ಫ್ಯಾಕ್ಟ್‌ಚೆಕ್: ದೀಪಾವಳಿ ಹಬ್ಬಕ್ಕೆ ವಿಷಪೂರಿತ ಸಿಹಿ ತಿಂಡಿಗಳನ್ನು ತಯಾರಿಸಿ ಹಿಂದೂಗಳನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತೆ?

ಹಿಂದೂಗಳನ್ನು ಗುರಿಯಾಗಿಸಿಕೊಂಡು ಹಿಂದೂ ಜನಸಂಖ್ಯೆಯನ್ನು ಕಡಿಮೆ ಮಾಡುವ ದುರುದ್ದೇಶದಿಂದ ವಿಷಪೂರಿತ ಸಿಹಿ ತಿನಿಸುಗಳನ್ನು (ರಸಗುಲ್ಲ) ಮುಸ್ಲಿಮರು ತಯಾರಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ. BJP ಬೆಂಬಲಿತ  ಬಲಪಂಥೀಯ ಮಾಧ್ಯಮವಾದ ಸುದರ್ಶನ್ ನ್ಯೂಸ್ ಟ್ವೀಟ್‌ ಹಂಚಿಕೊಂಡಿದ್ದು  ವಿಡಿಯೋವೊಂದನ್ನು ಪೋಸ್ಟ್‌ ಮಾಡಿದೆ.

ವಿಡಿಯೋದಲ್ಲಿ ಸಿಹಿ ತಿಂಡಿಗಳನ್ನು ಉತ್ಪಾದಿಸುವ ಕಾರ್ಖಾನೆಯೊಂದರಲ್ಲಿ ಬೃಹತ್ ಪ್ರಮಾಣದಲ್ಲಿ ಸಿಹಿ ತಯಾರಿಸುವ ವಿಡಿಯೋವನ್ನು ಹಂಚಿಕೊಂಡಿದೆ. ಮತ್ತೊಂದು ಕ್ಲಿಪ್‌ನಲ್ಲಿ ಕಾರ್ಖಾನೆಗೆ ಪೊಲೀಸರು ದಾಳಿ ನಡೆಸಿ ತಯಾರಿಸಿದ ಸಿಹಿ ತಿನಿಸುಗಳನ್ನು ಡ್ರೈನೇಜ್‌ಗೆ ಸುರಿಯುತ್ತಿರುವ ದೃಶ್ಯಗಳನ್ನು ಹಂಚಿಕೊಂಡಿದೆ.

ಸುದರ್ಶನ ನ್ಯೂಸ್‌ನ ಮುಖ್ಯ ಸಂಪಾದಕ ಸುರೇಶ್ ಚವ್ಹಾಂಕೆ ಅವರು ವೀಡಿಯೊವನ್ನು ಹಂಚಿಕೊಂಡಿದ್ದು, “ಅಬ್ದುಲ್ ಅವರು ದೀಪಾವಳಿಯಂದು ಜನಸಂಖ್ಯೆ ನಿಯಂತ್ರಣದ ವಿಶೇಷ ಸಿಹಿತಿಂಡಿಗಳನ್ನು ಪರಿಚಯಿಸಿದ್ದಾರೆ”. ಎಂಬ ಶೀರ್ಷಿಕೆಯ್ನು ನೀಡಿದ್ದಾರೆ.

https://twitter.com/AshwiniSahaya/status/1583331628230709248?ref_src=twsrc%5Etfw%7Ctwcamp%5Etweetembed%7Ctwterm%5E1583331628230709248%7Ctwgr%5Edf91aec2c249b5cc6788dd39d758963df9179137%7Ctwcon%5Es1_&ref_url=https%3A%2F%2Fthelogicalindian.com%2Ffact-check%2Fmisleading-claim-about-poisoned-rasgullas-for-reducing-population-of-hindus-38379

ಅದೇ ವೀಡಿಯೊವನ್ನು ಹಂಚಿಕೊಂಡ ಉದ್ಯಮಿ ಮತ್ತು ಸಾಮಾಜಿಕ ಮಾಧ್ಯಮದ ವ್ಯಕ್ತಿ ಅರುಣ್ ಪುದೂರ್, “ಉತ್ತರ ಪ್ರದೇಶ: ಮೊಹಮ್ಮದ್ ಅಬ್ದುಲ್ಲಾ ಮತ್ತು ಅಬ್ಬಾಶಿ ಅವರು ದೀಪಾವಳಿಯಲ್ಲಿ ಹಿಂದೂಗಳನ್ನು ಕೊಲ್ಲಲು 20,000 ಕೆಜಿ ರಸಗುಲ್ಲಾಸ್, 5,200 ಕೆಜಿ ಕೋವಾ ಮತ್ತು 4,000 ಕೆಜಿ ಚೆನಾವನ್ನು ವಿಷ ಬೆರೆಸಿ ಮಾರಾಟ ಮಾಡಲು ತಯಾರಿ ನಡೆಸಿದ್ದರು. ಅದನ್ನು ಪೊಲೀಸರು ಹಿಡಿದು ನಾಶಪಡಿಸಿದರು ಎಂಬ ಹೇಳಿಕೆಯೊಂದಿಗೆ ಅದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ವೈರಲ್ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಅಕ್ಟೋಬರ್ 19, 2022 ರಂದು ಪ್ರಕಟಿಸಲಾದ ಮುಜಫರ್‌ನಗರ ಬುಲೆಟಿನ್‌ನ ಪೋಸ್ಟ್‌ನ ವರದಿಯೊಂದು ಲಭ್ಯವಾಗಿದೆ.

ವರದಿಯ ಪ್ರಕಾರ “ಚರ್ತವಾಲ್‌ನ ಕುಲ್ಹೇರಿ ಗ್ರಾಮದಲ್ಲಿ ಕಲಬೆರಕೆ ರಸಗುಲ್ಲಾ ತಯಾರಿಸುವ ಕಾರ್ಖಾನೆ ಪತ್ತೆಯಾಗಿದೆ. ಸ್ಥಳಿಯ ಆಡಳಿತಾಧಿಕಾರಿಗಳು ಪೊಲೀಸರೊಂದಿಗೆ ದಾಳಿ ನಡೆಸಿದಾಗ 200 ಕ್ವಿಂಟಾಲ್ ಕಲಬೆರಕೆ ರಸಗುಲ್ಲಾ ಪತ್ತೆಯಾಗಿದೆ. ರಸಗುಲ್ಲಾಗಳನ್ನು ದೀಪಾವಳಿ ಹಬ್ಬದಲ್ಲಿ ಅಂಗಡಿಗೆ ಸರಬರಾಜು ಮಾಡಲು ಉದ್ದೇಶಿಸಲಾಗಿತ್ತು.” ಎಂದು ವರದಿಯಾಗದೆ.

ಕೀವರ್ಡ್‌ಗಳೊಂದಿಗೆ ಮತ್ತಷ್ಟು ಸರ್ಚ್ ನಡೆಸಿದಾಗ, ಅಕ್ಟೋಬರ್ 21, 2022 ರಂದು ಅಮರ್ ಉಜಾಲಾದ ವರದಿಯೊದು ಲಭ್ಯವಾಗಿದೆ. ವರದಿಯ ಪ್ರಕಾರ ‘400 ಕ್ವಿಂಟಾಲ್ ಕಲಬೆರಕೆ ರಸಗುಲ್ಲಾ ಚರಂಡಿಗೆ’ ಎಂದು ಶೀರ್ಷಿಕೆ ನೀಡಿದೆ. ಅಮರ್ ಉಜಾಲ ವರದಿಯಂತೆ ಚರ್ತವಾಲ್‌ನ ಕುಲ್ಹೇರಿ ಗ್ರಾಮದಲ್ಲಿ ಜಿಲ್ಲಾಡಳಿತವು ಸಿಹಿತಿಂಡಿ ಕಾರ್ಖಾನೆಯ ಮೇಲೆ ದಾಳಿ ನಡೆಸಿ 400 ಕ್ವಿಂಟಾಲ್ ರಸಗುಲ್ಲಾವನ್ನು ನಾಶಪಡಿಸಿದೆ.

ಅಕ್ಟೋಬರ್ 19 ರಂದು, ಕುಲ್ಹೆರ್‌ನಲ್ಲಿ ಕಲಬೆರಕೆ ರಸಗುಲ್ಲಾಗಳನ್ನು ತಯಾರಿಸಲಾಗುತ್ತಿದೆ ಎಂದು ಆಡಳಿತಕ್ಕೆ ಮಾಹಿತಿ ಸಿಕ್ಕಿತು. ಸದರ್‌ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಪರ್ಮಾನಂದ್ ಝಾ, ಸರ್ಕಲ್ ಆಫೀಸರ್ ಧೀರೇಂದ್ರ ನಗರ ಮತ್ತು ಚರ್ತವಾಲ್ ಪೊಲೀಸರು ರಸಗುಲ್ಲಾಗಳನ್ನು ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ರಸಗುಲ್ಲಾಗಳನ್ನು ತಯಾರಿಸಲು ಯೂರಿಯಾ, ಡಿಟರ್ಜೆಂಟ್ ಪೌಡರ್, ರವೆ ಮತ್ತು ಮೈದಾವನ್ನು ಸೇರಿಸಿರುವುದು ದೃಢಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ.

Image Credit: Dainik Bhaskar

ದೈನಿಕ್ ಭಾಸ್ಕರ್ ವರದಿಯ ಪ್ರಕಾರ ಸಿಹಿತಿಂಡಿಗಳ ಕಾರ್ಖಾನೆಯಲ್ಲಿ ರಸಗುಲ್ಲಾವನ್ನು ಕಲಬೆರಕೆ ಮಾಡಿರುವುದನ್ನು ದೃಢಪಡಿಸುತ್ತದೆ. ಈ ಎರಡು ವರದಿಗಳಲ್ಲಿ ಕಾರ್ಖಾನೆಯ ಮಾಲೀಕರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ಕೋಮು ದ್ವೇಷವಾಗಲಿ, ಕೋಮು ಹಿನ್ನಲೆಯಾಗಲಿ ಯಾವುದೇ ಉಲ್ಲೇಖವಿಲ್ಲ, ಮುಸ್ಲಿಮರು ರಸಗುಲ್ಲಾ ಅಥವಾ ಇತರ ಸಿಹಿತಿಂಡಿಗಳಲ್ಲಿ ವಿಷವನ್ನು ಬೆರೆಸಿದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ನಂತರ ಹೆಚ್ಚಿನ ವಿವರಗಳಿಗಾಗಿ ಪೊಲೀಸ್ ಅಧಿಕಾರಿ ಯತೇಂದ್ರ ಸಿಂಗ್ ಅವರನ್ನು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ತಂಡ ಸಂಪರ್ಕಿಸಿ ಮಾಹಿತಿ ಪಡೆದಿದೆ. ಸಿಹಿ ತಿನಿಸುಗಳನ್ನು ತಯಾರು ಮಾಡುವ ಕಾರ್ಖಾನೆಯಲ್ಲಿ ಯಾವುದೇ ಶುಚಿತ್ವವಿಲ್ಲದೆ ಕಲಬೆರಕೆಯಿಂದ ಕೂಡಿದ ತಿನಿಸುಗಳನ್ನು ತಯಾರು ಮಾಡಲಾಗುತ್ತಿತ್ತು. ನಾವು ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದೇವೆ, ಈ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ,  ರಸಗುಲ್ಲಾಗಳಲ್ಲಿ ಯೂರಿಯಾ ಮತ್ತು ಡಿಟರ್ಜೆಂಟ್ ಪುಡಿಯಂತಹ ಉತ್ಪನ್ನಗಳನ್ನು ಕಲಬೆರಕೆ ಮಾಡಿ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತಿತ್ತು. ಕಾರ್ಖಾನೆ ಮೇಲೆ ದಾಳಿ ನಡಿಸಿರುವ ಮುಜಾಫರ್‌ನಗರ ಪೊಲೀಸರು ಗುಂಡಿಗೆ ಸುರಿದು ನಾಶ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದ್ದು, ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ದಿ ಲಾಜಿಕಲ್ ಇಂಡಿಯನ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಾರತಕ್ಕೆ ಮನಮೋಹನ್ ಸಿಂಗ್‌ರಂತಹ ಪ್ರಧಾನಿ ಅಗತ್ಯವಿದೆ ಎಂದು ಸುನಕ್ ಹೇಳಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights