ಫ್ಯಾಕ್ಟ್‌ಚೆಕ್: ಹೋಳಿ ಹಬ್ಬದ ಮೆರವಣಿಗೆ ಸಂಬಂಧ ಮುಸ್ಲಿಮರಿಂದ ಹಿಂದೂ ವ್ಯಕ್ತಿಯ ಹತ್ಯೆ ಎಂಬುದು ಸುಳ್ಳು!
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಮರು ಹೋಳಿ ದಿನದಂದು ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
” ಉತ್ತರಪ್ರದೇಶದ ಬರೇಲಿಯಲ್ಲಿ, ಒಬ್ಬರೇ ಮುಸ್ಲಿಂ ಎಂಎಲ್ಎ ಗೆದ್ದಿದ್ದಾರೆ, ಆದರೂ ಹೋಳಿಯಲ್ಲಿ ಅವರ ಧೈರ್ಯ ನೋಡಿ, ಬೈಕ್ ಸವಾರರನ್ನು ಹೇಗೆ ಥಳಿಸಿದ್ದಾರೆ ಎಂದು ಈ ವೀಡಿಯೋವನ್ನು ಯೋಗೀಜಿಯವರಿಗೆ ಕಳುಹಿಸಿ ಮುಸ್ಲಿಮರ ಈ ಆಟವನ್ನು ಕೊನೆಗಾಣಿಸುತ್ತಾರೆ” ಎಂದು ಬರೆದು ಶೇರ್ ಮಾಡಲಾಗಿದೆ.

‘ಹೋಳಿ ಹಬ್ಬದ ಪ್ರಯುಕ್ತ ಹಿಂದೂ ಸಮುದಾಯದ ಗುಂಪು ಮೆರವಣಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ಕೋಮುವಿನ ಮಧ್ಯಪ್ರವೇಶ ಪರಿಸ್ಥಿತಿ ಕೈ ಮೀರಲು ಕಾರಣವಾಯಿತು, ಇದೆ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊನೆಯಲ್ಲಿ ಒಬ್ಬ ಹಿಂದೂ ಯುವಕನ ಹತ್ಯೆ ನಡೆದಿದೆ ಎಂದು ಆರೋಪಿಸಲಾಗಿದೆ’. ಹಾಗಿದ್ದರೆ ಈ ಘಟನೆಯಲ್ಲಿ ಹಿಂದೂ ಯುವಕನ ಹತ್ಯೆ ನಡೆದಿದ್ದು ನಿಜವೆ? ಎಂದು ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಘಟನೆಗೆ ಸಂಬಂಧಿಸಿದಂತೆ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು, ಇದರಲ್ಲಿ ಸಿಕ್ಕ ಮಾಹಿತಿ ಪ್ರಕಾರ ಘಟನೆಯು ರಾಜಸ್ಥಾನದ ಜೈಪುರಕ್ಕೆ ಸಂಬಂಧಿಸಿದ್ದು ಎಂದು ತಿಳಿದು ಬಂದಿದೆ. ಆದರೆ ವೈರಲ್ ವಿಡಿಯೋದಲ್ಲಿ ಹೇಳಿರುವಂತೆ ಉತ್ತರಪ್ರದೇಶದ ಬರೇಲಿಗೆ ಸಂಬಂಧಿಸಿಲ್ಲ ಎಂದು ಖಚಿತವಾಗಿದೆ. ರಾಜಸ್ಥಾನದ ಜೈಪುರ್‌ನ ಹೋಟೆಲ್‌ವೊಂದರಲ್ಲಿ ಯುವಕರ ಗುಂಪೊಂದು ಪಾರ್ಟಿ ಮಾಡುತ್ತಿದ್ದ ವೇಳೆ, ಹೋಟೆಲ್ ಸಿಬ್ಬಂದಿ ಮತ್ತು ಯುವಕರ ಗುಂಪಿನ ನಡುವೆ ಜಗಳ ಪ್ರಾರಂಭವಾಗಿದೆ. ನಂತರ ಹೋಟೆಲ್ ಸಿಬ್ಬಂದಿಗಳು ಆ ಯುವಕರ ಗುಂಪಿನ ಮೇಲೆ ದಾಳಿ ಮಾಡಿದ್ದಾರೆ ಈ ಸಂದರ್ಭದಲ್ಲಿ ಯುವಕರ ಗುಂಪಿನ ವ್ಯಕ್ತಿಯೊಬ್ಬನನ್ನು ಹೊಡೆದು ಕೊಲ್ಲಲಾಗಿದೆ. ಈ ಘಟನೆಯು 14 ಮಾರ್ಚ್ 2022 ರ ಮುಂಜಾನೆ ಹೋಳಿ ಹಬ್ಬಕ್ಕೂ ಮುಂಚೆಯೇ ಸಂಭವಿಸಿದೆ.
ಘಟನೆಗೆ ಸಂಬಂಧಿಸಿದ ವರದಿಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನೋಡಬಹುದು. ಈ ವರದಿಗಳ ಪ್ರಕಾರ, ಜೈಪುರದ ವೈಶಾಲಿ ನಗರದಲ್ಲಿ, ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಲು ಬಂದ ಯುವಕರ ಗುಂಪು ಹೋಟೆಲ್ ಸಿಬ್ಬಂದಿಯೊಂದಿಗೆ ಜಗಳ ಮಾಡಿಕೊಂಡಿದ್ದಾರೆ, ಇದರಿಂದ ಕೋಪಗೊಂಡ ಸಿಬ್ಬಂದಿಗಳು ಯುವಕರನ್ನು ಮನಸ್ಸೂ ಇಚ್ಚೆ ಥಳಿಸಿದ್ದು ಒಬ್ಬ ಯುವಕನನ್ನು ಹತ್ಯೆ ಮಾಡಿದ್ದಾರೆ. ಮೃತ ವ್ಯಕ್ತಿಯನ್ನು ವಿಶಾಲ್ ಯಾದವ್ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ, ‘ಪೊಲೀಸರು ಈ ಪ್ರಕರಣದಲ್ಲಿ 9 ಆರೋಪಿಗಳಾದ ಸುರೇಶ್, ಪ್ರಹ್ಲಾದ್ ಕುಮಾರ್ ಬಲಾಯ್, ಅಮನ್, ಅಶೋಕ್, ಅನಿಲ್ ಪಾಪಾದ, ಪೀಠೋಪಕರಣ ಕಾರ್ಖಾನೆಯ ಕಾರ್ಮಿಕರಾದ ಲಖನ್ ಬೈರ್ವಾ, ಮುಖೇಶ್ ಕುಮಾರ್ ಬೈರ್ವಾ, ಲಾಲಚಂದ್ ಬೈರ್ವಾ, ಮಹೇಂದ್ರ ರಾವತ್ಸಾ ಅವರನ್ನು ಬಂಧಿಸಿದ್ದಾರೆ. (ಆರೋಪಿತರಲ್ಲಿ ಮುಸ್ಲಿಂ ವ್ಯಕ್ತಿಗಳ ಹೆಸರಿಲ್ಲ)

ಮೇಲೆ ಹೆಸರಿಸಲಾದ ವ್ಯಕ್ತಿಗಳನ್ನು ಆರೋಪಿಗಳೆಂದು ವರದಿ ಮಾಡಿದ ಮತ್ತೊಂದು ಲೇಖನವನ್ನು ಇಲ್ಲಿ ಓದಬಹುದು. ಹಲ್ಲೆಗೊಳಗಾದ ಸಂತ್ರಸ್ತ ಯುವಕರ ಸಾಕ್ಷ್ಯವನ್ನು ಪಡೆದು ದಾಖಲಿಸಿರುವ ಎಫ್‌ಐಆರ್ ನಲ್ಲೂ ಮೇಲೆ ತಿಳಿಸಲಾಗಿರುವ ಹೆಸರುಗಳನ್ನು ಆರೋಪಿಗಳು ಎಂದು ನಮೂದಿಸಲಾಗಿದೆ. ಆದ್ದರಿಂದ, ಪೊಲೀಸ್ ಹೇಳಿಕೆ ಮತ್ತು ಆರೋಪಿಗಳ ಹೆಸರುಗಳನ್ನು ಗಮನಿಸಿದರೆ, ಯಾವುದೇ ಆರೋಪಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಲ್ಲ, ಮತ್ತು ಘಟನೆಯಲ್ಲಿ ಯಾವುದೇ ಕೋಮು ಹಿಂಸೆಯನ್ನು ಪ್ರಚೋದಿಸುವ ಉದ್ದೇಶಗಳಿಲ್ಲ ಎಂದು ಖಚಿತವಾಗಿದೆ.
ಇದಲ್ಲದೆ, ವೈರಲ್ ದೃಶ್ಯಗಳು ಉತ್ತರ ಪ್ರದೇಶಕ್ಕೆ ಸಂಬಂಧಿಸಿಲ್ಲ ಅದು ರಾಜಸ್ಥಾನದ ಜೈಪುರಕ್ಕೆ ಸಂಬಂಧಿಸಿವೆ ಎಂದು ಯುಪಿ ಪೊಲೀಸರು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.
#FactCheck – वायरल वीडियो उत्तर प्रदेश से न होकर थाना वैशाली नगर, जनपद जयपुर, राजस्थान से संबंधित है। @bareillypolice द्वारा भ्रामक पोस्ट का खंडन किया गया है। कृपया बिना सत्यापन के भ्रामक पोस्ट कर अफवाह न फैलाएं।#UPPFactCheck#UPPolice https://t.co/DurvpUgJ4a https://t.co/uWAhReKzmO pic.twitter.com/Qo1dViYIKt
— UPPOLICE FACT CHECK (@UPPViralCheck) March 21, 2022
ಒಟ್ಟಾರೆಯಾಗಿ ಹೇಳುವುದಾದರೆ, ಜೈಪುರದಲ್ಲಿ ನಡೆದ ಭೀಕರ ಹತ್ಯೆಯ ದೃಶ್ಯಗಳನ್ನು ಕೋಮು ಹಿಂಸೆ ಪ್ರಚೋದನೆಗೆ ಅವಕಾಶ ಮಾಡಿಕೊಡುವಂತೆ ಉತ್ತರ ಪ್ರದೇಶದ ಬರೇಲಿಯಲ್ಲಿ ಹೋಲಿ ಹಬ್ಬದ ಸಂದರ್ಭದ ಹಿಂದೂ ಮುಸ್ಲಿಂ ನಡುವಿನ ಘರ್ಷಣೆ ಎಂದು ಬಿಂಬಿಸಲು ಸಂಬಂಧವಿಲ್ಲದ ಘಟನೆಯನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. .
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಗತ್ ಸಿಂಗ್‌ಗೆ ಕೇಜ್ರಿವಾಲ್‌ರಿಂದ ಅವಮಾನ ಎಂದು ಸುಳ್ಳು ಸುದ್ದಿ ಹರಡಿದ BJP ಬೆಂಬಲಿಗರು

