ಐಸ್ ಕ್ರೀಂನಲ್ಲಿ ಇಲಿ ವಿಷ ಬೆರಸಿ ಮೂವರು ಮಕ್ಕಳಿಗೆ ನೀಡಿದ ತಂದೆ..!
ಹೆಂಡತಿಯೊಂದಿಗೆ ಜಗಳವಾಡಿದ ಪತಿ ಐಸ್ ಕ್ರೀಂನಲ್ಲಿ ಇಲಿ ವಿಷ ಬೆರಸಿ ಮಕ್ಕಳಿಗೆ ನೀಡಿದ ದಾರುಣ ಘಟನೆ ಮುಂಬೈನ ಮನ್‌ಖುರ್ಡ್ ಪ್ರದೇಶದಲ್ಲಿ ನಡೆದಿದೆ.
ಹೌದು… 27 ವರ್ಷದ ಆರೋಪಿ ಅಲಿ ನೌಶಾದ್ ಅನ್ಸಾರಿ ಪತ್ನಿ ನಾಜಿಯಾ ಬೇಗಂ ಅವರೊಂದಿಗೆ ಜಗಳವಾಡಿ ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗುವಿಗೆ ಐಸ್ ಕ್ರೀಂ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ತನ್ನ ಮೂವರು ಮಕ್ಕಳಿಗೆ ಐಸ್ ಕ್ರೀಂನಲ್ಲಿ ಇಲಿ ವಿಷ ಬೆರಸಿ ನೀಡಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಮಕ್ಕಳಲ್ಲಿ ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಜೂನ್ 25 ರಂದು ಈ ಘಟನೆ ನಡೆದಿದೆ. ಆದರೆ ಬುಧವಾರ ಸರ್ಕಾರಿ ಸಿಯಾನ್ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಾಗ ಇದು ಬೆಳಕಿಗೆ ಬಂದಿದ್ದು, ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಬೇಗಂ ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೂನ್ 25 ರಂದು ಜಗಳದ ನಂತರ ಬೇಗಂ ಮನೆಯಿಂದ ಹೊರಟು ತನ್ನ ಸಹೋದರಿಯೊಂದಿಗೆ ಇರಲು ಹೋದರು. ನಂತರ ಅನ್ಸಾರಿ ಮೂವರು ಮಕ್ಕಳನ್ನು ಐಸ್‌ಕ್ರೀಮ್ ಕೊಡಿಸುವುದಾಗಿ ಹೇಳಿ ಹೊರಗೆ ಕರೆದೊಯ್ದಿದ್ದಾನೆ.
ಐಸ್‌ಕ್ರೀಮ್ ತಿಂದ ಮಕ್ಕಳು ಹೊಟ್ಟೆ ನೋವಿನ ಬಗ್ಗೆ ತಾಯಿಗೆ ಹೇಳಿದ್ದಾರೆ. ಮನೆಗೆ ಮರಳಿದ ನಾಜಿಯಾ ಮಕ್ಕಳನ್ನು ಸಿಯಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರಂಭದಲ್ಲಿ ಮಕ್ಕಳು ಆಕಸ್ಮಿಕವಾಗಿ ಇಲಿ ವಿಷ ಸೇವಿಸಿದ್ದಾರೆ ಎಂದು ನಾಜಿಯಾ ವೈದ್ಯರಿಗೆ ಸುಳ್ಳು ಹೇಳಿದ್ದರು. ಆದರೆ ಅವರ ಮಗ ತೀರಿಕೊಂಡ ನಂತರ ಅವರು ಪೊಲೀಸರಿಗೆ ಸತ್ಯವನ್ನು ಬಹಿರಂಗಪಡಿಸಿದರು.
ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಇಬ್ಬರು ಮಕ್ಕಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದಾರೆ. ಸದ್ಯ ಮಾನ್‌ಖುರ್ಡ್‌ನ ಸಾಥೆ ನಗರ ನಿವಾಸಿ ಕೂಲಿ ಕಾರ್ಮಿಕ ಅನ್ಸಾರಿ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಆದರೆ ಅನ್ಸಾರಿ ಪರಾರಿಯಾಗಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.