ಫ್ಯಾಕ್ಟ್‌ಚೆಕ್: ಕಿಟಕಿಯಿಂದ KSRTC ಬಸ್ ಹತ್ತಲು ಹೋದ ಮಹಿಳೆಯ ಕೈ ತುಂಡಾಗಿದೆ ಎಂಬುದು ಸುಳ್ಳು! ವಾಸ್ತವವೇನು?

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯ ನಂತರ ರಾಜ್ಯದ ಹೆಣ್ಣು ಮಕ್ಕಳು ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಉಚಿತ ಪ್ರಯಾಣ ಇರುವುದರಿಂದ ಮಹಿಳೆಯರು ತಮಗಿಷ್ಟವಾದ ಸ್ಥಳಗಳಿಗೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಇದರ ಜೊತೆಯಲ್ಲೆ ಉಚಿತ ಪ್ರಯಾಣದಿಂದ ಸಾಕಷ್ಟ ಸಮಸ್ಯೆಗಳಾಗುತ್ತಿವೆ ಎಂಬ ವಾದಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಉಚಿತ ಪ್ರಯಾಣದಿಂದ ಬಸ್ಸುಗಳು ತುಂಬಿ ತುಳುಕುತ್ತಿದ್ದು ಮಹಿಳೆಯರು ಅನಾವಶ್ಯಕವಾಗಿ ಓಡಾಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದೇ ವೇಳೆ 25 ಜೂನ್ 2023 (ಭಾನುವಾರ) ರಂದು KSRTC ಬಸ್ ನಲ್ಲಿ ಪ್ರಯಾಣಿಸಿತ್ತಿದ್ದ ಮಹಿಳೆಯೊಬ್ಬರ ಕೈ ತುಂಡಾಗಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮಹಿಳಾ ಪ್ರಯಾಣಿಕರು ಹೆಚ್ಚಾಗಿ ಇದ್ದರಿಂದ ಮಹಿಳೆಯರು ಕಿಕಟಿಕಿಯ ಮೂಲಕ ಬಸ್ ಹತ್ತಲು ಹೋಗಿ ಈ ಅವಘಡ ನಡೆದಿದೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

https://twitter.com/YallappaPs/status/1672965121986166784

“ಮಂಡ್ಯದ ಹತ್ತಿರ ಹುಲ್ಲೀನಹಳ್ಳಿಯಲ್ಲಿ KSRTC ಬಸ್ಸಿಗೆ ಜನ ಹತ್ತುವಾಗ ಮಹಿಳೆಯರ ಸಂಖ್ಯೆ ಹೆಚ್ಚಿದ್ದರಿಂದ ಕಿಟಿಕಿಯ ಮೂಲಕ ಹತ್ತಲು ಹೋಗಿ ಕೈ ತುಂಡಾಗಿರುವ ಘಟನೆ, ಮಹಿಳೆಯರಿಗೆ ಪ್ರೀ ಬಸ್ಸ್ ಪ್ರಯಾಣದ ಗಿಫ್ಟ್. ಇದೆಲ್ಲಾ ಬೇಕಿತ್ತಾ ಮಾನ್ಯ ಮುಖ್ಯಮಂತ್ರಿಗಳೆ, ದಯವಿಟ್ಟು ಈ ಯೋಜನೆಯನ್ನು ತಿದ್ದುಪಡಿ ಮಾಡಿಬೇಕಾಗಿ ವಿನಂತಿ” ಎಂಬ ಪೋಸ್ಟ್‌ಅನ್ನು ಯಲ್ಲಪ್ಪ ಎಂಬ ಟ್ವಿಟರ್ ಬಳಕೆದಾರರು ವಿಡಿಯೋದೊಂದಿಗೆ ಹಂಚಿಕೊಂಡಿದ್ದಾರೆ.

ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗಳಲ್ಲಿ ಈ ವಿಡಿಯೋವನ್ನು ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳುವ ಮೂಲಕ ಉಚಿತ ಪ್ರಯಾಣದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂ ವಾಟ್ಸಾಪ್‌ ಗೆ ಈ ವೈರಲ್ ವಿಡಿಯೋವನ್ನು ಹಂಚಿಕೊಂಡು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಟ್ವಿಟರ್, ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ವೈರಲ್  ಆಗಿರುವ ಮಹಿಳೆಯ ಕೈ ತುಂಡಾಗಿರುವ ವಿಡಿಯೋ ಪೋಸ್ಟ್‌ಅನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ, ಮಹಿಳೆಯ ಕೈ ತುಂಡಾದ ಘಟನೆಗೆ ಸಂಬಂಧಿಸಿದಂತೆ KSRTC ಅಫಿಶಿಯಲ್ ಟ್ವಿಟರ್ ಅಕೌಂಟ್‌ನಿಂದ ಹಂಚಿಕೊಳ್ಳಲಾದ ಪೋಸ್ಟ್‌ ಲಭ್ಯವಾಗಿದೆ. ಈ ಪೋಸ್ಟ್‌ ಪ್ರಕಾರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದೊಂದಿಗೆ ಮಾಡಲಾದ ಪ್ರತಿಪಾದನೆ ಸುಳ್ಳು ಎಂದು ಸಾರಿಗೆ ನಿಗಮವು ಸ್ಪಷ್ಟನೆ ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಬಸ್ ನಲ್ಲಿ ಕಿಟಕಿ ಮೂಲಕ ಹತ್ತುವಾಗ ನಡೆದಿರುವ ಘಟನೆ ಎಂದು ಬಿಂಬಿಸಿ ಅಪಘಾತದ ವಿಡಿಯೋವನ್ನು ತಪ್ಪಾಗಿ ತೋರಿಸುತ್ತಿರುವ ಬಗ್ಗೆ ಸ್ಪಷ್ಟೀಕರಣ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದೆ.

ಸಾರಿಗೆ ನಿಗಮ ನೀಡಿರುವ ಸ್ಪಷ್ಟನೆ :

ದಿನಾಂಕ 18-6-2023 ರಂದು ಕ.ರಾ.ರ.ಸಾ.ನಿಗಮ, ಚಾಮರಾಜನಗರ ವಿಭಾಗದ ನಂಜನಗೂಡು ಘಟಕದ ವಾಹನ ಸಂಖ್ಯೆ KA-10-F-151 ಅನುಸೂಚಿ ಸಂಖ್ಯೆ 34ರಲ್ಲಿ ನಂಜನಗೂಡಿನಿಂದ ಟಿ. ನರಸೀಪುರಕ್ಕೆ ಕಾರ್ಯಾಚರನೆ ಮಾಡುತ್ತಿರುವಾಗ, ಮಧ್ಯಾಹ್ನ ಸುಮಾರು 1.45ರಲ್ಲಿ ಬಸವರಾಜಪುರ ಹತ್ತಿರ, ಎದುರು ದಿಕ್ಕಿನಿಂದ ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಬಂದ ಲಾರಿ ಸಂಖ್ಯೆ TN-77-Q-8735 ಯ ಚಾಲಕನು KSRTC ಬಸ್‌ನ ಬಲ ಹಿಂಬದಿ ಕಿಟಕಿಗೆ ಢಿಕ್ಕಿ ಹೊಡೆದ ಪರಿಣಾಮ, ಕಿಟಕಿಯ ಸೀಟ್‌ನಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರಿಗೆ ತೀವ್ರತರವಾದ ಗಾಯಗಳಾಗಿರುತ್ತವೆ, ಹೆಚ್‌.ಡಿ.ಕೋಟೆ(ತಾ) ಮಾಗುಡಿಲು ಶ್ರೀಮತಿ ಶಾಂತ(33) ಎಂಬ ಮಹಿಳೆಯ ಬಲಗೈ ತುಂಡಾಗಿದೆ. ಮತ್ತು ನಂಹಜನಗೂಡಿನ ಹುಲ್ಲಳ್ಳಿ ರಾಜಮ್ಮ(50) ಎಂಬ ಮಹಿಳೆಗೆ ಬಲಗೈಗೆ ತೀವ್ರ ಪೆಟ್ಟಾಗಿರುತ್ತದೆ, ತಕ್ಷಣವೇ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ನಂಜನಗೂಡು ಸರ್ಕಾರಿ ಆಸ್ಪತ್ರೆ ಮತ್ತು ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಉತ್ತಮ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಲಾರಿ ಚಾಲಕನ ವಿರುದ್ದ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಗಾಯಾಳುಗಳ ಚಿಕಿತ್ಸೆಯ ವೆಚ್ಚವನ್ನು ನಿಗಮವು ಭರಿಸಲಿದೆ ಎಂದು ತಿಳಿಸಲಾಗಿದೆ. ಆದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ಮಹಿಳೆಯರು ಕಿಟಕಿಯ ಮೂಲಕ ಬಸ್ಸನ್ನು ಹತ್ತುವಾಗ ಈ ಘಟನೆ ನಡೆದಿದೆ ಎಂಬ ಪ್ರತಿಪಾದನೆ ಸುಳ್ಳು ಎಂಬುದನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು KSRTC ಸ್ಪಷ್ಟಪಡಿಸಿದೆ.

ಶಕ್ತಿ ಯೋಜನೆಯಡಿ ರಾಜ್ಯ ಸರಕಾರ ಮಹಿಳೆಯರ ಉಚಿತ ಪ್ರಯಾಣಕ್ಕೆ ಸೌಲಭ್ಯ ಕಲ್ಪಿಸಿದೆ. ಈ ಸಂದರ್ಭದಲ್ಲಿ ಕೆಲವೆಡೆ ನಡೆದ ಅವ್ಯವಸ್ಥೆ, ನೂಕು ನುಗ್ಗಲನ್ನು ಮುಂದಿಟ್ಟುಕೊಂಡು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಳೆದ ಎರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರಿಂದ ಕಿಟಕಿಯ ಮೂಲಕ ಬಸ್ ಹತ್ತಲು ಹೋಗಿ ಕೈ ತುಂಡಾಗಿದೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಶಾಲಾ ಬಾಲಕಿಗೆ ಕಿರುಕುಳ ನೀಡಿ ಪೋಷಕರಿಂದ ಏಟು ತಿಂದ ವ್ಯಕ್ತಿ ಮುಸ್ಲಿಂ ಅಲ್ಲ! ಮತ್ತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights