ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ: ಮೋದಿ ಸುಳ್ಳುಗಾರ ಎಂದ ಸಿದ್ದರಾಮಯ್ಯ

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕೊರೋನಾ ಸಂಕಷ್ಟವನ್ನು ನಿಭಾಯಿಸಲು ವಿಫಲವಾಗಿವೆ. ರೈತರು, ಕಾರ್ಮಿಕರನ್ನು ನಿರ್ಲಕ್ಷಿಸಿದೆ ಎಂದು ಆರೋಪಗಳನ್ನು ಮಾಡಿ ರಾಜ್ಯ ಕಾಂಗ್ರೆಸ್ಸಿಗರು ಇಂದು ಪ್ರತಿಭಟನೆ ಮಾಡಿದ್ಧಾರೆ.

ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಆಂಜನೇಯ, ಎಂ.ಬಿ. ಪಾಟೀಲ್, ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದಾರೆ.

ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ ಬೋಗಸ್ ಪ್ಯಾಕೇಜ್ ಕೊಟ್ಟಿದೆ. ಕೂಲಿ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಈ ನಾಯಕರು, ಎಂಪಿಎಂಸಿ ಕಾಯ್ದೆ ಹಿಂಪಡೆಯಬೇಕು; ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಬೇಕು; ಗ್ರಾಮ ಪಂಚಾಯಿತಿ ಚುನಾವಣೆ ಆಯೋಜಿಸಬೇಕು ಎಂಬಿತ್ಯಾದಿ ಒತ್ತಾಯಗಳನ್ನ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ಇವತ್ತಿನ ಪ್ರತಿಭಟನೆ ಅನಿವಾರ್ಯವಾಗಿದ್ದನ್ನು ವಿವರಿಸಿದರು.

ಸರ್ಕಾರದ ಧೋರಣೆಯಿಂದ ಬೇಸತ್ತು ಹೋಗಿದ್ದೇವೆ. ಅನಿವಾರ್ಯವಾಗಿ ಇವತ್ತು ಮಹಾತ್ಮ ಗಾಂಧಿಯವರ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಬೇಕಾಗಿ ಬಂತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಬೋಗಸ್ ಪ್ಯಾಕೇಜನ್ನ ಹೊರಡಿಸಿದೆ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಲು ಸರ್ಕಾರ ಹೊರಟಿದೆ. ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ಒಂದು ರೂಪಾಯಿಯನ್ನೂ ರಾಜ್ಯದ ಜನರಿಗೆ ಕೊಟ್ಟಿಲ್ಲ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ 5 ಸಾವಿರ ರೂಪಾಯಿ ಯಾರೊಬ್ಬರಿಗೂ ತಲುಪಿಲ್ಲ. ಕರೆಂಟ್ ಬಿಲ್​ಗಳನ್ನು ಜಾಸ್ತಿ ಮಾಡಿ ಲೂಟಿ ಮಾಡಲಾಗುತ್ತಿದೆ. ಜನರಿಗೆ ಯಾವುದೇ ರೀತಿಯ ಸಹಾಯಕ್ಕೆ ನಿಲ್ಲಲು ಬಿಜೆಪಿ ವಿಫಲ ಆಗಿದೆ. ಕಟ್ಟಡ ಕಾರ್ಮಿಕರ ರಕ್ಷಣೆಗೂ ಸರ್ಕಾರ ನಿಲ್ಲದಿದ್ದರಿಂದ ಅವರೆಲ್ಲಾ ಬೀದಿಪಾಲಾಗುವ ಸ್ಥಿತಿ ಇದೆ. ಅಂಗಡಿ ಮುಚ್ಚಿಸಿ ವ್ಯಾಪಾರ ನಿಲ್ಲಿಸಿ ಈಗ ಬಡ್ಡಿ ಕಟ್ಟಿ ಅಂದ್ರೆ ಸಾಮಾನ್ಯ ಜನರು ಏನು ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಪಂಚಾಯಿತಿ ಚುನಾವಣೆ ಮಾಡಲ್ಲ ಎಂದು ಸರ್ಕಾರ ಹೇಳುತ್ತಿದೆ. ಅವರ ಪಕ್ಷದ ಕಾರ್ಯಕರ್ತರನ್ನೇ ಅಧಿಕಾರಕ್ಕೆ ತರಲು ಹುನ್ನಾರ ನಡೆಯುತ್ತಿದೆ ಎಂದು ಡಿಕೆಶಿ ಶಂಕಿಸಿದರು.

ಹೊರದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡದೇ ಒಳಗೆ ಬಿಟ್ಟಿರಿ. ಇದರಿಂದ ಸೋಂಕು ಜಾಸ್ತಿ ಆಗಿದೆ. ಕೇಂದ್ರ ಸರ್ಕಾರ ಪರಿಸ್ಥಿತಿ ನಿಭಾಯಿಸಲು ಅಸಮರ್ಥವಾಗಿದೆ ಎಂದು ಡಿಕೆ ಶಿವಕುಮಾರ್ ಟೀಕಿಸಿದರು.

ಇದಾದ ಬಳಿಕ ಭಾಷಣ ಮಾಡಿದ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಇನ್ನಷ್ಟು ತೀಕ್ಷ್ಣ ದಾಳಿ ನಡೆಸಿದರು.

ಕೋವಿಡ್ ಬಿಕ್ಕಟ್ಟು ಶುರುವಾದಾಗಿನಿಂದಲೂ ನಾವು ಸರ್ಕಾರಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುತ್ತಾ ಬಂದಿದ್ದೇವೆ. ಯಡಿಯೂರಪ್ಪ ಸರ್ಕಾರಕ್ಕೆ ಸಲಹೆಗಳನ್ನು ಕೊಡುತ್ತಾ ಬಂದಿದ್ಧೇವೆ. ಆದರೆ, ಬಹಳ ದಿನ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಕಾರ್ಮಿಕರು, ವಲಸೆ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಅವರಿಗೆ ವಸತಿ, ಊಟ ನೀರು ಕೊಟ್ಟಿದ್ದರೆ ರಾಜ್ಯ ಬಿಟ್ಟು ಹೋಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಯೂ ಆದ ಸಿದ್ದರಾಮಯ್ಯ ಆಕ್ರೋಶ ತೋರ್ಪಡಿಸಿದರು.

ತಬ್ಲಿಘಿಗಳ ಮೇಲೆ ಹಾಕ್ತಿದ್ರು.. ಈಗೇನಂತಾರೆ?

ರಾಜ್ಯ ಸರ್ಕಾರ ಕೊರೋನಾ ವೈರಸ್ ನಿಯಂತ್ರಿಸಲು ವಿಫಲವಾಗಿದೆ. ನಿನ್ನೆ ಒಂದೇ ದಿನ 149 ಕೇಸ್​ಗಳು ಬಂದಿವೆ. ಇಷ್ಟು ದಿನ ಇವರು ತಬ್ಲಿಘಿಗಳಿಂದ ವೈರಸ್ ಬಂದಿದೆ ಅಂತಿದ್ರು. ಈಗ ಏನು ಆಗುತ್ತಿದೆ? ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಅವರನ್ನು ಒಳಗೆ ಬಿಟ್ಟುಕೊಂಡಿದ್ದು ಇದೇ ಸರ್ಕಾರ. ಅವರನ್ನು ಗಡಿಯಲ್ಲೇ ಯಾಕೆ ಕ್ವಾರಂಟೈನ್ ಮಾಡಲಿಲ್ಲ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮೋದಿ ಸುಳ್ಳುಗಾರ ಎಂದ ಸಿದ್ದರಾಮಯ್ಯ:

ಪ್ರಧಾನಿ ನರೇಂದ್ರ ಮೋದಿ ಘೊಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ ಬರೀ ಬೋಗಸ್. ಹಿಂದೆ ಪ್ರತಿಯೊಬ್ಬರ ಅಕೌಂಟ್​ಗೆ 15 ಸಾವಿರ ರೂ ಹಾಕುತ್ತೇವೆ ಎಂದು ಹೇಳಿದ ಹಾಗೆ ಈಗ 20 ಲಕ್ಷ ಕೋಟಿ ಅಂತ ಸುಳ್ಳು ಹೇಳುತ್ತಿದ್ದಾರೆ. ದೇಶದ ಬಜೆಟ್ ಎಷ್ಟಿದೆ? 20 ಲಕ್ಷ ಕೋಟಿ ಎಲ್ಲಿದೆ ಹೇಳಲಿ? ನರೇಂದ್ರ ಮೋದಿಯಂಥ ಸುಳ್ಳುಗಾರ ಎಲ್ಲಿಯೂ ಇಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ನರೇಂದ್ರ ಮೋದಿ ದೆಹಲಿಯಲ್ಲಿ ಸೆಲ್ಯೂಟ್ ಮಾಡಿದರೆ ಯಡಿಯೂರಪ್ಪ ಇಲ್ಲಿ ಮಾಡುತ್ತಾರೆ. ವಿರೋಧ ಪಕ್ಷದ ಜೊತೆಯೂ ಚರ್ಚೆ ಮಾಡದೆ ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ಧಾರೆ. ಹಾಗಾದರೆ ವಿರೋಧ ಪಕ್ಷಗಳು ಲೆಕ್ಕಕ್ಕೆ ಇಲ್ಲವೇ? ಪಂಚಾಯಿತಿಗಳನ್ನ ತೆಗೆದು ಅದರ ಉಸ್ತುವಾರಿಯಾಗಿ ಬಿಜೆಪಿ ಮುಖಂಡರನ್ನು ನೇಮಿಸಲು ಯೋಜಿಸಿದ್ದಾರೆ. ಯಡಿಯೂರಪ್ಪ ಸರ್ಕಾರ ಒಂದು ರೀತಿಯಲ್ಲಿ ಭ್ರಷ್ಟ ಸರ್ಕಾರವಾಗಿದೆ. ಮುಖ್ಯಮಂತ್ರಿಗೆ ಬಡವರ ಬಗ್ಗೆ ಮತ್ತು ರೈತರ ಬಗ್ಗೆ ಕಾಳಜಿ ಇಲ್ಲವಾಗಿದೆ ಎಂದು ಬಿಎಸ್​ವೈ ವಿರುದ್ಧವೂ ಸಿದ್ದರಾಮಯ್ಯ ಟೀಕೆ ಮಾಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights