುದೇ ಪತ್ರಿಕಾ ಪ್ರಕಟಣೆಯನ್ನು ನೀಡಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ವೈರಲ್ ಮಾಡುತ್ತಿರುವ ಹೇಳಿಕೆ ತಪ್ಪಾಗಿದೆ.

ND TV’ ಈ ಲೇಖನವನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆಯೇ ಎಂದು ಪರಿಶೀಲಿಸಲು ನಾವು ಹುಡುಕಿದಾಗ, ಆ ರೀತಿಯ ಯಾವ ವರದಿಗಳು ಸಿಗಲಿಲ್ಲ. ‘ಎನ್‌ಡಿಟಿವಿ’ ವೆಬ್‌ಸೈಟ್‌ನಲ್ಲಿ ಮಾತ್ರವಲ್ಲದೆ, ಓಮಿಕ್ರಾನ್ ವೈರಸ್ ಕೋಳಿಯಿಂದ ಹರಡುತ್ತದೆ ಎಂಬ ಬಗ್ಗೆ  ಬೇರೆ ಯಾವುದೇ ಸುದ್ದಿ ವರದಿಗಳು ಲಭ್ಯವಿಲ್ಲ.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, 08 ಮೇ 2021 ರಂದು ‘NDTV’ ಪ್ರಕಟಿಸಿದ ಸುದ್ದಿ ಲೇಖನದಿಂದ ಫೋಟೋವನ್ನು ತೆಗೆದುಕೊಳ್ಳಲಾಗಿದೆ ಎಂದು ಖಾತ್ರಿಯಾಗಿದ್ದು,  ಈ ಲೇಖನವು ಪಂಜಾಬ್‌ನ ಲೂಧಿಯಾನದ ಕೋಳಿ ಫಾರ್ಮ್‌ಗಳಲ್ಲಿ ಹಕ್ಕಿ ಜ್ವರ ಪತ್ತೆಯಾದ ಬಗ್ಗೆ ವರದಿ ಮಾಡಿದ ಸಂದರ್ಭದಲ್ಲಿ ತೆಗೆದ ಫೋಟೋ ಎಂದು ತಿಳಿದು ಬಂದಿದೆ. “ಪಂಜಾಬ್ ಸರ್ಕಾರವು ಕೋಳಿ ಫಾರ್ಮ್ ಅನ್ನು ಸೋಂಕಿತ ಪ್ರದೇಶವೆಂದು ಸೂಚಿಸಿದೆ”. ಹಾಗಾಗಿ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋವು ಪಂಜಾಬ್‌ನಲ್ಲಿ ಹರಡಿರುವ ಬರ್ಡ್ ಫ್ಲೂ ಕುರಿತು ವರದಿ ಮಾಡಿದ ‘ಎನ್‌ಡಿಟಿವಿ’ ಲೇಖನದ ಫೋಟೊಗೆ ಎಡಿಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

2021 ರಲ್ಲಿ, ಅದೇ ‘ಎನ್‌ಡಿಟಿವಿ’ ಲೇಖನದ ಮತ್ತೊಂದು ಎಡಿಟೆಡ್ ಆವೃತ್ತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದ್ದು, ಫಾರಂ ಕೋಳಿಯಿಂದ ಕಪ್ಪು ಶಿಲೀಂಧ್ರ (Black fungus) ಹರಡುತ್ತಿದೆ ಎಂದು ಹೇಳಿಕೊಳ್ಳಲಾಗಿತ್ತು. ಆ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ‘ಎನ್‌ಡಿಟಿವಿ’ಯ ಸ್ಕ್ರೀನ್‌ಶಾಟ್  ಎಡಿಟ್ ಮಾಡಿದ ಚಿತ್ರ ಎಂದು ಪಿಐಬಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ. ಮತ್ತೊಂದು ಟ್ವೀಟ್‌ನಲ್ಲಿ,  ಚಿಕನ್‌ನಿಂದ ಕರೋನ ವೈರಸ್  ಬರುತ್ತದೆ ಎಂಬ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.

 

ತೆಲಂಗಾಣ ಸರ್ಕಾರವು ಕೋಳಿ ಸಾಕಣೆ ಕೇಂದ್ರಗಳು ರಾಜ್ಯದಲ್ಲಿ  ಓಮಿಕ್ರಾನ್ ವೈರಸ್‌ನು ಹರಡುತ್ತಿರುವ ಪ್ರಮುಖ ಮೂಲವೆಂದು ಸೂಚಿಸುವ ಯಾವುದೇ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆಯೇ ಎಂದು ಪರಿಶೀಲಿಸಿದಾಗ, ತೆಲಂಗಾಣ ಸರ್ಕಾರದ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಅಧಿಸೂಚನೆಯನ್ನು ತೆಲಂಗಾಣ ಸರ್ಕಾರ ಹೊರಡಿಸಿರುವ ಮಾಹಿತಿ ಲಭ್ಯವಿಲ್ಲ. ತೆಲಂಗಾಣ ಸರ್ಕಾರದಿಂದ ಅಂತಹ ಘೋಷಣೆಯ ಬಗ್ಗೆ ಒಂದೇ ಒಂದು ಸುದ್ದಿ ವರದಿಯು ಇಲ್ಲ. ಫೆಬ್ರವರಿ 2020 ರಲ್ಲಿ, ಫಾರ್ಮ್ ಚಿಕನ್‌ನಿಂದ  ಕೊರೊನಾ ವೈರಸ್  ಹರಡುತ್ತಿದೆ ಎಂಬ ವದಂತಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ, GHMC ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿತು, ಯಾವುದೇ ಪಕ್ಷಿಯಿಂದ ಕರೋನ ವೈರಸ್‌ ಪಾಸಿಟೀವ್ ಪ್ರಕರಣ ಭಾರತದಲ್ಲಿ ಇದುವರೆಗೂ  ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿತು. ಪತ್ರಿಕಾ ಪ್ರಕಟಣೆಯನ್ನು ಕೆಳಗೆ ನೋಡಬಹುದು.

ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ತನ್ನ ವೆಬ್‌ಸೈಟ್‌ನಲ್ಲಿ ಮಾಂಸ ಉತ್ಪನ್ನಗಳನ್ನು ಸಂಪೂರ್ಣವಾಗಿ ಬೇಯಿಸಿದರೆ ಸುರಕ್ಷಿತವಾಗಿ ಸೇವಿಸಬಹುದು ಎಂದು ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಓಮಿಕ್ರಾನ್ ವೈರಸ್ ಕೋಳಿಯಿಂದ ಹರಡಿತು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋ ಎಡಿಟ್ ಮಾಡಿರುವ ಫೋಟೋ ಎಂದು ಫ್ಯಾಕ್ಟ್ ಚೆಕ್ ಮೂಲಕ ಸ್ಪಷ್ಟವಾಗಿದೆ.

      ಕೃಪೆ: ಫ್ಯಾಕ್ಟ್ಲಿ


ಇದನ್ನು ಓದಿ: Fact check: ಲತಾ ಮಂಗೇಶ್ಕರ್ ಸಾವನಪ್ಪಿದಾರೆ ಎಂಬುದು ಸುಳ್ಳು, ಚೇತರಿಸಿಕೊಳ್ಳುತ್ತಿದ್ದಾರೆ ಎಂದ ವೈದ್ಯರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights