ಫ್ಯಾಕ್ಟ್‌ಚೆಕ್ : ಕೇರಳದಲ್ಲಿ ಹಿಂದೂ ಮನೆಗಳ ಮೇಲೆ ಮುಸ್ಲಿಮರು ಕಲ್ಲು ತೂರುತ್ತಿರುವ ದೃಶ್ಯ ಎಂದು ಸಂಬಂಧವಿಲ್ಲದ ಹಳೆಯ ವಿಡಿಯೋ ಹಂಚಿಕೆ

‘ಕೇರಳದಲ್ಲಿ ಮುಸ್ಲಿಮರು ಹಿಂದೂಗಳ ಬಂಗಲೆಗಳ ಮೇಲೆ ಕಲ್ಲು ಎಸೆಯುತ್ತಿದ್ದಾರೆ. ಕಾಶ್ಮೀರದಂತೆ ಕೇರಳದಿಂದಲೂ ಹಿಂದೂಗಳನ್ನು ಓಡಿಸಲು ಹೀಗೆ ಮಾಡುತ್ತಿದ್ದಾರೆ’ ಎಂಬ ಬರಹವನ್ನು ಹಂಚಿಕೊಳ್ಳಲಾಗುತ್ತಿದೆ. ಕೆಲವು ವ್ಯಕ್ತಿಗಳು ಯಾವುದಕ್ಕೋ (ಯಾವುದಕ್ಕೆ ಎಂಬುದಕ್ಕೆ ವಿಡಿಯೊದಲ್ಲಿ ಸ್ಪಷ್ಟತೆ ಇಲ್ಲ) ಕಲ್ಲೆಸೆಯುತ್ತಿರುವ ದೃಶ್ಯವಿರುವ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಕೆಲವರು ಈ ಘಟನೆಯು ಮಲಪ್ಪುರದಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ಕಲ್ಲೆಸೆದ ನಂತರ ‘ಅಲ್ಲಾಹು ಅಕ್ಬರ್‌’ ಎಂದು ಮುಸ್ಲಿಂ ಯುವಕರು ಕೂಗುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಯೂಟ್ಯೂಬ್‌ನಲ್ಲಿ ಇದೇ ವಿಡಿಯೋವನ್ನು 2016 ಅಗಸ್ಟ್‌ 16ರಂದು ಅಪ್‌ಲೋಡ್ ಮಾಡಿದ್ದು, ಅಂದಿನಿಂದ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುತ್ತಿದೆ.

ಈ ಘಟನೆಯು ಕೇರಳದ ಕೊಯಿಕ್ಕೋಡ್‌ ಜಿಲ್ಲೆಯ ನಾದಾಪುರದಲ್ಲಿ ನಡೆದಿದೆ. ಮುಸ್ಲಿಂ ಲೀಗ್‌ ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ನಡೆದ ಜಗಳಕ್ಕೆ ಸಂಬಂಧಿಸಿದ ವಿಡಿಯೋ ಇದಾಗಿದೆ. ಮುಸ್ಲಿಂ ಲೀಗ್‌ನ ಕಾರ್ಯಕರ್ತರೊಬ್ಬರನ್ನು ಸಿಪಿಎಂ ಕಾರ್ಯಕರ್ತನೊಬ್ಬರು ಹತ್ಯೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಬಿಜೆಪಿ, ಕಾಂಗ್ರೆಸ್‌ ಹಾಗೂ ಸಿಪಿಎಂ ಕಾರ್ಯಕರ್ತರ ಮನೆಗಳ ಮೇಲೂ ಕಲ್ಲುತೂರಾಟ ನಡೆದಿತ್ತು. ಈ ಸಂಬಂಧ 50 ಮಂದಿಯನ್ನು ಬಂಧಿಸಲಾಗಿದೆ ಎಂದು ಕೇರಳದ ‘ಮನೋರಮಾ’ ಪತ್ರಿಕೆ ವರದಿ ಮಾಡಿದೆ. ಆದ್ದರಿಂದ ಈ ಘಟನೆಯು ಕೋಮು ದ್ವೇಷದ ಕಾರಣದಿಂದ ನಡೆದಿದ್ದಲ್ಲ, ಬದಲಿಗೆ ರಾಜಕೀಯ ದ್ವೇಷದಿಂದ ನಡೆದಿದ್ದು ಎಂದು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2016ರಲ್ಲಿ ಕೇರಳದ ಕೊಯಿಕ್ಕೋಡ್‌ ಜಿಲ್ಲೆಯ ನಾದಾಪುರದಲ್ಲಿ ನಡೆದ ಘಟನೆಯ ಹಿನ್ನಲೆಯಲ್ಲಿ ರಾಜಕೀಯ ದ್ವೇಷದ ಕಾರಣಕ್ಕೆ ಮುಸ್ಲಿಂ ಲೀಗ್‌ನ ಕಾರ್ಯಕರ್ತರು ಸಿಪಿಎಂ  ಕಾರ್ಯಕರ್ತ ಮನೆಗಳ ಮೇಲೆ ದಾಳಿ ನಡೆಸಿದ ವಿಡಿಯೋವನ್ನು, ಮುಸ್ಲಿಮರು ಹಿಂದೂಗಳ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಯುವಕರು ಬೆತ್ತಲಾಗಿ ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ್ದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights