ಫ್ಯಾಕ್ಟ್‌ಚೆಕ್ : ದೆಹಲಿಯ AAP ಆಡಳಿತದ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೀನಾಯವಾಗಿದೆಯೇ?

ದೆಹಲಿ ಶಿಕ್ಷಣ ಸಚಿವೆ ಅತಿಶಿ ಮರ್ಲೆನಾ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿನೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮನೀಶ್ ಸಿಸೋಡಿಯಾ ಬಂಧನದ ನಂತರ, ಅತಿಶಿ ಮರ್ಲೆನಾ ದೆಹಲಿಯ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅತಿಶಿ ಮರ್ಲೆನಾ ಇತ್ತೀಚೆಗೆ ಶಾಲೆಯೊಂದಕ್ಕೆ ಅನಿರೀಕ್ಷಿತವಾಗಿ ಭೇಟಿ  ನೀಡಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಶಿಥಿಲಗೊಂಡ ಶಾಲೆಯನ್ನು ಪರಿಶೀಲಿಸುತ್ತಿರುವ ಸಚಿವೆ ಅತಿಶಿ, ಶಾಲೆಯ ದುರವಸ್ಥೆಗೆ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಶಾಲೆಯನ್ನು ದೆಹಲಿ ಸರ್ಕಾರ ನಡೆಸುತ್ತಿದೆ ಮತ್ತು ಅತಿಶಿ ಅವರು ಅರವಿಂದ್ ಕೇಜ್ರಿವಾಲ್ ನೇತೃತ್ವದ AAP ಸರ್ಕಾರದ ಸಚಿವೆ ಎಂಬುದನ್ನು ಮರೆತು “ತಮ್ಮದೇ ಸರ್ಕಾರದ ಆಡಳಿತದ ವೈಪಲ್ಯವನ್ನು ಬಹಿರಂಗಪಡಿಸಿದ್ದಾರೆ” ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಆಮ್ ಆದ್ಮಿ ಪಕ್ಷ (AAP) ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಯನ್ನು ಸಾಧಿಸಿತ್ತು ಎಂಬ ವರದಿಗಳು ಕೇಳಿಬಂದ ಹಿನ್ನಲೆಯಲ್ಲಿ AAP ಸರ್ಕಾರದ ಸಾಧನೆಯನ್ನು ಪ್ರಶ್ನಿಸುವ ಶೀರ್ಷಿಕೆಗಳೊಂದಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮತ್ತು BJP ಬೆಂಬಲಿಗರು ಈ ಪ್ರತಿಪಾದನೆಯನ್ನು ಮಾಡುತ್ತಿದ್ದಾರೆ.

ಅಲ್ಲದೆ ಈ ವಿಡಿಯೋವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಸಹ ಟ್ವೀಟ್ ಮಾಡುತ್ತ “ದೆಹಲಿಯ ಶಿಕ್ಷಣ ಸಚಿವೆ ಅತಿಶಿ ಅವರು ತಮ್ಮದೇ ಸರ್ಕಾರ ನಡೆಸುತ್ತಿರುವ ಶಾಲೆಗಳ ಕಳಪೆ ಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

ದೆಹಲಿ ಶಾಲೆಗಳ ಪರಿಸ್ಥಿತಿಗಳನ್ನು ಒಳಗೊಂಡ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇದನ್ನು ಪರಿಶೀಲಿಸಿದಾಗ, ಆಮ್ ಆದ್ಮಿ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಸಂಪೂರ್ಣ ವೀಡಿಯೊವನ್ನು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ವಿಡಿಯೋವನ್ನು ಏಪ್ರಿಲ್ 10, 2023 ರಂದು ಅಪ್‌ಲೋಡ್ ಮಾಡಲಾಗಿದೆ. ಮಾಹಿತಿಯ ಪ್ರಕಾರ, ದೆಹಲಿ ಶಿಕ್ಷಣ ಸಚಿವ ಅತಿಶಿ ಮರ್ಲೆನಾ ಮತ್ತು ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಅಡಿಯಲ್ಲಿ ಶಾಲೆಯನ್ನು ಪರಿಶೀಲಿಸಲು ವಜೀರಾಬಾದ್ ಗ್ರಾಮಕ್ಕೆ ಭೇಟಿ ನೀಡಿದ್ದರು. ಶಾಲೆಯ ಕಳಪೆ ಮೂಲಸೌಕರ್ಯ ಮತ್ತು ನಿರ್ವಹಣೆಗಾಗಿ ಅವರು ಅಧಿಕಾರಿಗಳನ್ನು ನಿಂದಿಸುವುದನ್ನು ವೀಡಿಯೊದಲ್ಲಿ ಕಾಣಬಹುದು.

ಅತಿಶಿ ಮರ್ಲೆನಾ ಭೇಟಿ ನೀಡಿದ ಶಾಲೆಯನ್ನು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ನಡೆಸುತ್ತಿದೆಯೇ ಹೊರತು ದೆಹಲಿ ಸರ್ಕಾರವಲ್ಲ. ಡಿಸೆಂಬರ್ 2022 ರಲ್ಲಿ ನಡೆದ MCD ಚುನಾವಣೆಯಲ್ಲಿ AAP ಗೆದ್ದಿತು ಮತ್ತು ಶೆಲ್ಲಿ ಒಬೆರಾಯ್ ನಗರದ ಮೇಯರ್ ಆದರು. ಈ ತಪಾಸಣೆ ವೇಳೆ ಒಬೆರಾಯ್ ಕೂಡ ಇದ್ದರು. ಈ ಶಾಲೆಗೆ ಭೇಟಿ ನೀಡಿದ ನಂತರ ಅತಿಶಿ ಮಾತನಾಡಿ, ಎಂಸಿಡಿಯಲ್ಲಿ BJPಯು ಹದಿನೈದು ವರ್ಷಗಳ ಹಿಂದಿನ ಪರಂಪರೆಯೇ ಶಾಲೆಯ ದುಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ದೆಹಲಿ ಸರ್ಕಾರವು  ನಿರ್ದಿಷ್ಟವಾದ ಕರ್ತವ್ಯಗಳನ್ನು ಹೊಂದಿದ್ದು ಅದರ ಪ್ರಕಾರ  ಶಿಕ್ಷಣ ಕ್ಷೇತ್ರವೂ ಒಂದು. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ MCD ಪ್ರಾಥಮಿಕ ಶಾಲೆಗಳನ್ನು ನೋಡಿಕೊಳ್ಳುವ ಜವಬ್ದಾರಿಯನ್ನು ಹೊಂದಿದ್ದರೆ, ದೆಹಲಿ ಸರ್ಕಾರವು ಉನ್ನತ ಮತ್ತು ಮಾಧ್ಯಮಿಕ ಶಾಲೆಗಳು ಮತ್ತು ಕಾಲೇಜುಗಳನ್ನು ನೋಡಿಕೊಳ್ಳತ್ತದೆ.

2022ರ ಡಿಸೆಂಬರ್‌ನಲ್ಲಿ ದೆಹಲಿಯ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ AAP ಅಧಿಕಾರಕ್ಕೆ ಬರುವ ಮೊದಲು, BJP ಹದಿನೈದು ವರ್ಷಗಳ ಕಾಲ ಅಧಿಕಾರದಲ್ಲಿತ್ತು. 2023ರ ಮಾರ್ಚ್‌ನಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು MCD ನಡೆಸುತ್ತಿರುವ ಶಾಲೆಗಳನ್ನು ಅಭಿವೃದ್ಧಿಪಡಿಸುವತ್ತ ತಮ್ಮ ಪಕ್ಷವು ಗಮನಹರಿಸಲಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರು, ಕಳೆದ ಎಂಟು ವರ್ಷಗಳಿಂದ (ಇಲ್ಲಿ ಮತ್ತು ಇಲ್ಲಿ) ದೆಹಲಿ ಸರ್ಕಾರವು MCD ನಡೆಸುತ್ತಿರುವ ಶಾಲೆಗಳಿಗೆ ಹಣ ನೀಡದ ಕಾರಣ ಕೆಟ್ಟ ಸ್ಥಿತಿಯಲ್ಲಿದೆ ಎಂದು ಆರೋಪಿಸಿದರು.

ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿ ಶಿಕ್ಷಣ ಸಚಿವೆ ಅತಿಶಿ ಮರ್ಲೆನಾ ಅವರು ಭೇಟಿ ನೀಡಿ ಪರೀಕ್ಷಿಸಿದ ಶಾಲೆಯನ್ನು ದೆಹಲಿ ಸರ್ಕಾರ ನಡೆಸುತ್ತಿಲ್ಲ. ಅದನ್ನು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ MCD ನಿರ್ವಹಿಸುತ್ತಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ BJP ಮತ್ತು ಕಾಂಗ್ರೆಸ್ ಮಾಡಿರುವ ಆರೋಪ ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಅಂಬೇಡ್ಕರ್ ಜಯಂತಿ ಮೆರವಣಿಗೆ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights