FACT CHECK | ಭಾರತದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದ್ದಾಗ ಶ್ರೀಲಂಕಾದಲ್ಲಿ ತಮಿಳುನಾಡು ಮೀನುಗಾರರ ಬಂಧನ ಹೆಚ್ಚಾಗಿ ನಡೆದಿದೆ ಗೊತ್ತೇ?

ಈಗ 2024ರ ಲೋಕಸಭಾ ಚುನಾವಣಾ ಹೊತ್ತಲ್ಲಿ ತಮಿಳುನಾಡು ಮೀನುಗಾರರ ರಕ್ಷಣೆ ಕಾರಣಕ್ಕೆ ಕಚ್ಚಿತ್ತೇವು ದ್ವೀಪದ ವಿವಾದವನ್ನು ಮುನ್ನಲೆಗೆ ತರಲಾಗಿದೆ ಎಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಿದ್ದಾರೆ. ಈ ವಿಷಯವನ್ನು ಪ್ರಸ್ತಾಪಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಅವರು, ‘20 ವರ್ಷಗಳಲ್ಲಿ ತಮಿಳುನಾಡಿನ 6,184 ಮೀನುಗಾರರನ್ನು ಶ್ರೀಲಂಕಾ ಬಂಧಿಸಿದೆ’ ಎಂದು ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ, ‘ಅಟಲ್‌ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಶ್ರೀಲಂಕಾ ಮೀನುಗಾರರನ್ನು ಬಂಧಿಸಿರಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ತಮಿಳುನಾಡು ಮೀನುಗಾರರ ವಿಚಾರವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದರೆ, ಮೀನುಗಾರರ ರಕ್ಷಣೆಯನ್ನು ಮಾಡಲು ಕಾಂಗ್ರೆಸ್‌ ಮತ್ತು ಡಿಎಂಕೆ ವಿಫಲವಾಗಿವೆ ಎಂಬುದು ಬಿಜೆಪಿಯ ಆರೋಪ. ಹಾಗಿದ್ದರೆ ಈ ರಾಜಕೀಯ ಆರೋಪಗಳನ್ನು ಬದಿಗಿಟ್ಟು ಸರ್ಕಾರದ ಅಧಿಕೃತ ದಾಖಲೆಗಳು, ದತ್ತಾಂಶಗಳು ತಮಿಳುನಾಡು ಮೀನುಗಾರರ ಬಂಧನದ ಯಾವ ಪಕ್ಷದ ಅಧಿಕಾರಾವಧಿಯಲ್ಲಿ ಹೆಚ್ಚಾಗಿದೆ, ಅಂಕಿ ಅಂಶಗಳು  ಏನನ್ನು ಹೇಳುತ್ತವೆ ಎಂದು ನೋಡೋಣ.

ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದ್ದಾಗ, ಶ್ರೀಂಕಾದಲ್ಲಿ ತಮಿಳುನಾಡು ಮೀನುಗಾರರ ಬಂಧನ ಹೆಚ್ಚಾಗಿ ನಡೆದಿದೆ?

1974ರಲ್ಲಿ ಕಚ್ಚತೀವು ದ್ವೀಪಕ್ಕೆ ಭಾರತೀಯರು ವಿಶ್ರಾಂತಿ ಪಡೆಯಲು, ಬಲೆಗಳನ್ನು ಒಗಿಸಲು ಹಾಗೂ ಚರ್ಚ್‌ಗೆ ಭೇಟಿ ನೀಡಲು ಮಾತ್ರ ಪ್ರವೇಶಕ್ಕೆ ಅನುಮತಿಸಲಾಗಿತ್ತು. 1976ರಲ್ಲಿನ ಒಪ್ಪಂದ ಪ್ರಕಾರ ಭಾರತದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ, ಎರಡೂ ದೇಶಗಳು ಮೀನುಗಾರಿಕೆಯನ್ನು ನಿಷೇಧಿಸಿತು.

1983ರಲ್ಲಿ ಅಂತರ್ಯುದ್ಧ ಗಡಿ ವಿವಾದಗಳನ್ನು ಉಲ್ಬಣಗೊಳಿಸಿತು. ಪ್ರತ್ಯೇಕ ತಮಿಳು ರಾಷ್ಟ್ರಕ್ಕೆ ಎಲ್‌ಟಿಟಿಇ ಹೋರಾಟ ನಡೆಸಿತು. ಆಗ ಶ್ರೀಲಂಕಾ ನೌಕಾಪಡೆ ಸರಬರಾಜು ಮಾರ್ಗಗಳನ್ನು ಕಡಿತಗೊಳಿಸಿತು. ಈ ವೇಳೆಯೂ ಭಾರತೀಯ ಮೀನುಗಾರರು ಅತಿಕ್ರಮಣ ಮಾಡುತ್ತಿದ್ದರು. ಭಾರತೀಯರ ದೊಡ್ಡ ಮೀನುಗಾರಿಕೆಯಿಂದ ಶ್ರೀಲಂಕಾ ಮೀನುಗಾರಿಕೆಗೆ ಪೆಟ್ಟು ಬೀಳುತ್ತಿತ್ತು.

2017ರಲ್ಲಿ ಭಾರತೀಯ  ಮೀನುಗಾರನನ್ನು ಶ್ರೀಲಂಕಾ ನೌಕಾಪಡೆ ಹತ್ಯೆ ಮಾಡಿರುವುದನ್ನು ಖಂಡಿಸಿ ಪ್ರಧಾನಿ ಮೋದಿಯವರಿಗೆ ತಮಿಳುನಾಡು ಮುಖ್ಯಮಂತ್ರಿ ಪತ್ರವನ್ನು ಬರೆದಿದ್ದರು ಎಂದು ಕನ್ನಡಪ್ರಭ ವರದಿ ಮಾಡಿದೆ. ಮೀನುಗಾರನ ಹತ್ಯೆ ಪ್ರಕರಣವನ್ನು ಕಡೆಗಣಿಸಬಾರದು. ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಬಾರದು ಎಂದು ಪಳನಿಸ್ವಾಮಿಯವರು ಪತ್ರದಲ್ಲಿ ಹೇಳಿದ್ದರು.

ಶ್ರೀಲಂಕಾ ನೌಕಾಪಡೆಯ ಅಮಾನವೀಯ ಮತ್ತು ಅನಾಗರೀಕ ತಂತ್ರಗಳು ಭಾರತ ಮತ್ತು ಶ್ರೀಲಂಕಾ ಸರ್ಕಾರಗಳ ರಾಜತಾಂತ್ರಿಕ ಸಭೆಗಳನ್ನು ನಿರರ್ಥಕಗೊಳಿಸುತ್ತದೆ. ಮೀನುಗಾರರ ಜೀವ ಮತ್ತು ಅವರ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವುದು ಭಾರತ ಮತ್ತು ತಮಿಳುನಾಡು ಸರ್ಕಾರ ಕರ್ತವ್ಯವಾಗಿದೆ ಎಂದು ಪಳನಿಸ್ವಾಮಿಯವರು ಪತ್ರದಲ್ಲಿ ತಿಳಿಸಿದ್ದರು ಎಂದು ವರದಿಯಾಗಿದೆ.

ಆಗಲೂ ಎಚ್ಚೆತ್ತುಕೊಳ್ಳದ ಕೇಂದ್ರದ ಮೋದಿ ಸರ್ಕಾರ ಈಗ ಚುನಾವಣಾ ಹೊಸ್ತಿಲಲ್ಲಿ ಬಂದು ತಮಿಳುನಾಡಿನ ಮೀನುಗಾರರ ಬಗ್ಗೆ ಅನುಕಂಪ ತೋರಿಸುತ್ತಿದೆ. ಈ 20 ವರ್ಷ, ಅಂದರೆ 2004ರಿಂದ 2024ರ ಮಾರ್ಚ್‌ ಮೂರನೇ ವಾರದವರೆಗೆ ಶ್ರೀಲಂಕಾವು ತಮಿಳುನಾಡಿನ ಒಟ್ಟು 6,184 ಮೀನುಗಾರರನ್ನು ಬಂಧಿಸಿದೆ. ಈ 20 ವರ್ಷಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಮೊದಲ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಬಂಧನಕ್ಕೆ ಒಳಗಾಗಿದ್ದು 2,915 ಮೀನುಗಾರರು. ಆದರೆ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡೂ ಸರ್ಕಾರಗಳ ಅವಧಿಯಲ್ಲಿ ಶ್ರೀಲಂಕಾವು ಬಂಧಿಸಿದ ತಮಿಳುನಾಡಿನ ಮೀನುಗಾರರ ಸಂಖ್ಯೆ 3,269.

ಚಿತ್ರ ಕೃಪೆ : ಪ್ರಜಾವಾಣಿ
ಚಿತ್ರ ಕೃಪೆ : ಪ್ರಜಾವಾಣಿ

ಇದು ಯುಪಿಎ ಸರ್ಕಾರದ ಅವಧಿಯಲ್ಲಿನ ಬಂಧನಗಳಿಗಿಂತ ಹೆಚ್ಚು. ಇನ್ನೂ ಕಳವಳಕಾರಿ ಅಂಶವೆಂದರೆ ಈ ವರ್ಷದ ಮೊದಲ 80 ದಿನಗಳಲ್ಲಿ ಶ್ರೀಲಂಕಾವು ತಮಿಳುನಾಡಿನ 132 ಮೀನುಗಾರರನ್ನು ಬಂಧಿಸಿದೆ ಎಂದು ಪ್ರಜಾವಾಣಿ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ.

2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಕಚ್ಚತೀವು ದ್ವೀಪದ ವಿವಾದ ಹಾಗೂ ತಮಿಳುನಾಡಿದ ದಕ್ಷಿಣ ತೀರದಲ್ಲಿರುವ ಮೀನುಗಾರರ ಮೇಲಿನ ದೌರ್ಜನ್ಯದ ವಿರುದ್ಧ ರಾಮೇಶ್ವರಂನಲ್ಲಿ ಕೇಸರಿ ನಾಯಕರು ಹೋರಾಟ ನಡೆಸಿದರು. ಆದರೆ ಎಷ್ಟೇ ಹೋರಾಟ ನಡೆಸಿದರೂ ಯಶಸ್ವಿಯಾಗಲಿಲ್ಲ. ನಂತರ ಸತತ 10 ವರ್ಷ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಮೀನುಗಾರರಿಗೆ ರಕ್ಷಣೆ ನೀಡಲು ಸಾಧ್ಯವಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಸ್ತುತ 2024ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ತಮಿಳುನಾಡು ಮೀನುಗಾರರ ಪ್ರಶ್ನೆಗಳನ್ನು ಮುನ್ನಲೆಗೆ ತಂದಿರುವ ಬಿಜೆಪಿ, ಕಳೆದ 10 ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ತಮಿಳುನಾಡು ಮೀನುಗಾರರ ಸಮಸ್ಯೆಗೆ ತಾರ್ಕಿಕ ರೂಪ ನೀಡಲು ವಿಫಲವಾಗಿದೆ.

ಜನರ ಪ್ರಶ್ನೆ:  ಉಕ್ರೇನ್ – ರಷ್ಯಾ ಯದ್ದವನ್ನೆ ನಿಲ್ಲಿಸಿದ್ದ ವಿಶ್ವಗುರು ಪ್ರಧಾನಿಗಳಿಗೆ, ಶ್ರೀಲಂಕಾ ಅಧ್ಯಕ್ಷರೊಂದಿಗೆ ಮಾತನಾಡಿ ತಮಿಳುನಾಡು ಮೀನುಗಾರರ ಸಮಸ್ಯೆಯನ್ನು ಕೊನೆಗಾಣಿಸಲು ಆಗುತ್ತಿಲ್ಲ ಯಾಕೆ? ಇದಕ್ಕೆ ಪ್ರಧಾನಿಯೇ ಉತ್ತರಸಿಬೇಕಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಶ್ರೀಲಂಕಾದ ಕಚ್ಚತೀವು ದ್ವೀಪದ ಬಗ್ಗೆ ಸುಳ್ಳು ಹೇಳಿದ್ರಾ ಪ್ರಧಾನಿ ಮೋದಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights