FACT CHECK | ಸಾವಿರ ವರ್ಷದ ಪ್ರಾಚೀನ ಕಾಲದ ನಟರಾಜನ ವಿಗ್ರಹ ಪತ್ತೆಯಾಗಿದೆ ಎಂದು ಸ್ಕ್ರಿಪ್ಟ್‌ ಮಾಡಿದ ವಿಡಿಯೋ ಹಂಚಿಕೆ

1000 ವರ್ಷಗಳ ಹಿಂದಿನ ಪ್ರಾಚೀನ ಕಾಲದ ನಟರಾಜನ ವಿಗ್ರಹವೊಂದು ಪೆರಂಬದೂರಿನಲ್ಲಿ ಶಿವನ ದೇವಸ್ಥಾನಲ್ಲಿ ಪತ್ತೆಯಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

“ಶ್ರೀಪೆರಂಬದೂರಿನಲ್ಲಿ ಭಗವಾನ್ ಮಹಾದೇವ್ ಅವರ ನಟರಾಜ ವಿಗ್ರಹವು ಪತ್ತೆಯಾಗಿದ್ದು, ಪಂಚಲೋಹದಿಂದ ಮಾಡಲ್ಪಟ್ಟ ವಿಗ್ರಹವನ್ನು ನಾಗದೇವತೆಗಳು ಕಾವಲು ಕಾಯುತ್ತಿದ್ದವು, ವಿಗ್ರಹವನ್ನು ಪುರಾತತ್ವ ಇಲಾಖೆಗೆ ಕಳುಹಿಸಿದ್ದು  1000 ವರ್ಷಗಳಿಗೂ ಪ್ರಾಚೀನ ಕಾಲದ್ದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ” ಎಂಬ ಹೇಳಿಕೆಯೊಂದಿಗೆ @Anshulspiritual ಎಂಬುವವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದೇ ವಿಡಿಯೋವನ್ನು ಕನ್ನಡದ ಬಲಪಂಥೀಯ ಪ್ರತಿಪಾದಕ BJP ಬೆಂಬಲಿತ ಮಾಧ್ಯಮ ಸಂಸ್ಥೆಯ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗ್ಡೆ ‘ಸನಾತನ ಧರ್ಮ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.

ವೈರಲ್ ವಿಡಿಯೋದಲ್ಲಿ ಕಂಡುಬರುವ ದೃಶ್ಯಗಳಲ್ಲಿ JCB ಯಂತ್ರದ ಮೂಲಕ ನೆಲವನ್ನು ಹಗೆಯುವಾಗ, ಎರಡು ಹಾವುಗಳು ನೆಲಸಿಂದ ಹೊರಬರುತ್ತಿದ್ದು, ಜೆಸಿಬಿಯ ಮಣ್ಣು ಬಗೆಯುವ ಬಾಣಲಿ ತುದಿಗೆ ವಿಗ್ರಹ ಆಕಾರಾದ ವಸ್ತುವೊಂದು ಸಿಕ್ಕಿಹಾಕಿಕೊಂಡಿರುವಂತೆ ಕಾಣುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ನಾಗದೇವತೆಗಳು ನಟರಾಜ ಮೂರ್ತಿಯನ್ನು ಕಾಯುತ್ತಿದ್ದವೇ. ವಿಗ್ರವು 1000 ವರ್ಷಗಳಷ್ಟು ಹಳೆಯದೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಉತ್ಖನನದ ಸಮಯದಲ್ಲಿ ವಿಗ್ರಹಗಳು ಪತ್ತೆಯಾದ ಕುರಿತು ವಿವರಗಳನ್ನು ಒದಗಿಸುವ Puthiyathalaimurai TV YouTube ನಲ್ಲಿ ವಿಡಿಯೋವೊಂದು ಲಭ್ಯವಾಗಿದೆ.

ವಿಡಿಯೋ ಪ್ರಕಾರ, ಶ್ರೀಪೆರಂಬದೂರಿನಲ್ಲಿ ಐತಿಹಾಸಿಕ ನಟರಾಜ ವಿಗ್ರಹ ಪತ್ತೆಯಾಗಿದೆ. ಪುರಾತತ್ವ ಇಲಾಖೆಯು ತಮಿಳುನಾಡಿನ ಶ್ರೀಪೆರಂಬದೂರ್‌ಗೆ ಸಮೀಪದಲ್ಲಿರುವ ಶಿವನ್ ಕೂಡಲ್ ಗ್ರಾಮದ ಶಿವ ಕುಲುಂಡೇಶ್ವರರ್ ದೇವಾಲಯದಲ್ಲಿ  ಉತ್ಖನನ ಮಾಡುವಾಗ ತ್ರಿಶೂಲ ಮತ್ತು ಹಳೆಯ ನಟರಾಜ ವಿಗ್ರಹ ಪತ್ತೆಯಾಗಿವೆ ಎಂದು ವರದಿಯಾಗಿದೆ. ಈ ವಿಗ್ರಹವನ್ನು ಚೆನ್ನೈನ ಪುರಾತತ್ವ ಇಲಾಖೆಗೆ ಕಳುಹಿಸಲಾಯಿತು, ಅಲ್ಲಿ ಅಧಿಕಾರಿಗಳು ಇದು ಒಂದು ಸಾವಿರ ವರ್ಷದಷ್ಟು ಹಳೆಯದು ಮತ್ತು ಪಂಚಲೋಹದಿಂದ ಕೂಡಿದೆ ಎಂದು ಅಂದಾಜಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ವಿಡಿಯೋ ಮತ್ತು ಯೂಟ್ಯೂಬ್‌ನಲ್ಲಿ ಲಭ್ಯವಾದ ವಿಡಿಯೋವನ್ನು ಹೋಲಿಕೆ ಮಾಡಿದಾಗ, ಎರಡು ಬೇರೆ ಬೇರೆ ಎಂಬುದು ಸ್ಪಷ್ಟವಾಗಿದೆ. ವೈರಲ್ ವಿಡಿಯೋಗಾಗಿ ಮತ್ತಷ್ಟು ಸರ್ಚ್ ಮಾಡಿದಾಗ, KRB YOU TUBE Vlog ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಲಭ್ಯವಾಗಿದೆ. “ಯಂತ್ರದ ಸಹಾಯದಿಂದ 250 ವರ್ಷಗಳಷ್ಟು ಹಳೆಯ ನಿಧಿ ಪತ್ತೆ – ಶಾಪಗ್ರಸ್ತ ನಿಧಿ” ಎಂಬ ಶೀರ್ಷಿಕೆಯ ಮೂರು ನಿಮಿಷ ಇಪ್ಪತ್ತಮೂರು ಸೆಕೆಂಡುಗಳ ವಿಡಿಯೋವನ್ನು ಅಪ್‌ಲೋಡ್‌ ಮಾಡಲಾಗಿದೆ.

ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಯೂಟ್ಯೂಬ್ ವಿಡಿಯೋದಲ್ಲಿ ಪತ್ತೆಯಾದ ನಟರಾಜನ ಪ್ರತಿಮೆಗೂ, ವೈರಲ್ ಆಗಿರುವ ವಿಡಿಯೋಗೂ ಸಂಬಂಧವಿಲ್ಲ. ವೈರಲ್ ವಿಡಿಯೊದಲ್ಲಿ ಹಂಚಿಕೊಳ್ಲಲಾದ ಆವೃತ್ತಿಯನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಎಲ್ಲಾ ಮಾಹಿತಿಯ ಆಧಾರದಲ್ಲಿ ಹೇಳುವುದಾದರೆ, ವೈರಲ್ ವಿಡಿಯೋ ನಕಲಿ ಮತ್ತು ಸ್ಕ್ರಿಪ್ಟ್ ಆಗಿದೆ ಎಂದು ದೃಢವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಒಂದು ಸಾವಿರ ವರ್ಷಗಳಷ್ಟು ಪ್ರಾಚೀನ  ನಟರಾಜನ ವಸ್ತು ಪತ್ತೆಯಾಗಿದೆ ಎಂದು ಸ್ಕ್ರಿಪ್ಟ್‌ ಮಾಡಲ್ಪಟ್ಟ ಸಂಬಂಧವಿಲ್ಲದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮೋದಿಗೆ ಮತ ಹಾಕುವಂತೆ ಪಾಕಿಸ್ತಾನದ ಮುಸ್ಲಿಂ ವ್ಯಕ್ತಿ ಹೇಳುತ್ತಿದ್ದಾನೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights