ವೆಂಟಿಲೇಟರ್‌ ಖರೀದಿಯಲ್ಲಿ ಯಡಿಯೂರಪ್ಪ ಸರ್ಕಾರದ ಭಾರೀ ಅಕ್ರಮ; ದಾಖಲೆಗಳು ಇಲ್ಲಿವೆ!

ಕೊರೊನಾ ಚಿಕಿತ್ಸೆಗಾಗಿ ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿಯು ದುಪ್ಪಟ್ಟು ದರದಲ್ಲಿ 200 ವೆಂಟಿಲೇಟರ್‌ ಗಳನ್ನು ಖರೀದಿಸಲು ಆದೇಶಿಸಿದೆ .

ನೆರೆಯ ತಮಿಳುನಾಡು ಸರ್ಕಾರ ವೆಂಟಿಲೇಟರ್‌ಗಳನ್ನು ಖರೀದಿಸಿರುವ ದರಕ್ಕೆ ಹೋಲಿಸಿದರೆ ಕರ್ನಾಟಕ ಸರ್ಕಾರ ನೀಡಿರುವ ದರದಲ್ಲಿ ಭಾರೀ ವ್ಯತ್ಯಾಸವಿದೆ. ತಮಿಳುನಾಡು ಸರ್ಕಾರ ವೆಂಟಿಲೇಟರ್‌ವೊಂದಕ್ಕೆ 4.78 ಲಕ್ಷ ರೂ. ನೀಡಿದರೆ, ಕರ್ನಾಟಕ ಸರ್ಕಾರ ಗರಿಷ್ಠ 18 ಲಕ್ಷ ರೂ. ಕೊಟ್ಟು ಖರೀದಿಸಿರುವುದು ಬೆಳಕಿಗೆ ಬಂದಿದೆ.

ತಮಿಳುನಾಡು ಸರ್ಕಾರ 4.78 ಲಕ್ಷ ರೂ. ನಂತೆ 100 ವೆಂಟಿಲೇಟರ್‌ಗಳನ್ನು ಒಟ್ಟು 9.50 ಕೋಟಿ ರೂಗಳಿಗೆ ಖರೀದಿಸಿದ್ದರೆ, ಕರ್ನಾಟಕ ಸರ್ಕಾರ ವಿವಿಧ ದರಗಳಲ್ಲಿ 200 ವೆಂಟಿಲೇಟರ್‌ಗಳಿಗೆ 15.86 ಕೋಟಿ ರೂಗಳನ್ನು ನೀಡಿ ಖರೀದಿಸಿದೆ.

ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊರೋನಾ ಸಂದರ್ಭದಲ್ಲಿ ಖರೀದಿಸಿರುವ ಸಾಮಗ್ರಿಗಳ ವಿವರ ನೀಡಲು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು ‘ಲೆಕ್ಕಕೊಡಿ’ ಅಭೀಯಾನವನ್ನು ಆರಂಭಿಸಿದ್ದಾರೆ. ಇದರ ಬೆನ್ನಲೇ, ದುಪ್ಪಟ್ಟು ದರದಲ್ಲಿ ವೆಂಟಿಲೇಟರ್‌‌ಗಳನ್ನು ಖರೀದಿಸಿರುವುದು ಕಂಡುಬಂದಿದೆ.

ತಮಿಳುನಾಡಿನಲ್ಲಿ 4.78 ಲಕ್ಷ

ತಮಿಳುನಾಡು ಸರ್ಕಾರದ ಅಂಗ ಸಂಸ್ಥೆಯಾಗಿರುವ ತಮಿಳುನಾಡು ಮೆಡಿಕಲ್ ಸರ್ವಿಸ್ ಕಾರ್ಪೋರೇಷನ್ ಕೊರೊನಾ ಚಿಕಿತ್ಸೆಗಾಗಿ ಒಂದು ವೆಂಟಿಲೇಟರ್‌ಗೆ 4,78,000.00 ರು.ನಂತೆ ಒಟ್ಟು 100 ವೆಂಟಿಲೇಟರ್‌ಗಳ (Model; Astral 150) ಸರಬರಾಜು ಮಾಡುವಂತೆ 2020 ರ ಮಾರ್ಚ್ 26 ರಂದು ದಹಲಿಯಲ್ಲಿರುವ ರಸ್‌ಮಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಆದೇಶ ನೀಡಿತ್ತು.

ಕರ್ನಾಟಕದಲ್ಲಿ 18 ಲಕ್ಷ

ಕೊರೊನಾ ಸೋಂಕಿನ ಸಂದರ್ಭದಲ್ಲೇ ತಮಿಳುನಾಡು ಸರ್ಕಾರ ವೆಂಟಿಲೇಟರ್‌ವೊಂದಕ್ಕೆ 4,78,000 ರೂ. ನೀಡಿದರ ಕರ್ನಾಟಕ ಸರ್ಕಾರವು ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ ಮೂಲಕ ವೆಂಟಿಲೇಟರ್‌ವೊಂದನ್ನು ಗರಿಷ್ಠ 18,20,000 ರು.ದರದಲ್ಲಿ ಖರೀದಿಸಲಾಗಿದೆ . ಈ ಲೆಕ್ಕಾಚಾರದ ಪ್ರಕಾರ 200 ವೆಂಟಿಲೇಟರ್‌ಗಳಿಗೆ ಒಟ್ಟು 15,86,81,600 ರು.ಗಳಾಗಿದೆ . ಈ ಪೈಕಿ ಸರಬರಾಜಾಗಿರುವ 63 ವೆಂಟಿಲೇಟರ್‌ಗಳಿಗೆ 5,09,22,260 ರು.ಗಳನ್ನು ಈಗಾಗಲೇ ಪಾವತಿಸಿರುವುದು ತಿಳಿದು ಬಂದಿದೆ .

ತಮಿಳುನಾಡು ಸರ್ಕಾರದಂತೆಯೇ ಕರ್ನಾಟಕ ಸರ್ಕಾರವೂ ಮಾರ್ಚ್ ಮತ್ತು ಏಪ್ರಿಲ್‌ನಲ್ಲೇ ವೆಂಟಿಲೇಟರ್‌ಗಳನ್ನು ಖರೀದಿಸಿತ್ತು . ತಮಿಳುನಾಡು ಸರ್ಕಾರ ಖರೀದಿಸಿದ 4,78,000 ರು.ದರದಲ್ಲೇ ಕರ್ನಾಟಕವೂ 200 ವೆಂಟಿಲೇಟರ್ ಖರೀದಿ ಮಾಡಿದರೆ 9.56 ಕೋಟಿ ರು . ಅಗುತ್ತಿತ್ತು . ಆದರೆ ಕರ್ನಾಟಕದ ಅಧಿಕಾರಿಗಳ ಕಮಿಷನ್ ಆಸೆಯಿಂದಾಗಿ ಇಷ ವೆಂಟಿಲೇಟರ್‌ಗಳಿಗೆ 15.86 ಕೋಟಿ ರು.ಗಳನ್ನು ತೆತ್ತಬೇಕಾಗಿದೆ .

ತಮಿಳುನಾಡು ಮತ್ತು ಕರ್ನಾಟಕ ಸರ್ಕಾರ ಖರೀದಿಸಿರುವ ಬೆಲೆಗೆ ಹೋಲಿಕೆ ಮಾಡಿ ನೋಡಿದರೆ, ಕರ್ನಾಟಕ ಸರ್ಕಾರ 6.30 ಕೋಟಿ ರೂಗಳಷ್ಟು ಹೆಚ್ಚುವರಿ ಮೊತ್ತವನ್ನು ವೆಂಟಿಲೇಟರ್‌ಗಾಗಿ ಬಳಸಿದೆ.

13 ಲಕ್ಷ ವ್ಯತ್ಯಾಸ

2020 ರ ಮಾರ್ಚ್ ಮತ್ತು ಏಪ್ರಿಲ್‌ನ ವಿವಿಧ ದಿನಾಂಕಗಳಲ್ಲಿ ಖರೀದಿಸಿರುವ ದರದಲ್ಲಿ ಒಂದೊಂದು ವೆಂಟಿಲೇಟರ್ ಯುನಿಟ್‌ಗೆ 8,20,000 , 7,14,800 , 7,54,000 , 13,42,000 ರು . , 8,66,000 , 7,54,000 , 8,10,000 , 5,25,520 , 8,94,000 , 2,98,160 , 4,64,480 ರು . ವ್ಯತ್ಯಾಸವಿರುವುದು ಕಂಡು ಬಂದಿದೆ .

ವಿವಿಧ ದರಗಳಲ್ಲಿ ಖರೀದಿ

2020 ರ ಮಾರ್ಚ್ 22 ರಂದು ಯೂನಿಟ್‌ವೊಂದಕ್ಕೆ 5,60,000 ರು . ದರದಲ್ಲಿ ಒಟ್ಟು 130 ವಂಟಿಲೇಟರ್‌ಗಳ ಸರಬರಾಜಿಗೆ ಸ್ಮಾನ್ ರೇ ಟೆಕ್ನಾಲಾಜೀಸ್‌ಗೆ ಬುಕ್‌ ಮಾಡಿದೆ. ಈ ಪೈಕಿ 35 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿರುವ ಈ ಕಂಪನಿಗೆ 1,75,60,000 ರು . ಪಾವತಿಸಿದೆ.

ಇದೇ ಕಂಪನಿ 2020 ರ ಮಾರ್ಚ್ 22 ರಂದೇ 4 ವೆಂಟಿಲೇಟರ್‌ಗಳ ಸರಬರಾಜಿಗೆ ಆದೇಶ ಪಡೆದಿತ್ತಲ್ಲದೆ, ಯೂನಿಟ್‌ಗೆ 11,92,800 ರು.ನಂತೆ ಒಟ್ಟು 4 ‘ ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿದೆ . ಈಗಾಗಲೇ ಈ ಕಂಪನಿಗೆ 47,21,200 ರು.ಗಳನ್ನು ಪಾವತಿಸಿದೆ.

ಆದರೆ ಇದೇ ಕಂಪನಿ 12,32,000 ರು . ದರದಲ್ಲಿ 10 ವೆಂಟಿಲೇಟರ್‌ಗಳ ಪೈಕಿ 8 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿದೆ. ಯಾವ ದಿನಾಂಕದಂದು ಖರೀದಿ ಆದೇಶ ಹೊರಡಿಸಿದೆ ಎಂಬ ವಿವರಗಳನ್ನು ಒದಗಿಸದ ಆರೋಗ್ಯ ಇಲಾಖೆ, ಈ ಕಂಪನಿಗೆ ಈಗಾಗಲೇ ಒಟ್ಟು 3,21,87,200 ರು.ಗಳನ್ನು ಪಾವತಿಸಿದೆ.

ಹಾಗೆಯೇ ವಂಟಿಲೇಟರ್‌ವೊಂದನ್ನು 18,20,000 ರು . ದರದಲ್ಲಿ ಖರೀದಿಸಿದೆ . ಈ ಸಂಬಂಧ 2020 ರ ಮಾರ್ಚ್ 24 ರಂದು ಆದೇಶ ಹೊರಡಿಸಿದೆಯಾದರೂ ಯಾವ ಕಂಪನಿಯಿಂದ ಖರೀದಿಸಿದೆ ಎಂಬ ವಿವರಗಳನ್ನು ಒದಗಿಸಿಲ್ಲ. ಅಲ್ಲದೆ, ಇದೇ ದಿನಾಂಕದಂದು 5 ವಂಟಿಲೇಟರ್‌ಗಳ ಸರಬರಾಜಿಗೆ ಆದೇಶ ಹೊರಡಿಸಿರುವ ಸರ್ಕಾರ ಈವರವಿಗೆ ಒಟ್ಟು 67,20,000 ರು.ಗಳನ್ನು ಪಾವತಿಸಿದೆ.

ಇನ್ನು 12,32,000 ರು . ದರದಲ್ಲಿ 16 ಮತ್ತು 12,88,000 ರು . ದರದಲ್ಲಿ 22 ವಂಟಿಲೇಟರ್‌ಗಳ ಸರಬರಾಜಿಗೆ ಇದೇ ದಿನಾಂಕದಂದು ಆದೇಶ ಹೊರಡಿಸಿತ್ತಾದರೂ ಆ ನಂತರ ಆದೇಶವನ್ನು ರದ್ದುಗೊಳಿಸಿದೆ. ಮಾರ್ಚ್ 30 ರಂದು ಒಟ್ಟು 6 ವಂಟಿಲೇಟರ್‌ಗಳಿಗೆ ತಲಾ 10,03,520 ರೂ, 2 ವೆಂಟಿಲೇಟರ್‌ಗೆ ತಲಾ 13,72,000 ರೂ , ಏಪ್ರಿಲ್ 16 ರಂದು 2 ವಂಟಿಲೇಟರ್‌ಗಳಿಗೆ ತಲಾ 7,76,160 ರೂ. ಮತ್ತು 9,42,480 ರು.ನಂತೆ ಒಟ್ಟು 2 ವಂಟಿಲೇಟರ್ ಸರಬರಾಜಿಗೆ ಆದೇಶ ಹೊರಡಿಸಿದೆ.

2020 ರ ಮಾರ್ಚ್ 24 ರಿಂದ ಏಪ್ರಿಲ್ 16 ವರೆಗೆ ಒಟ್ಟು ಸರಬರಾಜಾಗಿರುವ 16 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿರುವ ಕಂಪನಿಗೆ ಒಟ್ಟಾರೆ 1,87,35,360 ರು.ಗಳನ್ನು ಈಗಾಗಲೇ ಪಾವತಿಸಿರುವುದು ಗೊತ್ತಾಗಿದೆ.

2020 ರ ಮಾರ್ಚ್ 22 ರಿಂದ ಏಪ್ರಿಲ್ 16 ರವರೆಗೆ ಕರ್ನಾಟಕ ಸರ್ಕಾರ ಒಟ್ಟು 1,580 ವೆಂಟಿಲೇಟರ್ಸ್‌ಗಳ ಖರೀದಿಗೆ ಆದೇಶ ನೀಡಿತ್ತು. ಈ ಪೈಕಿ 691 ವೆಂಟಿಲೇಟರ್ಸ್‌ಗಳು ಸರಬರಾಜಾಗಿರುವುದು ಆರೋಗ್ಯ ಇಲಾಖೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ.

1,580 ವೆಂಟಿಲೇಟರ್‌ಗಳ ಖರೀದಿಗೆ ಅಲ್ಪಾವಧಿ ಟೆಂಡರ್ ಕರೆದಿದ್ದರೆ ಅಥವಾ ಇ – ಪ್ರೊಕ್ಯೂರ್‌ಮೆಂಟ್‌ನಲ್ಲಿ ದರ ಪಟ್ಟಿ ಆಹ್ವಾನಿಸಿದ್ದರೆ ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ವೆಂಟಿಲೇಟರ್‌ಗಳನ್ನು ಖರೀದಿಸಲು ಸಾಕಷ್ಟು ಅವಕಾಶವಿತ್ತು. ಆದರೆ ಅಧಿಕಾರಿಗಳಲ್ಲಿನ ಕಮಿಷನ್ ಆಸೆ ಇದಕ್ಕೆ ಆಸ್ಪದ ನೀಡಿಲ್ಲ.

‘ಕೇಂದ್ರ ಸರ್ಕಾರ ವೆಂಟಿಲೇಟರ್‌ಗಳ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಿದ್ದರಿಂದ ವೆಂಟಿಲೇಟರ್ ತಯಾರಕರಿಗೆ ರಾಜ್ಯ ಸರ್ಕಾರಗಳೇ ಪ್ರಮುಖ ಗ್ರಾಹಕರಾಗಿದ್ದವು. ಅಂತಹ ಪರಿಸ್ಥಿತಿಯಲ್ಲಿ ಸರ್ಕಾರ, ವೆಂಟಿಲೇಟರ್ ದರವನ್ನು ಕಡಿಮೆಗೊಳಿಸಲು ಹೆಚ್ಚು ಪ್ರಯತ್ನಪಡಬೇಕಿತ್ತು. ಇದನ್ನು ಮಾಡದೇ ಇದ್ದಿದ್ದಕ್ಕೆ ಸಾರ್ವಜನಿಕರ ಹಣ ಪೋಲು ಮಾಡಿರುವ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ. ಈ ವ್ಯವಹಾರ ಪ್ರಾಮಾಣಿಕವಾಗಿ ನಡೆದಿಲ್ಲ ಎನ್ನುವುದಾದರೆ ಅದು ನೇರವಾಗಿ ಭ್ರಷ್ಟಾಚಾರವಾಗುತ್ತದೆ. ತುರ್ತು ಪರಿಸ್ತಿತಿ ನೆಪವೊಡ್ಡಿ ಸರ್ಕಾರ ಟೆಂಡರ್ ಕರೆಯದೇ ಇದ್ದದ್ದರಿಂದ ಯಾವ ಕಂಪನಿಗಳ ವಸ್ತುಗಳನ್ನು ಖರೀದಿ ಮಾಡಿದರೂ ಅಂತಹ ಕಂಪನಿಗಳ ಜತೆ ನಡೆಸಿದ ಮಾತುಕತೆ ವಿವರವನ್ನು ಸಾರ್ವಜನಿಕರ ಗಮನಕ್ಕೆ ತರಬೇಕಾಗುತ್ತದೆ. ಅಂತಹ ಸಂಸ್ಥೆಗಳ ಹೆಸರು ಹೇಳಲು ಹಿಂಜರಿದರೆ ಅಲ್ಲಿ ಭುಷ್ಕಾಚಾರ ನಡೆದಿದೆ ಎನ್ನುವುದು ಮೆಲ್ನೋಟಕ್ಕೆ ಕಂಡು ಬರುತ್ತದೆ’ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕೆ ವಿ ಧನಂಜಯ ತಿಳಿಸಿದ್ದಾರೆ.


ಇದನ್ನೂ ಓದಿ: BJP ಸರ್ಕಾರದ ವಿರುದ್ಧ ‘ಲೆಕ್ಕಕೊಡಿ’ ಅಭಿಯಾನ: ಜನರ ಪರವಾಗಿ ಕಾಂಗ್ರೆಸ್‌ನ 06 ಪ್ರಶ್ನೆಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights