FACT CHECK | ಶ್ರೀಲಂಕಾದ ಕಚ್ಚತೀವು ದ್ವೀಪದ ಬಗ್ಗೆ ಸುಳ್ಳು ಹೇಳಿದ್ರಾ ಪ್ರಧಾನಿ ಮೋದಿ?

ಲೋಕಸಭೆ ಚುನಾವಣೆ ನಡೆಯುವ ಹೊತ್ತಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಕಚ್ಚತೀವು ದ್ವೀಪದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ. ಶ್ರೀಲಂಕಾಗೆ ಕಚ್ಚತೀವು ದ್ವೀಪವನ್ನು ಭಾರತ ಬಿಟ್ಟುಕೊಟ್ಟಿದೆ ಎಂಬ ಮಾಹಿತಿಯನ್ನು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಆರ್‌ಟಿಐ ಮೂಲಕ ಪಡೆದಿದ್ದಾರೆ. ಇದೇ ವಿಷಯವು ಈಗ ಲೋಕಸಭೆ ಚುನಾವಣೆಯಲ್ಲಿ ಜೋರು ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಪ್ರಧಾನಿ ಮೋದಿ ಜವಾಹರ್ ಲಾಲ್ ನೆಹರೂ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ ಸ್ವಾರ್ಥಕ್ಕಾಗಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿದೆ ಎಂದು ಆರೋಪಿಸಿದ್ದಾರೆ. ಕಚ್ಚತೀವು ದ್ವೀವನ್ನು ಮತ್ತೆ ಭಾರತಕ್ಕೆ ಹಿಂಪಡೆಯುವ ಬಗ್ಗೆ ಮಾತನಾಡಿದ್ದಾರೆ.

ಕಾಂಗ್ರೆಸ್‌ ಸರ್ಕಾರವು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿತ್ತು ಎಂದು ಪ್ರಧಾನಿ ಮೋದಿ ಅವರು ತಮ್ಮ ವೈಯಕ್ತಿಕ ಎಕ್ಸ್‌ ಖಾತೆಯಲ್ಲಿ ಭಾನುವಾರ ಒಂದು ಪೋಸ್ಟ್‌ ಮಾಡಿದ್ದರು. ದೇಶದ ಸಮಗ್ರತೆ ಮತ್ತು ಏಕತೆಯನ್ನು ದುರ್ಬಲಗೊಳಿಸುವುದೇ ಕಾಂಗ್ರೆಸ್‌ನ ಕಾರ್ಯವೈಖರಿ. ಈ ಕಾರಣದಿಂದ ಕಾಂಗ್ರೆಸ್‌ ಅನ್ನು ನಂಬಲು ಸಾಧ್ಯವಿಲ್ಲ ಎಂದು ಮೋದಿ ಆರೋಪಿಸಿದ್ದರು. ಈ ಆರೋಪಕ್ಕೆ ಮೋದಿ ಅವರು ಪತ್ರಿಕಾ ವರದಿಯೊಂದನ್ನು ಆಧಾರವಾಗಿ ಬಳಸಿಕೊಂಡಿದ್ದರು.

Indira Gandhi donated Katchatheevu Island to gain Sri Lanka's Friendship - Power Corridors

ಸಚಿವ ಎಸ್‌. ಜಯಶಂಕರ್ ಹೇಳಿದ್ದು :

ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಕಚ್ಚತ್ತೇವು ದ್ವೀಪದ ಕಚ್ಚತೇವು ದ್ವೀಪದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಭಾರತದಲ್ಲಿ ನಡೆಯುತ್ತಿದ್ದ ವಿರೋಧವನ್ನು ಗಮನದಲ್ಲಿಟ್ಟುಕೊಂಡು, ಮೇ 10, 1961 ರಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಒಂದು ನಿಮಿಷದಲ್ಲಿ ಈ ವಿಷಯವನ್ನು ಅಪ್ರಸ್ತುತವೆಂದು ತಳ್ಳಿಹಾಕಿದರು. ಈ ದ್ವೀಪದ ಮೇಲಿನ ಹಕ್ಕು ಬಿಟ್ಟುಕೊಡಲು ನಾನು ಯಾವುದೇ ಹಿಂಜರಿಕೆ ತೋರಿಸುವುದಿಲ್ಲ ಎಂದು ಅವರು ಬರೆದಿದ್ದಾರೆ. ನಾನು ಈ ಪುಟ್ಟ ದ್ವೀಪವನ್ನು ಗೌರವಿಸುವುದಿಲ್ಲ ಮತ್ತು ಅದರ ಮೇಲಿನ ನನ್ನ ಹಕ್ಕನ್ನು ಬಿಟ್ಟುಕೊಡಲು ಯಾವುದೇ ಹಿಂಜರಿಕೆಯಿಲ್ಲ. ಈ ವಿವಾದವು ಅನಿರ್ದಿಷ್ಟವಾಗಿ ಮುಂದುವರಿಯುವುದು ಮತ್ತು ಸಂಸತ್ತಿನಲ್ಲಿ ಮತ್ತೆ ಪ್ರಸ್ತಾಪಿಸುವುದು ನನಗೆ ಇಷ್ಟವಿಲ್ಲ ಎಂದಿದ್ದರು ಎಂದು ಜಯಶಂಕರ್ ಸುದ್ದಿಗೋಷ್ಠಿಯಲ್ಲಿ  ತಿಳಿಸಿದ್ದರು.

ಹಾಗಿದ್ದರೆ  ಕಚ್ಚತೀವು ದ್ವೀಪವು ನಿಜವಾಗಿಯೂ ಭಾರತಕ್ಕೆ ಸೇರಬೇಕಿತ್ತೆ? ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡಲು ಅಂದಿನ ಪ್ರಧಾನಿ ಜಹವಾರಲಾಲ್ ನೆಹರು ಕಾರಣವೇ? ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ಹೇಳಿಕೆ ರಾಜಕೀಯ ಪ್ರೇರಿತವೇ? ಅಥವಾ ವಾಸ್ತವವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಈಗ ಕಚ್ಚತ್ತೇವು ಎಂದು ಕರೆಯಲ್ಪಡುವ ಪ್ರದೇಶವು 14 ನೇ ಶತಮಾನದಲ್ಲಿ ಜ್ವಾಲಾಮುಖಿ ಸ್ಫೋಟದಿಂದ ನಿರ್ಮಾಣವಾದ ದಗವೀಪವಾಗಿತ್ತು. ಇದು ಶ್ರೀಲಂಕಾದ ಜಾಫ್ನಾ ಸಾಮ್ರಾಜ್ಯದಿಂದ ನಿಯಂತ್ರಿಸಲ್ಪಟ್ಟಿತ್ತು. ಕಚ್ಚತೀವು ದ್ವೀಪ ಭಾರತ ಮತ್ತು ಶ್ರೀಲಂಕಾ ನಡುವಿನ ಪಾಕ್ ಜಲಸಂಧಿಯಲ್ಲಿದೆ. ಭಾರತದ ಕರಾವಳಿಯಿಂದ ರಾಮೇಶ್ವರಂನ ಈಶಾನ್ಯ ದಿಕ್ಕಿನಲ್ಲಿದೆ. 285 ಎಕರೆ ವಿಸ್ತಾರವುಳ್ಳ ಈ ದ್ವೀಪವು ಕುಡಿಯಲು ನೀರಿಲ್ಲದ ಕಾರಣ ಜನ ವಸತಿಗೆ ಯೋಗ್ಯವಾಗಿಲ್ಲ.

Katchatheevu Island is located in the Palk Strait between India and Sri Lanka - Power Corridors

ಈ ದ್ವೀಪವು ತಮಗೆ ಸೇರಿದ್ದು ಎಂದು ಶ್ರೀಲಂಕಾವು ಡಚ್ಚರು ಮತ್ತು ಬ್ರಿಟಿಷರ ಆಳ್ವಿಕೆ ಅವಧಿಯ ದಾಖಲೆಗಳನ್ನು ತೋರಿಸಿತ್ತು. ರಾಮನಾಥಪುರದ ಅರಸು ಮನೆತನ ಇದರ ಒಡೆತನ ಹೊಂದಿತ್ತು ಎಂದು ಪ್ರತಿಪಾದಿಸಿತ್ತಾದರೂ, ಅದನ್ನು ಬೆಂಬಲಿಸುವ ಯಾವುದೇ ದಾಖಲೆಗಳನ್ನು ಒದಗಿಸಿರಲಿಲ್ಲ. ಎರಡು ದಶಕಕ್ಕೂ ಮೀರಿದ ಅವಧಿಯಲ್ಲಿ ಹಲವು ಸುತ್ತಿನ ಮಾತುಕತೆಗಳ ನಂತರ 1973ರಲ್ಲಿ ಭಾರತ–ಶ್ರೀಲಂಕಾ ಜಲಗಡಿಯನ್ನು ಅಂತಿಮಗೊಳಿಸಲು ನಿರ್ಧರಿಸಲಾಯಿತು. ಆ ಸಂಬಂಧ 1974ರಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು.

1974ರಲ್ಲಿ ಒಪ್ಪಂದಲ್ಲಿ ಏನಿದೆ :

1974ರ ಒಪ್ಪಂದದಲ್ಲಿ ಗುರುತಿಸಲಾದ ಜಲಗಡಿಯ ಪ್ರಕಾರ ಕಚ್ಚತೀವು ದ್ವೀಪವು ಶ್ರೀಲಂಕಾಕ್ಕೆ ಸೇರಿತು. ಆದರೆ ಈ ದ್ವೀಪವನ್ನು ಶ್ರೀಲಂಕಾದಿಂದ ಪಡೆದುಕೊಳ್ಳಬೇಕು ಎಂಬ ಕೂಗೂ ರಾಜಕೀಯ ವಲಯದಲ್ಲಿ ಇದ್ದೇ ಇತ್ತು. ಈ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಪ್ರಶ್ನೆಗಳನ್ನು ಎತ್ತಿದಾಗ ಎಲ್ಲಾ ಸರ್ಕಾರಗಳು, ಕಚ್ಚತೀವು ದ್ವೀಪದ ವಿಚಾರ ಈಗಾಗಲೇ ಮುಗಿದಿದೆ. ಅಲ್ಲಿನ ಕೆಲವು ಹಕ್ಕುಗಳ ಬಗ್ಗೆ ಮಾತ್ರ ವಿವಾದವಿದೆ ಎಂದೇ ಹೇಳಿಕೆ ನೀಡಿದ್ದವು.

ಈ ಬಗ್ಗೆ ಪ್ರಶ್ನೆ ಕೇಳಿ, ಅಲಾಡಿ ಗುರುಸ್ವಾಮಿ ಅವರು 2015ರ ಜನವರಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಸಚಿವೆ ಸುಷ್ಮಾ ಸ್ವರಾಜ್‌ ನೇತೃತ್ವದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆ ಅರ್ಜಿಗೆ ಅದೇ ಜನವರಿ 27ರಂದು ಉತ್ತರ ನೀಡಿತ್ತು.

ಉತ್ತರದಲ್ಲಿ, ‘1974 ಮತ್ತು 1976ರ ಒಪ್ಪಂದಗಳ ಪ್ರಕಾರ ಕಚ್ಚತೀವು ದ್ವೀಪವು ಶ್ರೀಲಂಕಾದ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲಿಯವರೆಗೆ ಆ ದ್ವೀಪವು ಯಾರ ವ್ಯಾಪ್ತಿಗೆ ಸೇರುತ್ತದೆ ಎಂಬುದನ್ನು ಗುರುತಿಸಿರಲೇ ಇಲ್ಲ. ಹೀಗಾಗಿ ಎರಡೂ ದೇಶಗಳ ಮಧ್ಯೆ ಜಲಗಡಿಯನ್ನು ಗುರುತಿಸುವ ಅವಧಿಯಲ್ಲಿ ಭಾರತವು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ಅಥವಾ ಸ್ವಾಧೀನಪಡಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸಚಿವಾಲಯವು ವಿವರಿಸಿತ್ತು.

ಜತೆಗೆ ಒಪ್ಪಂದಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಉತ್ತರದೊಂದಿಗೆ ನೀಡಿತ್ತು. ಮೋದಿ ಅವರ ಸರ್ಕಾರದ್ದೇ ಸಚಿವಾಲಯವು ಅಧಿಕೃತವಾಗಿ ನೀಡಿದ್ದ ದಾಖಲೆಗಳ ಪ್ರಕಾರ ಕಚ್ಚತೀವು ದ್ವೀಪವು ಎಂದಿಗೂ ಭಾರತಕ್ಕೆ ಸೇರಿರಲೇ ಇಲ್ಲ. ಎಂದು ಪ್ರಜಾವಾಣಿ ವರದಿಯಲ್ಲಿ ಉಲ್ಲೇಖಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಲೋಕಸಭಾ ಚುನಾವಣೆಯ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ‘ಕಚ್ಚತೀವು’ ದ್ವೀಪದ ವಿಷಯವನ್ನು ಮುಂದಿಟ್ಟು, ‘ಕಚ್ಚತೀವು ದ್ವೀಪವನ್ನು ಕಾಂಗ್ರೆಸ್‌ ಪಕ್ಷವು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದೆ’ ಎಂದು ಮೋದಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಆದರೆ ಮೋದಿ ಅವರ ಈ ಆರೋಪ ಸುಳ್ಳು ಎನ್ನುತ್ತವೆ ಸರ್ಕಾರದ ದಾಖಲೆಗಳು.

ಪ್ರಧಾನಿ ಮೋದಿ ಅವರ ಸರ್ಕಾರವೇ ಈ ಹಿಂದೆ ಆರ್‌ಟಿಐ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಾ, ‘ಕಚ್ಚತೀವು ದ್ವೀಪವು ಎಂದಿಗೂ ಭಾರತಕ್ಕೆ ಸೇರಿರಲೇ ಇಲ್ಲಎಂದು ಉತ್ತರಿಸಿತ್ತು. ತಮ್ಮದೇ ಸರ್ಕಾರ ನೀಡಿದ್ದ ಉತ್ತರಕ್ಕೆ ವ್ಯತಿರಿಕ್ತವಾದ ಆರೋಪವನ್ನು ಈಗ ಪ್ರಧಾನಿ ಮಾಡಿದ್ದಾರೆ. ಹಾಗಾಗಿ ಕಚ್ಚತೀವು ದ್ವೀಪದ ವಿಚಾರ ಮುಂದಿಟ್ಟುಕೊಂಡು 2024ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಸ್ಥಾನವನ್ನು ಗೆಲ್ಲಲು ಮಾಡುತ್ತಿರುವ ತಂತ್ರ ಎಂದೇ ಹೇಳಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಇದು ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸಾವಿರ ವರ್ಷದ ಪ್ರಾಚೀನ ಕಾಲದ ನಟರಾಜನ ವಿಗ್ರಹ ಪತ್ತೆಯಾಗಿದೆ ಎಂದು ಸ್ಕ್ರಿಪ್ಟ್‌ ಮಾಡಿದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights