ಫ್ಯಾಕ್ಟ್‌ಚೆಕ್ : ಕಬ್ಬು, ಹತ್ತಿ, ಜೋಳದ ಹೊಲಗಳಲ್ಲಿ ಕಾಣಿಸಿಕೊಳ್ಳುವ ಈ ಕೀಟ ಕಚ್ಚಿದರೆ ಸಾವು ನಿಶ್ಚಿತವೇ?

“ಕಬ್ಬು, ಹತ್ತಿ, ಜೋಳದಲ್ಲಿ ಕಾಣಿಸಿಕೊಳ್ಳುತ್ತಿದೆ, ಪ್ರಾಣವನ್ನೇ ತೆಗೆಯುವಂತಹ ವಿಷದ ಹುಳು” ಎಂಬ ಪ್ರತಿಪಾದನೆಯೊಂದಿಗೆ  ಸೋಶಿಯಲ್ ಮೀಡಿಯಾದಲ್ಲಿ ಮೃತ ದೇಹಗಳ ಫೋಟೋದೊಂದಿಗೆ ಕೀಟದ ಚಿತ್ರಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಕಬ್ಬು ಬೆಳೆಗೆ ದಾಳಿ ಇಟ್ಟಿರುವ ಈ ಕೀಟಗಳು, ಕೇವಲ ಕಬ್ಬಿನ ಬೆಳೆಗೆ ಮಾತ್ರವೆ ಕುತ್ತು ತರುತ್ತಿಲ್ಲ, ಮನುಷ್ಯನ ಜೀವಕ್ಕೂ ಕಂಟಕವಾಗಿವೆ, ಸದರಿ ಹುಳವು ಕಬ್ಬಿನ ಗದ್ದೆಗಳಲ್ಲಿ ಇರುತ್ತದೆ ಮನುಷ್ಯನ ಮೈಮೇಲೆ ಬಂದು ಅದು ಮುಟ್ಟಿದರೆ ಸಾಕು ಮನುಷ್ಯ ಮರಣಹೊಂದುತ್ತಾನೆ ಈ ವಿಷಯವನ್ನು ಎಲ್ಲ ಸಾರ್ವಜನಿಕರಲ್ಲಿ ಮತ್ತು ಕಾರ್ಯಕರ್ತರಿಗೆ ತಿಳಿಸಿ ಅರಿವು ಮೂಡಿಸಿ ಎನ್ನುವ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮವಾದ ವಾಟ್ಸಾಪ್‌ನಲ್ಲಿ ಸುದ್ದಿ ವ್ಯಾಪಕವಾಗಿ ಶೇರ್ ಆಗುತ್ತಿದ್ದು, ಹೀಗೆ ಹರಿದಾಡುತ್ತಿರುವ ಸುದ್ದಿ ನಿಜವೇ ಎಂದು ಪರಿಶೀಲಿಸುವಂತೆ ಹಲವರು ನಮ್ಮ ಏನ್ ಸುದ್ದಿ.ಕಾಂ ಗೂ ವಿನಂತಿಗಳನ್ನು ಕಳಿಸಿದ್ದಾರೆ,

ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ, ಮತ್ತು ಪೋಟೊಗಳು ಕಳೆದ ವರ್ಷ ಅಂದರೆ 2022ರ ಸೆಪ್ಟಂಬರ್‌ನಲ್ಲೂ ಇದೇ ಪ್ರತಿಪಾದನೆಗಳೊಂದಿಗೆ ವೈರಲ್ ಆಗಿತ್ತು, ಈ ಸಂದರ್ಭದಲ್ಲಿ ಈ ಕೀಟದಿಂದ ಕಡಿತಕ್ಕೆ ಒಳಗಾದ ವ್ಯಕ್ತಿಯೂ ನಿಜವಾಗಿಯೂ ಸಾವನಪ್ಪುವನೇ ಎಂದು ಪರಿಶೀಲಿಸಿ ಫ್ಯಾಕ್ಟ್‌ಚೆಕ್ ಸ್ಟೋರಿಯನ್ನು ಪ್ರಕಟಿಸಲಾಗಿದೆ.

ಈಗ ಮತ್ತೊಮ್ಮೆ ಇದೇ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಈ ಪೋಸ್ಟ್‌ನ ಹಿಂದಿರುವ ಸತ್ಯ ಏನೆಂದು ತಿಳಿಸುವ ಉದ್ದೇಶದಿಂದ ಈ ಪ್ರಸಾರ ಮಾಡಲಾಗುತ್ತಿದೆ. ಈ ಸುದ್ದಿ ಕಳೆದ ವರ್ಷ ವೈರಲ್ ಆಗಿದ್ದಾಗ ಇದೇ ಸುದ್ದಿಯನ್ನು ಏನ್‌ಸುದ್ದಿ.ಕಾಂ ಪರಿಶೀಲಿಸಿ ಫ್ಯಾಕ್ಟ್‌ಚೆಕ್  ಸ್ಟೋರಿಯನ್ನು ಪ್ರಕಟಿಸಿತ್ತು.

ಫ್ಯಾಕ್ಟ್‌ಚೆಕ್ : (ಮರು ಪ್ರಕಟಣೆ)

ಮೊದಲಿಗೆ ಈ ಸುದ್ದಿ ಎಲ್ಲಿಂದ ಬಂದಿದೆ ಎಂದು ತಿಳಿಯಲು ವೈರಲ್ ಆಗಿರುವ ಪೋಟೋಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ ಇದೇ ಸೆಪ್ಟಂಬರ್ 5 ರಂದು ಪ್ರಕಟವಾದ ಹಲವು ಸುದ್ದಿಗಳು ಲಭ್ಯವಾಗಿವೆ. ಅವುಗಳನ್ನು ಇಲ್ಲಿ ನೋಡಬಹುದು.

ಇಲ್ಲಿ ಲಭ್ಯವಾದ ಲೇಖನಗಳ ಪ್ರಕಾರ ಕಬ್ಬು ಬೆಳೆಗೆ ಕೀಟ ಬಾಧೆ ಶುರುವಾಗಿದ್ದು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಸ್ತಿ ಎಂಬಲ್ಲಿ ಈ ಘಟನೆ ನಡೆದಿರುವ ವರದಿಯಾಗಿದೆ. ವರದಿ ಪ್ರಕಾರ, ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ರೈತರ ಬೆಳೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಕಬ್ಬು ಮತ್ತು ಹುಲ್ಲಿನ ಮೇಲೆ ಘೋನಾಸ್ ಎಂಬ ಹಸಿರು ಹಳದಿ ಕ್ಯಾಟರ್ಪಿಲ್ಲರ್ ಕಂಡುಬರುತ್ತದೆ. ಇದರ ಪರಿಣಾಮ ಬೆಳೆಗಳ ಮೇಲೆ ಮಾತ್ರವಲ್ಲದೆ ಮನುಷ್ಯರ ಮೇಲೂ ಆಗುತ್ತಿದೆ ಎಂದು ವರದಿ ಮಾಡಿದೆ.

ಮಹರಾಷ್ಟ್ರದ ಶೇವಗಾಂವ ತಾಲೂಕಿನ ನಿಂಬೆನಂದೂರಿನ ಮಹಿಳೆಯೊಬ್ಬರಿಗೆ ಈ ಕೀಟ ಮುಟ್ಟಿದ್ದರಿಂದ ತುರಿಕೆ, ಉರಿ ಮತ್ತು ವಾಂತಿ ಕಾಣಿಸಿಕೊಂಡ ಪರಿಣಾಮವಾಗಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಈ ಹುಳು ಸೋಂಕಿಗೆ ಒಳಗಾಗದಂತೆ ಹಾಗೂ ದೇಹದ ಮೇಲೆ ಈ ಹುಳು ಬರದಂತೆ ನೋಡಿಕೊಳ್ಳಲು ಕೃಷಿ ಇಲಾಖೆ ಮೂಲಕ ಮನವಿ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮರಾಠಿಯಲ್ಲಿ ಇದನ್ನು ಘೋನಾಸ್ ಅಲಿ ಎನ್ನುವರು
ಮರಾಠಿಯಲ್ಲಿ ಇದನ್ನು ಘೋನಾಸ್ ಅಲಿ ಎನ್ನುವರು

ನಾಗೇಶ್ ಹೆಗಡೆ ಪ್ರತಿಕ್ರಿಯೆ :

ಈ ವರದಿಗಳು ಮತ್ತು ಸಾಮಾಜಿಕ ಮಾಧಯಮಗಳಲ್ಲಿ ವೈರಲ್ ಆಗಿರುವ ಸುದ್ದಿಯ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಪರಿಸರ ವಿಜ್ಞಾನಿಗಳಾದ ನಾಗೇಶ್ ಹೆಗಡೆ ಅವರನ್ನು ಸಂಪರ್ಕಿಸಿ ಮಾತನಾಡಿದಾಗ ” ಕಬ್ಬು ಬೆಳೆಗೆ ಹಾನಿ ಉಂಟು ಮಾಡುತ್ತಿದೆ ಮತ್ತು ಮನುಷ್ಯರ ಪ್ರಾಣ ತೆಗೆಯುತ್ತಿರುವ ಕೀಟ ಎಂದು ಹೇಳಲಾಗುತ್ತಿರುವ ಹುಳವನ್ನು  ‘Stinging nettle caterpillar‘ ಎಂಬ ಹೆಸರಿನಿಂದ   (ವೈರಲ್ ಫೋಟೋದಲ್ಲಿ ಇರುವ ಕೀಟವೇ ಕಚ್ಚಿದೆ ಎಂದು ಖಚಿತವಾಗಿದ್ದರೆ) ಕರೆಯಲ್ಪಡುತ್ತಾರೆ. ” ಎಂದರು.

ನಾಗೇಶ್ ಹೆಗಡೆ ಪರಿಸರ ಲೇಖಕರು, ಭೂ ವಿಜ್ಞಾನಿಗಳು
ನಾಗೇಶ್ ಹೆಗಡೆ ಪರಿಸರ ಲೇಖಕರು, ಭೂ ವಿಜ್ಞಾನಿಗಳು

ಕುಟುಕುವ ನೆಟಲ್ ಸ್ಲಗ್ ಕ್ಯಾಟರ್ಪಿಲ್ಲರ್”  ಇವುಗಳು ಸಾಮಾನ್ಯವಾಗಿ ಮನುಷ್ಯನಿಗೆ ಕಚ್ಚುವುದಿಲ್ಲ. ಅದರ ಮೇಲ್ಮೈಯಲ್ಲಿ ಮುಳ್ಳುಗಳಂತಿರುವ ಪದರಗಳು ಮನುಷ್ಯನ ದೇಹಕ್ಕೆ ತಗುಲಿದರೆ ನವೆ, ತುರಿಕೆ ಅಥವಾ ಸ್ವಲ್ಪ ಉರಿ ಕಾಣಿಸಿಕೊಳ್ಳುವುದು ಸ್ವಾಭಾವಿಕ (ಕಂಬಳಿ ಹುಳ ಅಥವಾ ಸುಂಕದ ಹುಳ ಇರುವ ಹಾಗೆ). ಆದರೆ ಈ ಕೀಟ ಕಚ್ಚಿದ ಕಾರಣಕ್ಕೆ ಜನರು ಮೃತಪಟ್ಟಿದ್ದಾರೆ ಎಂಬುದು ಸುಳ್ಳು. ಒಂದು ವೇಳೆ ಹಾಗೆ ಮನುಷ್ಯ ಸಾಯುತ್ತಾನೆ ಎಂದಾದರೆ ಆ ಕೀಟ ಕನಿಷ್ಟ ಒಂದು ಮೊಳ ಉದ್ದ ಇರಬೇಕು ಇಲ್ಲ ಅತ್ಯಂತ ವಿಷಕಾರಕ ಅಂಶಗಳಿರಬೇಕು. ಇಲ್ಲದಿದ್ದರೆ ಈ ಕೀಟ ಕಚ್ಚಿ ಸಾಯಲು ಸಾಧ್ಯವಿಲ್ಲ. ಅಂತಹ ಯಾವುದೇ ವರದಿಗಳು ಕೂಡ ಇಲ್ಲ ಎಂದರು.

ಈ ಕೀಟಗಳು ಮನುಷ್ಯನನ್ನು ಕೊಲ್ಲುತ್ತವೆ ಎನ್ನುವ ಹಾಗಿದ್ದಿದ್ದರೆ, ಈ ಭೂಮಿಯ ಮೇಲೆ ಮನುಷ್ಯ ಸಂತತಿಯೇ ನಾಶವಾಗಿ ಹೋಗಿರುತ್ತಿತ್ತು, ಅಥವಾ ಆ ಹುಳದ ಸಂತತಿಗಳನ್ನು ನಾಶ ಪಡಿಸಲು ಇಷ್ಟರಲ್ಲಿ ಮತ್ತಷ್ಟು ಕೀಟನಾಶಕಗಳ ಪ್ರಯೋಗಗಳಾಗಿ ಕೀಟಗಳ ವಂಶವನ್ನೆ ಇನ್ನಿಲ್ಲದಂತೆ ಮಾಡುತ್ತಿದ್ದರು. ಈ ಹುಳ ಕಚ್ಚಿದ್ದರಿಂದ ಪ್ರಜ್ಞೆತಪ್ಪಿ ಬಿದ್ದಿದ್ದಾರೆ ಎಂಬುದೆಲ್ಲ ಕಾಕತಾಳೀಯ ಇರಬಹುದು. ಅದಕ್ಕೆ ಬೇರೆ ಏನಾದರೂ ಕಾರಣಗಳಿವೇಯಾ ಎಂದು ನೋಡಬೇಕು ಎಂದರು. ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಸುಳ್ಳು ಸುದ್ದಿಗಳು ಬೇಗನೆ ಹರಡಿಕೊಳ್ಳುತ್ತವೆ ಆದರೆ ಈ ಕ್ಯಾಟರ್ಪಿಲ್ಲರ್ ಗಳಿಂದ ಸಾವು ಸಂಭವಿಸುತ್ತದೆ ಎನ್ನಲು ಖಂಡಿತ ಸಾಧ್ಯವಿಲ್ಲ ಎಂದು ಏನ್‌ಸುದ್ದಿ.ಕಾಂ ಗೆ ಪ್ರತಿಕ್ರಿಯಿಸಿದ್ದಾರೆ.

ಈ ಎಲ್ಲ ಅಂಶಗಳಿಂದ ತಿಳಿಯುವುದೇನೆಂದರೆ ಕಬ್ಬು ಬೆಳೆಗೆ ನಾನಾ ರೀತಿಯ( ನುಸಿ, ಹೇನು) ಕೀಟ ಬಾಧೆಗಳು ಕಾಣಿಸಿಕೊಂಡು ಬೇಳೆ ಕುಂಟಿತವಾಗುವುದನ್ನು ನೋಡಿದ್ದೇವೆ. ಒಂದು ವೇಳೆ ಈಗ ಹೊಸದಾಗಿ ಈ ಕೀಟದಿಂದಲೂ ಬೆಳೆಗೆ ಹಾನಿ ಆಗುತ್ತಿರಬಹುದು, ಮಹಾರಾಷ್ಟ್ರದ ಒಂದೆರೆಡು ತಾಲ್ಲೂಕಿನಲ್ಲಿ ಈ ಕೀಟದ ಬಾಧೆಯ ವರದಿಗಳಾಗಿವೆ. ಹಾಗಾಗಿ ಯಾರೂ ಸಹ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.

ಸದ್ಯ ಕರ್ನಾಟಕದಲ್ಲಿ ಎಲ್ಲಿಯೂ ಈ ಕೀಟ ಬಾಧೆಯ ವರದಿಗಳಾಗಲಿ, ಕೀಟ ಕಚ್ಚಿ ಸತ್ತಿದ್ದಾರೆ ಎನ್ನುವ ವರದಿಗಳಾಗಲಿ ಇಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೋಗಳಿಗೂ ಈ ಕೀಟಗಳಿಗೂ ಸಂಬಂಧವಿಲ್ಲ, ಯಾವುದೋ ಬೇರೆ ಕಾರಣಕ್ಕೆ ಮೃತರಾಗಿರುವ ಫೋಟೋಗಳನ್ನು ಇಲ್ಲಿ ಬಳಸಿಕೊಂಡು ಕೀಟ ಕಚ್ಚಿದ್ದರಿಂದ ಸತ್ತಿದ್ದಾರೆಂದು ಸುಳ್ಳು ಸುದ್ದಿ ಹರಡಲಾಗಿದೆ. ವಾಟ್ಸಾಪ್‌ನಲ್ಲಿ ಹಂಚಿಕೊಳ್ಳುತ್ತಿರುವ ಈ ಸುದ್ದಿಗೆ ಯಾವುದೇ ಆಧಾರಗಳಾಗಲಿ, ಪುರಾವೆಗಳಾಗಲಿ ಇಲ್ಲ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಈ ಮಹಿಳೆ ಒಮ್ಮೆಲೆ 9 ಶಿಶುಗಳಿಗೆ ಜನ್ಮ ನೀಡಿದ್ದಾಳೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights