ಫ್ಯಾಕ್ಟ್‌ಚೆಕ್: ಯುವಕರು ಬೆತ್ತಲಾಗಿ ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ್ದಲ್ಲ

ಮಣಿಪುರದಲ್ಲಿ ಹಿಂಸಾಚಾರದಲ್ಲಿ ಮುಂದುವರಿದಿದ್ದು ಇಬ್ಬರು ಮಹಿಳೆಯರನ್ನು ಬೆತ್ತಲಾಗಿ ಮೆರವಣಿಗೆ ಮಾಡಿರುವ ಘಟನೆ ಕುರಿತಂತೆ ತೀವ್ರ ಬೇಸರ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಕೂಡಲೇ ಘಟನೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಇದರ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಮಣಿಪುರದಲ್ಲಿ ಯುವಕರ ಗುಂಪೊಂದು ಫಲಕಗಳನ್ನಿಡಿದು ಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ್ದಾರೆ ಎಂದು ಪ್ರತಿಪಾದಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 18 ಜುಲೈ 2023 ರಂದು ‘ಎನ್‌ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್’ ಎಂಬ ಎನ್‌ಜಿಒ ತನ್ನ ಟ್ವಿಟ್ಟರ್ ಖಾತೆ ಮೂಲಕ ಟ್ವೀಟ್‌ ಮಾಡಿರುವ ವಿಡಿಯೋ ಲಭ್ಯವಾಗಿದೆ.

ವಿಡಿಯೋದಲ್ಲಿ ಯುವಕರ ಗುಂಪು ಕೈಯಲ್ಲಿ ಫಲಕವನ್ನಿಡಿದು, ಬೆತ್ತಲಾಗಿ ಹೋಗುತ್ತಿರುವುದನ್ನು ಕಾಣಬಹುದು. ಈ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಟ್ವೀಟ್‌ನಲ್ಲಿ “ಇಂದು ಛತ್ತೀಸ್‌ಗಢದಲ್ಲಿ ವಿಧಾನಸಭೆ ಅಧಿವೇಶನ ಆರಂಭವಾಗಿದೆ. ವಿವಿಐಪಿಗಳು ವಿಧಾನಸೌಧಕ್ಕೆ ಹೋಗುತ್ತಿದ್ದಾಗ ಹತ್ತಾರು ಯುವಕರು ಸಂಪೂರ್ಣ ನಗ್ನರಾಗಿ ರಸ್ತೆಗಿಳಿದಿದ್ದರು. ನಕಲಿ ಮೀಸಲಾತಿ ಪ್ರಮಾಣ ಪತ್ರದ ಆಧಾರದಲ್ಲಿ ಉದ್ಯೋಗ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಈ ಯುವಕರ ಆಗ್ರಹವಾಗಿತ್ತು, ಎಂದು ಅಲೋಕ್ ಪುತುಲ್ ಟ್ವೀಟ್ ಮಾಡಿದ್ದಾರೆ.

ಛತ್ತೀಸ್‌ಗಢ ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಹಾವಳಿ ವಿರುದ್ಧ ಸರ್ಕಾರದ ಗಮನ ಸೆಳೆಯಲು ಯುವಕರು ಬಟ್ಟೆಯಿಲ್ಲದೇ ನಗ್ನ ಪ್ರತಿಭಟನೆ ನಡೆಸುವ ಮೂಲಕ ಹೋರಾಟದ ಕಹಳೆ ಮೊಳಗಿಸಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿ ವಿರುದ್ಧ ಇಂತಹ ಪ್ರತಿಭಟನೆ ನಡೆಯುತ್ತಿರುವುದು ದೇಶದಲ್ಲೇ ಮೊದಲು.

ಉದ್ಯೋಗ ಆಕಾಂಕ್ಷಿ ಯುವಕರು ಕೈಯಲ್ಲಿ ಪ್ರತಿಭಟನಾ ಫಲಕಗಳನ್ನು ಅಷ್ಟೇ ಹಿಡಿದು ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ‘ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು. ಅರ್ಹ ನಿರುದ್ಯೋಗ ಯುವಕರಿಗೆ ನ್ಯಾಯ ಒದಗಿಸಬೇಕು’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆಯ ವಿಡಿಯೋ ವೈರಲ್‌ ಆಗಿದೆ.

ಛತ್ತೀಸ್‌ಗಢ ಸರ್ಕಾರದ ವಿರುದ್ಧ ನಗ್ನ ಪ್ರತಿಭಟನೆ ನಡೆಸಿದ 29 ಯುವಕರನ್ನು ಬಂಧಿಸಲಾಗಿದೆ ಎಂದು The Hindu  ವರದಿ ಮಾಡಿದೆ. ಈ ಹಿಂದೆ ಮೇ ತಿಂಗಳಲ್ಲಿ ಆಮರಣಾಂತ ಉಪವಾಸ ಕೂಡ ನಡೆಸಿದ್ದರು ಹೇಳಲಾಗಿದೆ.

ಒಟ್ಟಾರೆಯಾಗಿ ಹೇಳುವುಯದಾದರೆ, ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಬಳಸಿ ಮಂಜೂರು ಮಾಡಿರುವ ಸರ್ಕಾರಿ ಉದ್ಯೋಗಗಳನ್ನು ವಜಾಗೊಳಿಸುವಂತೆ ಒತ್ತಾಯಿಸಿ ಛತ್ತೀಸ್‌ಗಢದಲ್ಲಿ 29ಜನ ಯುವಕರು ನಡೆಸಿದ ನಗ್ನ ಪ್ರತಿಭಟನೆಯ ಘಟನೆಯ ವಿಡಿಯೋವನ್ನು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಯೂಟರ್ನ್‌

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಆಸ್ಟ್ರೇಲಿಯಾ ಕಡಲ ತೀರದಲ್ಲಿ ಪತ್ತೆಯಾಗಿರುವ ಬೃಹತ್ ಗಾತ್ರದ ವಸ್ತು ಚಂದ್ರಯಾನ-3 ರಾಕೇಟ್‌ನದ್ದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights