ಫ್ಯಾಕ್ಟ್‌ಚೆಕ್ : ರಾಜಸ್ಥಾನದ ಜೈಪುರದಲ್ಲಿ ದೇವಸ್ಥಾನವನ್ನು ಮಸೀದಿಯಾಗಿ ಮಾಡಲು ಹೊರಟಿದೆಯೇ ಕಾಂಗ್ರೆಸ್ ಸರ್ಕಾರ?

ರಾಜಸ್ಥಾನದ ಜೈಪುರದಲ್ಲಿ ಕಾಂಗ್ರೆಸ್ ಸರ್ಕಾರ ಈಗ ದೇವಸ್ಥಾನದಲ್ಲಿ ನಮಾಜ್ ಮಾಡುತ್ತಿದೆ, ಅದೂ ಕೂಡ ಪೊಲೀಸರನ್ನು ನಿಯೋಜಿಸಿ, ನಾವೆಲ್ಲರೂ ಇದನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ, ಅದಕ್ಕಾಗಿಯೇ ಈ ವಿಡಿಯೋವನ್ನು ಸಾಧ್ಯವಾದಷ್ಟು ಶೇರ್ ಮಾಡಿ, ಇದರಿಂದ ಕಾಂಗ್ರೆಸ್ ಅಥವಾ ಇತರ ವಿರೋಧ ಪಕ್ಷಗಳಿಗೆ ಮತ ಹಾಕುವ ಜಾತ್ಯಾತೀತ ಹಿಂದೂಗಳು ಕಣ್ಣು ತೆರೆಯಬಹುದು ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

‘ರಾಜಸ್ಥಾನದ ಜೈಪುರದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ದರ್ಗಾವೊಂದನ್ನು ನಿರ್ಮಿಸಲಾಗಿದೆ. ಅಲ್ಲಿ ಮುಸ್ಲಿಮರು ನಮಾಜ್‌ ಮಾಡುತ್ತಿದ್ದಾರೆ. ಇದಕ್ಕೆ ಪೊಲೀಸರ ಭದ್ರತೆ ನೀಡಲಾಗಿದೆ. ಕಾಂಗ್ರೆಸ್‌ ಸರ್ಕಾರದ ಈ ಕ್ರಮವನ್ನು ನಾವೆಲ್ಲರೂ ತೀವ್ರವಾಗಿ ವಿರೋಧಿಸಬೇಕಿದೆ. ಸಾಧ್ಯವಾದಷ್ಟು ಈ ವಿಡಿಯೊವನ್ನು ಶೇರ್‌ ಮಾಡಿ. ಕಾಂಗ್ರೆಸ್‌ ಅಥವಾ ಇತರ ವಿರೋಧ ಪಕ್ಷಗಳಿಗೆ ಮತ ಹಾಕುವಾಗ ಜಾತ್ಯತೀತ ಹಿಂದೂಗಳ ಕಣ್ಣು ತೆರೆಯಬಹುದು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ದರ್ಗಾ ನಿರ್ಮಿಸಲಾಗಿದೆ ಎನ್ನುವುದರ ಬಗ್ಗೆ ಪೊಲೀಸರಿಗೆ ದೂರನ್ನೂ ನೀಡಲಾಗಿದೆ. ಎಂದು ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, Alamy.comನಲ್ಲಿ ಅಪ್‌ಲೋಡ್ ಮಾಡಿದ ಚಿತ್ರವು ದೇವಾಲಯದ ಗುಮ್ಮಟವನ್ನು ಹಸಿರು ಬಣ್ಣದ ಬಟ್ಟೆಯಿಂದ ಮುಚ್ಚಿರುವುದನ್ನು ತೋರಿಸುತ್ತದೆ.

ಅಕ್ಟೋಬರ್ 30, 2020 ರಂದು ಆರ್‌ಜೆ ಸರೋಜ್ ಸ್ವಾಮಿ ಎಂಬವರು ಅಪ್‌ಲೋಡ್ ಮಾಡಿದ 8 ನಿಮಿಷಗಳ ಯೂಟ್ಯೂಬ್ ವೀಡಿಯೋವನ್ನು ನಾವು ನೋಡಿದ್ದೇವೆ, ಅಲ್ಲಿ ದೇವಾಲಯದ ಒಂದು ಗುಮ್ಮಟವನ್ನು ಸುಮಾರು 6:44 ನಿಮಿಷಗಳ ನಂತರ ಹಸಿರು ಬಣ್ಣದ ಬಟ್ಟೆಯಿಂದ ಮುಚ್ಚಲಾಗಿದೆ.

ಗುಮ್ಮಟದ ಬಳಿ ಹಿಂದಿಯಲ್ಲಿ ‘ಸಯ್ಯದ್ ಚಾಂಡಿ ವಾಲೆ ಬಾಬಾ ಚಿರಾಗಿ’ ಎಂದು ಬರೆದಿರುವುದನ್ನು ಕಾಣಬಹುದು. 2017 ರಲ್ಲಿ ಪತ್ರಕರ್ತ ನಯೀಮ್ ಖುರೇಷಿಯವರು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ  ವಿಡಿಯೊ ಲಭ್ಯವಾಗಿದೆ. ವಿಡಿಯೊದಲ್ಲಿ, ವ್ಯಕ್ತಿಯೊಬ್ಬ ಈ ಸ್ಥಳದ ಬಗ್ಗೆ ಮಾತನಾಡುತ್ತ, ಈ ದೇವಾಲಯವೂ ಹಿಂದೂ-ಮುಸ್ಲಿಂ ಏಕತೆಯ ಸಂಕೇತವಾಗಿದೆ. ಹಿಂದೂಗಳು ಮತ್ತು ಮುಸ್ಲಿಮರು ಸೈಯದ್ ಚಾಂಡಿ ವಾಲೆ ಬಾಬಾ ಅವರ ಆಶೀರ್ವಾದ ಪಡೆಯಲು ಇಲ್ಲಿಗೆ ಬರುತ್ತಾರೆ ಎಂದು ಹೇಳುವುದನ್ನು ಕೇಳಬಹುದು. ಈ ದೇಗುಲವು ವಿವಿಧ ಧರ್ಮದ ಜನರನ್ನು ಆಕರ್ಷಿಸುತ್ತದೆ. 40-50 ವರ್ಷಗಳಿಂದ ಸೈಯದ್ ಚಾಂಡಿ ವಾಲೆ ಬಾಬಾ ಅವರ ದೇಗುಲಕ್ಕೆ ಜನರು ಬರುವುದನ್ನು ನೋಡಿದ್ದೇನೆ ಎಂದು ಸ್ಥಳೀಯ ಅಂಗಡಿಯವರು ಹೇಳಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಲಕ್ಷ್ಮಿ ನಾರಾಯಣ ದೇವಸ್ಥಾನದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ಗಳನ್ನು ಹಲ್ಲೆಗಳೆದಿರುವ ರಾಜಸ್ಥಾನ ಪೊಲೀಸರು ಇದೆಲ್ಲ ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ. ಈ ದೇವಸ್ಥಾನದಲ್ಲಿ ‘ಅಖಂಡ ಜ್ಯೋತಿ’ ಎನ್ನುವ ಸಂಪ್ರದಾಯವಿದೆ. ಇದನ್ನು 40–50 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇದು ಹಿಂದೂ, ಮುಸ್ಲಿಂ ಸೌಹಾರ್ದದ ಕೇಂದ್ರವಾಗಿದೆ. ಎರಡೂ ಧರ್ಮದವರು ಇಲ್ಲಿಗೆ ನಡೆದುಕೊಳ್ಳುತ್ತಾರೆ. ಈ ಕುರಿತು ಆ ದೇವಸ್ಥಾನದ ಅರ್ಚಕರೇ ಖಚಿತಪಡಿಸಿದ್ದಾರೆ. ‘ಇದೊಂದು ಸುಳ್ಳು ಸುದ್ದಿಯಾಗಿದೆ’ ಎಂದು ರಾಜಸ್ಥಾನ ಪೊಲೀಸರು ಟ್ವೀಟ್‌ ಮಾಡಿದ್ದಾರೆ. ಸುಳ್ಳು ಸುದ್ದಿ ಹಂಚಿದ 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ,  ಹಲವು ವರ್ಷಗಳಿಂದ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಕಳೆದ 50 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಹಿಂದೂ- ಮುಸ್ಲಿಂ ಸೌಹಾರ್ದತೆಯ ‘ಅಖಂಡ ಜ್ಯೋತಿ’ ಎನ್ನುವ ಸಂಪ್ರದಾಯವನ್ನು ತಿರುಚಿ ಕೋಮು ದ್ವೇಷದ ಸುಳ್ಳು ನಿರೂಪಣೆಯೊಂದಿಗೆ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು, ಸುಳ್ಳುಸುದ್ದಿಯನ್ನು ಹರಡಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್ ಚೆಕ್ಕರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪಿಕಾಸಿಯಿಂದ ಯುವತಿಯ ತಲೆಯನ್ನು ಹೊಡೆದು, ಕಲ್ಲಿನಿಂದ ಜಜ್ಜಿ ಹಾಕುವ ವಿಡಿಯೋ ಮಣೀಪುರದ್ದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights