FACT CHECK | ಕಾಂಗ್ರೆಸ್ ಚುನಾವಣಾ ಪ್ರಚಾರದ ವೇಳೆ “ಪಾಕಿಸ್ತಾನ್‌ ಕಿ ಜೈ ” ಎಂಬ ಘೋಷಣೆ ಕೂಗಲಾಗಿದೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಪರ ಚುನಾವಣಾ ಪ್ರಚಾರದಲ್ಲಿ ಅಭಿಮಾನಿಗಳು ಪಾಕಿಸ್ತಾನ್‌ಕಿ ಜೈ ಎಂದು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ 20 ಸೆಕೆಂಡ್‌ಗಳ ವಿಡಿಯೋವೊಂದನ್ನು ವಾಟ್ಸಾಪ್‌ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದು ನಿಜವೇ ಎಂದು ಪರಿಶೀಲಿಸೋಣ.

“ಡಕಾಯಿತನ ಚುನಾವಣಾ ಪ್ರಚಾರದಲ್ಲಿ ಮತ್ತೊಮ್ಮೆ ಪಾಕಿಸ್ತಾನಕ್ಕೆ ಜೈ ಎಂದು ಘೋಷಣೆ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಪ್ರತಿಪಾದಿಸಿದಂತೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು  ವಿಡಿಯೋದಲ್ಲಿ ಡಿ.ಕೆ ಸುರೇಶ್‌ರವರು ಇರುವುದರಿಂದ ಅವರ ಚುನಾವಣಾ ಪ್ರಚಾರದ ಸುದ್ದಿಗಳನ್ನು ಸರ್ಚ್ ಮಾಡಿದಾಗ, ಹೆಚ್.ಸಿ ಬಾಲಕೃಷ್ಣ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಲೈವ್ ಮಾಡಿರುವ ವಿಡಿಯೋ ಲಭ್ಯವಾಗಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ತಿಪ್ಪಸಂದ್ರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಈ ವಿಡಿಯೋ ಚಿತ್ರೀಕರಿಸಿರುವುದು ಕಂಡುಬಂದಿದೆ.

ರೋಡ್‌ ಶೋ ವೇಳೆ ಕಾಂಗ್ರೆಸ್ ಅಭಿಮಾನಿಯೊಬ್ಬರು ಬಾಲಕೃಷ್ಣಕಿ ಜೈ, ಡಿ.ಕೆ ಸುರೇಶ್‌ಕಿ ಜೈ, ಹೆಚ್.ಎಂ ರೇವಣ್ಣಕಿ ಜೈ ಎಂದು ಘೋಷಣೆ ಕೂಗಿದ್ದಾರೆ. ಹೀಗೆ ಘೋಷಣೆ ಕೂಗಿವಾಗ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ, ಸಂಸದ ಡಿ.ಕೆ ಸುರೇಶ್ ಮತ್ತು ಹೆಚ್.ಎಂ ರೇವಣ್ಣನವರು ಪ್ರಚಾರ ವಾಹನದಲ್ಲಿ ಕಂಡುಬರುತ್ತಾರೆ. ಲೈವ್ ವಿಡಿಯೋದ 17ನೇ ಸೆಕೆಂಡ್ ಮತ್ತು 21ನೇ ಸೆಕೆಂಡ್‌ನಲ್ಲಿ ಅವರು ಸ್ಪಷ್ಟವಾಗಿ ಬಾಲಕೃಷ್ಣಕಿ ಎಂದು ಕೂಗುವುದನ್ನು ನೋಡಬಹುದು.

ಮೂಲ ವಿಡಿಯೋ ಹೆಚ್.ಸಿ ಬಾಲಕೃಷ್ಣರವರ ಫೇಸ್‌ಬುಕ್‌ ಲೈವ್‌ನಲ್ಲಿದೆ. ಆದರೆ ಕಿಡಿಗೇಡಿಗಳು ಬಾಲಕೃಷ್ಣಕಿ ಜೈ ಎಂದಿದ್ದನ್ನು ಪಾಕಿಸ್ತಾನ್‌ಕಿ ಜೈ ಎಂದು ಹೇಳಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರೋಡ್‌ ಶೋ ವೇಳೆ ಕಾಂಗ್ರೆಸ್ ಅಭಿಮಾನಿಯೊಬ್ಬರು ಬಾಲಕೃಷ್ಣಕಿ ಜೈ, ಎಂದು ಕೂಗಿರುವ ಘೋಷಣೆಯನ್ನು, ಪಾಕಿಸ್ತಾನ್‌ ಕಿ ಜೈ ಎಂದಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಹುಲ್ ಗಾಂಧಿ ಭಾಷಣವನ್ನು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಂಡ ಬಲಪಂಥೀಯ ಯೂಟ್ಯೂಬ್ ಚಾನೆಲ್ ‘ಟಿವಿ ವಿಕ್ರಮ’


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights