FACT CHECK | ವ್ಯಕ್ತಿಯೊಬ್ಬ ಮೂರು ಜೀವಂತ ಚಿರತೆಗಳೊಂದಿಗೆ ಮಲಗುವ ದೃಶ್ಯಾವಳಿಗಳು ರಾಜಸ್ಥಾನದಲ್ಲಾ? ಮತ್ತೆಲ್ಲಿಯದ್ದು?

ವ್ಯಕ್ತಿಯೊಬ್ಬ ಮೂರು ಜೀವಂತ  ಚಿರತೆಗಳೊಂದಿಗೆ ಮಲಗುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅದು ಪುಟ್ಟ ಮಕ್ಕಳೊಂದಿಗೆ ಮಲಗುವಂತೆ  ಆತ ಚಿರತೆಗಳನ್ನು ಮಲಗಿಸಿಕೊಳ್ಳುವುದನ್ನು ನೋಡಬಹುದು. ಚಿರತೆಗಳು ಕೂಡ ವ್ಯಕ್ತಿಯೊಂದಿಗೆ ಆತ್ಮೀಯತೆಯಿಂದ ಮಲಗುತ್ತಿರುವುದು ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿವೆ.

ರಾಜಸ್ಥಾನದ ಸಿರೋಹಿ ಗ್ರಾಮದ ಪಿಪಾಲೇಶ್ವರ ಮಹಾದೇವನ ದೇವಸ್ಥಾನದಲ್ಲಿ ರಾತ್ರಿ ವವೇಳೆಯಲ್ಲಿ ಚಿರತೆಗಳ ಕುಟುಂಬ ಬಂದು ಪೂಜಾರಿ ಬಳಿ ಮಲಗಿದೆ ಎಂಬ ವದಂತಿ ಹಬ್ಬಿತ್ತು. ಈ ವಿಷಯ ತಿಳಿದ ಸರ್ಕಾರಿ ವನ್ಯಜೀವಿ ಇಲಾಖೆ ಅಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ನೀವೂ ನೋಡಿ ಈ ಸುಂದರ ದೃಶ್ಯವನ್ನು ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಇದೇ  ಹೇಳಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ವಿಡಿಯೋ ಸತ್ಯಾಸತ್ಯತೆ ಏನು? ಇದು ರಾಜಸ್ಥಾನದ ಸಿರೋಹಿ ಗ್ರಾಮದ ಪಿಪಾಲೇಶ್ವರ ಮಹಾದೇವನ ದೇವಸ್ಥಾನದಲ್ಲಿ ನಡೆದ ಘಟನಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 21 ಜನವರಿ 2019 ರಂದು ಡಾಲ್ಫ್ ಸಿ ವೋಲ್ಕರ್ ಎಂಬ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ.

ಈ ವೀಡಿಯೊವನ್ನು 2019ರಲ್ಲಿ ದಕ್ಷಿಣ ಆಫ್ರಿಕಾದ ಬ್ಲೋಮ್‌ಫಾಂಟೈನ್‌ನಲ್ಲಿರುವ ಚಿರತೆ ಸಂತಾನೋತ್ಪತ್ತಿ ಕೇಂದ್ರದಲ್ಲಿ ಚಿತ್ರೀಕರಿಸಲಾಗಿದೆ. ಚಿರತೆ ಸಂತಾನೋತ್ಪತ್ತಿ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿರುವ ಡಾಲ್ಫ್ ವೋಲ್ಕರ್ ಚಿರತೆಗಳ ಕುಟುಂಬದೊಂದಿಗೆ ಆರಾಮಾಗಿ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ವಿಡಿಯೋದ ವಿವರಣೆಯ ಪ್ರಕಾರ, ವೋಲ್ಕರ್ ಅವರು ದಕ್ಷಿಣ ಆಫ್ರಿಕಾದಲ್ಲಿ ಚಿರತೆಯ ಸಂತಾನೋತ್ಪತ್ತಿ ಕೇಂದ್ರವಾದ ‘ದಿ ಚೀತಾ ಎಕ್ಸ್‌ಪೀರಿಯೆನ್ಸ್’ ನಲ್ಲಿ ನಡೆಸಿದ ಪ್ರಯೋಗವಾಗಿದೆ. ಅಲ್ಲಿ ಅವರು ಮೂರು ಚಿರತೆಗಳೊಂದಿಗೆ ಮಲಗಿ ರಾತ್ರಿಗಳನ್ನು ಕಳೆಯಲು ವಿಶೇಷ ಅನುಮತಿಯನ್ನು ಪಡೆದಿದ್ದರು.

ಅಲ್ಲದೆ, 11 ಜೂನ್ 2020 ರ ಸುದ್ದಿ ಲೇಖನವೊಂದು ಲಭ್ಯವಾಗಿದ್ದು,  ವೈರಲ್ ವಿಡಿಯೋದಲ್ಲಿರುವಂತೆ ರಾಜಸ್ತಾನಕ್ಕೂ ದೇವಸ್ಥಾನದ ಪೂಜಾರಿಗೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

2020ರಲ್ಲಿಯೂ ಇದೇ ಹೇಳಿಕೆಯೊಂದಿಗೆ ವಿಡಿಯೋ  ವೈರಲ್ ಆಗಿತ್ತು, 

ಒಟ್ಟಾರೆಯಾಗಿ ಹೇಳುವುದಾದರೆ, 2019ರಲ್ಲಿ ದಕ್ಷಿಣ ಆಫ್ರಿಕಾದ ಬ್ಲೋಮ್‌ಫಾಂಟೈನ್‌ನಲ್ಲಿರುವ ಚಿರತೆ ಸಂತಾನೋತ್ಪತ್ತಿ ಕೇಂದ್ರದಲ್ಲಿ ಚಿತ್ರೀಕರಿಸಲಾದ ವಿಡಿಯೋವನ್ನು ರಾಜಸ್ಥಾನದ ಸಿರೋಹಿ ಗ್ರಾಮದ ಪಿಪಾಲೇಶ್ವರ ಮಹಾದೇವನ ದೇವಸ್ಥಾನದಲ್ಲಿನ ದೃಶ್ಯಗಳು ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಮನವಮಿಯಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾಂಸಾಹಾರ ತಿಂದರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights