FACT CHECK | ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು BJP ಪಕ್ಷದ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿದೆಯೇ?

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ BJP 300ಕೂ ಅಧಿಕ ಸ್ಥಾನಗಳಿಸಲಿದೆ ಎಂದು ಚುನಾವಣಾ ಸ್ಟ್ರಾಟಜಿಸ್ಟ್ ಪ್ರಶಾಂತ್ ಕಿಶೋರ್ ಹೇಳಿದ ಬೆನ್ನಲ್ಲೆ ಅವರನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ಪ್ರಸಾರವಾಗುತ್ತಿದೆ. ವೈರಲ್ ಆಗಿರುವ ಪೋಸ್ಟ್‌ಅನ್ನು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್ ಬೇರೊಬ್ಬರಿಗೆ ಹಂಚಿಕೊಂಡಂತೆ ತೋರುತ್ತಿದೆ. ಇದರಲ್ಲಿ BJPಯ ಲೆಟರ್‌ ಹೆಡ್‌ನ ಸ್ಕ್ರೀನ್‌ಶಾಟ್‌ಅನ್ನು ನೋಡಬಹುದು.

ಭಾರತೀಯ ಜನತಾ ಪಾರ್ಟಿ (BJP) ಹೆಸರಿನಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರಶಾಂತ್ ಕಿಶೋರ್ ಅವರನ್ನು ಪಕ್ಷದ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಬರೆಯಲಾಗಿದೆ. ಪ್ರಕಟಣೆಯನ್ನು BJP ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್‌ ಅವರು ಹೊರಡಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಈ ಪ್ರಕಟಣೆಯಲ್ಲಿ “BJP ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಶ್ರೀ ಪ್ರಶಾಂತ್ ಕಿಶೋರ್ ಅವರನ್ನು BJPಯ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಿದ್ದಾರೆ. ಈ ನೇಮಕಾತಿ ತಕ್ಷಣವೇ ಜಾರಿಗೆ ಬರುತ್ತದೆ” ಎಂದು ಅರುಣ್ ಸಿಂಗ್ ಅವರ ಸಹಿ ಇರುವ ಪತ್ರದಲ್ಲಿ ತಿಳಿಸಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಜನ್ ಸೂರಜ್ ಪಕ್ಷದ ಮುಖಂಡ ಪ್ರಶಾಂತ್ ಕಿಶೋರ್ ಅವರನ್ನು BJP ವಕ್ತಾರರಾಗಿ ನೇಮಕಗೊಂಡ ಕುರಿತು ಸಂಬಂಧಿತ ಕೀವರ್ಡ್‌ ಮೂಲಕ ಹುಡುಕಿದಾಗ ಇಂತಹ ಯಾವ ವರದಿಗಳು ಸಹ ಲಭ್ಯವಾಗಿಲ್ಲ. ಪ್ರಶಾಂತ್ ಕಿಶೋರ್ ಅವರು BJP ಸೇರಿದ್ದರೆ ಅನೇಕ ಮಾಧ್ಯಮಗಳು ವರದಿ ಮಾಡಿರುತ್ತಿದ್ದವು. ಆದರೆ ಈ ಕುರಿತು ಯಾವ ಮಾಧ್ಯಮಗಳು ವರದಿ ಮಾಡಿಲ್ಲ. ನಾವು BJP ಮತ್ತು ಪ್ರಶಾಂತ್ ಕಿಶೋರ್ ಅವರ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳನ್ನು ಸಹ ಹುಡುಕಿದ್ದೇವೆ, ಆದರೆ ಪ್ರಶಾಂತ್ ಕಿಶೋರ್ BJPಗೆ ಸೇರುವ ಬಗ್ಗೆ ನಮಗೆ ಎಲ್ಲಿಯೂ ಮಾಹಿತಿ ಸಿಕ್ಕಿಲ್ಲ.

ವಿಶ್ವಾಸ್ ನ್ಯೂಸ್ ಎಂಬ ಹಿಂದಿ ಮಾಧ್ಯಮವೊಂದು ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದ್ದು, ಜನತಾ ಪಕ್ಷದ ರಾಷ್ಟ್ರೀಯ ಸಂಯೋಜಕ ಅರುಣ್ ಸಿಂಗ್ ಅವರ ಸಹಿ ಇರುವುದರಿಂದ ಈ ತಂಡ ಅರುಣ್ ಸಿಂಗ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ವಿಶ್ವಾಸ್ ನ್ಯೂಸ್ ಜೊತೆ ಮಾತನಾಡಿರುವ ಅವರು, ವೈರಲ್ ಪತ್ರವನ್ನು ಎಡಿಟ್ ಮಾಡಲಾಗಿದೆ, ಈ ಪೋಸ್ಟ್ ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದಿದ್ದಾರೆ.

ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಪ್ರಶಾಂತ್ ಕಿಶೋರ್ ಅವರ ಜೊತೆಗೆ ದೂರವಾಣಿ ಮೂಲಕ ಮಾತನಾಡಿದಾಗ, ಅವರು ಈ ಪೋಸ್ಟ್ ಅನ್ನು ನಕಲಿ ಎಂದು ಹೇಳಿದ್ದಾರೆ. ಪ್ರಶಾಂತ್ ಕಿಶೋರ್ ಅವರು ಜಾನ್ ಸೂರಾಜ್ ಅವರ ಟ್ವೀಟ್ ಅನ್ನು ನಮ್ಮೊಂದಿಗೆ ಹಂಚಿಕೊಂಡಿದ್ದು, ಅದರಲ್ಲಿ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಇದೆ, ಇದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಯಾರೋ ಒಬ್ಬರಿಗೆ ಈ ವೈರಲ್ ಪತ್ರವನ್ನು ಕಳುಹಿಸಿರುವಂತೆ ತೋರುತ್ತಿದೆ. ಈ ಟ್ವೀಟ್‌ನಲ್ಲಿ ಕಾಂಗ್ರೆಸ್ ಈ ನಕಲಿ ಪತ್ರವನ್ನು ಹಂಚಿಕೊಳ್ಳುವ ಮೂಲಕ ತಪ್ಪು ಮಾಹಿತಿ ಹರಡುತ್ತಿದೆ ಎಂದು ಆರೋಪಿಸಲಾಗಿದೆ.

ಮೇ 21 ರಂದು ಎನ್‌ಡಿಟಿವಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ BJPಯ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದರು. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು 2014 ರ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕೆಲಸ ಮಾಡಿದ್ದರು. ಇದಲ್ಲದೇ ಕಾಂಗ್ರೆಸ್, ಟಿಎಂಸಿ, ಜೆಡಿಯು, ಆರ್‌ಜೆಡಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳಿಗೂ ಕಾಲಕಾಲಕ್ಕೆ ಕೆಲಸ ಮಾಡಿದ್ದಾರೆ.

ಆದ್ದರಿಂದ ಪ್ರಶಾಂತ್ ಕಿಶೋರ್ ಮತ್ತು ಅರುಣ್ ಸಿಂಗ್ ಇಬ್ಬರೂ ಈ ಪತ್ರವನ್ನು ನಕಲಿ ಎಂದು ಸ್ಪಷ್ಟಪಡಿಸಿರುವುದರಿಂದ. ಪ್ರಶಾಂತ್ ಕಿಶೋರ್ ಅವರು BJP ಸೇರಿಲ್ಲ ಎಂದು ಖಚಿತವಾಗಿದೆ. 

ಒಟ್ಟಾರೆಯಾಗಿ ಹೇಳುವುದಾದರೆ, ಇತ್ತೀಚೆಗೆ ಪ್ರಶಾಂತ್ ಕಿಶೋರ್ ಲೋಕಸಭಾ ಚುನಾವಣೆ ಕುರಿತು ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಅವರು ಬಿಜೆಪಿ ಈ ಬಾರಿಯೂ ಮುನ್ನೂರು ಅಥವಾ ಅದಕ್ಕಿಂತ ಹೆಚ್ಚೇ ಸೀಟು ಪಡೆದು ಸರಕಾರ ರಚಿಸಲಿದೆ ಎಂದು ಹೇಳುತ್ತಿದ್ದಾರೆ. ಉತ್ತರದಲ್ಲಿ ಗರಿಷ್ಟ ಐವತ್ತು ಸೀಟು ಕಡಿಮೆಯಾದರೂ ದಕ್ಷಿಣ ಹಾಗು ಪೂರ್ವದಲ್ಲಿ ಅದಕ್ಕೆ ಸಿಗುವ ಹೆಚ್ಚುವರಿ ಸೀಟುಗಳಿಂದ ಆ ನಷ್ಟ ಭರ್ತಿಯಾಗಲಿದೆ ಎಂದು ಪ್ರಶಾಂತ್ ಹೇಳುತ್ತಿದ್ದಾರೆ. ಇದರ ಹಿನ್ನಲೆಯಲ್ಲಿ ಖ್ಯಾತ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು BJP  ಪಕ್ಷದ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು BJP ಲೆಟರ್‌ ಹೆಡ್‌ ಹೆಸರಿನಲ್ಲಿ ನಕಲಿ ಪತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | “ಕಾಂಗ್ರೆಸ್‌ ಕಥೆ ಮುಗಿಯಿತು” ಎಂದು ಹೇಳಿದರೆ ಮಲ್ಲಿಕಾರ್ಜುನ ಖರ್ಗೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights