FACT CHECK | RSS ಮುಖ್ಯಸ್ಥ ಮೋಹನ್ ಭಾಗವತ್ ಕಾಂಗ್ರೆಸ್‌ ಕೊಡುಗೆಯನ್ನು ಹೊಗಳಿದ್ದಾರೆ ಎನ್ನಲಾದ ವಿಡಿಯೋದ ಅಸಲೀಯತ್ತೇನು ಗೊತ್ತೇ?

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಭಾಷಣದಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಶ್ಲಾಘಿಸಿದ್ದಾರೆ  ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗತ್ತಿದೆ. 2024ರ ಲೋಕಸಭಾ ಚುನಾವಣೆ ನಡೆಯುತ್ತಿರುವ ಹೊತ್ತಲ್ಲೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೀಗೆ ಹೇಳಿಕೆ ನೀಡಲು ಕಾರಣ ಏನು ಎಂದು ಫೇಸ್‌ಬುಕ್ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

‘ದೇಶದ ಜನರು ರಾಜಕೀಯದ ಬಗ್ಗೆ ಅಲ್ಪ ತಿಳಿವಳಿಕೆ ಹೊಂದಿದ್ದಾರೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ ಜಾಗೃತಿ ಅತ್ಯಗತ್ಯವಾಗಿ ಬೇಕು. ಯಾರ ಬಳಿ ಅಧಿಕಾರ ಇದೆ, ಅದರ ಮಹತ್ವ ಏನು ಅನ್ನೋದು ಜನರಿಗೆ ಗೊತ್ತಿರಬೇಕು. ಇದೇ ರೀತಿ ಚಳವಳಿಯ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷ ಅಭಿವೃದ್ದಿ ಹೊಂದಿತು. ಪಕ್ಷವು ಹಲವು ಅತಿ ಮುಖ್ಯ ವ್ಯಕ್ತಿತ್ವಗಳ ಹುಟ್ಟಿಗೆ ಕಾರಣವಾಯ್ತು. ಅವರೆಲ್ಲರೂ ಇಂದಿಗೂ ನಮ್ಮೆಲ್ಲರಲ್ಲೂ ಸ್ಪೂರ್ತಿ ತುಂಬುತ್ತಿದ್ದಾರೆ. ಆ ಚಳವಳಿಯು ಜನ ಸಾಮಾನ್ಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗುವಂತೆ ಪ್ರೇರೇಪಿಸಿತು. ನಾವು ಸ್ವಾತಂತ್ರ್ಯ ಗಳಿಸಲು ಇದು ಮಹತ್ತರ ಪಾತ್ರ ವಹಿಸಿತು’ ಎಂದು ಮೋಹನ್ ಭಾಗವತ್ ಹೇಳುವುದನ್ನು ಕೇಳಬಹುದು.

2024ರ ಚುನಾವಣೆಯ ಹಿನ್ನಲೆಯಲ್ಲಿ RSS ಸರಸಂಘ ಸಂಚಾಲಕ ಮೋಹನ್ ಭಾಗವತ್ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಶ್ಲಾಘಿಸಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಮೋಹನ್ ಭಾಗವತ್‌ರವರ ಬಾಷಣದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದು 2018ರ ಸೆಪ್ಟೆಂಬರ್ 17 ರಂದು ಚಿತ್ರೀಕರಣಗೊಂಡ ವಿಡಿಯೋ ಅನ್ನೋದು ವಿಡಿಯೋದ ಮೇಲ್ಭಾಗದ ಎಡಗಡೆ ಮೂಲೆಯಲ್ಲಿ ಕಾಣುತ್ತದೆ. ಮತ್ತು ಹಿಂದೂಸ್ತಾನ್‌ ಟೈಮ್ಸ್‌ನ ಲೋಗೋ ಕೂಡ ಕಾಣುತ್ತದೆ.

ಈ ಎಲ್ಲಾ ಸುಳಿವನ್ನ ಆಧರಿಸಿ ಸೂಕ್ತ ಕೀ ವರ್ಡ್‌ಗಳ ಮೂಲಕ ಗೂಗಲ್ ಸರ್ಚ್ ಮಾಡಿದಾಗ, 18 ಸೆಪ್ಟಂಬರ್ 2018ರಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಯೂಟ್ಯೂಬ್‌ ಚಾನಲ್‌ನಲ್ಲಿ ಪ್ರಕಟಿಸಿದ್ದ ವಿಡಿಯೋ ಲಭ್ಯವಾಗಿದೆ.  ‘ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿತ್ತು ಎಂದ ಮೋಹನ್ ಭಾಗವತ್’ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್‌ ಮಾಡಲಾಗಿದೆ.

ಈ ಚಾನಲ್‌ನಲ್ಲಿ ಇರುವ ಮಾಹಿತಿ ಪ್ರಕಾರ 2018ರ ಸೆಪ್ಟೆಂಬರ್ 18 ರಂದು ಆರ್‌ಎಸ್ಎಸ್ ಸಂಘಟನೆಯು 3 ದಿನಗಳ ಚರ್ಚಾ ಗೋಷ್ಠಿ ಆಯೋಜಿಸಿತ್ತು. ಹೊಸ ದಿಲ್ಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಅವರು ಭಾಗವಹಿಸಿದ್ದರು. ತಮ್ಮ ಭಾಷಣದ ವೇಳೆ ಮೋಹನ್ ಭಾಗವತ್ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್‌ನ ಪಾತ್ರವನ್ನು ಶ್ಲಾಘಿಸಿದ್ದರು. ಜೊತೆಯಲ್ಲೇ ಭಾರತದ ರಾಜಕಾರಣಕ್ಕೆ ಮಹಾನ್ ವ್ಯಕ್ತಿಗಳನ್ನು ಪರಿಚಯಿಸಿತು ಎಂದೂ ಹೇಳಿದ್ದರು.

ಎನ್‌ಡಿಟಿವಿ ಕೂಡಾ ಮೋಹನ್ ಭಾಗವತ್ ಅವರ ಈ ಹೇಳಿಕೆಯನ್ನು ಉಲ್ಲೇಖಿಸಿ 2018ರ ಸೆಪ್ಟೆಂಬರ್ 18 ರಂದು ವರದಿ ಮಾಡಿತ್ತು. ಈ ವರದಿಯ ಶೀರ್ಷಿಕೆ ಇಂತಿದೆ: ‘ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷವನ್ನು ಹೊಗಳಿದ ಮೋಹನ್ ಭಾಗವತ್’. ದಿ ಇಂಡಿಯನ್ ಎಕ್ಸ್‌ಪ್ರೆಸ್ಇಂಡಿಯಾ ಟುಡೇ ಹಾಗೂ ದಿ ಟೈಮ್ಸ್ ಆಫ್ ಇಂಡಿಯಾದಲ್ಲೂ ಈ ಕುರಿತಾಗಿ ವರದಿಗಳು ಪ್ರಕಟವಾಗಿವೆ. ಎಲ್ಲ ವರದಿಗಳೂ 2018ರಲ್ಲಿ ಪ್ರಕಟವಾಗಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೋಹನ್ ಭಾಗವತ್ ಅವರು ಕಾಂಗ್ರೆಸ್ ಪಕ್ಷವನ್ನು ಹೊಗಳುವ 7 ವರ್ಷಗಳ ಹಿಂದಿನ ವಿಡಿಯೋ ಇದೀಗ ವೈರಲ್ ಆಗಿದೆ. ಹಾಗಾಗಿ ಈ ವಿಡಿಯೋಗೂ 2024ರ ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲ. ಹಳೆಯ ವಿಡಿಯೋವನ್ನು ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಲಿಂಕ್ ಮಾಡಿ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ತಪ್ಪಾಗಿ ಹಂಚಿಕಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | “ಕಾಂಗ್ರೆಸ್‌ ಕಥೆ ಮುಗಿಯಿತು” ಎಂದು ಹೇಳಿದರೆ ಮಲ್ಲಿಕಾರ್ಜುನ ಖರ್ಗೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights