FACT CHECK | ರಾಹುಲ್ ಗಾಂಧಿ ಭಾಷಣವನ್ನು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಂಡ ಬಲಪಂಥೀಯ ಯೂಟ್ಯೂಬ್ ಚಾನೆಲ್ ‘ಟಿವಿ ವಿಕ್ರಮ’

2024ರ ಲೋಕಸಭಾ ಚುನಾವಣಾ ಪ್ರಚಾರಕ್ಕೆಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ 17 ಏಪ್ರಿಲ್ 2024ರಂದು ಕರ್ನಾಟಕದ ಕೋಲಾರ ಮತ್ತು ಮಂಡ್ಯ ಕ್ಷೇತ್ರಕ್ಕೆ ಆಗಮಿಸಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ಈ ವೇಳೆ ಮಾತನಾಡಿರುವ ರಾಹುಲ್ ಗಾಂಧಿಯವರ ಭಾಷಣದ ವಿಡಿಯೋವನ್ನು ಉಲ್ಲೇಖಿಸಿ ಬಲಪಂಥೀಯ ಯೂಟ್ಯೂಬ್ ಚಾನೆಲ್ ‘ಟಿವಿ ವಿಕ್ರಮ’  ಡಿಕೆಶಿ ಹೊಸ ಮುಖ್ಯಮಂತ್ರಿ, ಸಿದ್ದರಾಮಯ್ಯಂಗೆ ಅಧ್ಯಕ್ಷ ಪಟ್ಟ, ದಿಲ್ಲಿ ದೊರೆಯ ಹೊಸಾ ಆಟ ಎಂಬ ಶೀರ್ಷಿಕೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ.

ಕೋಲಾರದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ರಾಹುಲ್ ಗಾಂಧಿಯವರು ಸಿದ್ದರಾಮಯ್ಯ ಬದಲು ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಸಂಬೋಧಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಸೂಚನೆ ನೀಡಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ‘ಟಿವಿ ವಿಕ್ರಮ’ ಹಂಚಿಕೊಂಡಿದೆ. ಹಾಗಿದ್ದರೆ ವಿಡಿಯೋದಲ್ಲಿ ಪ್ರಸಾರವಾಗಿರುವಂತೆ ನಿಜವಾಗಿಯೂ ರಾಹುಲ್ ಗಾಂಧಿ ತಪ್ಪಾಗಿ ಮಾತನಾಡಿದ್ದಾರೆಯೇ ಅಥವಾ ಉದ್ದೇಶಪೂರಕವಾಗಿ ಹೇಳಿದ್ದಾರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

‘ಟಿವಿ ವಿಕ್ರಮ’ ಹಂಚಿಕೊಂಡ ವಿಡಿಯೋದಲ್ಲಿರುವಂತೆ ರಾಹುಲ್ ಗಾಂಧಿ ನಿಜವಾಗಿಯೂ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಸಂಭೋದಿಸಿದರೇ ಎಂದು ಪರಿಶೀಲಿಸಲು ಮೂಲ ವಿಡಿಯೋವನ್ನು ಸರ್ಚ್ ಮಾಡಿದಾಗ, ನ್ಯೂಸ್‌ 18 ಕನ್ನಡ ಏಪ್ರಿಲ್ 17, 2024ರಂದು “LIVE: Rahul Gandhi In Kolar | Congress Rally”ಎಂಬ ಶೀರ್ಷಿಕೆಯಲ್ಲಿ ಹಂಚಿಕೊಂಡ ವಿಡಿಯೋವೊಂದು ಲಭ್ಯವಾಗಿದೆ.

 

ಒಟ್ಟು 1 ಗಂಟೆ 36 ನಿಮಿಷ 40 ಸೆಕೆಂಡ್‌ ಅವಧಿಯ ನೇರ ಪ್ರಸಾರದ ವಿಡಿಯೋದಲ್ಲಿ, 22 ನಿಮಿಷ 6 ಸೆಕೆಂಡ್‌ನಿಂದ ರಾಹುಲ್ ಗಾಂಧಿ ಭಾಷಣ ಮಾಡಿರುವುದನ್ನು ನೋಡಬಹುದು.

ವಿಡಿಯೋದಲ್ಲಿ 22 ನಿಮಿಷ 14 ಸೆಕೆಂಡ್‌ನಿಂದ ರಾಹುಲ್ ಗಾಂಧಿ ಈ ರೀತಿ ಹೇಳಿದ್ದಾರೆ…”ಖರ್ಗೆ ಅವರೇ.. ಕಾಂಗ್ರೆಸ್ ಅಧ್ಯಕ್ಷರು, ಸಿದ್ದರಾಮಯ್ಯ ಅವರೇ…ನಮ್ಮ ಮುಖ್ಯಮಂತ್ರಿಗಳು, ಡಿ.ಕೆ ಶಿವಕುಮಾರ್ ಅವರೇ…ಕೆ. ಹೆಚ್ ಮುನಿಯಪ್ಪ ಅವರೇ..ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೇ..ನನ್ನ ಪ್ರೀತಿಯ ಪಕ್ಷದ ಕಾರ್ಯಕರ್ತರೇ..ಮಾಧ್ಯಮ ಮಿತ್ರರು, ಸಹೋದರ-ಸಹೋದರಿಯರು ಎಲ್ಲರಿಗೂ ನಾನು ಸ್ವಾಗತ ಕೋರುತ್ತೇನೆ” ಎಂದಿದ್ದಾರೆ.

ಕೋಲಾರದ ಕಾರ್ಯಕ್ರಮದ ನೇರ ಪ್ರಸಾರದ ವಿಡಿಯೋವನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲೂ ಲಭ್ಯವಿದೆ. ಈ ವಿಡಿಯೋದಲ್ಲೂ ರಾಹುಲ್ ಗಾಂಧಿಯವರು ಖರ್ಗೆಯವರೇ ಕಾಂಗ್ರೆಸ್ ಅಧ್ಯಕ್ಷರು, ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿಗಳು” ಎಂದಿರುವುದು ಸ್ಪಷ್ಟವಾಗಿ ಇದೆ.

ಮೂಲ ವಿಡಿಯೋದ ಲಿಂಕ್ ಇಲ್ಲಿ ನೋಡಬಹುದು.

ಅಂದರೆ, ಇಲ್ಲಿ ರಾಹುಲ್ ಗಾಂಧಿಯವರು ಮೊದಲು ಕಾಂಗ್ರೆಸ್‌ ನಾಯಕರ ಹೆಸರನ್ನು ಹೇಳಿ ನಂತರ ಅವರ ಹುದ್ದೆಯನ್ನು ಉಲ್ಲೇಖಿಸಿದ್ದಾರೆ. ಆದರೆ ಟಿವಿ ವಿಕ್ರಮ ಹಾಗೂ ಕೆಲ ಎಕ್ಸ್ ಬಳಕೆದಾರರು ತಮಗೆ ಬೇಕಾದಂತೆ ಎಡಿಟ್ ಮಾಡಿ “ಖರ್ಗೆ ಅವರೇ…ಕಾಂಗ್ರೆಸ್ ಅಧ್ಯಕ್ಷರು” ಎಂದು ಹೇಳಿರುವುದಲ್ಲಿ “ಖರ್ಗೆ ಅವರೇ”..ಎಂಬುವುದನ್ನು ಕಟ್ ಮಾಡಿ..”ಕಾಂಗ್ರೆಸ್ ಅಧ್ಯಕ್ಷರು, ಸಿದ್ದರಾಮಯ್ಯ ಅವರೇ, ನಮ್ಮ ಮುಖ್ಯಮಂತ್ರಿಗಳು ಡಿ.ಕೆ ಶಿವಕುಮಾರ್ ಅವರೇ..”ಎಂಬುವುದನ್ನು ಮಾತ್ರ ಪ್ರಸಾರ ಮಾಡಿದ್ದಾರೆ. ಈ ವಿಡಿಯೋವನ್ನು ನೋಡುವಾಗ ರಾಹುಲ್ ಗಾಂಧಿಯವರು “ಕಾಂಗ್ರೆಸ್ ಅಧ್ಯಕ್ಷರು ಸಿದ್ದರಾಮಯ್ಯ ಅವರೇ, ನಮ್ಮ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ..” ಎಂದು ಹೇಳಿದಂತೆ ಅನ್ನಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಯವರು ಕೋಲಾರದ ಸಮಾವೇಶದಲ್ಲಿ ಅಭ್ಯರ್ಥಿ ಕೆ.ವಿ. ಗೌತಮ್ ಪರವಾಗಿ ಪ್ರಚಾರ ಭಾಷಣ ಮಾಡಿದ ತುಣುಕನ್ನು BJP ಬೆಂಬಲಿತ ‘ಟಿವಿ ವಿಕ್ರಮ ಯೂಟ್ಯೂಬ್‌ ಚಾನೆಲ್’ ವಿಡಿಯೋವನ್ನು ತಿರುಚಿ  ತಪ್ಪಾಗಿ ಹಂಚಿಕೊಂಡಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬೆಂಗಳೂರಿನ ಜಯನಗರದಲ್ಲಿ ಚುನಾವಣಾ ಆಯೋಗ ವಶಪಡಿಸಿಕೊಂಡ ಹಣ ಡಿ.ಕೆ. ಸಹೋದರರದ್ದು ಎಂದು ಸುಳ್ಳು ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights