ಫ್ಯಾಕ್ಟ್‌ಚೆಕ್ : ಜ್ಞಾನವಾಪಿ ಮಸೀದಿ ಸರ್ವೆ ನಡೆಸುವಾಗ ಸಾವಿರ ಅಡಿ ಶಿವಲಿಂಗ ಪತ್ತೆಯಾಗಿದ್ದು ನಿಜವೇ?

ಜ್ಞಾನವಾಪಿ ಮಸೀದಿ ಸರ್ವೆ ನಡೆಸಬಾರದು ಎಂದು ಅರ್ಜಿ ಸಲ್ಲಿಸಿದ್ದ ಮಸೀದಿ ಸಮಿತಿಗೆ ಸುಪ್ರೀಂ ಕೋರ್ಟ್‌ನಲ್ಲೂ ಸೋಲಾಗಿದೆ. ಜ್ಞಾನವಾಪಿ ಮಸೀದಿ ಸರ್ವೆ ಕಾರ್ಯ ನಡೆಸಿ ಎಂದು ಅಲಹಬಾದ್ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.

 

View this post on Instagram

 

A post shared by @dhaarmik_bandaa

ಜ್ಞಾನವಾಪಿ ಮಸೀದಿಯಲ್ಲಿ ಸರ್ವೆ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊವೊಂದು ವೈರಲ್ ಆಗಿದ್ದು, ಸರ್ವೆ ಸಮಯದಲ್ಲಿ ಸಾವಿರ ಅಡಿ ಶಿವಲಿಂಗ ಪತ್ತೆಯಾಗಿದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ವಾರಣಾಸಿಯ ವಿವಾದಿತ ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ  ಸಮೀಕ್ಷೆ ಮತ್ತು ವೈಜ್ಞಾನಿಕ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ, ಮಸೀದಿಯನ್ನು ಮೊದಲೇ ಅಸ್ತಿತ್ವದಲ್ಲಿರುವ ಹಿಂದೂ ದೇವಾಲಯದ ರಚನೆಯ ಮೇಲೆ ನಿರ್ಮಿಸಲಾಗಿದೆ ಎಂಬ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಮಸೀದಿಯ ಕೆಳಗಿರುವ ನೆಲಮಾಳಿಗೆಯಲ್ಲಿ ಒಂದು ಸಾವಿರ ಅಡಿಯ ‘ಶಿವಲಿಂಗ’ ಪತ್ತೆಯಾಗಿದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ವಾಸ್ತವವನ್ನು ಪರಿಶೀಲಿಸುವ ಮುನ್ನ ಸುಪ್ರಿಂ ಕೋರ್ಟ್ ಮಸೀದಿ ಸರ್ವೆಗೆ ಸಂಬಂಧಿಸಿದಂತೆ  ಪುರಾತತ್ವ ಇಲಾಖೆಗೆ ನೀಡಿರುವ ನಿರ್ದೇಶನಗಳ ಕಡೆಗೆ ಗಮನ ನೀಡಿದರೆ ಕೆಲವು ಅಂಶಗಳು ಪತ್ತೆಯಾಗುತ್ತವೆ.

ಸುಪ್ರಿಂ ನಿರ್ದೇಶನದಲ್ಲಿ ಏನಿದೆ?

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರ ಸಾರಥ್ಯದ ಪೀಠವು, ಸರ್ವೆ ನಡೆಸಬಾರದು ಎಂಬ ಮಸೀದಿ ಆಡಳಿತ ಮಂಡಳಿ ಮನವಿಯನ್ನು ತಿರಸ್ಕರಿಸಿತು. ಆದರೆ ಈ ಸರ್ವೆ ಕಾರ್ಯವು ‘ಆಕ್ರಮಣಕಾರಿಯಲ್ಲದ ರೀತಿಯಲ್ಲಿ’ ನಡೆಯಬೇಕು ಎಂದು ತಾಕೀತು ಮಾಡಿತು. ಮಸೀದಿ ಕಟ್ಟಡ ಹಾಗೂ ಗೋಡೆಗಳಿಗೆ ಯಾವುದೇ ರೀತಿಯ ಹಾನಿ ಆಗಬಾರದು ಎಂದು ತಾಕೀತು ಮಾಡಿತು.

ಇನ್ನು ಮಸೀದಿ ಆಡಳಿತ ಮಂಡಳಿಯು ಭಾರತೀಯ ಪುರಾತತ್ವ ಇಲಾಖೆಯ ಸರ್ವೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸುವಂತೆ ಮನವಿ ಮಾಡಿತ್ತು. ಆದರೆ, ಈ ಮನವಿಯನ್ನೂ ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ಇನ್ನು ಸರ್ಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ಗೆ ಈ ಸಂಬಂಧ ಭರವಸೆ ನೀಡಿದ್ದು, ಭಾರತೀಯ ಪುರಾತತ್ವ ಇಲಾಖೆ ತಜ್ಞರು ನಡೆಸುವ ಸರ್ವೆ ಕಾರ್ಯದ ವೇಳೆ ಅಗೆತ ನಡೆಸುವುದಿಲ್ಲ. ಕಟ್ಟಡಕ್ಕೆ ಹಾನಿ ಮಾಡುವುದಿಲ್ಲ. ಮಸೀದಿ ಗೋಡೆ ಹಾಗೂ ಇಡೀ ಕಟ್ಟಡದ ಒಂದೇ ಒಂದು ಇಟ್ಟಿಗೆಗೂ ಹಾನಿ ಮಾಡೋದಿಲ್ಲ ಎಂದು ಭರವಸೆ ನೀಡಿದ್ದಾರೆ.

ಜ್ಞಾನವಾಪಿ ಮಸೀದಿ ಸಮೀಕ್ಷೆಯ ವರದಿಗಳನ್ನು ಮಾಧ್ಯಮಗಳಿಗೆ ಬಹಿರಂಗ ಪಡಿಸುವಂತಿಲ್ಲ

ಪ್ರಸ್ತುತ ನಡೆಯುತ್ತಿರುವ ಮಸೀದಿ ಸಮೀಕ್ಷೆಯ ವರದಿಯನ್ನು 02 ಸೆಪ್ಟೆಂಬರ್ 2023 ರವರೆಗೆ ಗಡುವ ನೀಡಲಾಗಿದೆ. ಆದರೆ ಕೆಲವು ಮಾಧ್ಯಮಗಳು ಮಸೀದಿಯಲ್ಲಿ ನಾಲ್ಕು ಅಡಿ ವಿಗ್ರಹ, ತ್ರಿಶೂಲ ಮತ್ತು ಕಲಶದಂತಹ ವಿವಿಧ ವಸ್ತುಗಳನ್ನು ಪತ್ತೆಯಾಗಿವೆ ಎಂದು ಪ್ರತಿಪಾದಿಸ ಪ್ರಸಾರ ಮಾಡುತ್ತಿವೆ.
ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳಿಂದಾಗಿ ಜನರಲ್ಲಿ ಗೊಂದಲವುಂಟಾಗುತ್ತಿದೆ ಎಂದು ಮಸೀದಿಯ ಆಡಳಿತ ಮಂಡಳಿ ನ್ಯಾಯಾಲಯದ ಮೊರೆ ಹೋಗಿತ್ತು. ಹಾಗಾಗಿ 10 ಆಗಸ್ಟ್ 2023 ರಂದು, ವಾರಣಾಸಿ ನ್ಯಾಯಾಲಯವು ASI ಯಿಂದ ವಿವಾದಿತ ಜ್ಞಾನವಾಪಿ ಮಸೀದಿಯಲ್ಲಿ ನಡೆಯುತ್ತಿರುವ ವೈಜ್ಞಾನಿಕ ಸಮೀಕ್ಷೆಯ ಯಾವುದೇ ವರದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದು ಎಂದು ಆದೇಶಿಸಿದೆ.
ಎಎಸ್‌ಐ ಮತ್ತು ಮಸೀದಿ ಸಮಿತಿ ಎರಡಕ್ಕೂ ನ್ಯಾಯಾಲಯ ನಿರ್ದೇಶಿಸಿದೆ ಮತ್ತು ಎಎಸ್‌ಐ ಸಮೀಕ್ಷೆಯಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದರ ವಿರುದ್ಧ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ.
ಅಲ್ಲದೆ, ದೈನಿಕ್ ಭಾಸ್ಕರ್ ಅವರ ಪ್ರಕಾರ, ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಂಡ ಚಿತ್ರವನ್ನು ಮೇ 2022 ರಲ್ಲಿ ಜ್ಞಾನವಾಪಿ ಮಸೀದಿಯ ಆಯೋಗದ ಸಮೀಕ್ಷೆಯ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ ಮತ್ತು ಇದು ಇತ್ತೀಚಿನದಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಸುಪ್ರಿಂ ಕೋರ್ಟ್ ಆದೇಶದ ನಂತರ ನಡೆಯುತ್ತಿರುವ ಜ್ಞಾನವಾಪಿ ಮಸೀದಿಯ ಸರ್ವೆಯ ವೇಳೆ ಸಾವಿರ ಅಡಿಯ ಶಿವಲಿಂಗ ಪತ್ತೆಯಾಗಿದೆ ಎಂಬುದು ಸುಳ್ಳು. ಅಂತಹ ಕುರುಹುಗಳು ಪತ್ತೆಯಾಗಿದೆ ಎಂದು ರುಜುವಾತು ಮಾಡುವ ಯಾವುದೇ ಪುರಾವೆಗಳಾಗಲಿ, ಆಧಾರಗಳಾಗಲಿ ಇಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights