ಫ್ಯಾಕ್ಟ್‌ಚೆಕ್: ನೋಟುಗಳಲ್ಲಿ ಗಾಂಧಿ ಬದಲು ರವಿಂದ್ರನಾಥ್ ಠಾಕೂರ್ ಮತ್ತು ಕಲಾಂ ಫೋಟೊ ಇರುವುದು ಸುಳ್ಳು

ಭಾರತೀಯ ರಿಸರ್ವ್ ಬ್ಯಾಂಕ್ (RBI) ನೋಟುಗಳಲ್ಲಿ ಮಹಾತ್ಮಾ ಗಾಂಧಿಯವರ ಮುಖವಿರುವ ಫೋಟೋವನ್ನು ಬದಲಿಸಿ ರವಿಂದ್ರನಾಥ್ ಠಾಕೂರ್ ಮತ್ತು ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಅವರ ಫೋಟೋಗಳನ್ನು ಮುದ್ರಿಸಲು ಮುಂದಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಇದಿಷ್ಟೇ ಅಲ್ಲದೆ ಸುದ್ದಿ ಮಾಧ್ಯಮಗಳು ಕೂಡ ಭಾರತದ ನೋಟಿನ  ಮೇಲಿರುವ ಮಹಾತ್ಮ ಗಾಂಧೀಜಿ ಭಾವಚಿತ್ರವನ್ನು ತೆಗೆದು ರವೀಂದ್ರನಾಥ ಠಾಗೋರ್‌  ಮತ್ತು ಎಪಿಜೆ ಅಬ್ದುಲ್‌ ಕಲಾಂ  ಭಾವಚಿತ್ರ ಹಾಕಲು ಸರ್ಕಾರ ಮುಂದಾಗಿದೆ ಎಂಬ ಸುದ್ದಿಯನ್ನು ಪ್ರಕಟಿಸಿದೆ. ಈ ವರದಿಗಳ ವಾಸ್ತವಾಂಶ ಕುರಿತು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್:

RBI ತನ್ನ ಮುದ್ರಿತ ನೋಟುಗಳಲ್ಲಿ ಈಗಿರುವ ಗಾಂಧಿ ಫೋಟೋವನ್ನು ಬದಲಿಸಲಿದೆ ಎಂದು ಜೂನ್‌ 5 ರಂದು ಮಾಧ್ಯಮಗಳಲ್ಲಿ ಬಿತ್ತರಿಸಿದ್ದ ವರದಿಯಲ್ಲಿ ತಿಳಿಸಲಾಗಿತ್ತು. ಸುದ್ದಿ ಮಾಧ್ಯಮಗಳು ಮಾಡಿದ್ದ ವರದಿಗಳ ಪ್ರಕಾರ, ಐಐಟಿ ದೆಹಲಿಯ ಪ್ರೊಫೆಸರ್‌ ದಿಲೀಪ್‌ ಟಿ ಶಹಾನಿ ಅವರಿಗೆ ಗಾಂಧೀಜಿ, ಕಲಾಂ, ಠಾಗೋರ್‌ ಮೂರು ಜನರ ಎರಡು ವಾಟರ್‌ ಮಾರ್ಕ್‌ಗಳನ್ನು ಕಳಿಸಿ ಅದರಲ್ಲಿ ಒಂದನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶೀಘ್ರದಲ್ಲೇ ಸಲ್ಲಿಸುವಂತೆ ಹೇಳಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಸುದ್ದಿಯನ್ನು PIB ಸುಳ್ಳು ಎಂದು ತಿಳಿಸಿದೆ.

ಪ್ರತಿಷ್ಟಿತ ಪತ್ರಿಕೆಗಳು ನೋಟಿನ ಮೇಲಿರುವ ಚಿತ್ರಗಳನ್ನು ತೆಗೆಯಲಾಗುತ್ತದೆ ಎಂದು ವರದಿ ಮಾಡಿವೆ
ಪ್ರತಿಷ್ಟಿತ ಪತ್ರಿಕೆಗಳು ನೋಟಿನ ಮೇಲಿರುವ ಚಿತ್ರಗಳನ್ನು ತೆಗೆಯಲಾಗುತ್ತದೆ ಎಂದು ವರದಿ ಮಾಡಿವೆ

ಈ ಸುದ್ದಿಯು ಮೊದಲು ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ವರದಿಯಾಗಿತ್ತು. ನೋಟುಗಳಲ್ಲಿ ಫೋಟೊ ಬದಲಾಯಿಸಿ ಮುದ್ರಣ ಆಗಲೇ ಆರಂಭವಾಗಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. “ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಭಾವಚಿತ್ರ ದೇಶದ ಪ್ರತಿಯೊಂದು ನೋಟಿನ ಮೇಲೆ ಮುದ್ರಿತವಾಗಿದೆ. ಮತ್ತು ಅದು ದೇಶದ ಗೌರವದ ಸಂಕೇತವಾಗಿದೆ. ಆದರೆ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಗಾಂಧೀಜಿ ವಾಟರ್‌ ಮಾರ್ಕ್‌ ಅನ್ನು ಬದಲಿಸಲು ಮುಂದಾಗಿದ್ದಾರೆ. ಅದರ ಬದಲಿಗೆ ಠಾಗೋರ್‌ ಮತ್ತು ಕಲಾಂ ವಾಟರ್‌ಮಾರ್ಕ್‌ ಮುದ್ರಣ ಮಾಡಲು ಮುಂದಾಗಿದೆ,” ಎಂದು ವರದಿಯಲ್ಲಿ ಹೇಳಲಾಗಿತ್ತು.

ನೋಟುಗಳಲ್ಲಿ ಯಾವುದೇ ಬದಲಾವಣೆ ಇಲ್ಲಾ ಎಂದು RBI ಸ್ಪಷ್ಟನೆ
ನೋಟುಗಳಲ್ಲಿ ಯಾವುದೇ ಬದಲಾವಣೆ ಇಲ್ಲಾ ಎಂದು RBI ಸ್ಪಷ್ಟನೆ

ಕೆಲವು ದಿನಪತ್ರಿಕೆಗಳು ಭಾನುವಾರದಿಂದಲೇ ಈ ಬಗ್ಗೆ ವರದಿಗಳನ್ನು ಮಾಡಲು ಆರಂಭಿಸಿತ್ತು. ಪಶ್ಚಿಮ ಬಂಗಾಳದ ಖ್ಯಾತ ಕವಿ, ನೋಬೆಲ್‌ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್‌ ಮತ್ತು ಖ್ಯಾತ ವಿಜ್ಞಾನಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂರ ಭಾವಚಿತ್ರವನ್ನು ಮುಂಬರುವ ದಿನಗಳಲ್ಲಿ ನೋಟುಗಳ ಮೇಲೆ ಮುದ್ರಿಸಲು ಆರ್‌ಬಿಐ ನಿರ್ಧರಿಸಿದೆ ಎಂದು ಮೂಲಗಳನ್ನು ಹೆಸರಿಸಿ ವರದಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಾಕಷ್ಟು ಮಂದಿ ಇದರ ವಿರುದ್ಧ ದನಿಯೆತ್ತಿದ್ದರು. ರಾಷ್ಟ್ರಪಿತ ಗಾಂಧೀಜಿ ಅವರಿಗೆ ಮಾಡುತ್ತಿರುವ ಅಪಮಾನ ಇದು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿತ್ತು. ಈ ಎಲ್ಲಾ ವಿವಾದಗಳನ್ನು ಪರಿಹರಿಸಲು RBI ಮತ್ತು ಸೆಂಟ್ರಲ್‌ ಬ್ಯಾಂಕ್‌ ಇಂದು ಅಧಿಕೃತ ಮಾಹಿತಿ ನೀಡಿ ಊಹಾಪೋಹಕ್ಕೆ ಅಂತ್ಯ ಹಾಡಿದೆ.

ಭಾರತದ ಹೊಸ 500 ರೂಪಾಯಿ ನೋಟಿನಲ್ಲಿ  ರಾಮನ ಚಿತ್ರವನ್ನು ಮುದ್ರಿಸಲಾಗಿದೆ ಎಂದು ಹೇಳುವ ಪೋಸ್ಟ್ ಮೂಲಕ ಫೋಟೋವನ್ನು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಆದರೆ ಇದೊಂದು ಸುಳ್ಳು ಸುದ್ದಿ ಎಂದು ಫ್ಯಾಕ್ಟ್‌ಲಿ ವರದಿ ಮಾಡಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಸುಳ್ಳು ಸುದ್ದಿಗಳು ಹರಿದಾಡುವುದು ಸಾಮಾನ್ಯ ಆದರೆ ದೇಶದ ಪ್ರತಿಷ್ಠಿತ ಮಾಧ್ಯಮಗಳೂ ಕೂಡ ಪರಿಶೀಲಿಸದೆ ಸುದ್ದಿ ಮಾಡಿವೆ.

     

ಒಟ್ಟಾರೆಯಾಗಿ ಹೇಳುವುದಾದರೆ ಭಾರತದ ಮಹಾತ್ಮನೆಂದೇ ಹೆಸರಾಗಿರುವ ಗಾಂಧೀಜಿಯವರ ಪೋಟೋವನ್ನು ನೋಟುಗಳಿಂದ ತೆಗೆದು ಇತರೆ ಪ್ರಮುಖರ ಭಾವಚಿತ್ರವನ್ನು ಹಾಕಲಾಗುವುದು ಎಂದು RBI ಎಲ್ಲಿಯೂ ಹೇಳಿಲ್ಲ, ಮಾಧ್ಯಮದ ಕೆಲವು ವಿಭಾಗಗಳಲ್ಲಿ ಈ ರೀತಿಯ ವರದಿಗಳು ಪ್ರಸಾರವಾಗಿತ್ತು. ಆದರೆ ರಿಸರ್ವ್ ಬ್ಯಾಂಕ್‌ನಲ್ಲಿ ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂದ RBI ಪ್ರೆಸ್​​ ನೋಟ್​ ಮೂಲಕ ಸ್ಪಷ್ಟನೆ ನೀಡಿದೆ. ಹಾಗಾಗಿ ಸಾಮಾಜಿಕ ಮಾಧ್ಯಮ ಮತ್ತು ಕೆಲ ಪತ್ರಿಕೆಗಳಲ್ಲಿ ಮಾಡಲಾದ ವರದಿ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: BJP ನಾಯಕಿ, ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ BJP ತೊರೆದು ಕಾಂಗ್ರೆಸ್ ಸೇರಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights