ಫ್ಯಾಕ್ಟ್‌ಚೆಕ್: ಕರ್ನಾಟಕದ GIM ನಿಂದ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುತ್ತಿದೆ ಎಂಬುದು ನಿಜವೇ?

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಹೂಡಿಕೆದಾರರ ಸಮಾವೇಶ  ‘ಇನ್ವೆಸ್ಟ್ ಕರ್ನಾಟಕ-2022’ ಶುಕ್ರವಾರ (ನ.4) ಸಂಜೆ ಕೊನೆಗೊಂಡಿತ್ತು. ಬೆಂಗಳೂರಿನಲ್ಲಿ ಸಮಾವೇಶ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಈ ಸಮಾವೇಶದಿಂದ ರಾಜ್ಯದಲ್ಲಿ ಅಂದಾಜು 9.82 ಲಕ್ಷ ಕೋಟಿ ರೂ. ಹೂಡಿಕೆ ಮತ್ತು ಈ ಹೂಡಿಕೆಯಿಂದ ರಾಜ್ಯದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಹೇಳಿದ್ದರು.

ಇದನ್ನೆ ರಾಜ್ಯದ ಹಲವು ಮುಖ್ಯ ವಾಹಿನಿ ಮಾಧ್ಯಮಗಳು ವರದಿ ಮಾಡಿದ್ದವು, ಆದರೆ ಹೂಡಿಕೆದಾರರ ಸಮಾವೇಶದಲ್ಲಿ ಘೋಷಿಸಿದಂತೆ ಸುಮಾರು 10 ಲಕ್ಷ ಕೋಟಿ ಹೂಡಿಕೆ ಮತ್ತು 6 ಲಕ್ಷ ಉದ್ಯೋಗ ಸೃಷ್ಟಿ ಎನ್ನುವ ಸರ್ಕಾರದ ಹೇಳಿಕೆ ನಿಜವೇ ಎಂದು ಪರಿಶೀಲಿಸೋಣ.

GIM (ಜಾಗತಿಕ ಹೂಡಿಕೆದಾರರ ಸಮ್ಮೇಳನ)ದಲ್ಲಿ ಹೂಡಿಕೆದಾರರು ಕರ್ನಾಟಕದಲ್ಲಿ 10 ಲಕ್ಷ ಕೋಟಿ ಹೂಡಿಕೆಯ ಭರವಸೆಯನ್ನು ನೀಡಿದ್ದಾರೆ ಎಂದು ಘೋಷಿಸಿಕೊಂಡಿದೆ. ಈ ಭರವಸೆಗಳಲ್ಲಿ ಶೇ. 80ರಷ್ಟು ವಾಸ್ತವವಾಗುತ್ತದೆ ಎಂದೂ ಇದರಿಂದಾಗಿ 5 ಲಕ್ಷ ಉದ್ಯೋಗಗಳ ಬದಲಿಗೆ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ಬಿಜೆಪಿ ಹೇಳುತ್ತಿದೆ.

ಫ್ಯಾಕ್ಟ್‌ಚೆಕ್:

ಕೇವಲ ರಾಜ್ಯದಲ್ಲಿಯೇ ಅಲ್ಲ ದೇಶದಲ್ಲಿ ಇಂದು ನಿರುದ್ಯೋಗವೆಂಬುದು ಯುವಜನರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ತಮ್ಮ ಓದು ಮುಗಿಸಿ ಎರಡು ಮೂರು ಡಿಗ್ರಿಗಳನ್ನು ಪೂರೈಸಿದ್ದರು ನಿರುದ್ಯೂಗಿಗಳಾಗಿ ಬೀದಿ ಬೀದಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸರ್ಕಾರ ಘೋಷಿಸಿರುವುದು ಮರು ಭೂಮಿಯಲ್ಲಿ ನೀರು ಸಿಕ್ಕಷ್ಟೆ ಸಂತಸವಾಗಿದೆ. ಆದರೆ ವಾಸ್ತವದಲ್ಲಿ ಸರ್ಕಾರಕ್ಕೆ 6 ಲಕ್ಷ ಉದ್ಯೋಗವಿರಲಿ 6 ಸಾವಿರ ಉದ್ಯೋಗವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಚಿಂತಕ ಶಿವಸುಂದರ್ ವಿಶ್ಲೇಷಿಸಿದ್ದಾರೆ.

ಸುಳ್ಳು- 1

ಹೇಳಿಕೆ – GIMನಲ್ಲಿ ನೀಡಲಾಗಿರುವ ಹೂಡಿಕೆಯ ಭರವಸೆ 10 ಲಕ್ಷ ಕೋಟಿ ರೂ.

ವಾಸ್ತವ- GIMನಲ್ಲಿ ನೀಡಲಾಗಿರುವ ಹೂಡಿಕೆಯ ಭರವಸೆ ಕೇವಲ 1.5 ಲಕ್ಷ ಕೋಟಿ ರೂ.

ಮಂತ್ರಿ ಮುರುಗೇಶ್ ನಿರಾಣಿಯವರೇ ನೀಡಿರುವ ಹೇಳಿಕೆಯ ಪ್ರಕಾರ 10 ಲಕ್ಷ ಕೋಟಿ ಭರವಸೆ ಬಂದಿರುವುದು GIM -ಜಾಗತಿಕ ಹೂಡಿಕೆದಾರರ ಸಮ್ಮೇಳನದಿಂದ ಅಲ್ಲ.

ಬದಲಿಗೆ GIMಗೆ ಮುಂಚೆ ಈ ವರ್ಷದ ಜನವರಿಯಿಂದ GIMವರೆಗೆ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡುವುದಾಗಿ ನೀಡಿರುವ ಭರವಸೆ 8,24,784 ಕೋಟಿ ರೂ.ಗಳು. GIM ಸಮ್ಮೇಳನದಲ್ಲಿ ನೀಡಲಾದ ಭರವಸೆ ಕೇವಲ 1,57,000 ಕೋಟಿ ರೂ.ಹಾಗೂ GIMನಲ್ಲಿ ಹೊಸದಾಗಿ ಎರಡೇ ಎರಡು ಹೊಸ ಭರವಸೆಗಳನ್ನು ಮಾತ್ರ ನೀಡಲಾಗಿದೆ.

ಸರ್ಕಾರದ ಅಂಕಿಅಂಶಗಳ ವಿವರಗಳಿಗೆ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಕೋಷ್ಟಕವನ್ನು ನೋಡಿ: (ಲಿಂಕ್‌ ‘ಕ್ಲಿಕ್’ ಮಾಡಿ)

ಆದರೆ ಬಿಜೆಪಿ ಸರ್ಕಾರ GIM ನಿಂದಲೇ 5 ಲಕ್ಷ ಕೋಟಿ ಹೆಚ್ಚುವರಿ ಬಂಡವಾಳ ನಿರೀಕ್ಷಿಸಿತ್ತು. ಅಂದರೆ ಅವರ ನಿರೀಕ್ಷೆಯ ಶೇ. 25 ರಷ್ಟು ಭರವಸೆಗಳು ಕೂಡ GIMನಿಂದ ಬಂದಿಲ್ಲ. ಇದರಿಂದ ಬಂದಿರುವುದು 1,57,000 ಕೋಟಿ ರೂ ಮಾತ್ರ. ಉಳಿದ್ದದ್ದು GIM ಗಿಂತ ಮುಂಚೆಯೇ ಬಂದಿರುವುದು ಎಂಬುದು ಸ್ಪಷ್ಟವಾಗಿದೆ.

ಸುಳ್ಳು-2

ಹೇಳಿಕೆ- GIMನಲ್ಲಿ ಹೂಡಿಕೆದಾರರು ನೀಡುವ ಭರವಸೆಗಳಲ್ಲಿ ಈ ಬಾರಿ ಶೇ. 80 conversion ಆಗಿ ವಾಸ್ತವಕ್ಕೆ ಬರಲಿದೆ.

ವಾಸ್ತವ: ಈ ಬಾರಿಯ GIMನಲ್ಲಿ ನೀಡಲಾದ ಭರವಸೆಗಳಲ್ಲಿ ಶೇ. 10 ರಷ್ಟು conversion ಆದರೆ ಅದೇ ಹೆಚ್ಚು.

ಉದಾಹರಣೆಗೆ ಸರ್ಕಾರವೇ ನೀಡಿರುವ ಅಂಕಿಅಂಶಗಳ ಪ್ರಕಾರ:

– 2010ರಲ್ಲಿ ಯಡಿಯೂರಪ್ಪನವರ ಕಾಲದಲ್ಲಿ 3.94 ಲಕ್ಷ ಕೋಟಿಗೆ MoU ಆಯಿತೆಂದು ಬಿಜೆಪಿ ಕೊಚ್ಚಿಕೊಂಡರೂ ವಾಸ್ತವಕ್ಕೆ ಬಂದದ್ದು ಶೇ. 14 ಕ್ಕಿಂತ ಕಡಿಮೆ. ಅವೂ ಜಿಮ್‌ ಇಂದ ಬಂದವಲ್ಲ.

-2012ರಲ್ಲಿ ನಡೆದ GIMನಲ್ಲಿ 6.77 ಲಕ್ಷ ಕೋಟಿ MoUಗಳಾದರೂ ವಾಸ್ತವಕ್ಕೆ ಬಂದದ್ದು ಶೇ. 8ಕ್ಕಿಂತ ಕಡಿಮೆ

– 2016 ರಲ್ಲಿ 3.05 ಲಕ್ಷ ಕೋಟಿಗೆ MoU ಆದರೂ ವಾಸ್ತವಕ್ಕೆ ಬಂದದ್ದು ಶೇ. 15 ಕ್ಕಿಂತ ಕಡಿಮೆ.

GIMಗಳಲ್ಲಿ ಹೂಡಿಕೆದಾರರು ಘೋಷಣೆ ಮಾಡಿದ ಮೇಲೆ ಅದರ ಬಗ್ಗೆ ಸರ್ಕಾರ ಅವರ ಜೊತೆ MoU ಮಾಡಿಕೊಳ್ಳುವುದು ಮೊದಲನೇ ಹಂತ. ಅವುಗಳಿಗೆ ಸರ್ಕಾರದ ಉನ್ನತ ಸಮಿತಿಯು ಕಾನೂನಾತ್ಮಕ ಅನುಮೋದನೆ ಪಡೆಯುವುದು (Approval) ಎರಡನೇ ಹಂತ. ಇವೆರಡು ಹಂತ ದಾಟಲು 5-6 ತಿಂಗಳುಗಳು ಬೇಕು. ಆದರೂ ಇವೆರೆಡೂ ಸರ್ಕಾರಕ್ಕೆ, ಸುಳ್ಳು ಹೇಳುವವರಿಗೆ ಸುಲಭದ ಹಂತಗಳೇ. ಮೂರನೇ ಹಂತ ಜಮೀನು, ಸೈಟು, ರಿಯಾಯತಿ ಒಪ್ಪಂದ. ಅದಾದ ನಂತರ ನಾಲ್ಕನೇ ಹಂತ. ಅಲ್ಲಿ ಹಂತ ಹಂತದ ಹೂಡಿಕೆ, ನಿರ್ಮಾಣ ಮತ್ತು ಉತ್ಪಾದನೆ. ಈ ಕೊನೆ ಎರಡು ಹಂತಗಳ ತನಕ ಶೇ. 80 ರಷ್ಟು MoUಗಳು ಬರುವುದೇ ಇಲ್ಲ. ಏಕೆಂದರೆ, GIMನಲ್ಲಿ ಹೂಡಿಕೆ ಭರವಸೆ ನೀಡುವ ಬಂಡವಾಳಿಗರು ಹೂಡಿಕೆ ಮಾಡುವುದು ಅವರ ಲಾಭ ಖಾತರಿಯಾಗಿದ್ದರೆ ಮತ್ತು ಲಾಭದ ದರ ಹೆಚ್ಚಿದ್ದರೆ ಮಾತ್ರ. ಜಗತ್ತಿನ ಇತರೆಡೆಗಳಲ್ಲಿ ಇದಕ್ಕಿಂತ ಹೆಚ್ಚು ಲಾಭದ ಮತ್ತು ಕಾನೂನಿನ ತೊಡಕುಗಳು ಇಲ್ಲವಾದರೆ ಇಲ್ಲಿ ಹೂಡಿಕೆ ಮಾಡುವ ಭರವಸೆ ನೀಡಿದ್ದರೂ ಬೇರೆಡೆಗೆ ಹಾರುತ್ತವೆ.

ಅದಲ್ಲದೆ, ಇದೀಗ ಕೋವಿಡ್ ನಂತರದಲ್ಲಿ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತದ (Recession) ವಾತಾವರಣವಿದೆ. ದೇಶಿಯ ಮಾರುಕಟ್ಟೆಯಲ್ಲೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆಯ ಕುಸಿತವಿದೆ. ಏಕೆಂದರೆ ಜನರಲ್ಲಿ ಕೊಳ್ಳುವ ಶಕ್ತಿಯಿಲ್ಲ.

IMF ನೀಡಿರುವ ಮುನ್ಸೂಚನೆಯ ಪ್ರಕಾರ ಇನ್ನು ಎರಡು ಮೂರು ವರ್ಷಗಳು ಭಾರತವನ್ನೂ ಒಳಗೊಂಡಂತೆ ಎಲ್ಲಾ ದೇಶಗಳಲ್ಲೂ ಬೇಡಿಕೆಯ ಕುಸಿತ ಮತ್ತು ಅದರಿಂದಾಗಿ ಆರ್ಥಿಕ ಅನಾರೋಗ್ಯವಿರುತ್ತದೆ. ಅರ್ಥಾತ್ ಹೂಡಿಕೆಯ ಮೇಲೆ ಲಾಭವು ಖಾತರಿಯಲ್ಲ.

ಹೀಗಾಗಿ ಕೇವಲ ಲಾಭದ ದುರಾಸೆ ಮಾತ್ರ ಇರುವ ಈ ಹೂಡಿಕೆದಾರರು ಎಲ್ಲಿಯೂ ಉತ್ಸಾಹದಿಂದ ಹೂಡಿಕೆ ಮಾಡುತ್ತಿಲ್ಲ. ಭಾರತದಲ್ಲಂತೂ ಮೊನ್ನೆ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಸರ್ಕಾರವು ಎಷ್ಟೆಲ್ಲಾ ಉತ್ತೇಜನ ನೀಡಿದರೂ (PLI- Production Linked Incentives)ನಮ್ಮ ದೇಶದ ಬಂಡವಾಳಿಗರು ಹೂಡಿಕೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಈ ನಿರುತ್ಸಾಹದ ಛಾಯೆ ಈ ಬಾರಿಯ GIM ಮೇಲೂ ಬಿದ್ದಿರುವುದು ಸ್ಪಷ್ಟ. ಏಕೆಂದರೆ ಕನಿಷ್ಠ ಪಕ್ಷ ಕಳೆದ GIMಗಳಲ್ಲಿ 3 ಲಕ್ಷ ಕೋಟಿ, 7 ಲಕ್ಷ ಕೋಟಿ ಮತ್ತು 4 ಲಕ್ಷ ಕೋಟಿ ರೂ.ಗಳಷ್ಟು ಭರವಸೆಯಾದರೂ ಬಂದಿದ್ದವು.

ಆದರೆ ಈ ಬಾರಿ ಭರವಸೆ ಬಂದಿರುವುದೇ ಅವುಗಳ ಕಾಲು ಭಾಗ- ಕೇವಲ 1.5 ಲಕ್ಷ ಕೋಟಿ ಮಾತ್ರ. ಇದು ಇಂದು ಜಗತ್ತಿನಲ್ಲಿರುವ Investors Confidence – ಹೂಡಿಕೆದಾರರ ವಿಶ್ವಾಸಕ್ಕೆ ಒಂದು ಸಂಕೇತವಾಗಿದ್ದಲ್ಲಿ, ಈ ಬಾರಿಯ GIMನ conversion ದರ ಕೂಡ ಹಿಂದಿನ GIMಗಳ ಕಾಲು ಭಾಗ ಅರ್ಥಾತ್ ಶೇ. 5 ಕ್ಕಿಂತ ಜಾಸ್ತಿ ಆಗಲಾರದು. ಅಂದರೆ ಹೆಚ್ಚೆಂದರೆ 5-10 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆ! 1. 5 ಲಕ್ಷ ಕೋಟಿ ರೂ.ಗಳಲ್ಲ.

ಸುಳ್ಳು-3

ಹೇಳಿಕೆ – GIM ನಿಂದಾಗಿ 6 ಲಕ್ಷ ಉದ್ಯೋಗಳು ಸೃಷ್ಟಿಯಾಗುತ್ತದೆ.

ವಾಸ್ತವ: 6 ಲಕ್ಷವಿರಲಿ 6 ಸಾವಿರ ಉದ್ಯೋಗವೂ ಸೃಷ್ಟಿಯಾಗದು.

ಸರ್ಕಾರದ ಪ್ರಕಾರ, “GIM ನಿಂದಾಗಿ 5 ಲಕ್ಷ ಕೋಟಿ ಬಂಡವಾಳ ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಈಗ 9.82 ಲಕ್ಷ ಕೋಟಿಯಾಗಿದೆ. ಆದ್ದರಿಂದ ಮೊದಲು ಅಂದುಕೊಂಡಂತೆ GIMನಿಂದ 5 ಲಕ್ಷ ಉದ್ಯೋಗಗಳ ಬದಲಿಗೆ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.”

ಆದರೆ ಈಗಾಗಲೇ ನೋಡಿದಂತೆ GIMನಲ್ಲಿ ಹೂಡಿಕೆಯ ಭರವಸೆ ಬಂದಿರುವುದು 9.82 ಲಕ್ಷ ಕೋಟಿಯಲ್ಲ. ಕೇವಲ 1. 5 ಲಕ್ಷ ಕೋಟಿ. ಹಾಗೂ ಆರ್ಥಿಕ ಹಿಂದ್ಸರಿತದಿಂದಾಗಿ ಅದರ Conversion ಶೇ. 5-10ನ್ನು ಮೀರುವುದು ಕಷ್ಟ. ಅಂದರೆ ಹೆಚ್ಚೆಂದರೆ 5-10 ಸಾವಿರ ಕೋಟಿ ಹೂಡಿಕೆ.

ಹೀಗಾಗಿ ಸರಳ ಗಣಿತದ ಪ್ರಕಾರವೂ ಉದ್ಯೋಗ ಸೃಷ್ಟಿಯಾಗುವುದು ಕೆಲವು ಸಾವಿರಗಳನ್ನು ಮೀರುವುದಿಲ್ಲ. ಆದರೆ ಈ ಹೂಡಿಕೆಗಳು ಕೂಡ ಕಾರ್ಮಿಕರನ್ನು ಹೆಚ್ಚಾಗಿ ಕೇಳದ ಕ್ಷೇತ್ರದಲ್ಲಿ ಹೂಡಿಕೆಯಾಗುತ್ತದೆ. ಸರ್ಕಾರವು ಈ ಉದ್ದೇಶಕ್ಕೆ 50,000 ಎಕರೆ ರೈತರ ಜಮೀನನ್ನು ಕಸಿಯುವುದಾಗಿ ಹೇಳಿದೆ. ಇವತ್ತು ಒಂದು ಎಕರೆ ಜಮೀನಿನ ಮೇಲೆ ಆರೆಂಟು ಜನರ ಜೀವನೋಪಾಯ ನಡೆಯುತ್ತದೆ ಎಂದು ಲೆಕ್ಕ ಹಿಡಿದರೂ…

ಈ ಹೂಡಿಕೆಗಳು 2 ಲಕ್ಷಕ್ಕೂ ಹೆಚ್ಚು ರೈತಾಪಿಯ ಉದ್ಯೋಗ -ಜೀವನ ಕಸಿದು, ಕೆಲವು ಸಾವಿರ ಮೇಲ್ವರ್ಗದ ಸುಶಿಕ್ಷಿತ ತಂತ್ರಜ್ಞರಿಗೆ ಉದ್ಯೋಗ ಸೃಷ್ಟಿಸಬಹುದು. ಹೀಗಾಗಿ ಒಟ್ಟು ಲೆಕ್ಕದಲ್ಲಿ GIMಇಂದ ಉದ್ಯೋಗ ಸೃಷ್ಟಿಯಾಗುವುದಕ್ಕಿಂತ ನಷ್ಟವಾಗುವುದೇ ಹೆಚ್ಚು.

ಒಟ್ಟಾರೆಯಾಗಿ GIM ಎಂಬುದು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಬದಲಿಗೆ ಚುನಾವಣೆಗೆ ಮುನ್ನ ಬಿಜೆಪಿಯು ಜನರಲ್ಲಿ ಪ್ರಗತಿ-ಅಭಿವೃದ್ಧಿಯ ಭ್ರಾಂತಿ ಮೂಡಿಸುತ್ತದೆ. ಆದ್ದರಿಂದ ಈ GIM ಎಂಬುದು ತನ್ನ ಭ್ರಷ್ಟಾಚಾರ ಹಾಗೂ ತಾನು ಮೂಡಿಸಿರುವ ಸಾಮಾಜಿಕ ಅಸ್ಥಿರತೆ, ಆರ್ಥಿಕ ದುಸ್ಥಿತಿ, ನಿರುದ್ಯೋಗ ಇತ್ಯಾದಿಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರವು ನಡೆಸಿದ ಒಂದು ಚುನಾವಣಾ GIMMICK ಹೊರತು ಮತ್ತೇನು ಅಲ್ಲ ಎಂಬುದು ಸ್ಪಷ್ಟ, ಅಲ್ಲವೇ?

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಾವು ಕಚ್ಚಿದಾಗ ಗೋಡಂಬಿ ಮರದ ತೊಗಟೆ ತಿಂದರೆ ಸಾವಿನಿಂದ ಪಾರಾಗಬಹುದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights