FACT CHECK | “ಕಾಂಗ್ರೆಸ್‌ ಕಥೆ ಮುಗಿಯಿತು” ಎಂದು ಹೇಳಿದರೆ ಮಲ್ಲಿಕಾರ್ಜುನ ಖರ್ಗೆ?

ಕಾಂಗ್ರೆಸ್‌ ಕಥೆ ಮುಗಿದಿದೆ, ಕಾಂಗ್ರೆಸ್‌ ಸತ್ತಂತೆ, ಕಾಂಗ್ರೆಸ್‌ ಫಿನೀಶ್, ಇನ್ನು ಕಾಂಗ್ರೆಸ್‌ ಪಕ್ಷವನ್ನು ಕಾನೋಕೆ ಸಾಧ್ಯವಿಲ್ಲ ಎಂದು AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಈ ವಿಡಿಯೋವನ್ನು ವೀಕ್ಷಿಸಿದವರಿಗೆ ನಿಜವಾಗಿಯೂ ಮಲ್ಲಿಕಾರ್ಜುನ ಖರ್ಗೆ ಹೀಗೆ ಹೇಳಿಕೆ ನೀಡಿದ್ದಾರೆಯೇ ಎಂದು ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಮಲ್ಲಿಕಾರ್ಜುನ ಖರ್ಗೆ ಅವರು AICC ಅಧ್ಯಕ್ಷರಾಗಿದ್ದು, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಅವರನ್ನೇ ಪ್ರಧಾನಿಯಾಗಿ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಖರ್ಗೆಯವರು ಈ ರೀತಿ ಮಾತನಾಡಿದ್ದಾರೆ ಎಂಬುದು ಸುಲಭವಾಗಿ ನಂಬಲು ಸಾಧ್ಯವಿಲ್ಲ. ಹಾಗಾಗಿ ವೈರಲ್‌ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 3 ಮೇ 2024ರ ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು  ಭಾಷಣ ಮಾಡುವ ವಿಡಿಯೋ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಲಭ್ಯವಾಗಿದೆ.

ಇದೀಗ ಖರ್ಗೆಯವರ ವೈರಲ್ ಆಗಿರುವ ಹೇಳಿಕೆ ಮೂಲ ವಿಡಿಯೋದಲ್ಲಿ 12:02 ನಿಮಿಷದಿಂದ ಆರಂಭ ಆಗುತ್ತದೆ. ಈ ವೇಳೆ ಖರ್ಗೆ ಅವರು ಮಾತನಾಡುತ್ತಾ, ‘ಅಹಮದಾಬಾದ್ ಎಂಥಾ ದೊಡ್ಡ ನಗರ.. ಇಲ್ಲಿ ಮಹಾತ್ಮಾ ಗಾಂಧಿ, ಸರ್ದಾರ್ ಪಟೇಲ್, ದಾದಾಬಾಯಿ ನವರೋಜಿ ಹಾಗೂ ಇನ್ನಿತರ ಮಹಾನ್ ನಾಯಕರು ಜನಿಸಿದ ಭೂಮಿ ಇದು. ಇವರೆಲ್ಲರೂ ಗುಜರಾತ್ ರಾಜ್ಯವನ್ನು ಶ್ರೇಷ್ಠಗೊಳಿಸಿದ್ದಾರೆ. ಗಾಂಧೀಜಿ ಹಾಗೂ ಸರ್ದಾರ್ ಪಟೇಲ್, ಭುಲಾಭಾಯ್ ದೇಸಾಯಿ, ವಿಠಲ್ ಬಾಯ್ ಪಟೇಲ್ ಹಾಗೂ ಲೋಕಸಭಾ ಸ್ಪೀಕರ್ ಮಾವಲಂಕರ್‌ ಜೀ ಸೇರಿದಂತೆ ಎಲ್ಲ ಮಹಾನ್ ನಾಯಕರೂ ಈ ದೇಶವನ್ನು ಕಟ್ಟಿದ್ದಾರೆ. ಇವರೆಲ್ಲರ ಪೈಕಿ ಮೂವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಸರ್ದಾರ್ ಪಟೇಲ್, ಮಹಾತ್ಮಾ ಗಾಂಧೀಜಿ ಹಾಗೂ ಯುಎನ್‌ ದೇಬರ್.. ಎಲ್ಲಾ ನಾಯಕರೂ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನ ನಿಭಾಯಿಸಿದ್ದರು. ಪಕ್ಷವನ್ನು ಬಲಗೊಳಿಸಿದ್ದರು.

ನಂತರ ತಮ್ಮ ಮಾತನ್ನು ಮುಂದುವರೆಸುವ ಖರ್ಗೆ ಅವರು, ‘ಈ ಮೂಲಕ ನಾನು ಹೇಳೋದೇನಂದ್ರೆ, ಇದು ಕಾಂಗ್ರೆಸ್ ಪಕ್ಷದ ಬುನಾದಿ. ಈ ಬುನಾದಿ ಅಹಮದಾಬಾದ್ ನಗರದಲ್ಲಿ ಅತ್ಯಂತ ಗಟ್ಟಿಯಾಗಿದೆ. ಇದನ್ನು ಯಾರೂ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಯಾರೂ ಕೂಡಾ ಕಾಂಗ್ರೆಸ್ ಪಕ್ಷ ಮುಗಿದು ಹೋಯ್ತು ಎನ್ನಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಕಥೆ ಮುಗಿಯಿತು ಎಂದು ಕೆಲವರು ಹೇಳುತ್ತಾರೆ, ಕೆಲವರು ಕಾಂಗ್ರೆಸ್ ಸತ್ತು ಹೋಯ್ತು ಎನ್ನುತ್ತಾರೆ. ನಿಮಗೆ ಕಾಂಗ್ರೆಸ್ ಎಲ್ಲಿಯೂ ಕಾಣ ಸಿಗೋದಿಲ್ಲ ಎನ್ನುತ್ತಾರೆ. ಇಲ್ಲಿರುವ ನಾಯಕರಿಗೆ ನಾನು ಇಷ್ಟನ್ನು ಮಾತ್ರ ಕೇಳಲು ಇಚ್ಛಿಸುತ್ತೇನೆ, ಅಹಮದಾಬಾದ್ ನಗರವು ಮಹಾತ್ಮ ಗಾಂಧೀಜಿ ಅವರ ಪುಣ್ಯ ಭೂಮಿ. ಆದರೆ, ಅಚ್ಚರಿಯ ವಿಷಯ ಎಂದರೆ, ಈ ಭೂಮಿಯಲ್ಲಿ ಜನಿಸಿರುವ ಕೆಲವರು ಎಂಥಾ ಮನಸ್ಥಿತಿ ಹೊಂದಿದ್ದಾರೆ ಎಂದರೆ, ಅವರು ಗಾಂಧೀಜಿ ಅವರ ಸಿದ್ದಾಂತವನ್ನೇ ನಾಶ ಮಾಡುವ ಯೋಚನೆ ಮಾಡುತ್ತಿದ್ದಾರೆ’ ಎಂದು ಖರ್ಗೆ ಹೇಳುತ್ತಾರೆ.

ಕಾಂಗ್ರೆಸ್‌ ಬಗ್ಗೆ ಟೀಕೆ ಮಾಡಿದ ವಿರೋಧಿಗಳನ್ನು ಉದ್ದೇಶಿಸಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆಯವರ ಮೂಲ ವಿಡಿಯೋದ ಕೆಲ ಮಾತುಗಳನ್ನಷ್ಟೆ ಕಟ್‌ ಮಾಡಿ, ಎಡಿಟ್‌ ಮಾಡುವ ಮೂಲಕ ಕಾಂಗ್ರೆಸ್ ಕಥೆ ಮುಗಿಯಿತು, ಕಾಂಗ್ರೆಸ್ ಸತ್ತು ಹೋಗಿದೆ. ಇನ್ನು ನಾವು ಕಾಂಗ್ರೆಸ್ ಪಕ್ಷವನ್ನು ಎಲ್ಲಿಯೂ ಕಾಣೋಕೆ ಸಾಧ್ಯವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎಂಬಂತೆ ತಪ್ಪಾಗಿ ಹಂಚಿಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪ್ರಧಾನಿ ಮೋದಿ ರಾಷ್ಟ್ರಪತಿಯವರನ್ನು ‘ಕಪ್ಪು ಚರ್ಮ’ದವರು ಎಂದು ಅವಮಾನ ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights