FACT CHECK | ಚುನಾವಣಾ ಬಾಂಡ್ ಮಾಹಿತಿಯನ್ನು ಜನ ಸಾಮಾನ್ಯನಿಗೂ ಸಿಗುವಂತೆ ಕಾನೂನು ಮಾಡಿತ್ತೇ ಮೋದಿ ಸರ್ಕಾರ?
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಖಾಸಗೀ ಟಿವಿ ಚಾನೆಲ್‌ಗೆ ಸಂದರ್ಶನ ನೀಡಿದ್ದರು, ತಮಿಳಿನ ತಂತಿ ಟಿವಿ ಚಾನೆಲ್ ನಡೆಸಿದ ವಿಶೇಷ ಸಂದರ್ಶನದಲ್ಲಿ “ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ರದ್ದುಪಡಿಸಿರುವುದು ನಿಮ್ಮ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಲ್ಲವೇ?” ಎಂಬ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿದ್ದಾರೆ.
“ನಮಗೆ ಯಾಕೆ ಹಿನ್ನಡೆ? ಹಾಗೆ ನೋಡಿದರೆ 2014ರ ಮೊದಲು ರಾಜಕೀಯ ಪಕ್ಷಗಳು ಕೋಟ್ಯಾಂತರ ರೂಪಾಯಿ ದೇಣಿಗೆ ಪಡೆಯುತ್ತಿದ್ದವು. ಆದರೆ, ಅದನ್ನು ಯಾರು, ಯಾರಿಗೆ ಕೊಟ್ಟಿದ್ದಾರೆ. ಎಷ್ಟು ಖರ್ಚಾಗಿದೆ ಇತ್ಯಾದಿ ಮಾಹಿತಿ ಗೊತ್ತಾಗುತ್ತಿರಲಿಲ್ಲ. ನಾವು ಚುನಾವಣಾ ಬಾಂಡ್ ತಂದ ಬಳಿಕ, ಯಾರು ಯಾವ ಪಕ್ಷಕ್ಕೆ ದೇಣಿಗೆ ಕೊಟ್ಟಿದ್ದಾರೆ? ಎಷ್ಟು ಕೊಟ್ಟಿದ್ದಾರೆ? ಎಷ್ಟು ಖರ್ಚಾಗಿದೆ? ಎಂಬ ಸಂಪೂರ್ಣ ಸಿಗುತ್ತಿದೆ ಎಂದಿದ್ದಾರೆ. ಸಂದರ್ಶನದ ಯೂಟ್ಯೂಬ್ ವಿಡಿಯೋ ಲಿಂಕ್ ಇಲ್ಲಿದೆ .
ಹಾಗಿದ್ದರೆ ಪ್ರಧಾನಿ ಮೋದಿ ಸಂದರ್ಶನದಲ್ಲಿ ಹೇಳಿರುವಂತೆ, ಚುನಾವಣಾ ಬಾಂಡ್‌ನ ಮಾಹಿತಿಯನ್ನು ಜನಸಾಮಾನ್ಯರು ನಿಜವಾಗಿಯೂ ಪಡೆಯಬಹುದಾಗಿತ್ತೆ? ಮಾಹಿತಿ ಪಡೆಯಲು ಯಾವುದೇ ಅಡೆತಡೆಗಳು ಇರಲಿಲ್ಲವೇ ಎಂದು ಪರಿಶೀಲಿಸಿದಾಗ, ಪ್ರಧಾನಿ ಮೋದಿ ಹೇಳಿರುವುದು ಸುಳ್ಳು ಮತ್ತು ತಪ್ಪು ಮಾಹಿತಿ ಎಂಬುದು ಸ್ಪಷ್ಟವಾಗುತ್ತದೆ.
ಚುನಾವಣಾ ಬಾಂಡ್ ವಾಸ್ತವವೇನು ?
ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು 2017ರಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಹೇಳಿದ್ದರು. ನಗದು ರೂಪದಲ್ಲಿ ದೇಣಿಗೆ ನೀಡುವ ಮತ್ತು ಆ ಮೂಲಕ ಕಪ್ಪು ಹಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪದ್ಧತಿಗೆ ಚುನಾವಣಾ ಬಾಂಡ್ ಕೊನೆ ಹಾಡಲಿದೆ. ಚುನಾವಣಾ ಬಾಂಡ್ ಸಂಪೂರ್ಣ ಪಾರದರ್ಶಕ ವ್ಯವಸ್ಥೆ ಎಂದೂ ಸಚಿವರು ಹೇಳಿದ್ದರು.
ಆಕ್ಷೇಪ ವ್ಯಕ್ತಪಡಿಸಿದ್ದ ಆರ್‌ಬಿಐ :
ಈ ಬಾಂಡ್ ಯೋಜನೆ ಜಾರಿಗೆ ತರುವುದಕ್ಕೂ ಮೊದಲು ಹಣಕಾಸು ಸಚಿವಾಲಯವು ಆರ್‌ಬಿಐನ ಸಲಹೆಯನ್ನು ಕೇಳಿತ್ತು. ಇದು ಪ್ರಾಮಿಸರಿ ನೋಟ್ ಸ್ವರೂಪದ ಬಾಂಡ್. ಎಸ್‌ಬಿಐ ಈ ಬಾಂಡ್‌ಗಳನ್ನು ವಿತರಿಸುತ್ತದೆ ಎಂದು ಹೇಳಿತ್ತು. ಜತೆಗೆ ಬಾಂಡ್ ಖರೀದಿಸುವವರ ವಿವರವನ್ನು ಯಾವುದೇ ಕಾರಣಕ್ಕೂ ಎಸ್‌ಬಿಐ ಬಹಿರಂಗಪಡಿಸುವಂತಿಲ್ಲ (ನ್ಯಾಯಾಲಯ ಕೇಳಿದರೆ ಮಾತ್ರ ನೀಡಬೇಕು) ಎಂಬ ಷರತ್ತು ಆ ಯೋಜನೆಯಲ್ಲಿ ಇತ್ತು. ಈ ಎಲ್ಲಾ ಅಂಶಗಳಿಗೂ ರಿಸರ್ವ್ ಬ್ಯಾಂಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಎಡಿಆರ್ (ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಸೇರಿದಂತೆ ಹಲವು ಸಂಘಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಬಾಂಡ್ ವಿರುದ್ಧ ಅರ್ಜಿ ಸಲ್ಲಿಸಿದ್ದರು. ‘ಚುನಾವಣಾ ಬಾಂಡ್‌ಗಳಲ್ಲಿ ದೇಣಿಗೆ ನೀಡುವವರ ಹೆಸರೂ ಇರುವುದಿಲ್ಲ, ದೇಣಿಗೆ ಪಡೆಯುವವರ ಹೆಸರೂ ಇರುವುದಿಲ್ಲ. ಇನ್ನು ಚುನಾವಣಾ ಬಾಂಡ್ ಮೂಲಕ ಪಡೆದ ದೇಣಿಗೆ ಬಗ್ಗೆ ರಾಜಕೀಯ ಪಕ್ಷಗಳೂ ವಿವರ ಬಹಿರಂಗಪಡಿಸಬೇಕಿಲ್ಲ. ಇದು ಯಾವ ಸ್ವರೂಪದ ಪಾರದರ್ಶಕತೆ’ ಎಂದು ಪ್ರಶ್ನಿಸಿದ್ದವು. ಈಗ ಚುನಾವಣಾ ಬಾಂಡ್ ವಿರುದ್ಧ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ಸಹ ಸರಿಸುಮಾರು ಇಂಥದ್ದೇ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಧಾನಿ ಮೋದಿ ಹೇಳಿರುವಂತೆ ಚುನಾವಣಾ ಬಾಂಡ್ ಮಾಹಿತಿಯನ್ನು ಜನಸಾಮಾನ್ಯ ಪಡೆಯಬಹುದೆ? ಇಲ್ಲ ಎನ್ನುತ್ತಿವೆ ವರದಿಗಳು
ಜನವರಿ 11, 2020ರಂದು ‘thewire.in’ಪ್ರಕಟಿಸಿದ ‘Electoral Bonds: SBI Refuses Yet Again to Divulge Information on Rs 1 Crore Donors’ಎಂಬ ಶೀರ್ಷಿಕೆಯ ವರದಿಯಲ್ಲಿ “ಚುನಾವಣಾ ಬಾಂಡ್‌ಗಳನ್ನು ವಿತರಿಸಲು ಕೇಂದ್ರದಿಂದ ಅಧಿಕಾರ ಪಡೆದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 1 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ದೊಡ್ಡ ದಾನಿಗಳ ವಿವರಗಳನ್ನು ‘ಮಾಹಿತಿ ಹಕ್ಕು ಕಾಯ್ದೆ’ಯಡಿ ಬಹಿರಂಗಪಡಿಸಲು ಮತ್ತೊಮ್ಮೆ ನಿರಾಕರಿಸಿದೆ.” ಎಂದು ಹೇಳಿದೆ.
ಫೆಬ್ರವರಿ 15, 2024ರಂದು ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ “ಈ ಯೋಜನೆ ಅಸಂವಿಧಾನಿಕ ಮತ್ತು ಜನರ ‘ಮಾಹಿತಿ ಹಕ್ಕಿಗೆ’ ವಿರುದ್ದವಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಚುನಾವಣಾ ಬಾಂಡ್‌ನ ಮಾಹಿಯು ‘ಮಾಹಿತಿ ಹಕ್ಕು ಕಾಯ್ದೆ'(ಆರ್‌ಟಿಐ) ಅಡಿ ಜನಸಾಮಾನ್ಯನಿಗೆ ದೊರೆಯುತ್ತಿರಲಿಲ್ಲ ಎಂಬುದು ಸ್ಪಷ್ಟ.
ಕೊನೆಯದಾಗಿ :
ಚುನಾವಣಾ ಬಾಂಡ್ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಚುನಾವಣಾ ಬಾಂಡ್ ಯೋಜನೆ ಜಾರಿಗೂ ಮುನ್ನವೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆ ಆಕ್ಷೇಪವನ್ನು ಕಸದ ಬುಟ್ಟಿಗೆ ಎಸೆದಿದ್ದ ಕೇಂದ್ರ ಹಣಕಾಸು ಸಚಿವಾಲಯವು, ಯೋಜನೆ ಜಾರಿಗೆ ಒಪ್ಪಿಗೆ ನೀಡಿತ್ತು
ಚುನಾವಣಾ ಬಾಂಡ್ ಮಾಹಿತಿ ಪಡೆಯಲು ಸಾಮಾನ್ಯ ಜನರನ್ನು ಬಿಡಿ, ಸ್ವತಃ ಸುಪ್ರಿಂ ಕೋರ್ಟ್ ಮಧ್ಯಪ್ರವೇಶ ಮಾಡಿ ಮಾಹಿತಿಯನ್ನು ಬಹಿರಂಗ ಪಡಿಸುವಂತೆ ತಾಕೀತು ಮಾಡಿತ್ತು. ಆದರೂ ಎಸ್‌ಬಿಐ ಕಾರಣಗಳನ್ನು ನೀಡಿ ನುಣುಚಿಕೊಳ್ಳಲು ಮುಂದಾಗಿತ್ತು, ಮಾಹಿತಿಯನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಮೂರು ತಿಂಗಳ ಕಾಲಾವಕಾಶ ಬೇಕು ಎಂದು SBI ಕೇಳಿತ್ತು. ಅಂದರೆ ದೇಶದ ಅತ್ಯುನ್ನತ ಸಂಸ್ಥೆಯೊಂದು (ನ್ಯಾಯಾಂಗ) ಚುನಾವಣಾ ಬಾಂಡ್‌ಗಳ ಮಾಹಿತಿ ಪಡೆಯಲು ಇಷ್ಟು ಕಷ್ಟಪಡಬೇಕಾಯಿತು ಎಂದಾದರೆ ಜನಸಾನ್ಯನ ಪಾಡೇನು ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ ಅಲ್ಲವೇ? ಹಾಗಾಗಿ ಮೋದಿ ಹೇಳಿರುವುದು ಸುಳ್ಳು ಎಂಬುದು ಸ್ಪಷ್ಟವಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ತಮಿಳುನಾಡು ಖಾಸಗೀ ಟಿವಿ ಚಾನೆಲ್‌ಗೆ ಪ್ರಧಾನಿ ಮೋದಿ ನೀಡಿದ ಸಂದರ್ಶನಲ್ಲಿ ಚುನಾವಣಾ ಬಾಂಡ್ ಕುರಿತು ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ನೀಡಿದ್ದಾರೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಾರತದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದ್ದಾಗ ಶ್ರೀಲಂಕಾದಲ್ಲಿ ತಮಿಳುನಾಡು ಮೀನುಗಾರರ ಬಂಧನ ಹೆಚ್ಚಾಗಿ ನಡೆದಿದೆ ಗೊತ್ತೇ?