ತಮಿಳುನಾಡು ಚುನಾವಣೆ: ಕೇವಲ ಒಂದು ಮತ ಪಡೆದ ಅಭ್ಯರ್ಥಿ; ‘ಬಿಜೆಪಿ ಸಿಂಗಲ್‌ ಓಟ್ ಪಾರ್ಟಿ’ ಎಂದು ಟ್ರೋಲ್‌!

ತಮಿಳುನಾಡು ಸ್ಥಳೀಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಪದಾಧಿಕಾರಿಯೊಬ್ಬರು ಕೇವಲ ಒಂದು ಮತವನ್ನು ಪಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಅಗುತ್ತಿದ್ದಾರೆ.

ಬಿಜೆಪಿ ಮುಖಂಡ ಡಿ.ಕಾರ್ತಿಕ್‌ ಎಂಬುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಕೇವಲ ಒಂದು ಮತವನ್ನು ಮಾತ್ರ ಪಡೆದುಕೊಂಡಿದ್ದಾರೆ.

ಆಡಳಿತಾರೂಢ ಡಿಎಂಕೆ ಪಕ್ಷದ ಕಾರ್ಯ ಕರ್ತರು ಬಿಜೆಪಿಯನ್ನು ಟ್ರೋಲ್‌ ಮಾಡುತ್ತಿದ್ದು, ಬಿಜೆಪಿ ‘ಏಕ ಮತ ಪಕ್ಷ’ ಎಂದು ಅಣಕಿಸಲಾಗುತ್ತಿದೆ. “ಸಿಂಗಲ್‌ ಓಟ್‌ ಪಾರ್ಟಿ” ಎಂಬ ಹ್ಯಾಷ್‌ಟ್ಯಾಗ್‌ ಇಂಗ್ಲಿಷ್ ಮತ್ತು ತಮಿಳಿನಲ್ಲಿ ಟ್ರೆಂಡ್‌ ಅಗಿವೆ.

ಈ ವರ್ಷದ ಆರಂಭದಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ ಕೇವಲ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು. ಅದನ್ನೂ ಉಲ್ಲೇಖಿಸಿ ತಮಿಳರು ಬಿಜೆಪಿಯನ್ನು ಟ್ರೋಲ್‌ ಮಾಡುತ್ತಿದ್ದಾರೆ.

ಅಲ್ಲದೆ, ಬಿಜೆಪಿ ಕಾರ್ತಿಕ್ ತನ್ನ ಐದು ಕುಟುಂಬ ಸದಸ್ಯರ ಮತಗಳನ್ನು ಕೂಡ ಪಡೆದಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಲಾಗುತ್ತಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾರ್ತಿಕ್‌, ನಾನು 9 ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದೆ, ಆದರೆ, ನಮ್ಮ ಕುಟುಂಬ ವಾಸಿಸುತ್ತಿರುವುದು 4ನೇ ವಾರ್ಡ್‌ನಲ್ಲಿ. ಹೀಗಾಗಿ, ನಮ್ಮ ಎಲ್ಲಾ ಮತಗಳು 4ನೇ ವಾರ್ಡ್‌ನಲ್ಲಿವೆ. ನಾನಗೆ ಬಿಜೆಪಿ ಟಿಕೆಟ್‌ ನೀಡಲಿಲ್ಲ. ಹಾಗಾಗಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ‘ಕಾರ್’ ಚಿಹ್ನೆಯನ್ನು ಬಳಸಿಕೊಂಡು ಸ್ಪರ್ಧಿಸಿದ್ದೆ. ನಮ್ಮ ಮಿತ್ರ ಪಕ್ಷ ಎಐಎಡಿಎಂಕೆ 9ನೇ ವಾರ್ಡ್‌ನಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಹಾಗಾಗಿ ನಾನು ಬಿಜೆಪಿಯಿಂದ ಸ್ಪರ್ಧಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ನಾನು ನಾಲ್ಕನೇ ವಾರ್ಡ್‌ನಲ್ಲಿ ವಾಸಿಸುತ್ತಿದ್ದರಿಂದ 09ನೇ ವಾರ್ಡ್‌ನಲ್ಲಿದ್ದ ಜನರಿಗೆ ನನ್ನ ಪರಿಚಯವಿರಲಿಲ್ಲ. ಅಲ್ಲದೆ, ನಾನು ಹೆಚ್ಚಿನದಾಗಿ ಪ್ರಚಾರವನ್ನೂ ಮಾಡಲಿಲ್ಲ. ಚುನಾವಣೆಯ ಸಂದರ್ಭದಲ್ಲಿ ತನ್ನ ತಾಯಿ ಅಪಘಾತಕ್ಕೊಳಗಾದ ಕಾರಣ ಕೆಲವೇ ಗಂಟೆಗಳ ಕಾಲ ಪ್ರಚಾರ ಮಾಡಿದ್ದೆನು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

“ಪ್ರಚಾರಕ್ಕಾಗಿ ನಾನು ಸುಮಾರು 1000 ಕರಪತ್ರಗಳನ್ನು ಮುದ್ರಿಸಿದ್ದೆ, ಅವುಗಳಲ್ಲಿ 900ಕ್ಕಿಂತಲೂ ಹೆಚ್ಚು ನನ್ನ ಮನೆಯಲ್ಲಿ ಉಳಿದಿವೆ. ಏಕೆಂದರೆ ಆ ಸಮಯದಲ್ಲಿ ನಾನು ನನ್ನ ತಾಯಿಯನ್ನು ನೋಡಿಕೊಳ್ಳಬೇಕಾಗಿತ್ತು. ಅದಕ್ಕಾಗಿ, ಪ್ರಚಾರವನ್ನು ಮಾಡಲಾಗಲಿಲ್ಲ”ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಬ್ರಿಟಿಷರ ಮುಂದೆ ಸಾವರ್ಕರ್ ಎಂದಿಗೂ ಕ್ಷಮೆ ಕೇಳಿಲ್ಲ: ಸಂಜಯ್ ರಾವತ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights