ಫ್ಯಾಕ್ಟ್ಚೆಕ್ : ಅಂಬೇಡ್ಕರ್ ಜಯಂತಿ ಮೆರವಣಿಗೆ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದು ನಿಜವೇ?
ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ಮೆರವಣಿಗೆಗೆ ಅಡ್ಡಿಪಡಿಸಿದ ಮುಸ್ಲಿಮರು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪ್ರತಿಪಾದಿಸಿ ಇಟ್ಟಿಗೆ ಮತ್ತು ಕಲ್ಲು ತೂರಾಟದ ದೃಶ್ಯಾವಳಿಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಕಲ್ಲು ತೂರಾಟ ನಡೆದು ನೂಕುನುಗ್ಗಲು ಉಂಟಾಗಿ ಮೆರವಣಿಗೆ ಸ್ಥಗಿತಗೊಂಡಿತು. ಎರಡೂ ಕಡೆಯಿಂದ ಗಾಜಿನ ಬಾಟಲಿಗಳನ್ನು ಎಸೆಯಲಾಗಿದ್ದು, 11 ಮಂದಿ ಗಾಯಗೊಂಡಿದ್ದು, ಕೆಲವು ಪೊಲೀಸರಿಗೂ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ಹಂಚಿಕೊಳ್ಳಲಾಗಿದೆ.
ನೀಲಿ ಧ್ವಜ ಮತ್ತು ನೀಲಿ ಶಾಲುಗಳನ್ನು ಧರಿಸಿ ಮೆರವಣಿಗೆಯಲ್ಲಿ ಸಾಗುತ್ತಿರುವ ಗುಂಪನ್ನು ಪೊಲೀಸರು ಸುತ್ತಿವರೆದು ಮಾತುಕತೆ ನಡೆಸುತ್ತಿದ್ದರೆ ಮತ್ತೊಂದು ಗುಂಪು ಈ ಮೆರವಣಿಗೆ ಕಡೆಗೆ ಕಲ್ಲು ತೂರಾಟ ನಡೆಸುತ್ತಿರುವುದನ್ನು ಕಾಣಬುಹುದು.
ಹಾಗಿದ್ದರೆ ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಮುಸ್ಲಿಮರು ದಾಳಿ ನಡೆಸಿರುವುದು ನಿಜವೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಪೋಸ್ಟ್ಅನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಟೈಮ್ಸ್ ಆಫ್ ಇಂಡಿಯಾ ಮತ್ತು ಟಿವಿ 9 ವರದಿಗಳು ಲಭ್ಯವಾಗಿದೆ. ವರದಿಗಳ ಪ್ರಕಾರ ಘಟನೆಯು 14 ಏಪ್ರಿಲ್ 2023 ರಂದು ಪೊಲೀಸ್ ಠಾಣೆ ವ್ಯಾಪ್ತಿಯ ಜೈತ್ನ ಮಥುರಾದ ಭಾರ್ತಿಯಾ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಸಂಭವಿಸಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಮಥುರಾದ ಭಾರ್ತಿಯಾ ಗ್ರಾಮದಲ್ಲಿ ಜಾಟವ್ ಸಮುದಾಯದ ಗಂಪು ಅಂಬೇಡ್ಕರ್ ಜಯಂತಿ ಮತ್ತು ಮೆರವಣಿಗೆಯನ್ನು ಮಾಡಲು ನಿರ್ಧರಿಸಿ 14 ಏಪ್ರಿಲ್ 2023 ರಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು, ನೀಲಿ ಬಾವುಟ ಮತ್ತು ನೀಲಿ ಶಾಲುಗಳನ್ನು ಹಿಡಿದು ವೆರವಣಿಗೆ ಹೋಗುವ ವೇಳೆ, ಠಾಕೂರ್ ಸಮುದಾಯದವರು ಮೆರವಣಿಗೆ ಮಾಡದಂತೆ ತಕರಾರು ತೆಗೆದಿದ್ದಾರೆ. ಇದೇ ಸಂದರ್ಭದಲ್ಲಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆಗೆ ತಿರುಗಿದೆ. ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ವೇಳೆ ಹಲವರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ.
ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ದಾಖಲಿಸಿರುವ FIR ನಲ್ಲಿ ಯಾವುದೇ ಮುಸ್ಲಿಂ ಆರೋಪಿಯ ಹೆಸರು ದಾಖಲಾಗಿಲ್ಲ.

ಘಟನೆ ವೇಳೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ಫ್ಯಾಕ್ಟ್ಲಿ ಫ್ಯಾಕ್ಟ್ಚೆಕ್ ತಂಡ ಜೈಟ್ ಪೊಲೀಸ್ ಠಾಣೆಯ ಎಸ್ಎಚ್ಒ ಅಜಯ್ ವರ್ಮಾ ಅವರೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹಿಸಿದ್ದು, ಈ ಕಲ್ಲು ತೂರಾಟದ ಘಟನೆಯಲ್ಲಿ ಭಾಗಿಯಾಗಿರುವವರು ಯಾರೂ ಮುಸ್ಲಿಮರಲ್ಲ ಎಂದು SHO ಅಜಯ್ ವರ್ಮಾ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದುರುದ್ದೇಶದಿಂದ ವಿಡಿಯೋವನ್ನು ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 14 ಏಪ್ರಿಲ್ 2023 ರಂದು ಉತ್ತರ ಪ್ರದೇಶದ ಮಥುರಾದ ಭಾರ್ತಿಯಾ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಜನರ ಮೇಲೆ ಕಲ್ಲು ತೂರಲಾಯಿತು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡು, ಕಲ್ಲು ತೂರಾಟ ನಡೆಸಿದವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ ಆದರೆ FIRನಲ್ಲಿ ಹೆಸರಿಸಲಾದ ಪಟ್ಟಿಯಲ್ಲಿ ಯಾವುದೇ ಮುಸ್ಲಿಮರು ಇಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ಹಿನ್ನಲೆಯಲ್ಲಿ ಹಿಂದೂ ಮುಸ್ಲಿಂ ಎಂಬ ಸುಳ್ಳು ಆಯಾಮವನ್ನು ನೀಡಲು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆಂದು ಸುಳ್ಳು ಆರೋಪ ಮಾಡಿದ BJP!

