ಫ್ಯಾಕ್ಟ್‌ಚೆಕ್: ಗುಂಡಿನ ದಾಳಿಗೆ ಒಳಗಾಗಿದ್ದ ಇಮ್ರಾನ್ ಖಾನ್ ಮೂರೇ ದಿನದಲ್ಲಿ ಗುಣಮುಖರಾದರೆ?

ವಜೀರಾಬಾದ್‌ನ ಅಲ್ಲಾ ಹೋ ಚೌಕ್ ಬಳಿ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರ ಕಂಟೈನರ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಇಮ್ರಾನ್ ಖಾನ್ ಬಲಗಾಲಿಗೆ ಗುಂಡು ತಗುಲಿತ್ತು, ತೀವ್ರವಾಗಿ ಗಾಯಗೊಂಡಿದ್ದ ಇಮ್ರಾನ್‌ ಖಾನ್‌ನನ್ನು ಬಿಗಿ ಭದ್ರತೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಇಮ್ರಾನ್ ಖಾನ್‌ಗೆ ಸಂಬಂಧಿಸಿದಂತೆ ಕೆಲವು ವಿಡಿಯೋಗಳು ಪ್ರಸಾರವಾಗುತ್ತಿದ್ದು, ವೈರಲ್ ವೀಡಿಯೋದಲ್ಲಿ ಇಮ್ರಾನ್ ಖಾನ್ ಆಸ್ಪತ್ರೆಯ ಕಾರಿಡಾರ್‌ನಲ್ಲಿ ನೀಲಿ ಏಪ್ರನ್‌ನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮತ್ತು  ಹಸಿರು ಸಮವಸ್ತ್ರದಲ್ಲಿ ಆಸ್ಪತ್ರೆಯ ವೈದ್ಯರು ಖಾನ್ ಅವರನ್ನು ಸುತ್ತುವರೆದಿದ್ದಾರೆ. ಇಲ್ಲಿ, ಮಾಜಿ ಕ್ರಿಕೆಟ್ ತಾರೆ ಸರಾಗವಾಗಿ ನಡೆಯುವುದು ಮತ್ತು ವೈದ್ಯರೊಂದಿಗೆ ಹರಟೆ ಹೊಡೆಯುವುದು ಕಂಡುಬರುತ್ತದೆ. ಹಾಗಿದ್ದರೆ ಮೂರೇ ದಿನದಲ್ಲಿ ಇಮ್ರಾನ್ ಖಾನ್ ಗುಣಮುಖರಾಗಿದ್ದಾರೆಯೇ ?  ಎನ್ನುವ ಪ್ರಶ್ನೆಯೊಂದಿಗೆ ವಿಡಿಯೋ ದೃಶ್ಯಾವಳಿಗಳನ್ನು ಹಂಚಿಕೊಳ್ಳಲಾಗಿದೆ.

“ಇಮ್ರಾನ್ ಖಾನ್‌ರವರು ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ನಟನೆಯನ್ನು ಮೀರಿಸುತ್ತಾರೆ. ಎರಡು ಕಾಲಿಗೆ ಪ್ಲಾಸ್ಟರ್ ಹಾಕಿದಾಗ ನಾಲ್ಕು ಮಾತ್ರೆ ತಿಂದರೂ ಮನುಷ್ಯ ಹೇಗೆ ನಡೆಯುತ್ತಾನೆ ಸತ್ಯ ಮರೆಮಾಚದಿದ್ದರೂ ಸುಳ್ಳಿನ ಆಯುಷ್ಯ ಚಿಕ್ಕದಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಈ 11 ಸೆಕೆಂಡುಗಳ ಈ ವೈರಲ್ ಕ್ಲಿಪ್‌ಅನ್ನು ಹಂಚಿಕೊಂಡು, ಬುಲೆಟ್‌ಗಳಿಂದ ದಾಳಿಗೊಳಗಾದ ಒಬ್ಬ ವ್ಯಕ್ತಿ ಮೂರೇ ದಿನದಲ್ಲಿ ಇಷ್ಟು ಸಲೀಸಾಗಿ ನಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಸೆಲೆಬ್ರಿಟಿಗಳಿಗಿಂತ ಉತ್ತಮವಾಗಿ ನಟಿಸುತ್ತಾರೆ  ಎಂದು ಇಮ್ರಾನ್ ಅವರನ್ನು ಅಪಹಾಸ್ಯ ಮಾಡಿದೆ. ಈ ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಇಮ್ರಾನ್‌ ಖಾನ್ ಅವರ ವಿಡಿಯೋದ ಕೀ ಫ್ರೇಮ್‌ಗಳ ಸಹಾಯದಿಂದ ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಇಮ್ರಾನ್ ಖಾನ್ ಕ್ಯಾನ್ಸರ್ ಅಪೀಲ್ ಹೆಸರಿನ ಯೂಟ್ಯೂಬ್ ಚಾನೆಲ್ ಈ ವೀಡಿಯೊವನ್ನು ಆಗಸ್ಟ್ 12, 2021 ರಂದು ಅಪ್‌ಲೋಡ್ ಮಾಡಿದ್ದು, ವೀಡಿಯೊ ಒಂದು ವರ್ಷಕ್ಕಿಂತ ಹಳೆಯದು ಎಂದು ಸ್ಪಷ್ಟಪಡಿಸಿದೆ.

“ಹೊಸದಾಗಿ ಪೂರ್ಣಗೊಂಡ ಆಪರೇಟಿಂಗ್ ರೂಮ್ ಸೂಟ್ ಮತ್ತು ತೀವ್ರ ನಿಗಾ ಘಟಕವನ್ನು (ಐಸಿಯು) ಉದ್ಘಾಟಿಸಲು ಇಂದು @SKMCH ಪೇಶಾವರಕ್ಕೆ ಭೇಟಿ ನೀಡಿದ್ದು ಸಂತೋಷವಾಗಿದೆ. ಎಂದು ಇಮ್ರಾನ್ ಖಾನ್ ಅವರು ಅದೇ ದಿನದಂದ ಅವರು ಭೇಟಿ ನೀಡಿದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ಗುಂಡಿನ ದಾಳಿಗೊಳಗಾಗಿದ್ದ ಇಮ್ರಾನ್ ಖಾನ್ ಆಸ್ಪತ್ರೆಗೆ ದಾಖಲಾಗಿದ್ದ ಕೆಲವು ಪೋಟೋಗಳನ್ನು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಪ್ರಕಟಿಸಿದ್ದು, ಅಲ್ಲಿ ಅವರು ಬಲಗಾಲಿಗೆ ಬ್ಯಾಂಡೇಜ್‌ನೊಂದಿಗೆ ಗಾಲಿಕುರ್ಚಿಯಲ್ಲಿ ಕುಳಿತಿರುವುದನ್ನು ಕಾಣಬಹುದು. ಪಾಕಿಸ್ತಾನದ ಲಾಹೋರ್‌ನಲ್ಲಿರುವ ಶೌಕತ್ ಖಾನಮ್ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ರಾಯಿಟರ್ಸ್ ಈ ಫೋಟೋವನ್ನು ಸೆರೆಹಿಡಿದಿದೆ ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೋ ಹಳೆಯದಾಗಿದ್ದು, ಗುಂಡಿನ ದಾಳಿಯಿಂದಾಗಿ ಇಮ್ರಾನ್ ಖಾನ್ ಕಾಲಿಗೆ ಪೆಟ್ಟಾಗಿದ್ದು, ಈಗಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಾಕ್ ವಿರುದ್ದ ಜಿಂಬಾಬ್ವೆ ಜಯಗಳಿಸಿದಾಗ ‘ಜೈ ಶ್ರೀ ರಾಮ್ ಬೋಲೇಗಾ’ ಹಾಡಿಗೆ ನೃತ್ಯ ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights