FACT CHECK | ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಸುಳ್ಳು ಪೋಸ್ಟ್‌ ಹಂಚಿಕೆ

“ಹಿಂದೂಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ವೋಟು ಸಾಕು‌. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ. ಮುಸ್ಲಿಮರ ಓಲೈಕೆ ಕುರಿತು ಬಿಜೆಪಿಗರ ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.” ಎಂದು ಸಿಎಂ ಸಿದ್ದರಾಮಯ್ಯ ಖಾಸಗಿ ಹೋಟೇಲ್ ಒಂದರಲ್ಲಿ ನಡೆದ ಹೋಬಳಿ ಮಟ್ಟದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಹೇಳಿದ್ದಾರೆ ಎನ್ನುವ ಪತ್ರಿಕಾ ಹೇಳಿಕೆಯ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ.

 

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತಾಗಿ ಇಂತಹದ್ದೇ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿತ್ತು ಅದರಲ್ಲಿ ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ ಎಂದು, ಇನ್ನೊಂದು ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ನಾನು ದೇಶಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದಾರೆ ಎಂಬಂತೆ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿತ್ತು. ಅದೊಂದು ನಕಲಿ ಸುದ್ದಿ ಎಂದು ಫ್ಯಾಕ್ಟ್‌ಚೆಕ್ ಮೂಲಕ ವರದಿ ಮಾಡಲಾಗಿತ್ತು.

“ಹಿಂದೂಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ವೋಟು ಸಾಕು‌ ಎಂದು ಪ್ರಸಾರ ಮಾಡಲಾಗುತ್ತಿರುವ ಪೋಸ್ಟ್‌ ಅಂತಹದ್ದೆ ಇರಬುಹುದೇ? ಇದರ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ “ಹಿಂದೂಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ಓಟು ಸಾಕು‌” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾದ ಹೇಳಿಕೆ ಕುರಿತು ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹೇಳಿಕೆ ನೀಡಿರುವ ಕುರಿತು ಯಾವ ಪತ್ರಿಕೆಗಳಲ್ಲಿಯೂ ವರದಿಯಾಗಿಲ್ಲ.

ಒಂದು ವೇಳೆ ಸಿದ್ದರಾಮಯ್ಯನವರು ಈ ರೀತಿ ಹೇಳಿಕೆ ನೀಡಿದ್ದರೆ ಅದು ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳಲ್ಲಿಯೂ ವ್ಯಾಪಕವಾಗಿ ವರದಿಯಾಗಬೇಕಿತ್ತು. ಆದರೆ ಅಂತಹ ಯಾವುದೇ ವರದಿಗಳು ಸಿಕ್ಕಿಲ್ಲ. ಬದಲಾಗಿ, ಬಿಜೆಪಿ ನಾಯಕರು “ಕಾಂಗ್ರೆಸ್ ಅಥವಾ ಸಿದ್ದರಾಮಯ್ಯನವರು ಹಿಂದುಗಳ ಮತ ಬೇಡ ಎನ್ನಲಿ” ಎಂದು ಸವಾಲು ಹಾಕಿರುವ ಸುದ್ದಿಗಳಷ್ಟೇ ಅಂತರ್ಜಾಲದಲ್ಲಿ ಲಭ್ಯವಾಗಿವೆ.

ಇನ್ನು ಮೇಲಿನ ಪೋಸ್ಟ್‌ನಲ್ಲಿ ಬಳಸಲಾದ ಪೋಟೊವನ್ನು ಸ್ಕ್ರೀನ್‌ ಶಾಟ್ ತೆಗೆದು ಹುಡುಕಿದಾಗ ಜೂನ್ 02, 2023ರಂದು ಸಚಿವ ಸಂಪುಟ ಸಭೆಗೂ ಮುನ್ನ ಸಿಎಂ ಸಿದ್ದರಾಮಯ್ಯನವರು 5 ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಕುರಿತು ಚರ್ಚಿಸಲು ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು ಎಂದು ಇದೇ ಫೋಟೊವನ್ನು ಪಬ್ಲಿಕ್ ಟಿವಿ ತನ್ನ ವರದಿಯಲ್ಲಿ ಪ್ರಕಟಿಸಿರುವುದು ಕಂಡುಬಂದಿದೆ.

ಈ ಕುರಿತು ಅದೇ ದಿನ ಅಂದರೆ ಜೂನ್ 02, 2023ರಂದು ವಾರ್ತಾಭಾರತಿ ಪತ್ರಿಕೆ ಕೂಡ ಸಚಿವ ಸಂಪುಟದ ಸಭೆಗೂ ಮುನ್ನ ಅಧಿಕಾರಿಗಳೊಂದಿಗೆ ಚರ್ಚೆ ಎಂದು ಅದೇ ಫೋಟೊವನ್ನು ಪ್ರಕಟಿಸಿ ವರದಿ ಮಾಡಿರುವುದು ಕಂಡು ಬಂದಿದೆ. ಅದನ್ನು  ಇಲ್ಲಿ ನೋಡಬಹುದು.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಹಿರಿಯ ಅಧಿಕಾರಿಗಳಾದ ರಜನೀಶ್ ಗೋಯೆಲ್, ಐಎನ್ ಎಸ್ ಪ್ರಸಾದ್, ಎಲ್.ಕೆ.ಅತೀಕ್ ಸೇರಿದಂತೆ ಇನ್ನಿತರರು ಹಾಜರಿದ್ದ ಸಭೆಯ ಫೋಟೊವನ್ನು ತೆಗೆದುಕೊಂಡು ಸಿದ್ದರಾಮಯ್ಯನವರು ಹೋಬಳಿ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದ್ದಾರೆ ಎಂದು ರಾಜಕೀಯ ವಿರೋಧಿಗಳು ನಕಲಿ ಪತ್ರಿಕಾ ವರದಿಯನ್ನು ಸೃಷ್ಟಿಸಲಾಗಿದೆ ಎಂದು ಖಚಿತವಾಗಿ ಹೇಳಬಹುದು. ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ರೀತಿ ನಕಲಿ ಸುದ್ದಿಯನ್ನು ಸೃಷ್ಟಿಸಲಾಗಿದೆ.

ಈ ಕುರಿತು ತಮ್ಮ ಎಕ್ಸ್‌ ಅಕೌಂಟ್‌ ಮೂಲಕ ಸ್ಪಷ್ಟೀಕರಣ ನೀಡಿರುವ ಸಿಎಂ ಸಿದ್ದರಾಮಯ್ಯನವರು “ಬಿಜೆಪಿ – ಜೆಡಿಎಸ್‌ ಮಿತ್ರಮಂಡಳಿ ಕೃಪಾಪೋಷಿತ ಕಿಡಿಗೇಡಿಗಳು ವಾರ್ತಾಪತ್ರಿಕೆಯನ್ನು ಹೋಲುವ ಸುಳ್ಳು ಸುದ್ದಿಯ ತುಣುಕೊಂದನ್ನು ಸೃಷ್ಟಿಸಿ, ಅದರಲ್ಲಿ ಜನರ ಕೋಮುಭಾವನೆ ಕೆರಳಿಸುವ ಸುದ್ದಿಯನ್ನು ತುಂಬಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಈಗಾಗಲೇ ನಾನು ಪೊಲೀಸ್‌ ಇಲಾಖೆಗೆ ದೂರು ನೀಡಿದ್ದೇನೆ. ಇದರ ಹಿಂದಿರುವ ದುಷ್ಟ ಶಕ್ತಿ ಯಾರು ಎಂಬ ಬಗ್ಗೆ ನಮಗೆ ಮಾಹಿತಿ ಇದ್ದು, ಆದಷ್ಟು ಬೇಗನೆ ಅವರನ್ನು ನ್ಯಾಯದ ಕೈಗಳಿಗೆ ಒಪ್ಪಿಸಲಾಗುವುದು” ಎಂದಿದ್ದಾರೆ.

ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕ ಬಿ. ಎಲ್ ಸಂತೋಷ್ ಅವರು “ನಮಗೆ ಲಿಂಗಾಯತ ಮತಗಳ ಅಗತ್ಯವಿಲ್ಲ” ಎಂದು ಹೇಳಿದ್ದಾರೆ ಎಂಬ ನಕಲಿ ಸುದ್ದಿಯೊಂದನ್ನು ಹರಿಬಿಡಲಾಗಿತ್ತು. ನಂತರ ಈ ಸುಳ್ಳು ವರದಿ ವಿರುದ್ಧ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಅದೇ ಮಾದರಿಯಲ್ಲಿ ಈ ನಕಲಿ ಸುದ್ದಿಯನ್ನು ಸಹ ಹರಿಬಿಡಲಾಗಿದೆ. ಕಳೆದ ವರ್ಷದ ನಕಲಿ ಪತ್ರಿಕಾ ವರದಿಯಲ್ಲಿ ಎಲ್ಲಿ ಬಿ.ಎಲ್ ಸಂತೋಷ್ ಹೆಸರಿದೆಯೋ ಅಲ್ಲಿ ಸಿದ್ದರಾಮಯ್ಯನವರ ಹೆಸರು ಮತ್ತು ಲಿಂಗಾಯಿತರ ಬದಲು ಹಿಂದೂ ಎಂದು ಸೇರಿಸಿ ಈ ನಕಲಿ ಫೋಟೊವನ್ನು  ಹಂಚಿಕೊಳ್ಳಲಾಗಿದೆ.

ವಾಸ್ತವದಲ್ಲಿ ಹಿಂದಿನ ಎರಡೂ ಹೇಳಿಕೆಗಳೂ ಅಂದರೆ ನಾನು ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂಬುದಾಗಲಿ, ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂಬ ಯಾವ ಹೇಳಿಕೆಗಳು ಸಿದ್ದರಾಮಯ್ಯನವರ ಹೇಳಿಕೆಗಳಲ್ಲ. ಆದರೂ ವಿಡಿಯೋವನ್ನು ಎಡಿಟ್ ಮಾಡಿ ಸಿದ್ದರಾಮಯ್ಯ ಹೀಗೆ ಹೇಳಿದ್ದಾರೆ ಎಂದು ಹಂಚಿಕೊಳ್ಳಲಾಗಿತ್ತು. ಅದರ ಮುಂದುವರೆದ ಭಾಗದಂತೆ ಈಗ ‘ಹಿಂದೂಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ವೋಟು ಸಾಕು‌’ ಎಂದೇಳಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಿಮಾಚಲ ಪ್ರದೇಶದಲ್ಲಿ 2017ರಲ್ಲಿ ನಿರ್ಮಿಸಿದ ಚಿಚಾಮ್ ಸೇತುವೆಯನ್ನು ಮೋದಿ ಸರ್ಕಾರ ಇತ್ತೀಚೆಗೆ ನಿರ್ಮಿಸಿದೆ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights