ಮೋದಿ ಮನವಿಯಂತೆ ಸಾಮಾಜಿಕ ಅಂತರದಲ್ಲಿರಲು ವ್ಯವಸ್ಥೆಯಲ್ಲಿದೆಯೇ ಜಾಗ?

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಕ್ಕೆ ಕೊರೊನಾ ಸಂಕಷ್ಟ ಬಂದೊದಗಿರುವ ಇಂದಿನ ಬಿಕ್ಕಟ್ಟಿನ ಸಂದರ್ಭವನ್ನು ಎದುರಿಸಲು ಜನತಾ ಕರ್ಫ್ಯೂಗೆ ಕರೆಕೊಟ್ಟಿದ್ದರು. ಆ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ “ಘರತ್‌ ರಾಹಾ, ಬಹಾರ್‌ ಪದು ನಾಕಾ” ಎಂದು ಮನವಿ ಮಾಡಿದ್ದರು. ಅಂದರೆ, ‘ಮನೆಯೊಳಗೇ ಇರಿ, ಹೊರಗೆ ಹೋಗಬೇಡಿ’ ಎಂಬುದು ಅದರ ಅರ್ಥ.

ಜನತಾ ಕರ್ಫೂ ನಂತರ 21 ದಿನಗಳ ಲಾಕ್‌ಡೌನ್‌ ಅನ್ನು ದೇಶಾದ್ಯಂತ ವಿಧಿಸಲಾಗಿದ್ದು, ಜನರು ಒಬ್ಬರಿಂದ ಒಬ್ಬರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ ಎಂದೂ ಕೇಳಿಕೊಳ್ಳಲಾಯಿತು. ಲಾಕ್‌ಡೌನ್‌ ಜಾರಿಯಾದ ನಂತರದಲ್ಲಿ ದೇಶಾದ್ಯಂತ ಪೊಲೀಸರು ಆಟೋಗಳಲ್ಲಿ ಮೈಕ್‌ ಕಟ್ಟಿಕೊಂಡು “ಘರತ್‌ ರಾಹಾ, ಬಹಾರ್‌ ಪಡು ನಾಕಾ” ಎಂದು ಹಳ್ಳಿ, ನಗರ, ಪಟ್ಟಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ದೇಶದ ಬಹುಸಂಖ್ಯಾತ ಜನರಲ್ಲಿ ಒಂದು ಪ್ರಶ್ನೆ ಕಾಡುತ್ತಿದೆ. ಅದೂ ತುಂಬಾ ಸಾಮಾನ್ಯವಾದ ಪ್ರಶ್ನೆ. ಆ ಪ್ರಶ್ನೆ, ‘ನಾವು ಮನೆಯ ಒಳಗೇ ಇರಬೇಕೋ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೋ?’ ಎಂಬುದು ಅಷ್ಟೇ. ಈ ಅಷ್ಟೂ ಜ್ಞಾನವಿಲ್ಲವೇ ಎಂದೆನಿಸಬಹುದು. ಆದರೆ, ಪ್ರಶ್ನೆ ಸಾಮಾನ್ಯವಾದುದ್ದೇ ಆಗಿದ್ದರು, ಅದರ ಹಿಂದಿನ ಭಾವ ಸಾಮಾನ್ಯವಾದುದ್ದಲ್ಲ. ಭಾರತದ 130 ಕೋಟಿ ಜನಸಂಖ್ಯೆಯಲ್ಲಿ ಸುಮಾರು 17% ಅಂದರೆ 78 ಮಿಲಿಯನ್‌ ಜನರು ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ. ಕರ್ನಾಟಕದಲ್ಲಿರುವ 40.5 ಲಕ್ಷ ಸ್ಲಂ ನಿವಾಸಿಗಳ ಪೈಕಿ ರಾಜಧಾನಿ ಬೆಂಗಳೂರಿನಲ್ಲಿಯೇ 15 ಲಕ್ಷ ಜನರು ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ.

ಕೊಳೆಗೇರಿಗಳೆಂದರೆ ವಿಶಾಲ ಪ್ರದೇಶಗಳಲ್ಲಿ ನಡುವೆ ಅಂತರವಿರುವ ವಿಶಾಲ ಮನೆಗಳನ್ನು ಹೊಂದಿರುವ ಏರಿಯಾಗಳೇನೂ ಅಲ್ಲ. ಒಂದು ಸಣ್ಣ ಸಂಧಿಯೂ ಇಲ್ಲದೆ ಗೋಡೆಯಿಂದ ಗೋಡೆಗೆ ಹೊಂದಿಕೊಂಡ ಮನೆಗಳೂ, ಕುಟುಂಬದ ಐದಾರು ಜನರು ಒಂದು ಪುಟ್ಟ ಸೂರಿನ ಕೆಳಗೆ ಬದುಕು ಸಾಗಿಸುವ ಕಿಕ್ಕಿರಿದ ಪ್ರದೇಶ. ಸ್ಲಂಗಳಲ್ಲಿ ವಾಸಿಸುವ ನಿವಾಸಿಗಳ ಜನಸಾಂದ್ರತೆಯ ಪ್ರಮಾಣ 10 ಚ.ಅಡಿಗೆ 8-10 ಜನರು ವಾಸಿಸುವಷ್ಟು.

ಇಂತಹ ಕಿಕ್ಕಿರಿದ ಜಾಗಗಳಲ್ಲಿರುವ ನಿವಾಸಿಗಳ ಒಂದು ಕುಟುಂಬದಲ್ಲಿ ಕನಿಷ್ಟ ಐದಾರು ಸದಸ್ಯರಿರುತ್ತಾರೆ. ಅವರು ಬದುಕುವುದೂ ಒಂದು ಪುಟ್ಟ ಗುಡಿಸಲಿನಂತಹ 10*10 ಚ. ಅಡಿಗಳ ಮನೆಗಳಲ್ಲಿ. ಆ ಮನೆಗಳಲ್ಲಿನ ರೂಮುಗಳು ಚಿಕ್ಕದಾಗಿದ್ದು, ಗಾಳಿ ಇಲ್ಲದೆ ಕೊಠಡಿ ಪೂರ್ತಿ ಬಿಸಿಯಾಗುತ್ತದೆ. ಹಾಗಾಗಿ ಜನರು ಬೇರೆ ದಾರಿಯಿಲ್ಲದ ಕಾರಣ ಹೊರಗೆ ಬರುತ್ತಾರೆ. ಶೌಚಾಲಯಗಳು ಸಾರ್ವಜನಿಕವಾಗಿದ್ದು, ನೂರಾರು ಜನರು  ಒಂದೋ-ಎರಡೋ ಸಾರ್ವಜನಿಕ ಶೌಚಗಳನ್ನು ಬಳಸುತ್ತಾರೆ. ಅಲ್ಲಿಯ ಹಲವು ಪುರುಷರು ಬೀದಿಯಲ್ಲೇ ಮಲಗುತ್ತಾರೆ. ಇಂತಹ ಜನರಿಗೆ ಈಗ ಕೊರೊನಾ ಸೋಂಕಿನ ಭಯವೂ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಇಂತಹ ಸ್ಲಂಗಳಲ್ಲೇ ಇಡೀ ಏಷ್ಯಾದಲ್ಲೇ ಅತೀ ದೊಡ್ಡ ಸ್ಲಂ ಎನಿಸಿಕೊಂಡಿರುವುದು ಮುಂಬೈನ ಧಾರವೀ ಸ್ಲಂ. 2.4 ಚದರ ಕಿ.ಮೀ ವಿಸ್ತೀರ್ಣದಲ್ಲಿರುವ ಧಾರವಿ ಸ್ಲಂ ಸುಮಾರು 60,000 ಕುಟುಂಬಗಳು ಮತ್ತು 8.5 ಲಕ್ಷ ಜನರು ವಾಸಿಸುತ್ತಿದ್ದಾರೆ. ಜಗತ್ತಿನ ಅತ್ಯಂತ ದಟ್ಟವಾದ ಮಾನವ ವಾಸಸ್ಥಾನಗಳಲ್ಲಿ ಈ ಸ್ಲಂ ಮೊದಲನೆಯದು.

ಈ ಸ್ಲಂನಲ್ಲಿಯೂ ಲಾಕ್‌ಡೌನ್‌ ಆದನಂತರ ಪೊಲೀಸರು ತಮ್ಮ ಪ್ರಚಾರದ ಗಸ್ತು ತಿರುಗುತ್ತಾರೆ. ಆದರೆ, ಕಿಕ್ಕಿರಿದ ಮನೆಗಳಲ್ಲಿ ವಾಸಿಸುವ ಜನರು ಮುಖಕ್ಕೆ ಕರವಸ್ತ್ರವನ್ನೋ, ಮಾಸ್ಕ್‌ ಅನ್ನೋ ಕಟ್ಟಿಕೊಂಡು ಬೀದಿಗಳಲ್ಲಿ ನಾಲ್ಕೈದು ಜನರು ಗುಂಪು ಗುಂಪಾಗಿ ನಿಂತಿರುತ್ತಾರೆ. ಅಂತಹ ಗುಂಪನ್ನು ಚದುರಿಸುವುದಲ್ಲಿ ಪೊಲೀಸರು ಲಾಠಿ ಹಿಡಿದು ಉತ್ಸಾಹದಿಂದ ಓಡಾಡಿಸಿಕೊಂಡು ಬೆನ್ನಟ್ಟುತ್ತಾರೆ. ಇದು ದಿನನಿತ್ಯ ಎಲ್ಲಾ ಸ್ಲಂಗಳಲ್ಲಿಯೂ, ಬಹುಶಃ ಸೋಷಿಯಲ್‌ ಮೀಡಿಯಾದಲ್ಲಿ ಗಮನಿಸಿದಂತೆ ಕೆಲವು ಹಳ್ಳಿಗಳಲ್ಲೂ ಸಾಮಾನ್ಯವಾಗಿಹೋಗಿದೆ.

ಆದರೆ, ವ್ಯಕ್ತಿಯಿಂದ ವ್ಯಕ್ತಿಗೆ ಒಂದು ಮೀಟರ್‌ ಸಾಮಾಜಿಕ ಅಂತರವಿರಲಿ ಎಂದು ಹೇಳುತ್ತಿರುವ ಸಮಯದಲ್ಲಿ ಐದು ಚ.ಮೀಟರ್‌ ಸುತ್ತಳತೆಯುಳ್ಳ ಮನೆಗಳಲ್ಲಿ ವಾಸಿಸುವ, ನೂರಾರು ಜನರು ಒಂದೇ ಶೌಚಾಲಯದ ಬಳಕೆಗಾಗಿ ಸಾಲುಗಟ್ಟಿ ಕ್ಯೂ ನಿಲ್ಲುವ, ಮನೆಯೊಳಗೆ ಮಲಗಲು ಜಾಗವಿಲ್ಲದೆ ಬೀದಿಗಳಲ್ಲಿ ಮಲಗುವ, ಮನೆಯೊಳಗಿನ ಬಿಸಿ ಗಾಳಿಗೆ ಉಸಿರುಕಟ್ಟಿ ಮನೆಯಿಂದ ಹೊರಗೆ ಓಡಿ ಬರುವ ಮಕ್ಕಳನ್ನು ಸಾಕುತ್ತಿರುವ ಸ್ಲಂಗಳಲ್ಲಿನ ಜನರು ಮೀಟರ್‌ಗಳಷ್ಟು ಅಂತರವನ್ನು ಕಾಯ್ದುಕೊಂಡು ಬದುಕುವುದಾದರೂ ಎಲ್ಲಿ.

“ನಾವು ಬದುಕುತ್ತಿರುವ ಈ ಸಣ್ಣ ಕೋಣೆಯಲ್ಲಿ ಏಳು ಜನರಿದ್ದೇವೆ. ಮೂವರು 10 ವರ್ಷದೊಳಗಿನ ಮಕ್ಕಳು, ನನ್ನ ಕಿರಿಯ ಮಗುವಿನ ವಯಸ್ಸು ಕೇವಲ ಎರಡು ವರ್ಷ. ಇಡೀ ದಿನ ಒಳಗೆ ಇದ್ದ ನಂತರ ಅವನು ಕಿರಿಕಿರಿ ಉಂಟಾಗುತ್ತದೆ. ಆದ್ದರಿಂದ ನನ್ನ ಪತಿ ಶುದ್ಧಗಾಳಿಗಾಗಿ ಅವನನ್ನು ಹೊರಗೆ ಕರೆದುಕೊಂಡು ಹೋಗಿ ಸಮಾಧಾನ ಮಾಡುತ್ತಾರೆ. ಇನ್ನಿಬ್ಬರು ಮಕ್ಕಳು ಮನೆಯಿಂದ ಹೊರಹೋಗದಂತೆ ನೋಡಿಕೊಳ್ಳಲು ಇಡೀ ದಿನ ಟಿವಿಯಲ್ಲಿ ಕಾರ್ಟೂನ್ ಚಾನೆಲ್‌ಗಳನ್ನು ಹಾಕುತ್ತೇವೆ. ” ಎಂದು ಸ್ಲಂನಲ್ಲಿ ವಾಸಿಸುವ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ.

ಬದುಕಿನ ಬವಣೆಗಳನ್ನು ನೀಗಿಸಲು ದಿನವೀದಿ ಬೆವರಿಳಿಸಿ ದುಡಿಯುವ ಈ ಜನರು, ಆಳುವವರು ಅಭಿವೃದ್ಧಿಯ ಸೂಚಕಗಳಾಗಿ ತೋರಿಸುತ್ತಿರುವ ನಗರಗಳನ್ನು, ಬೃಹತ್‌ ಬಿಲ್ಡಿಂಗ್‌ಗಳನ್ನು, ಮೊಹಲ್ಲಾಗಳನ್ನು ಕಟ್ಟಿನಿಲ್ಲಿಸಿದ, ಅದೇ ನಗರಗಳನ್ನು ಸ್ವಚ್ಛವಾಗಿಯೂ, ಸುಂದರವಾಗಿಯೂ ಕಂಗೊಳಿಸುವಂತೆ ದುಡಿಯುತ್ತಿರುವ ಈ ಶ್ರಮಿಕ ಜನರಿಗೆ ಒಂದು ಸೂರನ್ನು, ಭದ್ರತೆಯ ಬದುಕನ್ನೂ ಕಟ್ಟಿಕೊಡಲು ಪ್ರಭುತ್ವಕ್ಕೆ ಮನಸ್ಸಿನಲ್ಲದೆ ಕೊಳೆಗೇರಿಗಳ ಜೀವನಕ್ಕೆ ದೂಡಿದೆ. ಅದಷ್ಟೇ ಅಲ್ಲದೆ, ಕೊಳೆಗೇರಿಗಳಲ್ಲೂ ಬದುಕಲು ಬಿಡದೆ ಜೋಪಡಿಯ ಮನೆಗಳನ್ನು ದ್ವಂಸ ಮಾಡುವುದರಲ್ಲಿ ಉತ್ಸುಕವಾಗಿದೆ. ಇತ್ತೀಚೆಗೆ ಬೆಂಗಳೂರಿನ ಮಾರತಹಳ್ಳಿಯ ಬಳಿ ವಾಸಿಸುತ್ತಿದ್ದ ಸ್ಲಂ ಜನರ ಗುಡಿಸಲುಗಳನ್ನು ಕಿತ್ತೆಸೆದ ಉದಾಹರಣೆ ಇನ್ನೂ ಜೀವಂತವಾಗಿ ಆ ಜನರನ್ನು ಕಾಡುತ್ತಿದೆ.

ಇದ್ದ ಗುಡಿಸಲುಗಳನ್ನು ಕಿತ್ತೆಸೆದಿರುವ ಸರ್ಕಾರವು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಅದೇ ಜನರಿಗೆ ಸೂಚಿಸುತ್ತಿದೆ. ಕೂರಲು ನೆತ್ತಿಯ ಮೇಲೆ ಸೂರಿಲ್ಲದೆ ಬೀದಿ ಪಾಲಾಗಿರುವ ಆ ಜನರು, ಇಂದು ಕೊರೊನಾ ಭೀತಿಯಲ್ಲಿ ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿಕೊಂಡಿದೆ. ಆದರೆ, ಆ ಜನರು ಸಾಮಾಜಿಕ ಅಂತರವನ್ನು ಎಲ್ಲಿಂದ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿದೆ.

ಇಂತಹ ಸ್ಲಂಗಳಲ್ಲಿ ವಾಸಿಸುವ ಜನರಲ್ಲಿ ಯಾರೊಬ್ಬರಿಗಾದರೂ ಕೊರೊನಾ ಸೋಂಕು ತಗುಲಿದ್ದೇ ಆದಲ್ಲಿ, ಆ ಸಮುದಾಯದಲ್ಲಿ ಕಡಿಮೆ ಸಮಯದಲ್ಲಿ ಹರಡುತ್ತದೆ. ಸ್ಲಂ ಜನರಿಗೆ ಕೊರೊನಾ ತಗುಲದಂತೆ ನೋಡಿಕೊಳ್ಳಲು ಸರ್ಕಾರದ ಬಳಿಯಾವುದೇ ಯೋಜನೆಗಳಿಲ್ಲ.

ಈಗಾಗಲೇ ಮುಂಬೈನ ಧಾರವೀ ಸ್ಲಂನಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಧಾರವಿ ಒಳಗೆ ಐದು ಪ್ರದೇಶಗಳನ್ನು ಕೆಂಪು ವಲಯಗಳೆಂದು ಘೋಷಿಸಲಾಗಿದೆ. ಜನರು ಹೊರ ಬರದಂತೆ ನಿಯಂತ್ರಿಸಲು ಪೊಲೀಸರನ್ನು ಸ್ಲಂ ಸುತ್ತ ನಿಯೋಜಿಸಲಾಗಿದೆ. ಆದರೆ, ಆ ಜನರ ಬದುಕನ್ನು ಭದ್ರಗೊಳಿಸಲು, ಸೋಂಕಿನಿಂದ ರಕ್ಷಿಸಲು ಯಾವುದೂ ನಿಯೋಜನೆಯಾಗಿಲ್ಲ.

8.5 ಲಕ್ಷ ಜನರು ವಾಸಿಸುತ್ತಿರುವ ಧಾರವಿ ಸ್ಲಂನ ಪಕ್ಕದಲ್ಲಿಯೇ  ಮುಖೇಶ್‌ ಅಂಬಾನಿಯ 21 ಹಂತಸ್ಥಿನ ಆಂಟೆಲ್ಲಾ ಹೆಸರಿನ ಬೃಹತ್‌ ಕಟ್ಟಡವಿದೆ. ಬಹುಶಃ ಆ ಇಡೀ ಕಟ್ಟಡದಲ್ಲಿ ಮೂವರು ವಾಸಿಸುತ್ತಿರಬಹುದು. ಆ ಕಟ್ಟಡದಲ್ಲಿ ಅಗತ್ಯವಿರುವ ಸಾಮಾಜಿಕ ಅಂತರಕ್ಕಿಂತಲೂ ಹೆಚ್ಚಾಗಿಯೇ ಅಂತರವನ್ನು ಕಾಯ್ದುಕೊಳ್ಳಬಹುದು. ಈ ರೀತಿಯಲ್ಲಿ ವರ್ಗ ಮತ್ತು ಅಂತಸ್ಥಿನ ಅಂತರವೂ, ಸಾಮಾಜಿಕ ತಾರತಮ್ಯವೂ ತುಂಬಿರುವ ಈ ವ್ಯವಸ್ಥೆಯೊಳಗೆ  ಕೊರೊನಾ ಸೋಂಕು ನಿಯಂತ್ರಣಕ್ಕಾಗಿನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಬಡಜನರಿಗೆ ಜಾಗವಾದರೂ ಎಲ್ಲಿದೆ? “ಘರತ್‌ ರಾಹಾ, ಬಹಾರ್‌ ಪದು ನಾಕಾ” ಸಾಧ್ಯವಾಗುವುದಾದರೂ ಹೇಗೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights